CBSE 12ನೇ ತರಗತಿ ಫಲಿತಾಂಶ ಪ್ರಕಟ: ಮರುಮೌಲ್ಯಮಾಪನ ಮತ್ತು ಪೂರಕ ಪರೀಕ್ಷೆ ದಿನಾಂಕ ಇಲ್ಲಿದೆ
ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ ಬಹುನಿರೀಕ್ಷಿತ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಒಟ್ಟಾರೆ ಶೇಕಡಾ 85.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ ಶೇ. 88.39 ಉತ್ತೀರ್ಣ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಇಳಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in, cbse.gov.in ಮತ್ತು results.cbse.nic.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮತ್ತೆ ವಿದ್ಯಾರ್ಥಿನಿಯರದ್ದೇ ಮೇಲುಗೈ
ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸುವ ಮೂಲಕ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ವಿದ್ಯಾರ್ಥಿನಿಯರ ಉತ್ತೀರ್ಣ ಪ್ರಮಾಣ ಶೇ. 88.86 ರಷ್ಟಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ. 82.13 ರಷ್ಟಿದೆ. ಇನ್ನು ವಲಯವಾರು ಸಾಧನೆಯನ್ನು ಗಮನಿಸುವುದಾದರೆ, ತಿರುವನಂತಪುರಂ ವಲಯವು ಶೇ. 95.62 ರಷ್ಟು ಅತಿ ಹೆಚ್ಚು ಉತ್ತೀರ್ಣ ಪ್ರಮಾಣದೊಂದಿಗೆ ಇಡೀ ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ಮತ್ತೊಂದೆಡೆ, ಪ್ರಯಾಗ್‌ರಾಜ್ ವಲಯವು ಅತ್ಯಂತ ಕಡಿಮೆ ಅಂದರೆ ಶೇ. 72.43 ರಷ್ಟು ಫಲಿತಾಂಶವನ್ನು ದಾಖಲಿಸಿದೆ.

ಏಪ್ರಿಲ್ 18 ರಿಂದ ಮರುಮೌಲ್ಯಮಾಪನ ಪ್ರಕ್ರಿಯೆ
ತಮ್ಮ ಅಂಕಗಳ ಬಗ್ಗೆ ತೃಪ್ತಿ ಹೊಂದಿರದ ವಿದ್ಯಾರ್ಥಿಗಳಿಗೆ ಮಂಡಳಿಯು ಅಂಕಗಳ ಪರಿಶೀಲನೆ ಹಾಗೂ ಮರುಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದೆ. ಈ ಆನ್‌ಲೈನ್ ಪ್ರಕ್ರಿಯೆಯು ಮೇ 18, 2026 ರಿಂದ ಆರಂಭವಾಗಲಿದೆ. ಈ ವರ್ಷ ಸಿಬಿಎಸ್‌ಇ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದರೂ ಸಹ, ಮರುಮೌಲ್ಯಮಾಪನದ ಆಯ್ಕೆಗಳು ಹಳೆಯ ನಿಯಮಗಳ ಪ್ರಕಾರವೇ ಮುಂದುವರಿಯಲಿವೆ. ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಗಡುವು ಮುಗಿದ ನಂತರ ಬರುವ ಯಾವುದೇ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಮಂಡಳಿ ಎಚ್ಚರಿಕೆ ನೀಡಿದೆ.
ಜುಲೈ 15 ರಂದು ಒಂದೇ ದಿನ ಪೂರಕ ಪರೀಕ್ಷೆ
ಕಡಿಮೆ ಅಂಕ ಬಂದಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಬೋರ್ಡ್ ಮತ್ತೊಂದು ಅವಕಾಶ ನೀಡಿದ್ದು, ಪೂರಕ ಪರೀಕ್ಷೆಯ ದಿನಾಂಕವನ್ನು ಘೋಷಿಸಿದೆ. 2026ರ ಜುಲೈ 15 ರಂದು 'ಒಂದೇ ದಿನದ ಮಾದರಿ'ಯಲ್ಲಿ ಪೂರಕ ಪರೀಕ್ಷೆ ನಡೆಯಲಿದೆ. ಮುಖ್ಯವಾಗಿ ಮೂರು ವರ್ಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ:
1. ಈಗಾಗಲೇ ಪಾಸ್ ಆಗಿದ್ದು, ಯಾವುದಾದರೂ ಒಂದು ವಿಷಯದಲ್ಲಿ ಅಂಕ ಸುಧಾರಿಸಿಕೊಳ್ಳಲು ಬಯಸುವವರು.
2. ಕಂಪಾರ್ಟ್‌ಮೆಂಟ್ ವಿಭಾಗಕ್ಕೆ ಸೇರಿರುವ ವಿದ್ಯಾರ್ಥಿಗಳು.
3. 2025ರ ಕಂಪಾರ್ಟ್‌ಮೆಂಟ್ ಬ್ಯಾಚ್‌ನ ಉಳಿದ ಅವಕಾಶ ಹೊಂದಿರುವ ವಿದ್ಯಾರ್ಥಿಗಳು.
ಜೂನ್ 2 ರಿಂದ ಎಲ್‌ಒಸಿ ಸಲ್ಲಿಕೆ
ಪೂರಕ ಹಾಗೂ ಅಂಕ ಸುಧಾರಣಾ ಪರೀಕ್ಷೆಗಳನ್ನು ಬರೆಯಲಿಚ್ಛಿಸುವ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 2, 2026 ರಿಂದ ಆರಂಭವಾಗಲಿದೆ. ಈ ಪ್ರಕ್ರಿಯೆಯು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ನಡೆಯಲಿದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ, ಅಭ್ಯರ್ಥಿಯ ವಿವರಗಳು ಅಥವಾ ವಿಷಯಗಳಲ್ಲಿ ಯಾವುದೇ ಬದಲಾವಣೆಗಳಿಗೆ ಅವಕಾಶವಿರುವುದಿಲ್ಲ. ಹೀಗಾಗಿ ಶಾಲೆಗಳು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ನಿಗದಿತ ಸಮಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಫಲಿತಾಂಶ ಹೊರಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ ಪ್ರವೇಶಾತಿ, ಅಂಕಪಟ್ಟಿ ಡೌನ್‌ಲೋಡ್ ಹಾಗೂ ಪೂರಕ ಪರೀಕ್ಷೆ ಸಿದ್ಧತೆಗಳತ್ತ ಗಮನಹರಿಸಬಹುದಾಗಿದೆ.












Click it and Unblock the Notifications