ಸಮಸ್ಯೆಗಳೆಂದರೆ ಯಾವಾಗಲೂ ದೊಡ್ಡ ಅಡೆತಡೆಗಳೇ ಆಗಬೇಕಿಲ್ಲ, ಸಣ್ಣದು ನಾಳೆ ದೊಡ್ಡ ಸಮಸ್ಯೆಯಾಗಬಹುದು
ಸಮಸ್ಯೆಗಳೆಂದರೆ ಯಾವಾಗಲೂ ದೊಡ್ಡ ಅಡೆತಡೆಗಳೇ ಆಗಬೇಕಿಲ್ಲ. ಸಣ್ಣ ಇರುಸು ಮುರುಸುಗಳೂ ಸಮಯ ಕಳೆದಂತೆ ದೊಡ್ಡ ಸಮಸ್ಯೆಯಾಗಹುದು. ಹಾಗಾಗಿ ಪ್ರಾರಂಭದ ಹಂತದಲ್ಲಿಯೇ ಪರಿಹಾರ ಮಾರ್ಗವನ್ನು ಕಂಡುಹಿಡಿದುಕೊಳ್ಳುವುದು ಉತ್ತಮ.
ರೋಹಿತ್ ಮತ್ತು ಗೆಳೆಯರು ಪರ್ವತ ಚಾರಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ದಿನವೂ ವ್ಯಾಯಾಮ, ನಡೆಯುವ ವೇಗ, ಪೌಷ್ಟಿಕ ಆಹಾರ, ಹೊಸ ದುಬಾರಿ ಆರಾಮದಾಯಕ ಬೂಟುಗಳು, ಬೆಚ್ಚನೆಯ ಬಟ್ಟೆಗಳು, ಜಾಕೇಟುಗಳು ಆಮ್ಲಜನಕದ ಪೂರೈಕೆ, ಹೀಗೆ ಸಕಲ ಸಿದ್ಧತೆಗಳೂ ನಡೆದಿದ್ದವು. ಹಿಂದೆಯೂ ಅನೇಕ ಬಾರಿ ರೋಹಿತ್ ಹಾಗು ಗೆಳೆಯರು ಪರ್ವತಾರೋಹಣ ಮಾಡಿದ್ದರು. ಈ ಬಾರಿ ತಮ್ಮ ಮೊದಲ ಪರ್ವತಾರೋಹಣದ ಸಮಯ ಹಾಗು ವೇಗವನ್ನು ಮೀರಿಸುವ ಪ್ರಯತ್ನದಲ್ಲಿ ಇದ್ದರು.
ಪರ್ವತವನ್ನು ಏರಲು ಪ್ರಾರಂಭಿಸಿದ ಕೆಲವೇ ಸಮಯದಲ್ಲಿಯೇ ತನ್ನ ಬೂಟಿನಲ್ಲಿ ಸಣ್ಣ ಕಲ್ಲುಗಳು ಸೇರಿದೆ ಎಂದು ತಿಳಿದ ರೋಹಿತ್, ಬೂಟಿನಲ್ಲಿ ಸೇರಿದ್ದ ಕಲ್ಲುಗಳನ್ನು ತೆಗೆಯಲು ಒಂದು ಸಣ್ಣ ವಿರಾಮ ತೆಗೆದುಕೊಂಡ.
ಅದನ್ನು ಕಂಡ ಉಳಿದ ಗೆಳೆಯರು
* ಅಷ್ಟು ಸಣ್ಣ ಕಲ್ಲು ನಿನಗೆ ಭಾರವಾಯಿತೇ?
* ಸಣ್ಣ ಕಲ್ಲೊಂದು, ನೀನು ಪರ್ವತ ಏರುವುದನ್ನು ತಪ್ಪಿಸಲು ಸಾಧ್ಯವೇ?
* ಇಷ್ಟಕ್ಕೇ ವಿರಾಮ ತೆಗೆದುಕೊಂಡರೆ ಹೇಗೆ?
* ವಿರಾಮದಿಂದ ಸಮಯ ವ್ಯರ್ಥವಾಗುತ್ತದೆ. ಪರ್ವತ ಏರಲು ಸಾಕಷ್ಟು ಸಮಯ ಬೇಕಾಗುತ್ತದೆ.
* ಹೀಗಾದರೇ ಇನ್ನು ಪರ್ವತ ಹೇಗೆ ಏರುವೆ? ಎಂದು ನಕ್ಕು ಬಿಟ್ಟರು. ಗೆಳೆಯರ ಮಾತಿಗೆ ತಲೆಕೆಡಿಸಿಕೊಳ್ಳದೆ ರೋಹಿತ್ ಪರ್ವತಾರೋಹಣ ಮುಂದುವರೆಸಿದ.

ಆದರೆ, ಅದೇ ಗುಂಪಿನಲ್ಲಿದ್ದ ಚರಣ್ ಬೂಟಿನಲ್ಲಿಯೂ ಕೂಡ ಕಲ್ಲಡಗಿದ್ದರು ತನ್ನ ಇತರೆ ಗೆಳೆಯರು ರೋಹಿತ್ ಕುರಿತು ಹಾಸ್ಯ ಮಾಡಿ ನಕ್ಕುದನ್ನು ನೆನೆಸಿಕೊಂಡು , ತನ್ನನ್ನೂ ಆಡಿಕೊಳ್ಳುತ್ತಾರೆ ಎಂಬ ಅಂಜಿಕೆ ಇಂದ ಬೂಟಿನಲ್ಲಿದ್ದ ಕಲ್ಲನ್ನು ಹೊರತೆಗೆಯದೇ ನಿಧಾನವಾಗಿ ಕಾಲ್ಬೆರಳುಗಳಿಂದ ಕಲ್ಲುಗಳನ್ನು ಬೂಟಿನ ಒಂದು ಮೂಲೆಗೆ ತಳ್ಳಿ ಹಾಗೆಯೇ ಮುಂದಕ್ಕೆ ಹೆಜ್ಜೆ ಹಾಕಿದ. ನಂತರ ಸ್ವಲ್ಪ ಹೊತ್ತು ಆರಾಮವಾಗಿ ನಡೆದರೂ ಸಹ ಕೆಲವೇ ಸಮಯದ ಬಳಿಕ ಕಲ್ಲುಗಳು ಮತ್ತೆ ಚುಚ್ಚಲು ಆರಂಭಿಸಿದವು.
ಆದರೂ ಸಹ ಕುಳಿತು ಕೊಂಚ ವಿರಾಮ ತೆಗೆದುಕೊಂಡು ಬೂಟು ಕೊಡವಿ ಕಲ್ಲುಗಳನ್ನು ಹೊರ ತೆಗೆಯುವ ಗೋಜಿಗೇ ಹೋಗಲಿಲ್ಲ. ಹಾಗಾಗಿ ನಡೆಯುವ ವೇಗ ಕಡಿಮೆಯಾಯಿತು, ಇರುಸುಮುರುಸು ಮುಂದುವರೆಯಿತು, ಕಾಲು ನೋವು ಹೆಚ್ಚಾಯಿತು.
ಪಾದರಕ್ಷೆಗಳಲ್ಲಿನ ಕಲ್ಲುಗಳನ್ನು ನಿರ್ಲಕ್ಷ್ಯಸಿದ ಕಾರಣ ನಡೆಯಲು ಕಷ್ಟವಾಗಿ, ಹೆಚ್ಚಿನ ತಯಾರಿ ನಡೆಸಿದ್ದರೂ ಕೂಡ ಪ್ರತೀ ಬಾರಿಗಿಂತ ಬಹಳ ತಡವಾಗಿ ಪರ್ವತವೇರಿದ ಚರಣ್‌ಗೆ ಬಹಳ ನಿರಾಶೆ ಆವರಿಸಿತ್ತು. ಚರಣ್ ನಿರಾಶೆಗೆ ಕಾರಣವಾದದ್ದು, ಯಾವುದೋ ದೊಡ್ಡ ಸಮಸ್ಯೆ ಅಲ್ಲ ಆದರೆ ಪಾದರಕ್ಷೆಯಲ್ಲಡಗಿ, ನಿರ್ಲಕ್ಷಿಸಲಾಗಿದ್ದ ಸಣ್ಣ ಕಲ್ಲುಗಳು.

ಆಶಾ ಗೃಹಿಣಿ. ಮನೆಯ ಎಲ್ಲ ಕೆಲಸಗಳನ್ನೂ ತಾನೊಬ್ಬಳೇ ಮಾಡುತ್ತಿದ್ದಳು. ಕೆಲಸಗಳು ಅವಳ ಒತ್ತಡವನ್ನು ಹೆಚ್ಚಿಸುತ್ತಿತ್ತು. ಒಮ್ಮೊಮ್ಮೆ ಕಿರಿಕಿರಿ ಉಂಟಾಗಿ ಕಿರುಚಾಡುತ್ತಿದ್ದಳು. ವಿರಾಮ ಬೇಕೆನಿಸಿದರೂ ನಾ ಒಬ್ಬ " ಗೃಹಿಣಿ" ಅಂದ ಮೇಲೆ ಹೀಗೆಯೇ ಇರಬೇಕು. ಎಲ್ಲಾ ಕೆಲಸಗಳನ್ನು ತಾನೇ ಮಾಡಬೇಕು ಎಂದು ತನಗೆ ತಾನೇ ಒಂದು ಸಣ್ಣ ಕೋಟೆಯನ್ನು ಕಟ್ಟಿಕೊಂಡಿದ್ದಳು.
ನಿಮಗೂ ಇಂತಹ ಅನುಭವವೇನಾದರೂ ಆಗಿದೆಯೇ..? ಒಮ್ಮೆ ಮನಸ್ಸಿಗೆ ಕಿವಿಕೊಟ್ಟು ಕೇಳಿರಿ.
ನೀವು ಅವರ ಜಾಗದ್ದಿದ್ದಿದ್ದರೆ ಏನು ಮಾಡುತ್ತಿದ್ದಿರಿ..?
* ಕಲ್ಲು ಉಪದ್ರವ ಕೊಡುತ್ತಿದ್ದರೂ ಹಾಗೆಯೇ ಮುಂದಿನ ಹೆಜ್ಜೆ ಹಾಕುತ್ತಿದ್ದೀರಾ..?
* ಎಷ್ಟೆಲ್ಲಾ ದೊಡ್ಡ ಸಮಸ್ಯೆ ಎದುರಿಸಿರುವ ನಾನು ಇಂತಹ ಸಣ್ಣ ಸಣ್ಣ ಉಪದ್ರವಕ್ಕೆಲ್ಲಾ ಹೆದರಿ ಕೂತರೆ ಆದೀತೇ..? ಎಂಬ ಮನಸ್ಥಿತಿ ಇದ್ದೀತೇ..?
* ಉಪದ್ರವವಾಗುತ್ತಿದ್ದರೂ ತಾನು ಏಕೆ ಕಲ್ಲುಗಳನ್ನು ಹೊರ ತೆಗೆಯಲಿಲ್ಲ..? ಛೆ, ಅಷ್ಟೂ ತಿಳಿಯಲ್ಲಿಲ್ಲವಲ್ಲ ನನಗೆ ಎಂದು ನಂತರ ಒಂದು ರೀತಿಯ ಪಶ್ಚಾತಾಪ ಪಡುತ್ತಿದ್ದೀರೇ..?
* ನಿಮ್ಮ ಸುತ್ತ ನೀವೇ ಬೇಲಿ ಹಾಕಿಕೊಳ್ಳುತ್ತಿದ್ದೀರೇ..?
ರೋಹಿತ್ - ಚರಣ್ ಮತ್ತು ಆಶಾ ಇವರ ಸಂದರ್ಭಗಳಲ್ಲಿ ಗಮನಿಸಬೇಕಾದ ಸಾಮಾನ್ಯ ಅಂಶಗಳೆಂದರೆ .
*ನಿರ್ಲಕ್ಷ್ಯ
* ಸಮಸ್ಯೆಗೆ ತಾತ್ಕಾಲಿಕ ಪರಿಹಾರದ ಆಯ್ಕೆ
*ವಿರಾಮದ ಅಗತ್ಯತೆಯ ಮಹತ್ವದ ಬಗ್ಗೆ ಇರುವ ಕಡಿಮೆ ಅರಿವು
* ಸ್ವಯಂ ಕಾಳಜಿವಹಿಸುವಲ್ಲಿ ಇತತರು ಏನು ಎನ್ನುತ್ತಾರೋ ಎಂಬ ಅಂಜಿಕೆ.
* ಭಾವನಾತ್ಮಕ ಘರ್ಷಣೆಗಳು
ಸಮಸ್ಯೆಗಳೆಂದರೆ ಯಾವಾಗಲೂ ದೊಡ್ಡ ಅಡೆತಡೆಗಳೇ ಆಗಬೇಕಿಲ್ಲ. ಸಣ್ಣ ಇರುಸು ಮುರುಸುಗಳೂ ಸಮಯ ಕಳೆದಂತೆ ದೊಡ್ಡ ಸಮಸ್ಯೆಯಾಗಹುದು. ಹಾಗಾಗಿ ಪ್ರಾರಂಭದ ಹಂತದಲ್ಲಿಯೇ ಪರಿಹಾರ ಮಾರ್ಗವನ್ನು ಕಂಡುಹಿಡಿದುಕೊಳ್ಳುವುದು ಉತ್ತಮ.
ಸಣ್ಣ ಕಲ್ಲುಗಳು ಈ ಕೆಳಗಿನ ವಿವಿಧ ರೂಪದಲ್ಲೂ ಇರಬಹುದು
-ಕಡಿಮೆ ಆತ್ಮವಿಶ್ವಾಸ ( ಅಥವಾ ಕೊರತೆ)
-ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ಅಪನಂಬಿಕೆ
-ನಮ್ಮ ಸೀಮಿತ ನಂಬಿಕೆಗಳು
- ಸೀಮಿತ ಯೋಚನೆಗಳು
- ಸಾಮಾಜಿಕ ಅಂಜಿಕೆಗಳು
- ಸದಾ ಇತರರು ತಮ್ಮ ಮಾತು/ ಕೆಲಸ ವೈಖರಿಯನ್ನು ಒಪ್ಪುಬೇಕು ಎಂಬ ಒತ್ತಡ.
- ನಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸುವಲ್ಲಿ / ಎದುರಿಸುವಲ್ಲಿ ಹಿಂಜರಿಕೆ.
ತೆಗೆದುಕೊಳ್ಳಬಹುದಾದ ಕ್ರಮಗಳು
*ನಿಲ್ಲಿಸಿ*
* ನಿರ್ಲಕ್ಷ್ಯ
*ಇತರರ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದು.
* ಯಾವುದೇ ವಿಷಯ ಸಂದರ್ಭಗಳಲ್ಲಿ ಪ್ರತಿಯೊಬ್ಬರ ನಂಬಿಕೆ, ವಿಚಾರಗಳು ಬೇರೆ ಬೇರೆಯಾಗಿರುವುದರಿಂದ ನಿಮ್ಮ ನಿಲುವುಗಳನ್ನು ಪ್ರತಿಯೊಬ್ಬರೂ ಸಮ್ಮತಿಸಬೇಕು ಎಂದುಕೊಳ್ಳುತ್ತಿದ್ದರೆ , ನಿರಾಶೆ ಖಂಡಿತ.
* ಸ್ವಯಂ ಕಾಳಜಿಯನ್ನು ಸ್ವಾರ್ಥ ಎಂದುಕೊಳ್ಳುವುದು.
* ತಾತ್ಕಾಲಿಕ ಪರಿಹಾರದ ಆಯ್ಕೆ
* ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳದೆ ಮುಂದೆ ಪಶ್ಚಾತಾಪ ಪಡುವುದು.
*ಪ್ರಾರಂಭಿಸಿ*
* ಸ್ವಯಂಕಾಳಜಿ
* ಆಗಾಗ ವಿರಾಮ ತೆಗೆದುಕೊಳ್ಳುವುದು
* ಇತರರ ಪ್ರತಿಕ್ರಿಯೆಗಳು/ ಸಲಹೆಗಳಿಂದ ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಬಹುದು ಎನಿಸಿದರೆ ಮುಕ್ತಮನಸ್ಸಿನೊಂದಿಗೆ ಒಮ್ಮೆ ಯೋಚಿಸಿ, ಕ್ರಮ ಅಳವಡಿಸಿಕೊಳ್ಳಿ.
* ಸಮಸ್ಯೆಯ ಪ್ರಥಮ ಹಂತದಲ್ಲಿಯೇ ಸೂಕ್ತ ಪರಿಹಾರ ಕಂಡುಕೊಳ್ಳಿ.
*ಸ್ವಯಂ ಅರಿವು ಬೆಳೆಸಿಕೊಳ್ಳುವ ಪ್ರಯತ್ನ.
* ನಿಮ್ಮ ಅಗತ್ಯತೆಗಳ ಬಗ್ಗೆ ನಿಮಗಲ್ಲದೆ ಮತ್ತಾರಿಗೂ ಹೆಚ್ಚಾಗಿ ತಿಳಿದಿರಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ.
*ಮುಂದುವರೆಸಿ*
* ಮುಕ್ತ ಮಾತುಕತೆ
* ಮುಕ್ತ ಮನಸ್ಥಿತಿ
ಪಾದರಕ್ಷೆಯಲ್ಲಿ ಸೇರಿದಂತಹ ಕಲ್ಲುಗಳನ್ನು ಕೊಡವಿ ಮುಂದೆ ಸಾಗುವುದು ಅಷ್ಟು ಕಷ್ಟಕರವಲ್ಲ. ಅಂತೆಯೇ ಬದುಕಿನ ಸಣ್ಣ ಇರುಸು ಮುರಿಸು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೂ ಸಹ. ನಿರ್ಲಕ್ಷ್ಯ ಮಾಡದೆ ಸ್ವಲ್ಪ ವಿರಾಮ ತೆಗೆದುಕೊಂಡು, ಸಮಯ ಕೊಟ್ಟು , ಕಾಳಜಿವಹಿಸಬೇಕು. ಅದು ಮುಖ್ಯ ಕೂಡ.
*ಗಮನಿಸಿ*
* ಸ್ವಯಂ ಕಾಳಜಿ " ಸ್ವಾರ್ಥವಲ್ಲ"
* ಸಮಸ್ಯೆ ಗಳನ್ನು ಸಹಿಸಿಕೊಂಡು ಪರಿಸ್ಥಿತಿ ಕೈಮೀರಿ ಹೋದ ನಂತರ ಪಶ್ಚಾತಾಪ ಪಡುವುದಕ್ಕೂ ಮೊದಲು
ಧೈರ್ಯವಾಗಿ ಎದುರಿಸಿ. ಪರಿಹಾರ ಮಾರ್ಗಗಳ ಕಡೆ ಗಮನಹರಿಸಿ.
ಅಂದಹಾಗೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತಿರುವ, ನೋವು ಉಂಟುಮಾಡುತ್ತಿರುವ, ಹೇಳಿಕೊಳ್ಳಲು ದೊಡ್ಡದಲ್ಲ ಆದರೆ ಮುಚ್ಚಿಡಲೂ ಆಗದ ಇರುಸುಮುರುಸುಗಳ ಬಗ್ಗೆ ಸ್ವಲ್ಪ ಗಮನ ಕೊಡಿ. ಕಾಳಜಿ ವಹಿಸಿ. ಮುಕ್ತ ಮಾತುಕತೆಯನ್ನು ಉತ್ತೇಜಿಸಿ.












Click it and Unblock the Notifications