Karnataka Weather: ರಾಜ್ಯದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಮಳೆ, ಬೆಂಗಳೂರು ಹವಾಮಾನ ವರದಿ
ಬೆಂಗಳೂರು: ತೀವ್ರ ಬಿಸಿಲಿಗೆ ಬಸವಳಿದಿದ್ದ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆರಾಯ ಬುಧವಾರ ತಂಪೆರದಿದ್ದಾನೆ. ಜೋರು ಬಿರುಗಾಳಿ ಸಹಿತ ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದು, ಒಂದಷ್ಟು ಅವಾಂತರ ಸೃಷ್ಟಿಸಿದೆ. ಮುಂದಿನ 5 ದಿನ (ಮೇ 18ರವರೆಗೆ) ಇದೇ ರೀತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮಳೆ ಆಗಲಿದೆ. ಮುಂದಿನ 24 ಗಂಟೆಯಲ್ಲಿ ವಾತಾವರಣದಲ್ಲಿ ಸಾಕಷ್ಟು ಏರುಪೇರಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾವೇರಿ, ಗದಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ನೆನ್ನೆ ಬುಧವಾರ ವ್ಯಾಪಕ ಮಳೆ ಸುರಿಯಿತು. ಇದರಿಂದ ಮನೆ, ಜಾನುವಾರುಗಳ ಕೊಟ್ಟಿಗೆಗೆ ಹಾಕಿದ್ದ ತಗಡಿನ ಶೀಟ್‌ಗಳು, ಚಪ್ಪರಗಳು, ಮೇವು ರಾಶಿ, ಬಣಿವೆಗಳು ಗಾಳಿಗೆ ಅಲ್ಲೋಲ ಕಲ್ಲೋಲವಾಗಿವೆ. ಮನೆಯ ಶೀಟ್‌ಗಳು ಕಿತ್ತುಹೋಗಿವೆ. ಕೆಲವೇ ನಿಮಿಷಗಳು, ಕೆಲವೆಡೆ ಸುಮಾರು ಒಂದು ಗಂಟೆ ಕಾಲ ಬಂದ ಮಳೆಗೆ ರೈತರು, ನಿವಾಸಿಗಳು ತೊಂದರೆ ಅನುಭವಿಸುಂತಾಯಿತು. ಬಿಸಿಲಿಗೆ ಮಳೆ ತಂಪೆರೆಯಿತು. ಆದರೆ ಬಿರುಗಾಳಿಯು ಜನರಿಗೆ ಸಮಸ್ಯೆ ತಂದೊಡ್ಡಿತು. ಮೈಸೂರಿನ ಕೆಲವೆಡೆ ಹಗುರ ಮಳೆ ದಾಖಲಾಗಿದೆ. ಇದೇ ಭಾಗಗಳಲ್ಲಿ ಇಂದು ಗುರುವಾರ (ಮೇ 14) ಸಹ ಮಳೆ ಮುಂದುವರಿಯುವ ಸಂಭವವಿದೆ.

5 ದಿನ ಈ ಜಿಲ್ಲೆಗಳಿಗೆ ಬಿರುಗಾಳಿ ಮಳೆ ಎಚ್ಚರಿಕೆ
ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ತುಮಕೂರು, ಕೋಲಾರ, ರಾಮಗನರ, ಹಾಸನ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಲಿದೆ, ಮಳೆ ಅಬ್ಬರ ಕಂಡು ಬರಲಿದೆ.
ಎರಡು ದಿನ ಜೋರು ಮಳೆ ಸಂಭವ
ಮೇ 16 ಮತ್ತು 17 ರಂದು ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಅಧಿಕ ಮಳೆ ಆಗಲಿದೆ. ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.
ಮಳೆ ನಡುವೆ ಬಿಸಿಗಾಳಿ ಹೆಚ್ಚಳ ಸಂಭವ
ಇನ್ನೂ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ ಹಾಗೂ ವಿವಿಧ ಜಿಲ್ಲೆಗಳ ಹಲವು ಕಡೆಗಳಲ್ಲಿ ಗಂಟೆಗೆ ಸುಮಾರು 60 ಕಿಲೋ ಮೀಟರ್ ವರೆಗೂ ಗಾಳಿ ಬೀಸಲಿದ್ದು, ಆಲಿ ಕಲ್ಲು ಸಹಿತ ಮಳೆ ನಿರೀಕ್ಷೆ ಇದೆ. ಉಳಿದೆಡೆ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದ್ದು, ಬಿಸಿ ಗಾಳಿ ಕಂಡು ಬರಲಿದೆ. ಅದೇ ರೀತಿ ಕರಾವಳಿ ಒಂದೆರಡು ಕಡೆಗಳಲ್ಲಿ ಮುಂದಿನ 5 ದಿನ ಮಳೆ ಆಗಲಿದ್ದು, ಇಲ್ಲಿ ಒಣಹವೆ ವಾತಾವರಣವೇ ಮುಂದುವರಿಯಲಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆಗಿಂತ ಉಷ್ಣಅಲೆಯು ಮೇಲುಗೈ ಸಾಧಿಸಲಿದೆ.
ಬೆಂಗಳೂರಿಗೂ ಮಳೆ?
ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬರಲಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೂ ಮುನ್ನ ಇಡಿ ದಿನ ಮೈಸುಡುವ ಬಿಸಿಲು ಕಂಡು ಬರಲಿದೆ. ಗರಿಷ್ಠ 34-35 ಡಿ.ಸೆ. ಉಷ್ಣಾಂಶ ದಾಖಲಾಗಬಹುದು.
ಹವಾಮಾನ ವೈಪರೀತ್ಯದ ಇಂದಿನ ಅಪ್ಡೇಟ್ಸ್
ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ಸಮುದ್ರದಲ್ಲಿನ ಬದಲಾವಣೆಗಳು ಆಗಿದ್ದು, ಇದು ಮುಂಗಾರು ಮಳೆ ಮಾರುತಗಳ ಆಗಮನಕ್ಕೆ ಪೂರಕವಾಗಿದೆ. ಮತ್ತೊಂದೆಡೆ ನೈಋತ್ಯ ಬಂಗಾಳಕೊಲ್ಲಿ ಸುತ್ತಮುತ್ತಲಿನ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಇದರಿಂದ ಪೂರ್ವ ಮುಂಗಾರು ಮಳೆ ಆಗಾಗ ಸುರಿಯುತ್ತಿದೆ ಎಂದು ಐಎಂಡಿ ತಿಳಿಸಿದೆ.













Click it and Unblock the Notifications