ರಾಜ್ಯೊತ್ಸವದ ದಿನದಂದು ಕನ್ನಡಿಗನ ಪಾಡು!


ಹೂವು-ಹಣ್ಣು ತರಲು ಮಾರುಕಟ್ಟೆಗೆ ಹೋದ ಈ ಕನ್ನಡಪ್ರೇಮಿ, ಕಂಡದ್ದು ಏನು? ಇಂತಹ ಪರಿಸ್ಥಿತಿ ಸಾಮಾನ್ಯವೆನ್ನುವಂತಾಗಿದೆ. ನಿತ್ಯವೂ ಕನ್ನಡಿಗರ ಪಾಲಿಗೆ ಅಗ್ನಿ ಪರೀಕ್ಷೆ. ಆದರೆ ‘ಏನಾದರಾಗಲಿ, ಕನ್ನಡವನ್ನೇ ನುಡಿವೆ’ ಎಂಬ ಕಠೋರ ನಿಲುವು ಎಷ್ಟು ಮಂದಿಯಲ್ಲಿದೆ?

  • ಎಸ್‌. ಮಧುಸೂದನ ಪೇಜತ್ತಾಯ (ಚಿಕ್ಕಮಗಳೂರು ಜಿಲ್ಲೆ, ಬಾಳೆಹೊಳೆ)
    [email protected]
ಬೆಂಗಳೂರು ದಂಡು(ಕಂಟೋನ್ಮೆಂಟ್‌) ಪ್ರದೇಶದಲ್ಲಿ ವಾಸಿಸುವ ನಾನು ಬಹಳ ಸಂಭ್ರಮದಿಂದ ‘ದೀವಳಿಗೆ ಹಬ್ಬದ ಜತೆಗೆ ಈ ವರ್ಷ ನಮ್ಮ ರಾಜ್ಯೋತ್ಸವದ ಹಬ್ಬವೂ ಬಂದಿದೆ!’ ಎಂದುಕೊಳ್ಳುತ್ತಾ ಮುಂಜಾನೆ ಬೇಗನೆ ಎದ್ದೆ.

ನಮ್ಮ ಮನೆಯ ವಾಡಿಕೆಯಂತೆ, ಕನ್ನಡದ ಹಬ್ಬವನ್ನು ಕನ್ನಡ ಪುಸ್ತಕಗಳ ಪೂಜೆ ಮಾಡಿ, ಈ ದಿನದ ಹಬ್ಬ ಜತೆಗೆ ಆಚರಿಸೋಣ! ಎಂದುಕೊಳ್ಳುತ್ತಾ, ಆಗಲೇ ಅಡುಗೆ ಮನೆಯನ್ನು ಪ್ರವೇಶಿಸಿದ್ದ ನಮ್ಮ ಮನೆಯ ಯಜಮಾನತಿಯನ್ನು ‘ ಪೂಜೆಗೆ ಏನೇನು ಸಾಮಾನು ತರಲಿ?’ ಎಂದು ಪ್ರಶ್ನಿಸಿದೆ.

Pejathaya S.M.ಆಕೆ ‘ಇಂದಿನ ಪೂಜೆಗೆ ಮತ್ತು ವಿಶೇಷ ಅಡುಗೆಯ ಬಗ್ಗೆ ಎಲ್ಲಾ ವಸ್ತುಗಳನ್ನು ಮೊನ್ನೆಯೇ ಕೊಂಡು ತಂದೆ. ಇಂದಿಗೆ ಹೂ ಮತ್ತು ಬಾಳೆ ಹಣ್ಣು ಮಾತ್ರ ಕೊಂಡು ತನ್ನಿ! ’ ಎಂದಳು.

ನಾವು ವಾಸವಾಗಿ ಇರುವುದು ಬಿ.ಎಲ್‌. ರೈಸ್‌ ನಗರ(ಹಿಂದಿನ ಹೆಸರು ಕೂಕ್‌ ಟೌನ್‌). ನಮ್ಮ ಬಡಾವಣೆಯಲ್ಲಿ ಮಾರುಕಟ್ಟೆ ಇಲ್ಲ. ಆದ್ದರಿಂದ, ಪಕ್ಕದ ಪುಲಿಕೇಶಿ ನಗರ(ಹಿಂದಿನ ಫ್ರೇಜರ್‌ ಟೌನ್‌) ಅಥವಾ ಅದರ ಪಕ್ಕದ ತ್ರಿವೇಣಿ ನಗರ(ಕಾಕ್ಸ್‌ ಟೌನ್‌)ಕ್ಕೆ ಹೋಗಿ ಹೂ ಹಣ್ಣುಗಳನ್ನು ಕೊಂಡು ಬರೋಣ ಎಂದು ಕಾರು ಹೊರಡಿಸಿದೆ.

‘ಇಂದು ನಮ್ಮ ಕನ್ನಡ ರಾಜ್ಯೋತ್ಸವ! ಆದಷ್ಟು ಅಚ್ಚ ಕನ್ನದದಲ್ಲೇ ನಾನು ವ್ಯವಹಾರ ಮಾಡಬೇಕು! ’ ಅಂದುಕೊಂಡೆ.

ರೈಲಿನ ಸೇತುವೆ ದಾಟಿ ಮುಂದೆ ಹೋಗುತ್ತಲೇ, ಒಂದು ಬಾಳೆಹಣ್ಣಿನ ತಳ್ಳು ಗಾಡಿ ಕಾಣಿಸಿತು. ನಾನು ವಾಹನ ಬದಿಗೆ ನಿಲ್ಲಿಸಿ ಅವನ ಕೈಗಾಡಿಯತ್ತ ಸಾಗಿದೆ.

‘ನನಗೆ ಇಪ್ಪತ್ತೈದು ಬಾಳೆಹಣ್ಣು ಬೇಕಾಗಿತ್ತು. ಎಷ್ಟು ಕ್ರಯ?’ ಎಂದು ವಿನಯವಾಗಿ ಕೇಳಿದೆ. ಆತ ನನ್ನನ್ನು ಕೆಕ್ಕರಿಸಿ ನೋಡುತ್ತಾ ‘ನಿನಗೆ ಎಷ್ಟು ಬೇಕು ಎಂದು ಸರಿಯಾಗಿ ತಮಿಳಿನಲ್ಲಿ ಹೇಳು! ’ ಎಂದು ಎತ್ತಲೋ ನೋಡತೊಡಗಿದ.

‘ನನಗೆ ತಮಿಳು ಬರುವುದಿಲ್ಲ, ಮಹಾರಾಯಾ! ’ ಎಂದು ಕನ್ನಡದಲ್ಲೇ ಉತ್ತರಿಸಿದೆ. ಅದಕ್ಕೆ, ಆ ಗಾಡಿಯಾತ ‘ನಾನು ತಮಿಳುನಾಡಿನವನು. ಈ ಹಣ್ಣುಗಳು ಕೂಡಾ ತಮಿಳು ನಾಡಿನಿಂದಲೇ ಬಂದವುಗಳು. ಬೇಕಾದರೆ ಕೊಳ್ಳು! ’ ಎಂದ.

ನಾನು ಆತನಿಗೆ ‘ಇಂದು ನಮ್ಮ ಕನ್ನಡ ರಾಜ್ಯೋತ್ಸವ! ನನಗೆ ಕನ್ನಡ ರಾಜ್ಯದ ಬಾಳೆಹಣ್ಣೇ ಬೇಕು!’ ಎಂದು ಸಿಡಿಮಿಡಿಗೊಳ್ಳದೇ ಹೇಳಿದೆ.

ಆತ ಅಸಡ್ಡೆಯಿಂದ ‘ಪೋಯಾ! ’ ಎಂದ. ಇಪ್ಪತ್ತು ವರುಷಗಳ ಕೆಳಗೆ ನನಗೆ ಯಾರಾದರೂ ಹೀಗೆ ಮಾತಾಡಿದ್ದರೆ, ಅವರ ಕಪಾಳ ಮೋಕ್ಷ ಮಾಡುತ್ತಿದ್ದೆ.

ಹೇಗೋ ಸಾವರಿಸಿ ಕೊಂಡು ಮುಂದಕ್ಕೆ ಹೋಗುವಾಗ, ಇನ್ನೊಬ್ಬ ಬಾಳೆಹಣ್ಣು ಮಾರುವವನ ಗಾಡಿ ಸಿಕ್ಕಿತು. ಆತನಲ್ಲೂ ಬಾಳೆಯ ಹಣ್ಣಿನ ಕ್ರಯ ಕೇಳಿದೆ. ಆತನೂ ‘ತಮಿಳಿನಲ್ಲಿ ಮಾತನಾಡು! ’ ಎಂದ. ನಾನು ತಲೆ ಆಡಿಸುತ್ತಾ ಮುನ್ನಡೆದೆ.

ತ್ರಿವೇಣಿ ನಗರದ ಗಣಪತಿ ದೇವಸ್ಥಾನದ ಮುಂದಿನ ಹೂವಿನ ಮಾರುಕಟ್ತೆಗೆ ಹೋದೆ. ಹಲವಾರು ಮಹಿಳೆಯರು ಹೂ ಮಾರುತ್ತಾ ಇದ್ದರು. ಹೂ ಮಾರುವವರ ಸಾಲಿನಲ್ಲಿ ಮೊದಲು ಹೂ ಮಾರುತ್ತಾ ಇದ್ದ ಇಬ್ಬರು ಮಹಿಳೆಯರು ನನ್ನತ್ತ ತಿರುಗಿ ‘ ಎನ್ನಾ ವೇಣು? ’ ಎಂದರು.

ಆಗ ನಾನು ‘ನನ್ನ ಹೆಸರು ವೇಣು ಅಲ್ಲ! ’ ಎನ್ನುತ್ತಾ ಮುನ್ನಡೆದೆ. ಮೂರನೆಯಾಕೆ ‘ಅಣ್ಣಾ! ಹೂ ಕೊಡಲೇ?’ ಎಂದಳು.

ನಾನು ಬಹು ಸಂತೋಷದಿಂದ ‘ಮೂವತ್ತು ರೂಪಾಯಿಯ ಹೂ ಕೊಡಿ, ತಾಯೀ! ’ ಎನ್ನುತ್ತಾ ಆಕೆ ಕೊಟ್ಟಷ್ಟು ಹೂವನ್ನು ಮರುಮಾತಿಲ್ಲದೆ ಕೊಂಡೆ.

ಬೆಳಗಿನ ಹೊತ್ತು ‘ಕನ್ನಡದ ನಾಡಿನಲ್ಲಿ ಕನ್ನಡದ ನುಡಿ ಕೇಳಿ ’ ನನ್ನ ಮನ ಪ್ರಫುಲ್ಲಿತವಾಗಿತ್ತು. ಅಲ್ಲೆಲ್ಲೂ ವ್ಯಾಪಾರಕ್ಕೆ ಇಟ್ಟ ಬಾಳೆಯ ಹಣ್ಣು ಕಾಣಲಿಲ್ಲ. ಅಲ್ಲಿಂದ ಹೊರಟ ನಾನು, ಹಾಗೆಯೇ ಹಲಸೂರು ಕೆರೆಯ ಏರಿಯ ಮಾರ್ಗದಲ್ಲಿ ಸಾಗುತ್ತಾ ಬಾಳೆಯಹಣ್ಣಿನ ಬೇಟೆಯನ್ನು ಮುಂದುವರೆಸಿದೆ.

ಕಾಮರಾಜ ರಸ್ತೆಯ ಕಡೆಗೆ ಹೋಗುವ ತಿರುವಿನಲ್ಲಿ ಗಡ್ಡ ಧಾರಿ ಮುಸ್ಲಿಂ ಬಂಧುವೊಬ್ಬಬಾಳೆಯ ಹಣ್ಣು ಮಾರುತ್ತಾ ಇದ್ದ. ‘ನನಗೆ ಇಪ್ಪತ್ತೈದು ಬಾಳೆಯ ಹಣ್ಣು ಬೇಕು. ಎಷ್ಟು ಕ್ರಯ?’ ಎಂದು ಆತನನ್ನು ಅಚ್ಚ ಕನ್ನಡದಲ್ಲೇ ಕೇಳಿದೆ. ಆತ ನಗುತ್ತಾ ‘ಇಪ್ಪತ್ತರ ಮೇಲೆ ಐದು ರೂಪಾಯಿ ಕೊಡಿ, ಸಾರ್‌! ’ ಅಂದ.

ನಾನು ಇಪ್ಪತ್ತೈದು ರೂಪಾಯಿ ತೆತ್ತು ಬಾಳೆಯ ಹಣ್ಣುಗಳನ್ನು ಕೊಂಡೆ. ನಾನು ಹೊರಟಾಗ, ಆತನು ನನಗೆ ‘ ಸಲಾಮ್‌! ’ ಎಂದ. ನಾನು ‘ನಮಸ್ಕಾರ ನಿಮಗೆ, ಭಾಯೀ! ’ ಎನ್ನುತ್ತಾ ಕಾರಿನ ಕಡೆಗೆ ನಡೆದೆ. ಅಂತೂ, ಬಾಳೆಯ ಹಣ್ಣು ಮತ್ತು ಹೂವು ಇವುಗಳ ಖರೀದಿ ಮುಗಿದಿತ್ತು!

ಮನೆಯ ಕಡೆಗೆ ಬರುತ್ತಾ ನಾನು ‘ ಅಚ್ಚ ಕನ್ನಡ ಮಾತುಗಳನ್ನು ಆಡಿ, ವ್ಯಾಪಾರ ಮಾಡುವ ಜನರು ನಮ್ಮ ದಂಡಿನ ವಿಸ್ತರಣೆಯಲ್ಲಿ ಎಷ್ಟು ಮಂದಿ ಇದ್ದಾರು?’ ಎಂಬ ಬಗ್ಗೆ ಆಲೋಚಿಸಿದೆ.

ಬೇರೆ ದಿನ ಆಗಿದ್ದರೆ, ನಾನು ಇಷ್ಟು ಹಠಮಾಡಿ ಕನ್ನಡ ಮಾತನಾಡಿ ಬಾಳೆಹಣ್ಣು ಕೊಳ್ಳುತ್ತಿರಲಿಲ್ಲ. ಎಲ್ಲಾ ಕನ್ನಡಿಗರಂತೆ, ನಾನು ಕೂಡಾ, ವ್ಯಾಪಾರಿಗಳು ಯಾವ ಭಾಷೆಯನ್ನು ಆಡಿದರೂ, ಆ ಭಾಷೆಯಲ್ಲಿ ವ್ಯವಹರಿಸಿ ವ್ಯಾಪಾರ ಮಾಡುತ್ತಿದ್ದೆ!

ಇಂದು ಕನ್ನಡ ಮಾತನಾಡಿ ನಾನು ಎಂತಹಾ ಸನ್ನಿವೇಶ ನೋಡುತ್ತಿದ್ದೇನೆ! ಎಂಬ ವಿಚಿತ್ರ ಅರಿವು ನನಗೆ ರಾಜ್ಯೋತ್ಸವದ ದಿನ ಉಂಟಾಯಿತು. ಪೂರ್ವ ಬೆಂಗಳೂರಿನ ಈ ಭಾಗದಲ್ಲಿ ವಾಸಿಸುವ ‘ಅಚ್ಚ ಕನ್ನಡಿಗರು’ ಈ ಬವಣೆಯನ್ನು ದಿನಾ ಅನುಭವಿಸುತ್ತಾ ಇರಬಹುದಲ್ಲವೇ? ಎಂಬ ಅರಿವು ಮೂಡಿ ಮನಸ್ಸಿಗೆ ತುಂಬಾ ಕಸಿವಿಸಿ ಉಂಟಾಯಿತು.

ಇನ್ನು ಬೆಂಗಳೂರಿನಲ್ಲಿ ಎಲ್ಲಿಗೇ ಹೋಗಲಿ, ನಾನು ಕನ್ನಡಲ್ಲೇ ವ್ಯವಹಾರ ಮಾಡಿ, ಅದರ ಫಲವನ್ನು ಸಂತೋಷದಿಂದಲೇ ಅನುಭವಿಸುವೆ! ಎಂಬ ತೀರ್ಮಾನವನ್ನು ಇಂದು ಮನದಲ್ಲೇ ಮಾಡಿದೆ.

ಮುಖಪುಟ / ಓದುಗರ ಓಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+