'ಮಿಷನ್ ಕೋವಿಡ್ ಸುರಕ್ಷಾ' ಯೋಜನೆಯಡಿ ಕೋವಾಕ್ಸಿನ್ ಉತ್ಪಾದನೆ ಹೆಚ್ಚಳ
ದೇಶೀಯವಾಗಿ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯ ವೇಗವರ್ಧನೆಗಾಗಿ ʻಆತ್ಮನಿರ್ಭರ ಭಾರತ್ 3.0ʼ ಅಡಿಯಲ್ಲಿ ʻಮಿಷನ್ ಕೋವಿಡ್ ಸುರಕ್ಷಾʼ ಯೋಜನೆಯನ್ನು ಭಾರತ ಸರ್ಕಾರ ಘೋಷಿಸಿದೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಈ ಯೋಜನೆ ಅಡಿಯಲ್ಲಿ, ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಉತ್ಪಾದನೆ ಹೆಚ್ಚಳಕ್ಕಾಗಿ ಲಸಿಕೆ ತಯಾರಿಕಾ ಘಟಕಗಳಿಗೆ ಅನುದಾನದ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಯ ಪ್ರಸ್ತುತ ಉತ್ಪಾದನಾ ಸಾಮರ್ಥ್ಯವನ್ನು 2021ರ ಮೇ-ಜೂನ್ ವೇಳೆಗೆ ದ್ವಿಗುಣಗೊಳಿಸಲಾಗುವುದು ಮತ್ತು ನಂತರ ಜುಲೈ - ಆಗಸ್ಟ್ 2021ರ ವೇಳೆಗೆ ಸುಮಾರು 6-7 ಪಟ್ಟು ಹೆಚ್ಚಿಸಲಾಗುವುದು.
2021ರ ಏಪ್ರಿಲ್‌ನಲ್ಲಿ 1 ಕೋಟಿಯಷ್ಟಿರುವ ಲಸಿಕೆ ಉತ್ಪಾದನಾ ಪ್ರಮಾಣವನ್ನು ಜುಲೈ- ಆಗಸ್ಟ್ ವೇಳೆಗೆ 6-7 ಕೋಟಿಗೆ ಹೆಚ್ಚಿಸಲಾಗುವುದು. ಈ ಉತ್ಪಾದನಾ ಪ್ರಮಾಣ ಸೆಪ್ಟೆಂಬರ್ 2021ರ ವೇಳೆಗೆ ಮಾಸಿಕ ಸುಮಾರು 10 ಕೋಟಿ ಡೋಸ್ ಗಳಿಗೆ ತಲುಪುವ ನಿರೀಕ್ಷೆಯಿದೆ.

ಕೆಲವು ವಾರಗಳ ಹಿಂದೆ, ಸಚಿವ ತಂಡಗಳು ಭಾರತದ 2 ಮುಖ್ಯ ಲಸಿಕೆ ತಯಾರಕರ ತಾಣಗಳಿಗೆ ಭೇಟಿ ನೀಡಿ, ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ತಮ್ಮ ಮಾಹಿತಿ ಪಡೆದಿವೆ. ಈ ಅವಧಿಯಲ್ಲಿ, ಲಸಿಕೆ ತಯಾರಕರೊಂದಿಗೆ ಚರ್ಚಿಸಲಾಗುತ್ತಿರುವ ಯೋಜನೆಗಳ ಕುರಿತು ವ್ಯಾಪಕ ಪರಿಶೀಲನೆಗಳು ಮತ್ತು ಕಾರ್ಯಸಾಧ್ಯತಾ ಅಧ್ಯಯನಗಳು ನಡೆದಿವೆ.
ಭಾರತ್ ಬಯೋಟೆಕ್‌ನ ಹೊಸ ಬೆಂಗಳೂರು ಘಟಕ
ಈ ಸಾಮರ್ಥ್ಯ ವರ್ಧನೆ ಯೋಜನೆಯ ಭಾಗವಾಗಿ, ಅಗತ್ಯ ಮೂಲಸೌಕರ್ಯ ಮತ್ತು ತಂತ್ರಜ್ಞಾನ ನವೀಕರಣದೊಂದಿಗೆ ಹೈದರಾಬಾದ್‌ನ ʻಭಾರತ್ ಬಯೋಟೆಕ್ ಲಿಮಿಟೆಡ್ʼ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಭಾರತ್ ಬಯೋಟೆಕ್‌ನ ಹೊಸ ಬೆಂಗಳೂರು ಘಟಕಕ್ಕೆ ಭಾರತ ಸರಕಾರದಿಂದ ಅನುದಾನ ರೂಪದಲ್ಲಿ ಸುಮಾರು 65 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಲಾಗುತ್ತಿದ್ದು, ಲಸಿಕೆ ಉತ್ಪಾದನೆ ಹೆಚ್ಚಳಕ್ಕಾಗಿ ಈ ಘಟಕದ ಗುರಿಯನ್ನು ಪುನಾರಚನೆ ಮಾಡಲಾಗುತ್ತಿದೆ.

ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು 3 ಸಾರ್ವಜನಿಕ ವಲಯದ ಕಂಪನಿಗಳಿಗೆ ಸಹ ನೆರವು ನೀಡಲಾಗುತ್ತಿದೆ.
• ʻಹಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ʼ, ಮುಂಬೈ - ಇದು ಮಹಾರಾಷ್ಟ್ರ ಸರಕಾರದ ಅಡಿಯಲ್ಲಿರುವ ರಾಜ್ಯ ಸಾರ್ವಜನಿಕ ವಲಯದ ಉದ್ದಿಮೆಯಾಗಿದೆ. ಈ ಘಟಕವನ್ನು ಉತ್ಪಾದನೆಗೆ ಸಜ್ಜುಗೊಳಿಸಲು ಭಾರತ ಸರಕಾರದಿಂದ ಅನುದಾನದ ರೂಪದಲ್ಲಿ ಸುಮಾರು 65 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಲಾಗುವುದು. ಈ ಕಾರ್ಯವನ್ನು ಪೂರ್ಣಗೊಳಿಸಲು ʻಹಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ʼ ಸುಮಾರು 12 ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ, ತುರ್ತಾಗಿ 6 ತಿಂಗಳಲ್ಲೇ ಕೆಲಸವನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಸಂಸ್ಥೆಗೆ ಸೂಚಿಸಿದೆ. ಈ ಘಟಕವು ಒಮ್ಮೆ ಕಾರ್ಯಾರಂಭ ಮಾಡಿದ ನಂತರ ತಿಂಗಳಿಗೆ 20 ದಶಲಕ್ಷ ಡೋಸ್ ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿದೆ.

• ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್ ಅಡಿಯ, ಹೈದರಾಬಾದ್ನ ʻಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ʼ (ಐಐಎಲ್), ಮತ್ತು ಬುಲಂದ್‌ಶಹರ್‌ನಲ್ಲಿರುವ ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯ ʻಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಲಿಮಿಟೆಡ್ (ಬಿಬಿಸಿಒಎಲ್)ʼ ಸಂಸ್ಥೆಗಳಿಗೂ 2021ರ ಆಗಸ್ಟ್ - ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 10-15 ದಶಲಕ್ಷ ಡೋಸ್ ತಯಾರಿಕೆಗೆ ಘಟಕಗಳನ್ನು ಸಜ್ಜುಗೊಳಿಸಲು ಭಾರತ ಸರ್ಕಾರಾ ನೆರವನ್ನು ಒದಗಿಸಿದೆ.(ಆರೋಗ್ಯ ಇಲಾಖೆ ಪ್ರಕಟಣೆ)











Click it and Unblock the Notifications