• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ನಿಮ್ಮ ಬ್ಯಾಗಿನಲ್ಲಿ ಏನಿದೆ?; ಮನಸ್ಸನ್ನು ಹಗುರಾಗಿಸಿಕೊಳ್ಳಿ

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಶಾಲೆಯಲ್ಲಿ‌ ಒಂದು ಗುಂಪಿನ ಮಕ್ಕಳು ಯಾವುದೋ ಕಾರಣಕ್ಕಾಗಿ ಮತ್ತೊಂದು ಗುಂಪಿನ‌ ಮಕ್ಕಳೊಂದಿಗೆ ಜೋರಾಗಿ ಜಗಳ ಮಾಡಿಕೊಂಡರು. ಈ ಜಗಳವಾಗುವ ಮೊದಲು ಎಲ್ಲರೂ ಸ್ನೇಹದಿಂದ ಇದ್ದರು.

ಮೊದಲಿನ ಒಡನಾಟವಾಗಲೀ, ಜೊತೆಗೆ ಕುಳಿತು ಊಟ ಮಾಡುವುದಾಗಲೀ, ಆಟವಾಡುವುದಾಗಲೀ ಇಲ್ಲದೇ ಹೋಯಿತು. ಮಾತು ಕತೆ ನಿಂತಿತು. ತರಗತಿಯಲ್ಲಿ ಒಬ್ಬನನ್ನು ಕಂಡರೆ ಇನ್ನೊಬ್ಬನಿಗೆ ಕೋಪ. ಜಗಳವಾಡಲು ಸಣ್ಣ ಯಾವುದಾದರೂ ಕಾರಣವೊಂದು ಸಿಕ್ಕರೂ ಬಿಡುತ್ತಿರಲಿಲ್ಲ. ಹೊಂಚು ಹಾಕಿಕೊಂಡು ಕುಳಿತ್ತಿರುತ್ತಿದ್ದರು.

ಯಾರೊಬ್ಬರಿಗೂ ಮನಃ ಶಾಂತಿ ಇಲ್ಲದಂತಾಯಿತು. ಮನೆಯಲ್ಲೂ ಎಲ್ಲರ ಮೇಲೆ ರೇಗಾಡುವುದು, ಕಿರಿ ಕಿರಿ. ಊಟ ತಿಂಡಿ ಸರಿಯಾಗಿ ಸೇರುತ್ತಿಲ್ಲ. ಯಾವುದರ ಮೇಲೂ ಗಮನವಿಲ್ಲ. ಈ ಅರಚಾಟಕ್ಕೆ ಕಾರಣ ತಿಳಿಯದೆ, ಸಹಿಸಲೂ ಆಗದೆ ಹತ್ತಿರದವರಿಂದ ದೂರಾಗುತ್ತಾ ಬಂದರು.

ಹೀಗಿರುವಾಗಲೇ ಕ್ರೀಡಾ ಸ್ಪರ್ಧೆಗಳು ಪ್ರಾರಂಭವಾದವು. ಅದೇ ಊರಿನ ಇತರ ಶಾಲೆಯ ವಿದ್ಯಾರ್ಥಿಗಳ ನಡುವೆ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಜಗಳವಾಡಿಕೊಂಡಿದ್ದ ಎರಡೂ ಗುಂಪುಗಳಲ್ಲಿ ಉತ್ತಮ ಕ್ರೀಡಾಪಟುಗಳಿದ್ದರು. ಜಗಳದ ನಂತರ ಕ್ರೀಡೆ ಅಭ್ಯಾಸದಲ್ಲಿ ಆಸಕ್ತಿಯಾಗಲೀ, ಶಿಸ್ತಾಗಲೀ, ಸಮನ್ವಯ (coordination) , ಇರಬೇಕಾದ ತಂಡದ ಹುರಿದುಂಬಿಸುವ ಮನೋಭಾವ ( team spirit) ಕಾಣದಾಗಿತ್ತು. ಇದರಿಂದ ಶಾಲೆಯ ಕ್ರೀಡಾ ತರಬೇತುದಾರನಿಗೆ (coach) ತಲೆಬಿಸಿಯಾಯಿತು.

ಪ್ರತಿಯೊಬ್ಬ ಕ್ರೀಡಾಪಟುವೂ ಉತ್ತಮ ಆಟಗಾರ‌. ಆದರೆ ಈ ಗುಂಪು ಘರ್ಷಣೆ ಹಾಗು ವೈಯುಕ್ತಿಕ ಮನಸ್ತಾಪವು ತಂಡದ ಹಾಗು ಪ್ರತಿಯೊಬ್ಬರ ಉತ್ತಮ‌ ಪ್ರದರ್ಶನದ ಮೇಲೆ ಪರಿಣಾಮ ಬೀರುವುದು ಖಂಡಿತ ಎಂದು ತಿಳಿದ ತರಬೇತುದಾರರು, ಹೇಗಾದರೂ ಮಾಡಿ ವಿದ್ಯಾರ್ಥಿಗಳಿಗೆ ಈ ವಿಚಾರ ಮನವರಿಕೆ ಮಾಡಿ ಕೊಡಲು ಒಂದು ಉಪಾಯ ಮಾಡಿದರು. ಎಲ್ಲರನ್ನೂ ಕರೆದು ವೃತ್ತಾಕಾರದಲ್ಲಿ‌ ನಿಲ್ಲಲು ತಿಳಿಸುತ್ತಾರೆ.

ಈಗ ನಿಮ್ಮ ಅಕ್ಕ ಪಕ್ಕ ಹಾಗು ಸುತ್ತಲೂ ‌ಒಮ್ಮೆ ಕಣ್ಣು ಹಾಯಿಸಿ‌ , ನಮಗೆ ಕೋಪವಿರುವ/ಇಷ್ಟವಿಲ್ಲದ/ದ್ವೇಷಿಸುವ/ಶತ್ರು ಎನಿಸುವ ಕ್ರೀಡಾಪಟುಗಳು ಯಾರು ಎಂದು ನನಗೆ ತಿಳಿಸುವ ಅಗತ್ಯವಿಲ್ಲ. ಆದರೆ ನೀವು ಅವರನ್ನು ಗುರುತಿಸಿ ಎಣಿಸಿ ಎಂದರು.

ಎಲ್ಲರೂ ಅಕ್ಕ ಪಕ್ಕ ಸುತ್ತ ಮುತ್ತ ನೋಡುತ್ತಾ ಮನಸ್ಸಿನಲ್ಲಿ ಲೆಕ್ಕ ಹಾಕಿಕೊಂಡರು.

ಮರುದಿನ ತರಬೇತುದಾರರು ಒಬ್ಬೊಬ್ಬ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಪಕ್ಕದ ಕೋಣೆಗೆ ಕರೆದು ಅಲ್ಲಿ ಇರಿಸಿದ್ದ ಬಾಳೆಹಣ್ಣಿನ ರಾಶಿಯ ಕಡೆ ಕೈ ತೋರಿಸುತ್ತಾ ತಮ್ಮ ಶತ್ರುಗಳ ಸಂಖ್ಯೆಗನುಸಾರವಾಗಿ ಬಾಳೆಹಣ್ಣುಗಳನ್ನು ತೆಗೆದುಕೊಂಡು ಯಾರಿಗೂ ತಿಳಿಯದಂತೆ ತಮ್ಮತಮ್ಮ ಬ್ಯಾಗಿನೊಳಗೆ ಹಾಕಿಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಕೆಲವರು ಎರಡು, ಮೂರು, ಆರು... ಹೀಗೆ ತಮ್ಮಕೋಪದ/ ಶತ್ರುಗಳಿಗೆ ಅನುಸಾರವಾಗಿ ಹಣ್ಣುಗಳನ್ನು ತೆಗೆದುಕೊಂಡು ಯಾರಿಗೂ ಕಾಣದಂತೆ ತಮ್ಮ ತಮ್ಮ ಬ್ಯಾಗಿನೊಳಗೆ ಹಾಕಿಕೊಂಡರು. ತಮ್ಮ ತಮ್ಮ ಬ್ಯಾಗಿನ ಮೇಲೆ ಅವರ ಹೆಸರುಗಳನ್ನು ಬರೆದರು. ಬ್ಯಾಗಿಗೆ ಸಣ್ಣ ಬೀಗ ಒಂದನ್ನು ಸಹ ಹಾಕಲಾಯಿತು.

ತರಬೇತುದಾರರು ಎಲ್ಲರನ್ನೂ ಉದ್ದೇಶಿಸಿ "ತಾವು ಹೇಳುವ ತನಕ ಬ್ಯಾಗನ್ನು ಕೈ ಬಿಡದೆ, ತೆಗೆಯದೆ ಎಲ್ಲಿಯೇ ಹೋದರೂ ತಮ್ಮೊಟ್ಟಿಗೆ ಬ್ಯಾಗನ್ನು ಇರಿಸಿಕೊಳ್ಬೇಕು " ನೋಡೋಣ ಯಾರು ಎಷ್ಟು ಹೊತ್ತಿನ ತನಕ ಬ್ಯಾಗ್ ಹೊತ್ತು ಕೊಂಡಿರುತ್ತಾರೆ ಎಂದರು.

ಸರಿ ಎನ್ನುತ್ತಾ ತಮ್ಮ ತಮ್ಮ ಬ್ಯಾಗುಗಳನ್ನು ಭುಜಕ್ಕೆ ಹಾಕಿಕೊಂಡರು ವಿದ್ಯಾರ್ಥಿಗಳು. ಬ್ಯಾಗಿನೊಂದಿಗೇ ಆಟ ಪಾಠ ಎಲ್ಲವೂ. ಒಂದು ದಿನವಾಯಿತು, ಎರಡು ದಿನವಾಯಿತು, ಒಂದು ವಾರವೇ ಕಳೆಯಿತು ಆದರೂ ತರಬೇತುದಾರರು ಬ್ಯಾಗ್ ತೆಗೆಯುವಂತೆ ತಿಳಿಸುವ ಸೂಚನೆಯೇ ಇಲ್ಲ.

ದಿನದಿಂದ ದಿನಕ್ಕೆ ಬ್ಯಾಗ್ ಹೊತ್ತುಕೊಂಡೇ ಇರುವುದು ಕಷ್ಟಕರವಾಗಿತ್ತು. ಕೆಲವು ವಿದ್ಯಾರ್ಥಿಗಳ ಬ್ಯಾಗಿನಲ್ಲಿ ಹೆಚ್ಚು ಬಾಳೆಹಣ್ಣುಗಳು ಇದ್ದವು. ಒಂದೆಡೆ ಬ್ಯಾಗ್ ಭಾರವಿತ್ತು. ಮತ್ತೊಂದೆಡೆ ಹಣ್ಣುಗಳು ಬ್ಯಾಗಿನೊಳಗೆ ಕೊಳೆತು ನಾರುತ್ತಿತ್ತು. ಒಟ್ಟಿನಲ್ಲಿ ಇದೊಂದು ರೀತಿಯಲ್ಲಿ ಅವರಿಗೇ ಶಿಕ್ಷೆಯಾಯಿತು. ಆದರೂ ಕೋಪ ಮತ್ತು ಇನ್ನೊಬ್ಬನಿಗಿಂತ ತಾನೇನು ಕಡಿಮೆ ಎಂದು ಬ್ಯಾಗ್ ಹೊತ್ತುಕೊಂಡೇ ಇದ್ದರು.

ಒಂದೆರಡು ಹುಡುಗರು ತರಬೇತುದಾರರ ಬಳಿ ಹೋಗಿ ಈ ಬ್ಯಾಗ್ ಇಂದ ತಮಗಾಗುತ್ತಿರುವ ಕಷ್ಟ ಹೇಳಿಕೊಂಡು, ಬ್ಯಾಗ್ ಕೆಳಗಿಳಿಸುವಂತೆ ಆದೇಶಿಸಬೇಕಾಗಿ ಮನವಿ ಮಾಡಿಕೊಂಡರು.

Whats in your bag? how to overcome Emotional Baggage

ಅವರಿಗೆ ಮಾತ್ರ ಬ್ಯಾಗ್ ಕೆಳಗೆ ಇಳಿಸಬಹುದು ಎಂದು ತರಬೇತುದಾರರು ತಿಳಿಸಿದರು.

ಸದ್ಯ ಭಾರ ಹಾಗು ಕೊಳೆತ ಹಣ್ಣುಗಳ ವಾಸನೆ ತಪ್ಪಿತಲ್ಲಾ ಎಂದು ಆ ಹುಡುಗರು ಖುಷಿ ಪಟ್ಟರು.

ಮಾರನೆಯ ದಿನ ಕ್ರೀಡಾಭ್ಯಾಸಕ್ಕೆ ಹೋದಾಗ ಬ್ಯಾಗ್ ರಹಿತವಿದ್ದ ವಿದ್ಯಾರ್ಥಿಗಳು ಉತ್ತಮವಾಗಿ ಚುರುಕಾಗಿ ಆಟಾಡಲು ಸಾಧ್ಯವಾಗಿತ್ತು.ಈಗ ಅವರ ಗಮನ ಶಕ್ತಿ ಎಲ್ಲವೂ ಕ್ರೀಡೆಯ ಕಡೆ ಇತ್ತು. ಈ ಹುಡುಗರು ಕೋಪ ಮರೆತು ಆಡುತ್ತಿದ್ದರು.

ಹೀಗೆಯೇ ಒಬ್ಬೊಬ್ಬರಾಗಿಯೇ ಹುಡುಗರು ಪ್ರತ್ಯೇಕ ವಾಗಿ ತರಬೇತುದಾರರನ್ನು ಭೇಟಿಯಾಗಿ‌ ಬ್ಯಾಗ್ ಇಂದ ಮುಕ್ತರಾಗುತ್ತಿದ್ದರು.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ

* ಬ್ಯಾಗಿನ ಭಾರವು ಅದರೊಳಗಿದ್ದ ಹಣ್ಣುಗಳ ಸಂಖ್ಯೆ ಗಳ ಮೇಲೆ ಆಧರಿಸಿತ್ತು.

* ಯಾರದೋ ಮೇಲಿನ ಕೋಪಕ್ಕೆ ಹೆಚ್ಚಿನ ಬಾಳೆ ಹಣ್ಣುಗಳನ್ನು ತುಂಬಿಸಿಕೊಂಡು ಭಾರ ಹಾಗು ವಾಸನೆ ಇಂದ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಿದ್ದರು.

* ಬ್ಯಾಗ್ ಹೊತ್ತ ‌ಮೊದಲ‌ ಕೆಲವು ದಿನಗಳು ಸುಲಭವೆನಿಸಿದರೂ, ಬರಬರುತ್ತಾ ಅವರಿಗೇ ಮುಳ್ಳಾಯಿತು.

* ಹಗೆ ಸಾಧಿಸುವಲ್ಲಿನ ಅವರ ಶಕ್ತಿ ಸಾಮರ್ಥ್ಯ ಎಲ್ಲವೂ ಕ್ರೀಡೆಗೆ ಬಳಸಿದ್ದರೆ, ಅದರ ಪರಿಣಾಮ ಧನಾತ್ಮಕವಾಗಿರುತ್ತಿತ್ತು.

ಈಗ ಒಮ್ಮೆ ಯೋಚಿಸಿ ನಾವೂ ಸಹ ಅನೇಕ ಬಾರಿ ಯಾವುದಾದರೊಂದು ನಕಾರಾತ್ಮಕ ಅಂಶ, ಇತರರ ಮೇಲಿನ ಕೋಪ, ಯಾವುದೋ ಜಗಳ ದ್ವೇಷವಾಗಿ ತಿರುಗಿ ನಮ್ಮ ಮನಸ್ಸನ್ನು ಭಾರವಾಗಿಸಿಕೊಂಡಿರುತ್ತೇವೆ.

ಹೀಗಿರುವಾಗ ಮನಸ್ಸು ಶಾಂತವಿರದೆ, ಕಿರಿಕಿರಿ, ಆತಂಕ, ಕಾರಣ ರಹಿತ ಕೋಪ, ಮಾಡುವ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತೇವೆ. ಸಮಯ, ಶಕ್ತಿ ಸಾಮರ್ಥ್ಯದ ಸರಿಯಾದ ಉಪಯೋಗವಾಗುವುದಿಲ್ಲ.

ವಿದ್ಯಾರ್ಥಿಗಳೇನೋ ಬ್ಯಾಗ್ ಕಳಗೆ ಇಟ್ಟು ಭಾರ ಇಳಿಸಿದರು. ಆದರೆ ನಾವು ಭಾರವಾದ ನಮ್ಮ‌ಮನಸ್ಸನ್ನು ಹಗುರಾಗಿಸಿಕೊಳ್ಳುವುದು ಹೇಗೆ?

* ಸಮಸ್ಯೆ ಇರುವ ವ್ಯಕ್ತಿಯ ಜೊತೆ ಕುಳಿತು ಮಾತಾಡಿ.

ಆದಷ್ಟು ಬೇಗ ಬಗೆಹರಿಸಿಕೊಳ್ಳಿ.
* ಪ್ರತಿಯೊಬ್ಬರ ವಿಚಾರದ ಮೇಲಿನ ಗ್ರಹಿಕೆ (perception) ಬೇರೆ ಬೇರೆಯಾಗಿರುತ್ತದೆ, ಅರ್ಥೈಸಿಕೊಳ್ಳಿ.
* ನಿಮಗೆ ವ್ಯಕ್ತಿಯ ವಿಚಾರದ‌ ಮೇಲೆ ಮಾತ್ರ ಸಮ್ಮತಿ ಇಲ್ಲ‌ ಆದರೆ ವ್ಯಕ್ತಿಯು ಆಪ್ತನೇ ಎಂಬುದನ್ನು ಸ್ಪಷ್ಟಪಡಿಸಿ.
* ಅನೇಕ ಬಾರಿ ನಮ್ಮ ಮನಸ್ಸು ಭಾರ ಆಗಿದೆ ಎಂಬುದೂ ಸಹ ನಾವು ಕೋಪಗೊಂಡ ವ್ಯಕ್ತಿಗೆ ತಿಳಿದಿರುವುದಿಲ್ಲ. ಹೀಗಿರುವಾಗ ಅವರ ಮೇಲೆ ಕೋಪ ಗೊಳ್ಳುವುದರಲ್ಲಿ ಅರ್ಥವಿಲ್ಲ.
* ಮುಕ್ತವಾಗಿ ಮನಸ್ಸು ಬಿಚ್ಚಿ ಮಾತನಾಡಿ.
* ಮುಕ್ತ ವಾತಾವರಣ ನಿರ್ಮಿಸಿ.
* ಪ್ರತಿಯೊಬ್ಬರು ಬೆಳೆದು ಬಂದ ವಾತಾವರಣ, ಮಾನಸಿಕ ವಾತಾವರಣ ಹಾಗು ಭಾವನಾತ್ಮಕ ವಾತಾವರಣ ಬೇರೆ ಬೇರೆ. ಅದನ್ನು ಗೌರವಿಸಿ.
* ಮನಸ್ಸಿಗೆ ಹಿತಕರವಾದ ಹವ್ಯಾಸಗಳಲ್ಲಿ ತೊಡಗಿರಿ.
* ಆರೋಗ್ಯಕರ ತಿಳಿ‌ ಹಾಸ್ಯವಿರಲಿ.

ಈಗ ನಿಮ್ಮ ಮನಸ್ಸಿನ ಬ್ಯಾಗ್ ಒಳಗೆ ಏನಿದೆ? ಒಮ್ಮೆ ಕಣ್ಣು ಹಾಯಿಸಿ. ಭಾರವಿದೆಯೆ? ಯಾವುದಾದರೊಂದು ವಿಚಾರ ಬಹಳ ದಿನಗಳಿಂದ ಕಾಡುತ್ತಿದೆಯೇ?

ಹಾಗಿದ್ದರೆ ಈಗಲೇ ಸ್ವಚ್ಛಗೊಳಿಸಿ. ಮನಸ್ಸನ್ನು ಹಗುರವಾಗಿಸಿಕೊಳ್ಳಿ. ಲವಲವಿಕೆ ಇಂದಿರಿ.

English summary
Psychology: What's in your bag? What is emotional baggage and how to overcome from it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X