ಅಮೆರಿಕ ನ್ಯಾಯಾಲಯದಲ್ಲಿ ಗೌತಮ್‌ ಅದಾನಿ, ಸಾಗರ್‌ ಅದಾನಿ ವಿರುದ್ಧದ ಕ್ರಿಮಿನಲ್‌ ಪ್ರಕರಣ ವಜಾ

ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ, ಅವರ ಸೋದರಳಿಯ ಸಾಗರ್‌ ಅದಾನಿ ಹಾಗೂ ಮಾಜಿ ಅದಾನಿ ಗ್ರೀನ್‌ ಸಿಇಒ ವಿನೀತ್‌ ಜೈನ್‌ ವಿರುದ್ಧ ಅಮೆರಿಕದಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಫೆಡರಲ್‌ ನ್ಯಾಯಾಲಯ ಶಾಶ್ವತವಾಗಿ ವಜಾಗೊಳಿಸಿದೆ. ವಂಚನೆ ಮತ್ತು ಲಂಚದ ಆರೋಪಗಳಿಗೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆಗೆ ಇದೀಗ ತೆರೆ ಬಿದ್ದಿದೆ.

ನ್ಯೂಯಾರ್ಕ್‌ನ ಈಸ್ಟರ್ನ್‌ ಡಿಸ್ಟ್ರಿಕ್ಟ್‌ ಫೆಡರಲ್‌ ಕೋರ್ಟ್‌, ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಸಲ್ಲಿಸಿದ್ದ ಪ್ರಕರಣ ಕೈಬಿಡುವ ಮನವಿಯನ್ನು ಅಂಗೀಕರಿಸಿದೆ. ಪ್ರಕರಣದಲ್ಲಿ ಸೆಕ್ಯುರಿಟೀಸ್‌ ಫ್ರಾಡ್‌ ಸಂಚು, ವೈರ್‌ ಫ್ರಾಡ್‌ ಸಂಚು ಮತ್ತು ಸೆಕ್ಯುರಿಟೀಸ್‌ ಫ್ರಾಡ್‌ ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿತ್ತು.

Gautam Adani US Court Dismisses Criminal Case Against Gautam Adani and Sagar Adani

ನ್ಯಾಯಾಧೀಶ ನಿಕೋಲಸ್‌ ಗರಾಫಿಸ್‌ ಅವರು ಪ್ರಕರಣವನ್ನು "with prejudice" ಎಂದು ವಜಾಗೊಳಿಸಿದ್ದಾರೆ. ಅಂದರೆ, ಇದೇ ಆರೋಪಗಳನ್ನು ಆಧರಿಸಿ ಈ ಪ್ರಕರಣವನ್ನು ಮತ್ತೆ ದಾಖಲಿಸಲು ಸಾಧ್ಯವಿಲ್ಲ. ಆದರೆ ಪ್ರಕರಣ ವಜಾಗೊಂಡಿರುವುದು ಮೂಲ ಆರೋಪಗಳ ಕುರಿತು ನ್ಯಾಯಾಲಯ ನೀಡಿದ ತೀರ್ಪಲ್ಲ ಎಂಬುದು ಗಮನಾರ್ಹ. ಪ್ರಕರಣದ ವಿಚಾರಣೆ ನಡೆದಿಲ್ಲ, ಯಾವುದೇ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿಲ್ಲ ಹಾಗೂ ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಪರಿಶೀಲಿಸಲಾಗಿಲ್ಲ.

2024ರಲ್ಲಿ ಆರಂಭವಾಗಿದ್ದ ಪ್ರಕರಣ

2024ರ ನವೆಂಬರ್‌ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಗೌತಮ್‌ ಅದಾನಿ, ಸಾಗರ್‌ ಅದಾನಿ ಸೇರಿದಂತೆ ಇತರರ ವಿರುದ್ಧ ಆರೋಪ ಹೊರಿಸಿದ್ದರು. ಭಾರತದಲ್ಲಿನ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್‌ ಡಾಲರ್‌ ಲಂಚ ನೀಡುವ ಸಂಚು ರೂಪಿಸಿ, 20 ವರ್ಷಗಳಲ್ಲಿ 2 ಬಿಲಿಯನ್‌ ಡಾಲರ್‌ಗೂ ಹೆಚ್ಚು ಲಾಭ ತರುವ ನಿರೀಕ್ಷೆಯಿದ್ದ ಸೌರ ವಿದ್ಯುತ್‌ ಒಪ್ಪಂದಗಳನ್ನು ಪಡೆಯಲು ಪ್ರಯತ್ನಿಸಿದ್ದರು ಎಂಬುದು ಆರೋಪವಾಗಿತ್ತು.

ಅಲ್ಲದೆ, ಅದಾನಿ ಗ್ರೂಪ್‌ ಅಮೆರಿಕದ ಬಂಡವಾಳ ಮಾರುಕಟ್ಟೆಗಳಿಂದ 3 ಬಿಲಿಯನ್‌ ಡಾಲರ್‌ಗೂ ಹೆಚ್ಚು ಹಣ ಸಂಗ್ರಹಿಸುವ ಸಂದರ್ಭದಲ್ಲಿ ಹೂಡಿಕೆದಾರರನ್ನು ತಪ್ಪುದಾರಿಗೆಳೆದಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಆದರೆ ಅದಾನಿ ಗ್ರೂಪ್‌ ಆರಂಭದಿಂದಲೂ ಈ ಆರೋಪಗಳನ್ನು ನಿರಾಕರಿಸಿದ್ದು, ಅವು ಆಧಾರರಹಿತ ಎಂದು ಹೇಳಿಕೊಂಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ನಾಗರಿಕ ಮೊಕದ್ದಮೆಯೂ ಅಮೆರಿಕದ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ (SEC) ಮೂಲಕ ದಾಖಲಾಗಿತ್ತು. ಆ ಪ್ರಕರಣದಲ್ಲಿ ಗೌತಮ್‌ ಅದಾನಿ ಅವರು ಯಾವುದೇ ತಪ್ಪನ್ನು ಒಪ್ಪಿಕೊಳ್ಳದೆ 6 ಮಿಲಿಯನ್‌ ಡಾಲರ್‌ ದಂಡ ಪಾವತಿಸಲು ಒಪ್ಪಿಕೊಂಡಿದ್ದರು.

ಪ್ರಕರಣ ಕೈಬಿಡಲು DOJ ಕಾರಣವೇನು?

ಅಮೆರಿಕದ ನ್ಯಾಯಾಂಗ ಇಲಾಖೆ, ಪ್ರಕರಣವನ್ನು ಮುಂದುವರಿಸುವುದು ಇನ್ನು ಮುಂದೆ ನ್ಯಾಯದ ಹಿತಾಸಕ್ತಿಗೆ ಅನುಕೂಲಕರವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಪ್ರಕರಣದ ನ್ಯಾಯವ್ಯಾಪ್ತಿ ಮತ್ತು ಸಾಕ್ಷ್ಯಗಳಿಗೆ ಸಂಬಂಧಿಸಿದ ದುರ್ಬಲತೆ, ಆರೋಪಿತ ಘಟನೆಗಳ ಬಹುಪಾಲು ಭಾರತದಲ್ಲಿ ನಡೆದಿರುವುದು, ಹೂಡಿಕೆದಾರರಿಗೆ ಉಂಟಾದ ನಷ್ಟವನ್ನು ಸ್ಪಷ್ಟವಾಗಿ ಗುರುತಿಸಲಾಗದಿರುವುದು ಹಾಗೂ ಭಾರತದಲ್ಲೇ ಈ ವಿಚಾರಕ್ಕೆ ಸಂಬಂಧಿಸಿದ ನಿಯಂತ್ರಣಾತ್ಮಕ ಪರಿಶೀಲನೆ ನಡೆಯುತ್ತಿರುವುದನ್ನು DOJ ತನ್ನ ವಾದದಲ್ಲಿ ಉಲ್ಲೇಖಿಸಿತ್ತು.

ಅಷ್ಟೇ ಅಲ್ಲದೆ, ಬೈಡನ್‌ ಆಡಳಿತದ ಕೊನೆಯ ವಾರಗಳಲ್ಲಿ ದಾಖಲಿಸಲಾಗಿದ್ದ ಮೂಲ ಆರೋಪಪಟ್ಟಿಗೆ ವಿಚಾರಣೆ ಹಂತ ತಲುಪುವ ಸಾಧ್ಯತೆ ಕಡಿಮೆ ಇತ್ತು ಮತ್ತು ಅದು ರಾಜಕೀಯ ಪ್ರೇರಿತ ಕ್ರಮದಂತೆ ಕಂಡುಬರುತ್ತದೆ ಎಂಬ ವಾದವನ್ನೂ DOJ ಮುಂದಿಟ್ಟಿತ್ತು.

ಆದರೆ ಸರ್ಕಾರ ಮಂಡಿಸಿದ ಎಲ್ಲ ವಾದಗಳನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ವಿಶೇಷವಾಗಿ ನ್ಯಾಯವ್ಯಾಪ್ತಿಗೆ ಸಂಬಂಧಿಸಿದ ವಾದ ದುರ್ಬಲವಾಗಿದೆ ಎಂದು ನ್ಯಾಯಾಧೀಶ ಗರಾಫಿಸ್‌ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಹೂಡಿಕೆದಾರರು ಹಾಗೂ ಅಮೆರಿಕದ ಹಣಕಾಸು ವ್ಯವಸ್ಥೆಯೂ ಪ್ರಕರಣದಲ್ಲಿ ನೇರವಾಗಿ ಒಳಗೊಂಡಿವೆ ಎಂದು ಆರೋಪಪಟ್ಟಿಯಲ್ಲೇ ಹೇಳಿರುವುದನ್ನು ಅವರು ಗಮನಿಸಿದ್ದಾರೆ. ಅಂತಿಮವಾಗಿ, ಕೆಲವು ಕಂಪನಿಗಳ ಆ್ಯಂಟಿ-ಬ್ರೈಬರಿ ನಿಯಮ ಪಾಲನೆಗೆ ಸಂಬಂಧಿಸಿದ ಹೇಳಿಕೆಗಳು ಕಾನೂನು ಕ್ರಮಕ್ಕೆ ಆಧಾರವಾಗುವಷ್ಟು ನಿರ್ದಿಷ್ಟವಾಗಿರಲಿಲ್ಲ ಎಂಬ ವಾದವು ಪ್ರಕರಣ ವಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

2024ರ ನವೆಂಬರ್‌ನಲ್ಲಿ ಅಮೆರಿಕದಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡುವುದಾಗಿ ಗೌತಮ್‌ ಅದಾನಿ ನೀಡಿದ್ದ ಭರವಸೆಯ ಬಗ್ಗೆಯೂ ನ್ಯಾಯಾಧೀಶರು ಗಮನ ಹರಿಸಿದ್ದಾರೆ. ಈ ಹೂಡಿಕೆ ಬದ್ಧತೆ ಪ್ರಕರಣ ಕೈಬಿಡುವ DOJ ನಿರ್ಧಾರದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂಬುದರಲ್ಲಿ ತಾವು ತೃಪ್ತರಾಗಿರುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ಸೇರಿದಂತೆ ಆರೋಪಿಗಳು ಯಾವುದೇ ರೀತಿಯ 'ಕ್ವಿಡ್‌ ಪ್ರೊ ಕ್ವೋ' (ಒಂದು ಅನುಕೂಲಕ್ಕೆ ಪ್ರತಿಯಾಗಿ ಮತ್ತೊಂದು ಅನುಕೂಲ) ನಡೆದಿಲ್ಲ ಎಂದು ಪ್ರಮಾಣಪತ್ರದ ಮೂಲಕ ಘೋಷಿಸುವಂತೆ ನ್ಯಾಯಾಲಯ ಸೂಚಿಸಿದೆ.

ಗೌತಮ್‌ ಅದಾನಿ ಪ್ರತಿಕ್ರಿಯೆ

ಪ್ರಕರಣ ವಜಾಗೊಂಡ ಬಳಿಕ ಗೌತಮ್‌ ಅದಾನಿ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆಯನ್ನು ವಿನಯದಿಂದ ಸ್ವೀಕರಿಸಿರುವುದಾಗಿ ಅವರು ಹೇಳಿದ್ದಾರೆ. ಸತ್ಯ, ನ್ಯಾಯ ಮತ್ತು ಕಾನೂನಿನ ಆಳ್ವಿಕೆಯ ಮೇಲಿನ ನಂಬಿಕೆ ಇಟ್ಟಿರುವ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿರುವ ಅವರು, ದೇಶ ನಿರ್ಮಾಣದ ಕಾರ್ಯದಲ್ಲಿ ಅದಾನಿ ಗ್ರೂಪ್‌ನ ಬದ್ಧತೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕಾನೂನು ಪ್ರಕ್ರಿಯೆಯ ನಡುವೆಯೂ ವ್ಯವಹಾರಕ್ಕೆ ಅಡ್ಡಿಯಾಗಿಲ್ಲ: ಅದಾನಿ ಗ್ರೂಪ್‌

ಕಾನೂನು ಹೋರಾಟದ ನಡುವೆಯೂ ತನ್ನ ವ್ಯವಹಾರ ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಅದಾನಿ ಗ್ರೂಪ್‌ ಹೇಳಿದೆ. FY25ರ ದ್ವಿತೀಯಾರ್ಧ ಮತ್ತು FY26ರಲ್ಲಿ ಒಟ್ಟಾರೆ ₹2.08 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಸಮೂಹ ತಿಳಿಸಿದೆ. FY26ರಲ್ಲಿ ವಾರ್ಷಿಕ ಬಂಡವಾಳ ವೆಚ್ಚ ₹1,52,967 ಕೋಟಿಗೆ ತಲುಪಿದ್ದು, ಇದು ಭಾರತೀಯ ಕಾರ್ಪೊರೇಟ್‌ ಸಮೂಹವೊಂದರ ದಾಖಲೆಯಾಗಿದೆ ಎಂದು ಹೇಳಿದೆ.

ಈ ಅವಧಿಯಲ್ಲಿ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಆರಂಭ, ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌, ಕೊಲಂಬೊ ವೆಸ್ಟ್‌ ಇಂಟರ್‌ನ್ಯಾಷನಲ್‌ ಟರ್ಮಿನಲ್‌ ಹಾಗೂ ಗಂಗಾ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಯೋಜನೆಗಳು ಕಾರ್ಯಾರಂಭ ಮಾಡಿವೆ ಎಂದು ಸಮೂಹ ತಿಳಿಸಿದೆ.

ಅದಾನಿ ಪೋರ್ಟ್ಸ್‌ ಒಂದು ಹಣಕಾಸು ವರ್ಷದಲ್ಲಿ 500 ಮಿಲಿಯನ್‌ ಟನ್‌ಗೂ ಹೆಚ್ಚು ಸರಕು ನಿರ್ವಹಿಸಿದ ಭಾರತದ ಮೊದಲ ಬಂದರು ನಿರ್ವಹಣಾ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಅದಾನಿ ಗ್ರೀನ್‌ ಎನರ್ಜಿಯ ನವೀಕರಿಸಬಹುದಾದ ಇಂಧನ ಸಾಮರ್ಥ್ಯವೂ 20 GW ದಾಟಿದೆ ಎಂದು ಕಂಪನಿ ಹೇಳಿದೆ.

FY23ರಲ್ಲಿ ₹4.12 ಲಕ್ಷ ಕೋಟಿಯಷ್ಟಿದ್ದ ಸಮೂಹದ ಆಸ್ತಿ ಮೌಲ್ಯ FY26ರಲ್ಲಿ 7.85 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕ್ರೆಡಿಟ್‌ ರೇಟಿಂಗ್‌ಗಳಲ್ಲಿ ಸುಧಾರಣೆ ಹಾಗೂ ಅಪೋಲೋ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌, ಬ್ಲ್ಯಾಕ್‌ರಾಕ್‌ ಮತ್ತು ಕ್ಯಾಪಿಟಲ್‌ ಗ್ರೂಪ್‌ ಸೇರಿದಂತೆ ಜಾಗತಿಕ ಹೂಡಿಕೆದಾರರ ನಿರಂತರ ಪಾಲ್ಗೊಳ್ಳುವಿಕೆಯನ್ನು ಮಾರುಕಟ್ಟೆಯ ನಂಬಿಕೆಯ ಸಂಕೇತಗಳಾಗಿ ಅದಾನಿ ಗ್ರೂಪ್‌ ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+