• search

ಅಕ್ಕ ಸಮ್ಮೇಳನದಲ್ಲಿ ಬೃಂದಾವನ ಸಂಘದ ಉತ್ಕೃಷ್ಟ ಪ್ರದರ್ಶನ

Posted By: ಅನಿಲ್ ಭಾರದ್ವಾಜ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  9ನೇ ಅಕ್ಕ ಸಮ್ಮೇಳನ ಅಟ್ಲಾಂಟಿಕ್‌ ಸಿಟಿಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಅತಿಥೇಯ ರಾಜ್ಯವಾದ ನ್ಯೂಜೆರ್ಸಿಯದೇ ಆದ ಕನ್ನಡ ಸಂಘವಾದ 'ಬೃಂದಾವನ' ಆಕರ್ಷಕವಾದ ಕಾರ್ಯಕ್ರಮಗಳನ್ನು ನೀಡಿ ನೆರೆದಿದ್ದವರಿಗೆ ಒಳ್ಳೆಯ ಮನೋರಂಜನೆ ನೀಡಿತು.

  ಆರಂಭಿಕ ದಿನವಾದ ಶುಕ್ರವಾರ ಉದ್ಘಾಟನಾ ಸಮಾರಂಭದ ನಂತರ ಸಭಿಕರಿಗೆ ಅನಿರೀಕ್ಷಿತವಾಗಿ ಬೃಂದಾವನ ಸಂಘದ ಐವತ್ತಕ್ಕೂ ಹೆಚ್ಚು ಸದಸ್ಯರು 'ನಾವು ಬಂದೇವ ಅಕ್ಕ ಜಾತ್ರಿ ನೋಡಲಿಕ್ಕ' ಎಂದು 'ಫ್ಲ್ಯಾಷ್ ಮಾಬ್' ರೀತಿ ಗೀಗಿ ಪದಕ್ಕೆ ಕುಣಿದರು. ಅದಕ್ಕೆ ಸವಾಲಿನಂತೆ ಯುವ ಬೃಂದಾವನದ ಮಕ್ಕಳು 'ಗಜವದನ ಹೇರಂಭ' ನಾಟಕ ಶೈಲಿಯ ಹಾಡಿಗೆ ನರ್ತಿಸಿ ಸಮ್ಮೇಳನ ನಿರ್ವಿಘ್ನವಾಗಿ ನಡೆಯಲೆಂದು ಗಣಪನಲ್ಲಿ ಪ್ರಾರ್ಥಿಸಿದರು.

  Wonderful performance by Brindavana Kannada Koota

  ಮರುದಿನ, ಶನಿವಾರ ಬೆಳಿಗ್ಗೆ ಬೃಂದಾವನದ ನೂರಕ್ಕೂ ಹೆಚ್ಚು ಸದಸ್ಯರು 'ಅಕ್ಕ ಮೆರವಣಿಗೆ'ಯಲ್ಲಿ ಪಾಲ್ಗೊಂಡರು. ಸಾಲು ಸಾಲಾಗಿ ವೈವಿಧ್ಯಪೂರ್ಣ ಕರ್ನಾಟಕದ ಉಡುಪುಗಳನ್ನು ತೊಟ್ಟು ಮೆರವಣಿಗೆಗೆ ವಿಶಿಷ್ಟ ಬೆಡಗು ತಂದರು. ದೇವಿಯರಂತೆ ಕಾಣುತ್ತಿದ್ದ ಕಳಶಗಿತ್ತಿಯರ ಸಾಲು, ಮತ್ತೊಂದು ಸಾಲಿನಲ್ಲಿ ಮೈಸೂರಿನ ರಾಜರು ಹಾಗೂ ಅವರ ದಿವಾನರು ಮತ್ತು ಛತ್ರಿ ಹಿಡಿದ ಸೇವಕ, ನಂತರ ಆನೆ ಅಂಬಾರಿ ಮತ್ತು ಡೊಳ್ಳು ಕುಣಿತ, ಚಾಮುಂಡೇಶ್ವರಿ ಮತ್ತು ಮಹಿಷಾಸುರನ ವೇಷ ಇತ್ಯಾದಿ.

  Wonderful performance by Brindavana Kannada Koota

  ಯುವ ಪೀಳಿಗೆಯ ಆದ್ಯತೆ ತೋರುವ ನಿಟ್ಟಿನಿಂದ 'ಬೃಂದಾವನ ಕನ್ನಡ ಶಾಲೆ'ಯ ಮಕ್ಕಳು ಮತ್ತು 'ಯುವ ಬೃಂದಾವನ'ದ ಸದಸ್ಯರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಕನ್ನಡದ ಬಗೆಗಿನ ಹೆಮ್ಮೆ ಪ್ರದರ್ಶಿಸಿದರು. 'ನಾವೆಲ್ಲರೂ ಒಂದು, ಅಕ್ಕ ನಮಗೆಲ್ಲಾ ಒಂದು', 'ಅಲ್ಲಿ ನೋಡು ಬೃಂದಾವನ, ಇಲ್ಲಿ ನೋಡು ಬೃಂದಾವನ, ಎಲ್ಲೆಲ್ಲಿ ನೋಡು ಬೃಂದಾವನ' ಘೋಷಣೆಗಳು ಸುತ್ತ ವ್ಯಾಪಿಸಿತ್ತು. ಮೆರವಣಿಗೆ ಮುಕ್ತಾಯಗೊಂಡಾಗ ಎಲ್ಲರ ಮುಖದಲ್ಲಿ ಕನ್ನಡಿಗನೆಂಬ ಹೆಮ್ಮೆ ಸ್ಪಷ್ಟವಾಗಿ ತೋರುತ್ತಿತ್ತು.

  ತದನಂತರ ಬೃಂದಾವನದ ಕಾರ್ಯಕ್ರಮಗಳು ನಿಲ್ಲದಂತೆ ಬರುವಂತಿತ್ತು. 'ಅಕ್ಕ ನಡೆದು ಬಂದ ದಾರಿ' ಕಾರ್ಯಕ್ರಮದಲ್ಲಿ 2010ನೇ ಅಕ್ಕ ನಡೆಸಿಕೊಟ್ಟ ಬೃಂದಾವನದ ಪ್ರತಿನಿಧಿಗಳನ್ನು ವೇದಿಕೆಯ ಮೇಲೆ ಪರಿಚಯಿಸಿಕೊಟ್ಟರು. ಅದೇ ತಂಡ 'ಬೆಳ್ಳಂ ಬೆಳಗ...ನಾನು ಕನ್ನಡಿಗ, ಕನ್ನಡದ ಕಾವಲಿಗ' ಹಾಡಿಗೆ ಕುಣಿದು ಎಲ್ಲರನ್ನು ರಂಜಿಸಿದರು. ಅದೇ ನಿರೂಪಣೆಯಲ್ಲಿ 'ಏಲಿಮೆಂಟ್ಸ್' ಎಂಬ ಪರಿಸರಕ್ಕೆ ಮೂಲಭೂತವಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶವನ್ನು ಚಿತ್ರಿಸುವ ನೃತ್ಯವನ್ನು ಹಲವು ಕನ್ನಡ ಸಂಘದವರು ಸೇರಿ ಮಾಡಿದರು. ಅದರಲ್ಲಿ ಗಾಳಿ ಮತ್ತು ಭೂಮಿಯನ್ನು ಬೃಂದಾವನದ ನರ್ತಕಿಯರು ವಿಭಿನ್ನವಾಗಿ ನರ್ತಿಸಿ ವರ್ಣಿಸಿದರು.

  Wonderful performance by Brindavana Kannada Koota

  'ದಶಕದ ಹಾಡಿಗೆ ನಾಟ್ಯದ ಮಿಲನ' ಎಂಬ ನೃತ್ಯ ಮಿಶ್ರಣ ಕನ್ನಡ ಚಿತ್ರರಂಗ ಕಳೆದ ದಶಕಗಳಿಂದ ನಡೆದು ಬಂದ ದಾರಿಯನ್ನು ಆಗಿನ ಜನಪ್ರಿಯ ಹಾಡೊಂದರಿಂದ ಪರಿಚಯಿಸಿಕೊಟ್ಟರು. ರತ್ನಮಂಜರಿ ಚಿತ್ರದ 'ಗಿಲ್ ಗಿಲ್ ಗಿಲಿ ಗಿಲಕ್ಕು' ಹಾಡಿನಿಂದ ಶುರುವಾದ ಸೊಗಸಾದ ಕುಣಿತ, 'ಮೆಲ್ಲುಸಿರೇ ಸವಿಗಾನ', 'ಮಲೆನಾಡ ಹೆಣ್ಣ ಮೈಬಣ್ಣ', 'ನಮ್ಮೂರ ಸಂತೇಲಿ ಮುಸ್ಸಂಜೆ...' ಇತ್ಯಾದಿ ಹಾಡುಗಳ ದಶಕಗಳನ್ನು ತೋರಿಸಿ, ಈ ದಶಕದ 'ಜರಾಸಂಧ' ಚಿತ್ರದ 'ನೀರಿಗೆ ಬಾರೆ ಚೆನ್ನಿ' ಹಾಡಿನಿಂದ ಆಂತ್ಯಗೊಂಡಿತು. ಆಮೇಲೆ ಎಲ್ಲಾ ನರ್ತಕರು ವೇದಿಕೆಯ ಮೇಲೆ ಸೇರಿ 'ಧೀಮ್ ತನಕಧೀಂ... ಬೃಂದಾವನ' ಹಾಡಿಗೆ ಕರತಾಡನಗಳ ಮಧ್ಯೆ ಕುಣಿದು ವೈಭವದ ಮನೋರಂಜನೆ ನೀಡಿದರು.

  ಸಂಜೆ ಕಾಫಿ-ಚಹ ಜೊತೆ ಮುದ ನೀಡಲು ಸುಶ್ರಾವ್ಯವಾದ ಹಾಡುಗಳಿದ್ದರೆ ಬಹಳ ಚೆನ್ನ ಅಲ್ಲವೆ? ಅದಕ್ಕೆ ಸರಿಯಂತೆ ಶನಿವಾರ ಸಂಜೆ ಬೃಂದಾವನದ ಸದಸ್ಯರು 'ರಾಗ ನಾಟ್ಯ ಧಾರೆ' ಎಂಬ ಕ್ಯಾರಿಯೊಕೆ ಸಂಗೀತ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದ ವೈಶಿಷ್ಟ್ಯವೇನೆಂದರೆ ಎಲ್ಲಾ ಹಾಡುಗಳು ಕೀರವಾಣಿ ರಾಗವನ್ನು ಆಧರಿಸಿದ್ದವು. 'ಸ್ನೇಹ ಅತಿಮಧುರ, ಸ್ನೇಹ ಅದು ಅಮರ' ವೃಂದಗಾನದಿಂದ ಆರಂಭಿಸಿ, 'ಕನಸಲು ನೀನೆ, ಮನಸಲು ನೀನೆ', 'ಆಕಾಶದಾಚೆ ಯಾರೋ ಮಾಯಗಾರನು' ಇತ್ಯಾದಿ ಜನಪ್ರಿಯ ಹಾಡುಗಳನ್ನು ಹಾಡಿದರು. ಕೆಲವು ನರ್ತಕಿಯರು ಈ ಹಾಡುಗಳಿಗೆ ಸುಗಮವಾದ ನೃತ್ಯ ಮಾಡಿ ಮೆರಗು ಹೆಚ್ಚಿಸಿದರು.

  Wonderful performance by Brindavana Kannada Koota

  ಕೊನೆಯ ದಿನ, ಭಾನುವಾರ, 'ಬೃಂದಾವನ ಕನ್ನಡ ಶಾಲೆ'ಯ ಮಕ್ಕಳು 'ಜ್ಞಾನಪೀಠ ವೈಭವ' ಎಂಬ ಉತ್ಕೃಷ್ಟವಾದ ನೃತ್ಯನಾಟಕ ಪ್ರದರ್ಶಿಸಿದರು. ಕನ್ನಡದ ಎಲ್ಲಾ 8 ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳನ್ನು ಪರಿಚಯಿಸಿ, ಅವರ ಕೃತಿಯಿಂದ ಆಯ್ದ ಹೊನ್ನುಡಿ ಅಥವಾ ಹಾಡಿಗೆ ನೃತ್ಯಮಾಡಿ ರಂಜಿಸಿದರು. ಕುವೆಂಪು 'ಅಂತರತಮ ನೀ ಗುರು' ಆದಿಯಾಗಿ, ಚಂದ್ರಶೇಖರ ಕಂಬಾರರ 'ಕಾಡುಕುದುರೆ ಓಡಿ ಬಂದಿತ್ತಾ' ಮುಂತಾದ ಗೀತೆಗಳು, ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಕೆಲವು ಮಾತುಗಳು, ಶಿವರಾಮ ಕಾರಂತರ ನುಡಿಗಳು ಹಾಗೂ ಯಕ್ಷಗಾನ ನೆರೆದವರಿಗೆ ಶಿಕ್ಷಣ ಮತ್ತು ಮನೋರಂಜನೆ ನೀಡಿತು.

  ಅಂಗ್ಲಭಾಷೆಯಲ್ಲಿ 'Icing on the cake' ಎನ್ನುವ ಹಾಗೆ ಸಮ್ಮೇಳನದ ಮುಕ್ತಾಯ ಸಮಾರಂಭವನ್ನು 'ಯುವ ಬೃಂದಾವನ'ದ ಮಕ್ಕಳೇ ನಡೆಸಿಕೊಟ್ಟರು. ಅಲ್ಲದೆ ಬೋನಸ್ ಎಂಬುವ ಹಾಗೆ 'ಅಂಬಿ ನೈಟ್' ಕಾರ್ಯಕ್ರಮದಲ್ಲೂ 'ಯುವ ಬೃಂದಾವನ'ದ ಮಕ್ಕಳು ರಮೇಶ್ ಅವರೊಂದಿಗೆ ಕುಣಿಯುವ ಮುಖ್ಯ ಹೊಣೆವಹಿಸಿಕೊಂಡಿದ್ದರು.

  ಒಟ್ಟಿನಲ್ಲಿ ಹೇಳುವುದಾದರೆ, ಈ ಮೂರು ದಿನದ ಅಕ್ಕ ಕನ್ನಡ ಸಮ್ಮೇಳನದಲ್ಲಿ ಬೃಂದಾವನ ಕನ್ನಡ ಸಂಘ ಬಹಳ ಉತ್ಕೃಷ್ಟವಾದ ಕಾರ್ಯಕ್ರಮಗಳನ್ನು ಮತ್ತು ಹತ್ತಾರು ಸ್ವಯಂಸೇವಕರುಗಳನ್ನು ನೀಡಿ, ಸಮಾವೇಶದ ಯಶಸ್ಸಿಗೆ ತನ್ನ ಅಳಿಲುಸೇವೆಯನ್ನು ಮಾಡಿತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Brindavana Kannada Koota gave wonderful performance throughout 9th AKKA World Kannada Conference held in Atlantic City, New Jersey, USA from September 2-4, 2016. A report by Anil Bharadwaj.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more