Mumbai Airport: ಮುಂಬೈ ವಿಮಾನ ನಿಲ್ದಾಣದ T1ಗೆ ಹೊಸ ರೂಪ; 2030ರ ವೇಳೆಗೆ ನೂತನ ಟರ್ಮಿನಲ್ ಸಿದ್ಧ
Mumbai Airport: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ಟರ್ಮಿನಲ್ 1 (T1)ರ ಮರುಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕಲಾತ್ಮಕ ವಿನ್ಯಾಸದ ಚಿತ್ರಗಳನ್ನು (Artistic Impressions) ಏರ್‌ಲೈನ್ ಆಪರೇಟರ್ಸ್ ಕಮಿಟಿ (AOC) ಸಭೆಯಲ್ಲಿ ಹಂಚಿಕೊಂಡಿದೆ. ಈ ದೃಶ್ಯಗಳು ಮುಂಬೈನ ಭವಿಷ್ಯದ ಪ್ರವೇಶದ್ವಾರವಾಗಲಿರುವ ಟರ್ಮಿನಲ್‌ನ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುವ ವಿನ್ಯಾಸ ಮತ್ತು ವಾಸ್ತುಶಿಲ್ಪದ ಆಧುನಿಕ ವಿನ್ಯಾಸವನ್ನು ಹೊಂದಿರಲಿದೆ ಎಂಬುದನ್ನು ತೋರಿಸುತ್ತವೆ. ಈ ಚಿತ್ರಗಳು ಟರ್ಮಿನಲ್‌ನ ಉದ್ದೇಶಿತ ವಿನ್ಯಾಸದ ಸ್ವರೂಪ ಮತ್ತು ಪ್ರಯಾಣಿಕರ ಅನುಭವವನ್ನು ಸೂಚಿಸುತ್ತವೆ. ಆದರೆ, ಇವು ಟರ್ಮಿನಲ್‌ನ ಅಂತಿಮ ವಿನ್ಯಾಸದ ನಿಖರ ಚಿತ್ರಣವಲ್ಲ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
1964ರಲ್ಲಿ ಕಾರ್ಯಾರಂಭ ಮಾಡಿದ ಟರ್ಮಿನಲ್ 1 (T1) ಈಗ ಹಳೆಯದಾಗಿದ್ದು, ಅದರ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತವಾಗಿದೆ. ಸ್ಟ್ರಕ್ಟ್‌ವೆಲ್ ಸಂಸ್ಥೆ (2017) ಮತ್ತು ಐಐಟಿ ಬಾಂಬೆ (2024) ನಡೆಸಿದ ತಪಾಸಣೆಗಳಲ್ಲಿ ಸುರಕ್ಷತಾ ಹಾಗೂ ರಚನಾತ್ಮಕ ದೌರ್ಬಲ್ಯಗಳು ಕಂಡುಬಂದಿವೆ. ಹೀಗಾಗಿ 60 ವರ್ಷ ಹಳೆಯ ಈ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ.

ಈ ವಿನ್ಯಾಸಗಳು ಪ್ರಯಾಣಿಕರನ್ನು ಹಾಗೂ ಮುಂಬೈನ ಬೆಳೆಯುತ್ತಿರುವ ವಾಣಿಜ್ಯ ರಾಜಧಾನಿಯ ಅಗತ್ಯಗಳನ್ನು ಕೇಂದ್ರವಾಗಿರಿಸಿಕೊಂಡು ನಿರ್ಮಿಸಲಿರುವ ಟರ್ಮಿನಲ್‌ನ ಕಲ್ಪನೆಯನ್ನು ಬಿಂಬಿಸುತ್ತವೆ. ತುಂಡುತುಂಡಾಗಿದ್ದ ಹಳೆಯ ಕಟ್ಟಡವನ್ನು ಆಧುನಿಕ, ಅಡೆತಡೆಗಳಿಲ್ಲದ ಮತ್ತು ಸಾಂಸ್ಕೃತಿಕ ಕಲ್ಪನೆಯ ದ್ವಾರವನ್ನಾಗಿ ಪರಿವರ್ತಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ವಿಶೇಷತೆಗಳೇನು?
* ವಿಮಾನ ನಿಲ್ದಾಣ ಸಂಸ್ಥೆಯು ಹಂಚಿಕೊಂಡಿರುವ ಕಲಾತ್ಮಕ ಚಿತ್ರಗಳು ಮುಂಬೈನ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಆಧುನಿಕ ಸ್ಪರ್ಶದ ಮುನ್ನೋಟವನ್ನು ನೀಡುತ್ತವೆ. ವಿಶಾಲವಾದ ಹಾಗೂ ಆಕರ್ಷಕವಾದ ನಿಗಮ ಮತ್ತು ನಿರ್ಗಮನ ದ್ವಾರಗಳನ್ನು ಒಳಗೊಂಡಿರಲಿದೆ.
* ಚೆಕ್-ಇನ್ ಹಾಲ್: ಮುಂಬೈನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ಥಳೀಯ ಕಲಾಕೃತಿಗಳೊಂದಿಗೆ, ಕಂಬಗಳಿಲ್ಲದ ವಿಶಾಲವಾದ ಮತ್ತು ಸೂರ್ಯನ ಬೆಳಕು ಬೀಳುವ ಆಕರ್ಷಕ ಚೆಕ್-ಇನ್ ಹಾಲ್ ಹೊಂದಿರಲಿದೆ.
* ಹಸಿರಿನಿಂದ ಕಂಗೊಳಿಸುವ ಒಳಾಂಗಣ, ಪ್ರೀಮಿಯಂ ಲೌಂಜ್‌ಗಳು ಹಾಗೂ ರನ್‌ವೇ ಕಾಣಿಸುವ ಗಾಜಿನ ವಿನ್ಯಾಸ ಇರಲಿದೆ.
* ಮುಂಬೈನ ನೈಸರ್ಗಿಕ ಜೀವವೈವಿಧ್ಯತೆಯನ್ನು ಸಂಕೇತಿಸುವ ಬೃಹತ್ 'ಫ್ಲೆಮಿಂಗೋ' ಪಕ್ಷಿಯ ಶಿಲ್ಪದೊಂದಿಗೆ ಪ್ರಯಾಣಿಕರನ್ನು ಆಕರ್ಷಕವಾಗಿ ಸ್ವಾಗತಿಸುವ ತೆರೆದ ವಲಯ ಇರಲಿದೆ.
ಪ್ರಯೋಜನಗಳೇನು?
* ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವು ಪ್ರಸ್ತುತ ಇರುವ 1.5 ಕೋಟಿಯಿಂದ 2 ಕೋಟಿಗೆ ಅಂದರೆ ಶೇಕಡಾ 33ರಷ್ಟು ಏರಿಕೆಯಾಗಲಿದೆ.
* ಚೆಕ್-ಇನ್ ಕೌಂಟರ್‌ಗಳು: ಇವುಗಳ ಸಂಖ್ಯೆಯು 74 ರಿಂದ 109ಕ್ಕೆ ಅಂದರೆ ಶೇಕಡಾ 47ರಷ್ಟು ಹೆಚ್ಚಾಗಲಿದೆ.
* ಸೆಕ್ಯುರಿಟಿ ತಪಾಸಣಾ ಲೇನ್‌ಗಳು: ಪ್ರಯಾಣಿಕರಿಗಾಗಿ 15 ಲೇನ್‌ಗಳು ಹಾಗೂ ಟ್ರಾನ್ಸ್‌ಫರ್ ಲೇನ್‌ಗಳ ಸಂಖ್ಯೆ 5ಕ್ಕೆ ಏರಿಕೆಯಾಗಲಿದ್ದು, ಒಟ್ಟಾರೆ 2.5 ಪಟ್ಟು ವಿಸ್ತರಣೆಯಾಗಲಿವೆ.
* ಕಾಂಟ್ಯಾಕ್ಟ್ ಸ್ಟ್ಯಾಂಡ್‌ಗಳು: ಬಸ್ ಮೂಲಕ ವಿಮಾನ ಏರುವುದನ್ನು ತಪ್ಪಿಸುವ ಏರೋಬ್ರಿಡ್ಜ್/ಸ್ಟ್ಯಾಂಡ್‌ಗಳ ಸಂಖ್ಯೆ 7ರಿಂದ 25ಕ್ಕೆ ಅಂದರೆ 3.5 ಪಟ್ಟು ಹೆಚ್ಚಾಗಲಿದೆ. ಸಾಂಪ್ರದಾಯಿಕ ಬೋರ್ಡಿಂಗ್ ಗೇಟ್‌ಗಳ ಬದಲಿಗೆ 12 ಹೊಸ ಇ-ಗೇಟ್‌ಗಳು ಬರಲಿವೆ.
* ಲಗೇಜ್ ಬೆಲ್ಟ್‌ಗಳು: ಇವುಗಳ ಸಂಖ್ಯೆ 5 ರಿಂದ 11ಕ್ಕೆ ಏರಿಕೆಯಾಗುವ ಮೂಲಕ ಎರಡಕ್ಕಿಂತ ಹೆಚ್ಚು ಪಟ್ಟು ವಿಸ್ತರಣೆಯಾಗಲಿವೆ.
ನಿರ್ಮಾಣ ಕಾಮಗಾರಿಯ ಅವಧಿಯಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಯಾವುದೇ ಅಡಚಣೆಯಾಗದಂತೆ ಹಂತ-ಹಂತವಾಗಿ ಈ ಬದಲಾವಣೆಯನ್ನು ತರಲಾಗುತ್ತಿದೆ. ಏಪ್ರಿಲ್ 2027ಕ್ಕೆ ಪ್ರಸ್ತುತ ಇರುವ ಹಳೆಯ ಟರ್ಮಿನಲ್ 1ರ ಕೆಡವುವಿಕೆ ಕಾರ್ಯ ಆರಂಭವಾಗಲಿದೆ. ಮಾರ್ಚ್ 2029ಕ್ಕೆ ಮಧ್ಯಂತರ ಅವಧಿಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ನಿರ್ವಹಣೆಗಾಗಿ ವಿಸ್ತರಿಸಲಾಗುತ್ತಿರುವ G+3 T2 ನಾರ್ತ್-ವೆಸ್ಟ್ ಪಿಯರ್ ಸಿದ್ಧಗೊಂಡು ಕಾರ್ಯಾಚರಣೆಗೆ ಬರಲಿದೆ.
ಡಿಸೆಂಬರ್ 2030ಕ್ಕೆ ಹಳೆಯ T1 ಇದ್ದ ಸ್ಥಳದಲ್ಲೇ ನಿರ್ಮಾಣವಾಗಲಿರುವ ನೂತನ T1 ಟರ್ಮಿನಲ್ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಈ ಯೋಜನೆ ಪೂರ್ಣಗೊಂಡ ನಂತರ, ಮುಂಬೈ ವಿಮಾನ ನಿಲ್ದಾಣದ ಒಟ್ಟು ವಾರ್ಷಿಕ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯವು 6.5 ಕೋಟಿಗೆ ತಲುಪಲಿದೆ. ಪ್ರಯಾಣಿಕರ ಅನುಭವ, ಸಾಂಸ್ಕೃತಿಕ ಗುರುತು ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಮುಖ್ಯವಾಗಿಟ್ಟುಕೊಂಡು ಸುರಕ್ಷಿತ ಹಾಗೂ ವಿಶಿಷ್ಟ ಮುಂಬೈ ಶೈಲಿಯ ದ್ವಾರವನ್ನು ನಿರ್ಮಿಸುವುದು ಈ ಯೋಜನೆ ಉದ್ದೇಶವಾಗಿದೆ ಎಂದು CSMIA ತಿಳಿಸಿದೆ.


Click it and Unblock the Notifications
