ಡಿ.ಕೆ.ಶಿವಕುಮಾರ್ ಪ್ರಮಾಣವಚನದಲ್ಲಿ ಸ್ಯಾಂಡಲ್‌ವುಡ್ ತಾರೆಯರ ದಂಡು: ಸಿಎಂ ಹುದ್ದೆಗೆ ಅವರು ಅರ್ಹರು ಎಂದ ರಮ್ಯಾ

ಬೆಂಗಳೂರು: ರಾಜಧಾನಿಯಲ್ಲಿ ಇಂದು ನಡೆಯುತ್ತಿರುವ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಇಡೀ ರಾಜ್ಯವೇ ಸಾಕ್ಷಿಯಾಗುತ್ತಿದೆ. ರಾಜಕೀಯ ವಲಯದ ಘಟಾನುಘಟಿ ನಾಯಕರ ದಂಡೇ ನೆರೆದಿರುವ ಈ ಐತಿಹಾಸಿಕ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ನೂತನ ಸಿಎಂಗೆ ಶುಭಕೋರುತ್ತಿದ್ದಾರೆ.

ಶಿವರಾಜ್ ಕುಮಾರ್ ದಂಪತಿ ಭಾಗಿ

ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿ ಮುಂಚೂಣಿಯಲ್ಲಿ ಆಸನ ಅಲಂಕರಿಸಿದ್ದಾರೆ. ಇತ್ತೀಚಿನ ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಈ ಸ್ಟಾರ್ ಜೋಡಿ, ಇಂದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.

DK Shivakumar Swearing In

ಸಿಎಂ ಹುದ್ದೆಗೆ ಅರ್ಹರು: ಮೋಹಕತಾರೆ ರಮ್ಯಾ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಅವರು ಸಹ ಸಮಾರಂಭದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ನೂತನ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಶಯಗಳನ್ನು ಕೋರಿದರು. "ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಅತ್ಯಂತ ಸಂತೋಷ ತಂದಿದೆ. ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಸಂಘಟನಾ ಚತುರತೆಯಿಂದ ಈ ಅತ್ಯುನ್ನತ ಹುದ್ದೆಗೆ ಸಂಪೂರ್ಣವಾಗಿ ಅರ್ಹರಾಗಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ರಮ್ಯಾ ಮತ್ತು ಶಿವರಾಜ್ ಕುಮಾರ್ ದಂಪತಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಹಲವು ಹಿರಿಯ ನಟರು, ಪ್ರಮುಖ ನಟಿಯರು, ನಿರ್ದೇಶಕರು ಹಾಗೂ ಹಿರಿಯ ನಿರ್ಮಾಪಕರು ಲೋಕಭವನದ ಆವರಣಕ್ಕೆ ಆಗಮಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಚಿತ್ರರಂಗದೊಂದಿಗೆ ದಶಕಗಳ ಕಾಲದ ಉತ್ತಮ ಬಾಂಧವ್ಯವಿದ್ದು, ಈ ಹಿನ್ನೆಲೆಯಲ್ಲಿ ಇಡೀ ಸ್ಯಾಂಡಲ್‌ವುಡ್ ಒಟ್ಟಾಗಿ ಬಂದು ಅವರಿಗೆ ಬೆಂಬಲ ಸೂಚಿಸುತ್ತಿರುವುದು ಇಂದಿನ ಸಮಾರಂಭದ ಪ್ರಮುಖ ಹೈಲೈಟ್ಸ್‌ನಲ್ಲಿ ಒಂದಾಗಿದೆ.

ವಿವಾದ ಸೃಷ್ಟಿಸಿದ್ದ ನಟ್ಟು ಬೋಲ್ಟ್ ಟೈಟ್ ಹೇಳಿಕೆ

ಕರ್ನಾಟಕ ರಾಜಕಾರಣದಲ್ಲಿ ನಾಯಕರ ಹೇಳಿಕೆಗಳು ಆಗಾಗ ವಿವಾದಕ್ಕೆ ಈಡಾಗುವುದು ಹೊಸದೇನಲ್ಲ. ಕೆಲ ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಉಲ್ಲೇಖಿಸಿ ಆಡಿದ್ದ "ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ" ಎಂಬ ಹೇಳಿಕೆ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಸದ್ದು ಮಾಡಿತ್ತು. ರಾಜಕೀಯ ಮತ್ತು ಸಿನಿಮಾ ರಂಗದ ನಡುವೆ ದೊಡ್ಡ ಶೀತಲ ಸಮರಕ್ಕೆ ಇದು ಕಾರಣವಾಗಿತ್ತು.

ಸಿನಿಮಾ ಕಾರ್ಯಕ್ರಮದಲ್ಲಿ ಚಿತ್ರರಂಗದವರೇ ಹೆಚ್ಚಾಗಿ ಭಾಗಿಯಾಗಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಆಕ್ರೋಶ ಹೊರಹಾಕಿದ್ದ ಡಿಕೆಶಿ, ನನಗೆ ಎಲ್ಲರ ನಟ್ಟು ಬೋಲ್ಟ್‌ ಟೈಟ್‌ ಮಾಡೋದು ಗೊತ್ತಿದೆ ಎಂದಿದ್ದರು. ಡಿಕೆಶಿ ಅವರ ಈ 'ನಟ್ಟು ಬೋಲ್ಟ್' ಪದಪ್ರಯೋಗ ಕನ್ನಡ ಚಿತ್ರರಂಗದ ಗಣ್ಯರನ್ನು ಮತ್ತು ಅಭಿಮಾನಿಗಳನ್ನು ಕೆರಳಿಸಿತ್ತು. ಕಲಾ ಜಗತ್ತಿಗೆ ರಾಜಕೀಯದ ಧಮಕಿ ಹಾಕಲಾಗುತ್ತಿದೆ ಎಂದು ಹಲವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಳಿಕ ಈ ವಿವಾದಕ್ಕೆ ಸುದೀಪ್‌ ಕೂಡ ಎಂಟ್ರಿ ನೀಡಿದ್ದರು. ಇತ್ತೀಚೆಗಷ್ಟೇ ಈ ವಿವಾದ ಮುನಿಸು ಸುಖಾಂತ್ಯ ಕಂಡಿತ್ತು. ಚಿತ್ರರಂಗ ಮತ್ತು ನೂತನ ಸರ್ಕಾರದ ನಡುವೆ ಈಗ ಸೌಹಾರ್ದಯುತ ಬಾಂಧವ್ಯ ಮುಂದುವರಿದಿರುವುದಕ್ಕೆ ಇಂದಿನ ವೇದಿಕೆ ಸಾಕ್ಷಿಯಾಗಿದೆ. ಚಿತ್ರರಂಗದವರೊಂದಿಗೆ ಡಿಕೆಶಿ ಮೊದಲಿನಿಂದಲೂ ನಂಟು ಹೊಂದಿದ್ದು, ಸ್ಯಾಂಡಲ್‌ವುಡ್‌ಗೆ ಏನೆಲ್ಲ ಕೊಡುಗೆ ನೀಡಲಿದ್ದಾರೆ ಎನ್ನುವುದು ಮುಂದೆ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+