Psyhology: ಇರುವುದೆಲ್ಲವ ಬಿಟ್ಟು...ಆಸಕ್ತಿ-ಆಯ್ಕೆ
ಮಾನ್ವಿತಾ ಅತ್ಯಂತ ಒಳ್ಳೆಯ ನೃತ್ಯ ಗಾರ್ತಿ. ನಾಟ್ಯ ರಂಗದಲ್ಲೇ ಏನಾದರೂ ಸಾಧಿಸಬೇಕು ಎಂಬುದು ಅವಳ ಕನಸು. ಓದಿನಲ್ಲಿ ತರಗತಿಗೆ ಪ್ರಥಮ ಶ್ರೇಣಿ(First Rank) ಬಾರದಿದ್ದರೂ, ಹಿಂದಂತೂ ಉಳಿದಿಲ್ಲ. ಓದಿನಲ್ಲಿ ಆಸಕ್ತಿ ಇದೆ ಆದರೆ ಅವಳ ಆಯ್ಕೆ ಹಾಗು ಹೆಚ್ಚಿನ ಆಸಕ್ತಿ ನೃತ್ಯ. ತನ್ನ ನಿರ್ಧಾರದ ಬಗ್ಗೆ ಅವಳಿಗೆ ಸಂತೋಷ, ನಂಬಿಕೆ, ಆತ್ಮವಿಶ್ವಾಸವಿದೆ.
ತನ್ನ ಗೆಳತಿಯರು ಹಾಗು ಪೋಷಕರು ಜೊತೆಯಾದಾಗ ಎಲ್ಲರೂ ಕೇವಲ ಓದಿನ ಹಾಗು ವೃತ್ತಿಪರ ಶಿಕ್ಷಣದ ಬಗ್ಗೆ ಮಾತನಾಡುವಾಗ, ನೃತ್ಯವನ್ನು ಕೇವಲ ಹವ್ಯಾಸವಾಗಿ ಅಷ್ಟೇ ತೆಗೆದುಕೋ ಹಾಗು ಈಗ ಹೆಚ್ಚಾಗಿ ಚಾಲ್ತಿಯಲ್ಲಿರುವ ಇತರ ವೃತ್ತಿಪರ ಓದಿಗೆ ಗಮನ ಕೊಡು ಎಂದಾಗ, ತನ್ನ ಆಯ್ಕೆ ಸರಿ ಇದೆಯೋ ಇಲ್ಲವೋ? ಎಂಬ ಅಳುಕು ಅವಳಿಗೆ. ಕಾಲೇಜಿನ ಪರೀಕ್ಷೆಗಳು ಬಹಳ ಮುಖ್ಯ. ಕೊನೆಯ ವರುಷವಾದ್ದರಿಂದ, ಈ ಒಂದು ವರ್ಷ ನೃತ್ಯ ಬಿಟ್ಟುಬಿಡಬೇಕಾ? ಆದರೆ ತನ್ನ ಹೆಚ್ಚಿನ ಆಸಕ್ತಿ ಹಾಗು ಕನಸು ನೃತ್ಯ ಕ್ಷೇತ್ರ, ಅದರಲ್ಲೇ ಮುಂದುವರೆಯುತ್ತೇನೆ, ಎಂಬ ನಂಬಿಕೆ ತನಗೆ ಇದ್ದರೂ ಇತರರು ಏಕೆ ಸಹಕರಿಸುತ್ತಿಲ್ಲ ಎಂಬ ಅನಿಸಿಕೆ ಕೂಡಾ ಅವಳನ್ನು ಕಾಡುತ್ತಿದೆ.
ನೃತ್ಯವನ್ನು ಕೇವಲ ಹವ್ಯಾಸವಾಗಿ ತೆಗೆದುಕೋ, ಓದಿನ ಕಡೆಗೆ ಹೆಚ್ಚಿನ ಗಮನ ಕೊಡು ಎಂಬ ಮನೆಯವರ ಹಾಗು ಸ್ನೇಹಿತರ ಒತ್ತಡಕ್ಕೆ ಮಣಿದು ಕೊನೆಯ ವರುಷ ಕೇವಲ ಓದಿಗೆ ಎಂದು ನಿರ್ಧರಿಸುತ್ತಾಳೆ. ಎಷ್ಟೇ ಪ್ರಯತ್ನಿಸಿದರೂ ಸಹ ಇತರರ ನಿರೀಕ್ಷೆಯಂತೆ ಅಂಕ ತೆಗೆದುಕೊಳ್ಳಲಾಗದೇ ಇತ್ತ ನೃತ್ಯವನ್ನೂ ಕಡೆಗಣಿಸಿದೆನಲ್ಲಾ, ಅಮೂಲ್ಯವಾದ ಸಮಯದ ಸದುಪಯೋಗ ಆಗಲಿಲ್ಲವಲ್ಲಾ ಎಂಬ ಅಪರಾಧ ಮನೋಭಾವ ಆವರಿಸುತ್ತದೆ.

ಈ ಕಥೆಯನ್ನು ಒಮ್ಮೆ ಓದಿ.
ಗುಡ್ಡಗಾಡಿನಲ್ಲಿ ಆಟವಾಡುತ್ತಿದ್ದ ಮೂವರು ಸಣ್ಣ ಮಕ್ಕಳಿಗೆ, ಕುರಿಗಳ ಹಿಂಡೊಂದು ಕಾಣುತ್ತದೆ. ಆಗ ತಾನೆ ಒಂದು ಎರಡು ಎಂದು ಸಂಖ್ಯೆ ಬರೆಯಲು ಕಲಿತಿದ್ದ ಮಕ್ಕಳು, ಅಲ್ಲೇ ಇದ್ದ ಇದ್ದಿಲು ಚೂರಿನಿಂದ, ಬಿಳಿಯ ಕುರಿಗಳ ಮೇಲೆ ಒಂದು, ಎರಡು ಮತ್ತು ನಾಲ್ಕು ಎಂದು ಬರೆದು, ಕುರಿಗಳ ಜೊತೆ ಆಟವಾಡುತ್ತಾ ಕುರಿಗಳನ್ನು ಮುದ್ದಾಡುತ್ತಾ ಊರಿನೊಳಗೆ ಬಂದುಬಿಡುತ್ತಾರೆ. ಈಗ ಕುರಿಗಳನ್ನು ಎಲ್ಲಿ ಬಿಡಬೇಕೆಂದು ತೋಚದೇ, ಯಾರದೋ ಮನೆಯ ಅಂಗಳದ ಒಳಗೆ ತಂದು ಬಿಟ್ಟು ಕುರಿಗಳು ಹೊರಗೆ ಬಾರದಂತೆ ಗೇಟಿನ ಚಿಲಕ ಹಾಕಿ ಓಡಿಹೋಗುತ್ತಾರೆ. ಕುರಿ ಮರಿಗಳು ಅಂಗಳದಲ್ಲಿದ್ದ ಎಲ್ಲಾ ಹೂವಿನ ಗಿಡಗಳ ಮೇಲೆ ಓಡಾಡಿ ತುಳಿದು ಹಾಳು ಮಾಡುತ್ತವೆ. ಅಂಗಳದ ತುಂಬಾ ಗಲೀಜು ಮಾಡುತ್ತವೆ. ಮನೆ ಮಾಲೀಕ ಸಂಜೆ ಮನೆಗೆ ಬಂದಾಗ ಅಂಗಳದ ಸ್ಥಿತಿ ಕಂಡು ಗಾಬರಿಯಾಗುತ್ತಾನೆ. ಕೂಗಾಡುತ್ತಾ, ಮನೆ ಹಾಗು ಅಂಗಳದ ಇಂಚಿಂಚೂ ಹುಡುಕಿ, ಕುರಿ ಮರಿಗಳನ್ನು ಹುಡುಕಿ ಕಟ್ಟಿ ಹಾಕುತ್ತಾನೆ. ಅಂಗಳ ಸ್ವಚ್ಛ ಗೊಳಿಸಿ ನೆಮ್ಮದಿ ಇಂದ ಕುಳಿತಿರುತ್ತಾನೆ.
ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯರೊಬ್ಬರು.
ಒಂದು, ಎರಡು ಹಾಗು ನಾಲ್ಕು ಎಂದು ಬರೆದಿದ್ದ ಕುರಿಗಳನ್ನು ನೋಡಿದ ಮೇಲೆ ಮೂರನೇ ಸಂಖ್ಯೆಯ ಕುರಿ ಎಲ್ಲಿ?? ಎಂದು ಕೇಳುತ್ತಾರೆ.
ಅಷ್ಟು ಹೊತ್ತು ಎಲ್ಲಾ ಕುರಿಗಳನ್ನು ಹಿಡಿದು ಹಾಕಿದ್ದೇನೆ ಎಂಬ ಸಂತೋಷದಲ್ಲಿದ್ದ ಮನೆ ಮಾಲೀಕನಿಗೆ, ಕುರಿಗಳ ಮೇಲೆ ಬರೆದಿದ್ದ ಸಂಖ್ಯೆಗಳು ಗಮನಕ್ಕೆ ಬಂದಿರುವುದಿಲ್ಲ.
ಈಗ .. ಅಯ್ಯೋ ತಾನು ಸರಿಯಾಗಿ ಕುರಿಗಳನ್ನು ಹುಡುಕಿಲ್ಲ. ಮೂರನೇ ಕುರಿ ಕಾಣೆಯಾಗಿರುವುದು ತನ್ನ ಗಮನಕ್ಕೆ ಅದು ಹೇಗೆ ಬಾರದೇ ಹೋಯಿತು ಎಂದು ಅಳುಕುತ್ತಾನೆ.
ಮೂರನೇ ಕುರಿ ಇನ್ನೂ ಸಿಕ್ಕಿಲ್ಲ ಎಂದು ಆ ಮೂರನೇ ಸಂಖ್ಯೆಯ ಕುರಿಗಾಗಿ ಮತ್ತಷ್ಟೂ ಹುಡುಕಿಕೊಂಡು ಹೋಗುತ್ತಾನೆ. ಮೂರನೇ ಸಂಖ್ಯೆಯ ಕುರಿ ಸಿಗದಿದ್ದಾಗ ನಿರಾಸೆ ಉಂಟಾಗುತ್ತದೆ. ಆತಂಕ ಹೆಚ್ಚುತ್ತದೆ. ಊಟ ನಿದ್ರೆ ಇಲ್ಲದೆ ದಿನವಿಡೀ ಮನೆಯ ಕೈತೋಟದ ಬಗ್ಗೆ ಚಿಂತಿತನಾಗುತ್ತಾನೆ. ಆ ಕಾಣೆಯಾಗಿದೆ ಎಂದುಕೊಂಡ ಕುರಿಗಾಗಿ ಕಾಯುತ್ತಾ ಕುಳಿತುಬಿಡುತ್ತಾನೆ.

ಈಗ ಹೇಳಿ
* ಎಷ್ಟೇ ಹುಡುಕಿದರೂ ಮೂರನೇ ಸಂಖ್ಯೆಯ ಕುರಿ ಸಿಗುವುದೇ?
* ಇಲ್ಲ ಎಂದರೆ...ಯಾಕಿಲ್ಲ?
* ಏಕೆ ಸಿಗುವುದಿಲ್ಲಎಂದರೆ ಆ ಮೂರನೇ ಸಂಖ್ಯೆಯ ಕುರಿಯು ಇಲ್ಲವೇ ಇಲ್ಲ.
ಈಗ ನಮ್ಮ ನಮ್ಮ ಜೀವನದ ಆ "ಅಸ್ತಿತ್ವವಿಲ್ಲದ ಕುರಿ" ಗಳ ಬಗ್ಗೆ ಯೋಚಿಸಿ.
ಈ ಅಸ್ತಿತ್ವವಿಲ್ಲದ ಕುರಿಗಳು, ಇರುವ ಇತರ ಕುರಿಗಳಿಗಿಂತ ಅತೀ ಮುಖ್ಯವಾಗಿ ಕಾಣುತ್ತದೆ.
ಇತರರು ಗುರುತಿಸುವ ತನಕ "ಆ ಅಸ್ತಿತ್ವವಿಲ್ಲದ" ಮೂರನೇ ಸಂಖ್ಯೆ ಯ ಕುರಿಯು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಾಗಾಗಿ ನಮಗೆ ಮುಖ್ಯವಾಗಿ ಕಾಣುವುದಿಲ್ಲ. ಹಾಗಾಗಿ ಪ್ರಯತ್ನಪಟ್ಟು ಕಟ್ಟಿ ಹಾಕಿದ ಕುರಿಗಳನ್ನು ನೋಡಿ ನಮ್ಮ ಬಗ್ಗೆ ನಮಗೆ ಖುಷಿ ಇರುತ್ತದೆ. ಕಾರಣ ನಮಗೆ ನಮ್ಮ ಮೇಲೆ, ಯೋಚನೆಗಳ ಮೇಲೆ, ಸಾಮರ್ಥ್ಯ, ಕೆಲಸದ ಮೇಲೆ ನಮಗೆ ನಂಬಿಕೆ ಹಾಗು ಸಂತೋಷವಿರುತ್ತದೆ.
ಅಸ್ತಿತ್ತವಿಲ್ಲದ ಆ ಒಂದು ಕುರಿಯ ಬಗ್ಗೆ ಇತರರು ಕೇಳಿದಾಗ ವಿಚಲಿತರಾಗಿಬಿಡುತ್ತೇವೆ. (ಮನೆ ಮಾಲೀಕನಿಗೆ ತಾನು ಇಂಚಿಂಚೂ ಹುಡುಕಿ ಕುರಿ ಕಟ್ಟಿ ಹಾಕಿದ್ದರೂ, ಮೂರನೇ ಸಂಖ್ಯೆಯ ಕುರಿಯ ಬಗ್ಗೆ ಕೇಳಿದಾಗ ತನ್ನ ಮೇಲೆ ತನಗೇ ಸಂಶಯ ಉಂಟಾದಂತೆ)
ಅಂದರೆ ನಮ್ಮ ನಮ್ಮ ಆಸಕ್ತಿ ಗಳು, ಆಯ್ಕೆಯ ವಿಷಯಗಳು, ತೆಗೆದುಕೊಂಡ ನಿರ್ಧಾರಗಳು, ವೃತ್ತಿಗಳು ಸಾಂಪ್ರದಾಯಿಕ ಶೈಲಿಯಲ್ಲಿ ಇರದೇ ಇರಬಹುದು. ಅಂದರೆ ವಾಡಿಕೆಯಂತೆ ಒಂದು, ಎರಡು ನಂತರ ಮೂರನೇ ಸಂಖ್ಯೆ ಬರೆಯದೇ ಸಂಖ್ಯೆ ನಾಲ್ಕನ್ನು ಬರೆದಿರಬಹುದು. ಜೀವನ ನಡೆಸಲು ಬೇಕಾದ ಎಲ್ಲವೂ ಇದ್ದರೂ ಸಹ, ಕಣ್ಣಿಗೆ ಕಾಣದ, ಮುಖ್ಯವಲ್ಲದ ಯಾವುದೋ ಒಂದು ಅಂಶದ ಕೊರತೆಯೇ ಹೆಚ್ಚಾಗಿ ಕಾಣುತ್ತದೆ. ಆಗ ಇರುವ ಅಂಶಗಳ ಖುಷಿಗಿಂತ, ಇಲ್ಲದ ಸಣ್ಣ ಅಂಶವು ಮುಖ್ಯವಾಗಿ ಕಾಡುತ್ತದೆ.
*ನೃತ್ಯದಲ್ಲಿ ಮುಂದೆ ಇದ್ದರೂ - ಓದಿನಲ್ಲಿ ಮುಂದೆ ಇಲ್ಲಾ ಎಂಬ ಯೋಚನೆ
* ಚುರುಕಾದ ಹುಡುಗಿ ಆದರೆ ಎತ್ತರ ಕಡಿಮೆ
* ಹುಡುಗ ಬಹಳ ಗುಣವಂತ ಆದರೆ ಕಪ್ಪು
* ಒಳ್ಳೆಯ ಕೆಲಸಗಾರ ಆದರೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ.
ಅನೇಕ ಬಾರಿ ನಾವೂ ಸಹ ಅನೇಕ ವಿಚಾರಗಳಲ್ಲಿ ಇಲ್ಲದ ಆ ಮೂರನೇ ಕುರಿ ಬಗ್ಗೆ ಯೋಚಿಸುತ್ತೇವೆ. ಉತ್ತಮ ಜೀವನ ಹೊಂದಿದ್ದರೂ ಸಹ "ಕಾಣದ, ಅಸ್ತಿತ್ವವಿರದ, ತಪ್ಪಿಸಿಕೊಳ್ಳಲಾಗದ ಆ ಕುರಿಯನ್ನು ಹುಡುಕುತ್ತೇವೆ''. ಇರುವ ಶಕ್ತಿ ಸಾಮರ್ಥ್ಯ ವನ್ನು ವ್ಯರ್ಥ ಮಾಡುತ್ತೇವೆ. ಕಾಣೆಯಾದ ತುಣುಕುಗಳು ಹಾಗು ನ್ಯೂನತೆಗಳ ಬಗ್ಗೆ ಯೋಚಿಸುತ್ತಾ ಸಮಯ ಕಳೆದುಬಿಡುತ್ತೇವೆ.
ಅಸ್ತಿತ್ವವಿಲ್ಲದ ಒಂದು ಕುರಿಯ ಬಗ್ಗೆ ಯೋಚಿಸದೆ, ಇರುವ ಸಮಯ, ಸಾಮರ್ಥ್ಯ, ಆಸಕ್ತಿ, ಶಕ್ತಿ, ಯುಕ್ತಿಯ ಸದ್ಬಳಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ?
ಒಮ್ಮೆ ಯೋಚಿಸಿ












Click it and Unblock the Notifications