ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psycholgy: ಅತಿಯಾದ ಕೋಪ ಬಂದಾಗ ನಿರ್ವಹಣೆ ಹೇಗೆ?

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ನೀವು ದರ್ಜಿ‌ ಮತ್ತು ಆನೆಯ ಕಥೆಯನ್ನು ಕೇಳಿರಬಹುದು . ಇಲ್ಲದಿದ್ರೆ ಈಗ ಒಮ್ಮೆ ಓದೋಣ. ಕಥೆ ಮೊದಲೇ ಗೊತ್ತಿದ್ರೆ ಮತ್ತೊಮ್ಮೆ ನೆನಪಿಸಿಕೊಳ್ಳೋಣ.

ಒಂದು ಊರಿನಲ್ಲಿ ಒಬ್ಬ ದರ್ಜಿ ಇದ್ದ. ದಿನವೂ ಆ ಊರಿನ ಹೊಳೆಯಲ್ಲಿ‌ ಸ್ನಾನ‌ ಮಾಡಲು‌ ಆನೆಯೊಂದು ಬರುತ್ತಿತ್ತು. ಹೊಳೆಗೆ ಹೋಗುವ ದಾರಿಯಲ್ಲೇ ದರ್ಜಿಯ ಮಳಿಗೆ ಇತ್ತು. ಆನೆ‌ಯನ್ನು ಕಂಡರೆ ದರ್ಜಿಗೆ ಬಹಳ ಪ್ರೀತಿ. ಆನೆಗೂ ಸಹ ದರ್ಜಿಯ ಜೊತೆ ಆತ್ಮೀಯ ಸ್ನೇಹವಿತ್ತು.

ಪ್ರತಿ ದಿನವೂ ಆನೆ ಬಂದಾಗ, ಅದಕ್ಕೆ ಬಾಳೆ ಹಣ್ಣು‌ಕೊಟ್ಟು ಸೊಂಡಿಲನ್ನು ನವಿರಾಗಿ ಸವರುತ್ತಾ ಮಾತನಾಡಿಸುತ್ತಿದ್ದ ದರ್ಜಿ. ಆನೆಯೂ ಸಹ ತನ್ನ ಸೊಂಡಿಲಿನಿಂದ ದರ್ಜಿಯ ತಲೆ ಮುಟ್ಟಿ, ತನ್ನ ಅಗಲವಾದ ಕಿವಿಗಳನ್ನು ಬೀಸುತ್ತಾ ಅಕ್ಕರೆ ತೋರಿಸುತ್ತಿತ್ತು.

Psychology: ಜೀವನದಲ್ಲಿ ಸ್ಪಷ್ಟ ಸಂವಹನ ಎಷ್ಟು ಮುಖ್ಯPsychology: ಜೀವನದಲ್ಲಿ ಸ್ಪಷ್ಟ ಸಂವಹನ ಎಷ್ಟು ಮುಖ್ಯ

ಹೀಗಿರುವಾಗ ಒಂದು ದಿನ ದರ್ಜಿಯು ತನ್ನ ಬಟ್ಟೆಗಳನ್ನು ಎಷ್ಟು ದಿನಗಳಾದರೂ ಹೊಲಿದು ಕೊಟ್ಟಿಲ್ಲ ಎಂಬ ಕಾರಣಕ್ಕೆ ವ್ಯಕ್ತಿ ಒಬ್ಬ ಬೆಳ್ಳಂಬೆಳಗ್ಗೆ ದರ್ಜಿಯ ಮಳಿಗೆಯ ಮುಂದೆ ಬಂದು ಜೋರಾಗಿ ಕೂಗಾಡುತ್ತಿದ್ದ. ಗ್ರಾಹಕನ ಜೊತೆ ಮಾತಿನ ಚಕಮಕಿ ಉಂಟಾಗಿ ಹೊಡೆದಾಟದ ತನಕವೂ ಹೋಯಿತು. ಊರಿನವರು ಬಂದು ಜಗಳ ಬಿಡಿಸಿದ ಮೇಲೆ ಗ್ರಾಹಕ ಹಾಗು ದರ್ಜಿ ತಮ್ಮ ತಮ್ಮ ದಾರಿ ಹಿಡಿದರು. ಮುಂದೇನಾಯ್ತು? ಕೋಪದಿಂದ ಆಗುವ ಆನಾಹುತ ಹಾಗೂ ನಿವಾರಣೆ ಬಗ್ಗೆ ವಿವರಗಳಿಗೆ ಮುಂದೆ ಓದಿ...

ದರ್ಜಿಯು ಬಹಳ ಕೋಪದಲ್ಲಿದ್ದ

ದರ್ಜಿಯು ಬಹಳ ಕೋಪದಲ್ಲಿದ್ದ

ದರ್ಜಿಯು ಬಹಳ ಕೋಪದಲ್ಲಿದ್ದ. ತನ್ನ‌ಜೊತೆ ಕೆಲಸ ಮಾಡುತ್ತಿದ್ದವ ಮೇಲೆ ಕೂಗಾಡುತ್ತಾ, ಕೈಗೆ ಸಿಕ್ಕ ವಸ್ತುಗಳನ್ನು ಒಡೆದು ಹಾಕುತ್ತಿದ್ದ.

ಸ್ವಲ್ಪ ಸಮಯದ ಬಳಿಕ ಆನೆಯು ಮಳಿಗೆಯತ್ತ ಬಂದಿತು. ಆನೆಯನ್ನು ಕಂಡರೂ ಸಹ ದರ್ಜಿ ಹೊರಗೆ ಬರಲಿಲ್ಲ. ಪ್ರತಿ ದಿನದಂತೆ ದರ್ಜಿ ತನ್ನನ್ನು ನೋಡಲು ಬರಲಿಲ್ಲ, ಎಂದಿನಂತೆ ಪ್ರೀತಿ ಇಂದ ಮಾತನಾಡಿಸುತ್ತಿಲ್ಲ ಎಂದು ಆನೆಯು ಜೋರಾಗಿ ಕೂಗುತ್ತಿರುವುದನ್ನು ಕಂಡು ಮೊದಲೇ ಕೋಪದಲ್ಲಿದ್ದ ದರ್ಜಿ ಸೂಜಿಯಿಂದ ಆನೆಯ ಸೊಂಡಿಲನ್ನು ಚುಚ್ಚಿಬಿಡುತ್ತಾನೆ.

ನೋವಿನಿಂದ ಚೀರುತ್ತಾ ಆನೆಯು ಹೊಳೆಯ ಕಡೆ ಓಡಿ ಹೋಗುತ್ತದೆ. ಸಿಟ್ಟು ಹಾಗು ನೋವಿಂದ ಆನೆಯು, ತನ್ನ ಸೊಂಡಿಲಿನಲ್ಲಿ ಕೆಸರುನೀರು ತುಂಬಿಕೊಂಡು ಬಂದು ದರ್ಜಿಯ ಮೇಲೆ ಎರಚಿಬಿಡುತ್ತದೆ. ಮಳಿಗೆಯಲ್ಲಿದ್ದ ಎಲ್ಲಾ ಬಟ್ಟೆಗಳ ಮೇಲೆ ಕೆಸರು ನೀರು‌ ಬಿದ್ದಿರುವುದನ್ನು ಕಂಡು ದರ್ಜಿ ಕಂಗೆಟ್ಟು ಕುಳಿತುಕೊಳ್ಳುತ್ತಾನೆ.

ತನ್ನ ಅತಿಯಾದ‌ ಕೋಪದಿಂದ ಹೀಗಾಯಿತಲ್ಲಾ ಎಂದು ದರ್ಜಿ ದುಃಖಿಸುತ್ತಾನೆ. ಆನೆ ಊರಿನ ಕಡೆ ಬರುವುದನ್ನೇ ನಿಲ್ಲಿಸಿಬಿಡುತ್ತದೆ. ಆನೆಯೊಂದಿಗಿನ ಒಡನಾಟ ನೆನೆಸಿಕೊಳ್ಳುತ್ತಾ ದರ್ಜಿಯು‌ ಮಂಕಾಗಿಬಿಡುತ್ತಾನೆ.

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

1) ದರ್ಜಿಯ ಪರಿಸ್ಥಿತಿಗೆ ಕಾರಣವಾದ ಅಂಶಗಳು ಯಾವುವು?

2) ನೀವು ಆನೆಯ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಮೊದಲನೆಯದಾಗಿ

  • ದರ್ಜಿಯ ಕೋಪ/ ಸಿಟ್ಟು ಇಷ್ಟೆಲ್ಲಾ ನಷ್ಟಕ್ಕೆ‌ ಕಾರಣವಾಯಿತೆಂದರೆ ತಪ್ಪಾಗುವುದಿಲ್ಲ.
  • ತನ್ನ ಕೋಪವನ್ನು ಏನೂ ಅರಿಯದ ಆನೆಯ ಮೇಲೆ ಹೊರಹಾಕಿದ್ದರಿಂದ, ಆನೆಗೂ ಸಹ ನೋವುಂಟಾಗುತ್ತದೆ
  • ಅದು ದರ್ಜಿಗೂ ಸಹ ಅರಿವಾಗುತ್ತದೆ. ಆದರೆ ಅರಿವಾಗುವಷ್ಟರಲ್ಲೇ ವಸ್ತುಗಳು, ಸಮಯ, ಸ್ನೇಹ ಹೀಗೆ ಅನೇಕ ನಷ್ಟಗಳು ಉಂಟಾಗಿರುತ್ತದೆ.

ನಾವೂ ಸಹ ಅನೇಕ ಬಾರಿ ನಮ್ಮ ಇರುಸು ಮುರುಸು ಕೋಪವನ್ನು ಮತ್ತೊಬ್ಬರ ಮೇಲೆ ತೋರಿಸುತ್ತೇವೆ. ಅನೇಕ ಬಾರಿ ಇತರರಿಗೆ ನಮ್ಮ ಕೋಪದ ಕಾರಣವಾಗಲೀ ಅಥವಾ ಕೋಪದಲ್ಲಿದ್ದಾಗ ನಮ್ಮ ಮಾತು ಹಾಗು ನಡವಳಿಕೆಯಲ್ಲಿ ಕಾಣ ಬರುವ ಬದಲಾವಣೆಗಾಗಲೀ ಕಾರಣ ತಿಳಿದಿರುವುದಿಲ್ಲ.‌ ಇದು ಇತರರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ.

ಅದಲ್ಲದೆ ಕೋಪವು ವೈಯುಕ್ತಿಕವಾಗಿ ನಮ್ಮ ದೇಹ, ಮನಸ್ಸು, ಭಾವನೆಗಳು ಹಾಗು ನಮ್ಮ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ನಮಗೆ ಅತಿಯಾದ ಕೋಪ ಬಂದಾಗ

ನಮಗೆ ಅತಿಯಾದ ಕೋಪ ಬಂದಾಗ

ನಮಗೆ ಅತಿಯಾದ ಕೋಪ ಬಂದಾಗ

  • ಮೈ ಬಿಸಿಯಾಗುವುದು
  • ಬೆವರುವಿಕೆ
  • ಹೃದಯ ಬಡಿತದಲ್ಲಿ ಏರಿಕೆ
  • ವೇಗವಾದ ಉಸಿರಾಟ
  • ಕೈ ನಡುಗುವುದು
  • ಮಾತು ತೊದಲುವುದು
  • ಸ್ನಾಯು ಬಿಗಿತ (muscle tightness) ಉಂಟಾಗುತ್ತದೆ

ಕೋಪವನ್ನು ನಿಗ್ರಹಿಸಿಕೊಳ್ಳಿ (control) ಎಂಬುದು ಸಾಮಾನ್ಯವಾಗಿ ಕೇಳುತ್ತೇವೆ. ಆದರೆ ಸಂತೋಷ, ದುಃಖ ದಂತೆ ಕೋಪವೂ ಸಹ ಒಂದು ಭಾವನೆ. ಅದೂ ಸಹ ಮುಖ್ಯ.

ಕೋಪವನ್ನು ಹತ್ತಿಕ್ಕದೆ ಹೊರಹಾಕುವುದು ಸಹ ಮುಖ್ಯ ಆದರೆ ಸರಿಯಾದ ರೀತಿಯಲ್ಲಿ ಹೊರಹಾಕುವ ಹಾಗು ಕೋಪವನ್ನು ನಿರ್ವಹಣೆ ಮಾಡುವ ಕ್ರಮಗಳನ್ನು ಅರಿತಿರುವುದು ಒಳಿತು. ಅತಿಯಾದ ಕೋಪವು ವ್ಯಕ್ತಿಯ ದೇಹ, ಮನಸ್ಸು ಹಾಗು ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.
ನಿರ್ವಹಣೆ ಹೇಗೆ?

ನಿರ್ವಹಣೆ ಹೇಗೆ?

ನಿರ್ವಹಣೆಯ ಕ್ರಮಗಳು.

* ಒಂದೆರೆಡು ನಿಮಿಷಗಳು ದೀರ್ಘ ಮತ್ತು ಆಳವಾದ ಉಸಿರಾಟ
* ಮುಷ್ಟಿಯನ್ನು ಗಟ್ಟಿಯಾಗಿ ಬಿಗಿದು ನಂತರ ನಿಧಾನವಾಗಿ ಮುಷ್ಟಿಯನ್ನು ಬಿಚ್ಚುತ್ತಾ ಒತ್ತಡವನ್ನು ನಿವಾರಿಸಿಕೊಳ್ಳಿ.
* ನೀರು ಕುಡಿಯಿರಿ
*ನಿಧಾನವಾಗಿ ಐವತ್ತು ಅಥವಾ ನೂರರ ತನಕ ಎಣಿಸಿ. ಇದು ನಮ್ಮ ತಕ್ಷಣದ ಪ್ರತಿಕ್ರಿಯೆಯನ್ನು ಮುಂದೂಡಿ, ಉಸಿರಾಟ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಸರಿಯಾದ ಪದ ಬಳಕೆ, ಸಮಂಜಸ ವಿಚಾರ ನಡವಳಿಕೆಗೆ ಸಹಕಾರಿಯಾಗುತ್ತದೆ. ವಸ್ತು, ಸಂಬಂಧ ನಷ್ಟವನ್ನು ತಪ್ಪಿಸುತ್ತದೆ.

* ಪ್ರಶಾಂತ ವಾತಾವರಣದಲ್ಲಿ ಕುಳಿತುಕೊಳ್ಳಿ
* ಪ್ರತೀ ಬಾರಿ ಅಥವಾ ಕೋಪ ಪ್ರಚೋದಕ‌(frequent trigger factors) ಅಂಶಗಳನ್ನು ಪಟ್ಟಿ ಮಾಡಿ. ಇದರಿಂದ ಭಾವನೆಗಳನ್ನು ಸರಿಯಾಗಿ ನಿರ್ವಹಿಸಲು (emotional management) ಸಹಕಾರಿಯಾಗುತ್ತದೆ‌.
* ಪ್ರಚೋದಕ ಅಂಶಗಳನ್ನು ಅರಿತ ಮೇಲೆ ಅಂತಹ ಸಂದರ್ಭಗಳಲ್ಲಿ ಸ್ವಯಂ ಅರಿವಿನಿಂದ ಪ್ರಜ್ಞೆಪೂರ್ವಕವಾಗಿ ಸಮಾಧಾನದಿಂದಿರಲು ಹಾಗು ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ

ಎರಡನೆಯದಾಗಿ

ಎರಡನೆಯದಾಗಿ

ಆನೆಯ ವಿಚಾರಕ್ಕೆ ಬಂದರೆ, ದರ್ಜಿಯ ಅಂದಿನ ಭಾವನಾತ್ಮಕ ವಾತಾವರಣದ (emotional climate) ಬಗ್ಗೆ ಅರಿವಿರದೆ, ದರ್ಜಿ ಸೂಜಿ ಚುಚ್ಚಿ ಬಿಟ್ಟ ಎಂದು ತಾನೂ ಸಹ ಕೆಸರು ನೀರು ಎರಚಿ ಬಿಡುತ್ತದೆ.

ಪ್ರತಿ ದಿನ‌ ದರ್ಜಿ ಪ್ರೀತಿ ಇಂದ ಮಾತನಾಡಿಸುತ್ತಿದ್ದ ಆದರೆ ಇಂದಿನ ವರ್ತನೆಗೆ ಕಾರಣ ಏನು ಎಂದು ಒಮ್ಮೆ ಸ್ವಲ್ಪ ಸಮಯ ಕೊಟ್ಟು ಯೋಚಿಸಬಹುದಿತ್ತು ಅಲ್ಲವೇ?

ತನ್ನ ಪ್ರೀತಿ ಪಾತ್ರನಾದ ದರ್ಜಿಯ ಸ್ನೇಹಕ್ಕೆ ಬೆಲೆ ಕೊಟ್ಟು, ಆನೆಯು ದರ್ಜಿಯ ವರ್ತನೆ ಬಗ್ಗೆ ಅವನ ಬಳಿಯೇ ಕಾರಣ ಕೇಳಿ ಸಮಾಧಾನದಿಂದ ಅರಿಯುವ ಪ್ರಯತ್ನ ಮಾಡಿದ್ದರೆ, ಸಂಬಂಧ ಹಾಗು ವಸ್ತುಗಳ ಹಾನಿಯನ್ನು ತಪ್ಪಿಸಬಹುದಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತಿತ್ತು.

ಭಾವನಾತ್ಮಕ ವಾತಾವರಣ

ಭಾವನಾತ್ಮಕ ವಾತಾವರಣ

ಕೆಲವೊಮ್ಮೆ ಇತರರು ನಮ್ಮೆಡೆಗೆ ತೋರಿಸುವ (ವ್ಯತ್ಯಾಸ) ವರ್ತನೆಗಳಿಗೆ ಅವರ ಅಂದಿನ ಭಾವನಾತ್ಮಕ ವಾತಾವರಣ, ಸವಾಲುಗಳು ಕಾರಣವಾಗಿರಬಹುದು. ಆದರೆ ಅವರಿಗೆ ನಮ್ಮ ಮೇಲೆ ಯಾವುದೇ ಪ್ರತ್ಯಯ ಭಾವನೆಗಳು ಇಲ್ಲದಿರಬಹುದು. ಈ ಅಂಶಗಳನ್ನು ಪರಿಗಣಿಸುವುದರಿಂದ ಸ್ನೇಹ ಸಂಬಂಧಗಳು ಉತ್ತಮಗೊಳ್ಳುವುದು ಅಲ್ಲವೇ? ಉತ್ತಮ ಜೀವನಕ್ಕೆ ಇದು ಪೂರಕ ಅಂಶವಾಗಿದೆ.

ಈ ಕೋಪ/ ಸಿಟ್ಟಿನ‌ ಪರಿಣಾಮ ಹೇಗಿರುತ್ತದೆ ಎಂಬುದನ್ನು ನಾವು ಕಥೆಯಲ್ಲಿ ನೋಡಿದ್ದೇವೆ.
ಇಲ್ಲಿ ಎರಡು ಅಂಶಗಳನ್ನು ಗಮನಿಸಬಹುದು.

* ಮೊದಲನೆಯದಾಗಿ ಕೋಪ/ ಸಿಟ್ಟಿನ ಪರಿಣಾಮಗಳು ಹಾಗು ನಿರ್ವಹಣೆಯ ಪ್ರಾಮುಖ್ಯತೆ

* ಎರಡನೆಯದಾಗಿ ಮತ್ತೊಬ್ಬರ ನಡವಳಿಕೆಯಲ್ಲಿನ ವ್ಯತ್ಯಾಸ ನಮ್ಮ ಗಮನಕ್ಕೆ ಬಂದಾಗ, ನಾವು ಏನು ಮಾಡಬಹುದು ಎಂಬುದು.

ಅಂದ ಹಾಗೆ ನಿಮ್ಮನ್ನು ನೀವು ದರ್ಜಿಯ ಹಾಗು ಆನೆಯ ಜಾಗದಲ್ಲಿ ಊಹಿಸಿಕೊಳ್ಳಿ ಮತ್ತು ನೀವು ಯಾವ ರೀತಿಯಲ್ಲಿ ಪರಿಸ್ಥಿತಿ ಯನ್ನು ನಿಭಾಯಿಸುತ್ತಿದ್ದಿರಿ ಎಂದು ಬರೆದು ತಿಳಿಸಿ.

ಸುಮ್‌ಸುಮ್ನೆ ಸಿಟ್ಟಾಗ್ತಿದ್ದೀರಾ; ಕೋಪಕ್ಕೆ ಕಡಿವಾಣ ಹಾಕೋದು ಹೇಗೆ...

English summary
Psychology: What is Anger management: How to control Anger outbursts, easy method to calm down your anger- Simple tips in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X