Bengaluru: ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1.44 ಕೋಟಿ ರೂ.ಗೆ ಮನೆ: ಡಿ.ಕೆ ಶಿವಕುಮಾರ್
Bengaluru: ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1.44 ಕೋಟಿ ರೂ.ಗೆ ಮನೆ ಕೊಡುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ವೈಟ್ ಫೀಲ್ಡ್‌ನಲ್ಲಿ 1,900 ಮನೆಗಳನ್ನು ಕಟ್ಟಲಾಗಿದೆ. 1 ಬಿಎಚ್ ಕೆ ಮನೆ 760 ಚದರ ಅಡಿಯಿದೆ. ಇದನ್ನು 6,686 ರೂಪಾಯಿಗೆ ನೀಡಲಾಗುತ್ತಿದೆ. ಇದಕ್ಕೆ ಮೇ 15 ನೇ ತಾರೀಕಿನಿಂದ ಅರ್ಜಿ ಕರೆಯಲಾಗುತ್ತಿದೆ. 1,733 ಚದರ ಅಡಿಯ 3 ಬಿಎಚ್ ಕೆ ಮನೆಗಳಿಗೆ 8,309 ರಂತೆ 1.44ಕೋಟಿ ರೂಪಾಯಿಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಎಲ್ಲಾ ಕಡೆಯೂ ಸಂಚಾರ ದಟ್ಟಣೆ ಇದ್ದೇ ಇದೆ. ಹೆಬ್ಬಾಳದ ಬಳಿ ಸ್ವಲ್ಪ ಒತ್ತಡವನ್ನು ಕಡಿಮೆ ಮಾಡಿದ್ದೇವೆ. ಇನ್ನೂ ಸರಳ ಮಾಡಬೇಕು ಎಂದು ಮುಂದುವರೆದಿದ್ದೇವೆ. ಈಗ ಕಡಿಮೆ ಅಂತರದ ಸುರಂಗ ರಸ್ತೆಯನ್ನು ಮಾಡುತ್ತಿದ್ದೇವೆ. ಹೆಬ್ಬಾಳ ಜಂಕ್ಷನ್ ಬಳಿಯಿಂದ ಕೃಷಿ ವಿವಿ ಬಳಿ ಹಾದು ಹೋಗಲಿದೆ. ಇಲ್ಲಿ ಮೂರು ಲೈನ್‌ಗಳ ಕಟ್ ಅಂಡ್ ಕರ್ವ್ ಟನಲ್ ಬರಲಿದೆ. ಒಟ್ಟು ಈ ಸುರಂಗ ಮಾರ್ಗ ಆರು ಪಥಗಳನ್ನು ಹೊಂದಿರುತ್ತದೆ.
ಇದು 2.2 ಕಿಮೀ ಉದ್ದ ಇರಲಿದೆ. ಈ ಯೋಜನೆಯನ್ನು ಋತ್ವಿಕ್ ಟನಲ್‌ಗೆ ನೀಡಿದ್ದು 18 ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಮೇಕ್ರಿ ವೃತ್ತದ ಬಳಿ 1.7 ಕಿಮೀ ಉದ್ದದ 4 ಪಥ ಹೊಂದಿರುವ ಎಲಿವೇಟೆಡ್ ಕಾಡಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ತಿಂಗಳ ಕೊನೆಗೆ ಈ ಎರಡು ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 631 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 10.77 ಕಿಮೀ ಉದ್ದದ ರಸ್ತೆಯನ್ನು ಮುಂದಿನ 15 ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಈ ರಸ್ತೆ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ ಎಂದಿದ್ದಾರೆ. ಮುಂದುವರಿದು ಎಷ್ಟು ಆದಾಯ ಬರಲಿದೆ ಎಂದು ಕೇಳಿದಾಗ, ನಮ್ಮ ನಿರೀಕ್ಷೆ ಗಗನಕ್ಕಿದೆ. ಈಗಾಗಲೇ 7 ಸಾವಿರ ಜನ ಶೇ.5 ರಷ್ಟು ಹಣ ಕಟ್ಟಿದ್ದಾರೆ. ಇದಕ್ಕೆ ಏನು ಪರಿಹಾರ ಹುಡಕಬೇಕು ಎಂದು ಚಿಂತಿಸಲಾಗುವುದು. ಜನಸಾಮಾನ್ಯರಿಗೆ ಉಪಯೋಗವಾಗಲಿ ಎಂದು ಈ ಯೋಜನೆ ತರಲಾಗಿದೆ ಎಂದು ಹೇಳಿದ್ದಾರೆ.
15 ಲಕ್ಷ ಸಸಿಗಳನ್ನು ನೆಡುವ ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ
ಇನ್ನು ಬಿಡಿಎಗೆ 50 ವರ್ಷ ತುಂಬಿದೆ. ಇದರ ನೆನಪಿಗೆ ಕೆಂಪೇಗೌಡ ಜಯಂತಿಯಂದು "ಗ್ರೀನ್ ಬೆಂಗಳೂರು" ಕಾರ್ಯಕ್ರಮ ನಡೆಸಲಾಗುವುದು. ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಸೇರಿ ಒಂದೇ ದಿನದಂದು 15 ಲಕ್ಷ ಸಸಿಗಳನ್ನು ನೆಡಲಾಗುವುದು. ಜೂನ್ 27 ಈ ಕಾರ್ಯಕ್ರಮ ನಡೆಸಲಾಗುವುದು ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬಿಜಿನೆಸ್ ಕಾರಿಡಾರ್‌ನ ಮೊದಲನೇ ಹಂತಕ್ಕೆ ಶೇ.80 ರಷ್ಟು ಜನ ಒಪ್ಪಿಗೆ ನೀಡಿದ್ದಾರೆ. ಎರಡನೇ ಹಂತಕ್ಕೆ ನೋಟಿಫಿಕೇಷನ್ ನೀಡಲಾಗಿದೆ. ರೈತರೂ ಸಹ ಮುಂದಕ್ಕೆ ಬರುತ್ತಿದ್ದಾರೆ. ನಾವು ಕೊಟ್ಟಿರುವ ಪರಿಹಾರವನ್ನು ದೇಶದಲ್ಲಿ ಬೇರೆ ಯಾರೂ ಕೊಟ್ಟಿಲ್ಲ. ಹೊಸೂರು ರಸ್ತೆಯಿಂದ ಮೈಸೂರು ರಸ್ತೆಯವರೆಗೂ 33 ಕಿ.ಮೀ ಬೆಂಗಳೂರು ಬಿಜಿನೆಸ್ ಕಾರಿಡಾರ್ ಅನ್ನು ಬೆಂಗಳೂರು ದಕ್ಷಿಣದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಮುಂದುವರಿದು ದುಪ್ಪಟ್ಟು ಪರಿಹಾರ ನೀಡಲು ಅವಕಾಶ ಇಲ್ಲದಿದ್ದರೂ ನಾನು ಸಚಿವ ಸಂಪುಟ ಸಭೆ ಮುಂದಿಟ್ಟು, ದುಪ್ಪಟ್ಟು ಬೆಲೆ ನೀಡುತ್ತಿದ್ದೇವೆ. ಟಿಡಿಆರ್, ರಸ್ತೆ ಪಕ್ಕದಲ್ಲೇ 35% ವಾಣಿಜ್ಯ ಭೂಮಿ, ಎಫ್ ಎಆರ್, ವಸತಿ ಪ್ರದೇಶದಲ್ಲಿ 40% ಭೂಮಿ ಸೇರಿದಂತೆ ಅನೇಕ ಅವಕಾಶ ನೀಡುತ್ತಿದ್ದೇವೆ. ಅವರಿಗೆ ವಾಣಿಜ್ಯ ಜಮೀನು ನೀಡುತ್ತಿರುವುದರಿಂದ ಅವರಿಗೆ ಎಷ್ಟು ನೆರವಾಗಲಿದೆ ಎಂದರೆ ಹೇಳಲು ಸಾಧ್ಯವಿಲ್ಲ.
ಈ ರೀತಿ ಪರಿಹಾರವನ್ನು ಇಡೀ ದೇಶದಲ್ಲಿ ಎಲ್ಲೂ ನೀಡಿಲ್ಲ. ಮುಂಬೈನಲ್ಲಿ ಜಮೀನು ಸ್ವಾಧೀನಕ್ಕೆ ಕೇವಲ 12.5% ಮಾತ್ರ ನೀಡಿದ್ದಾರೆ. ಇಲ್ಲಿ ಶಾಸಕರ, ಮಂತ್ರಿಗಳ ಆಸ್ತಿಗಳಿದ್ದವು ಅವರು ಸಹ ಮುಂದೆ ಬಂದಿದ್ದಾರೆ. ಅವರು ಸಹ ಒಳ್ಳೆಯ ಯೋಜನೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದನ್ನು ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications