ಅಕ್ಕ ಸಮ್ಮೇಳನ ಸ್ವಯಂಸೇವಕರ ಮೊದಲ ಸಭೆ - ವರದಿ

Posted By:
Subscribe to Oneindia Kannada

ನ್ಯೂಜೆರ್ಸಿ, ಜನವರಿ 19 : ನ್ಯೂಜೆರ್ಸಿಯ ಬಾರ್ಡನ್ ಟೌನ್ನನ ರಮಾಡ ಇನ್ ಹೋಟಲಿನಲ್ಲಿ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಿದ್ಧತೆಗಾಗಿ ಸ್ವಯಂಸೇವಕರ ಸಭೆ ಭಾನುವಾರ ಇಲ್ಲಿ ನಡೆಯಿತು.

ಲತಾ ನಟರಾಜ್ ಅವರ ವಿಘ್ನವಿನಾಶಕ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಕಲಾಪಗಳು ಶುರುವಾಯಿತು. ಮೊದಲಿಗೆ ಅಧ್ಯಕ್ಷರಾದ ರಾಜ್ ಪಾಟೀಲರು ಸಭೆಯನ್ನುದ್ದೇಶಿಸಿ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಗುರಿ ಹಾಗೂ ಈ ಬಾರಿ ಹಮ್ಮಿಕೊಂಡಿರುವ ವಿವಿಧ, ವೈಶಿಷ್ಟ್ಯಮಯ ಕಾರ್ಯಕ್ರಮಗಳ ಮುಖ್ಯಾಂಶಗಳನ್ನು ವಿವರಿಸಿದರು. ನೂರಾರು ಮಂದಿ ಸ್ವಯಂಸೇವಕರು ಹುಮ್ಮಸ್ಸಿನಿಂದ ಅವರ ಮಾತುಗಳಿಗೆ ಕಿವಿಯಾದರು. ಈ ಬಾರಿಯ ಸಮ್ಮೇಳನ ಅಟ್ಲಾಂಟಾ ಸಿಟಿಯಲ್ಲಿ ನಡೆಯುತ್ತದೆ. ಸೆಪ್ಟೆಂಬರ್ 2, 3, 4 ಲೇಬರ್ ಡೇ ದೀರ್ಘ ವಾರಾಂತ್ಯ.

ಕಾರ್ಯನಿರ್ವಾಹಕ ಸಮಿತಿಯ ಸದಸ್ಯರುಗಳನ್ನು ಅಕ್ಕ ಅಧ್ಯಕ್ಷ ರಾಜ್ ಪಾಟೀಲ್ ಸಭಿಕರಿಗೆ ಪರಿಚಯಿಸಿಕೊಟ್ಟರು. ಇಂಥ ಬೃಹತ್ ಪ್ರಮಾಣದ ಕನ್ನಡ ಸಮ್ಮೇಳನದ ಯಶಸ್ಸಿಗೆ ಸ್ವಯಂಸೇವಕರ ಶ್ರಮ ಅತೀಮುಖ್ಯ ಎಂದು ಒತ್ತಿ ಹೇಳಿದರು. ಅಟ್ಲಾಂಟಿಕ್ ಸಿಟಿಯನ್ನು ಕನ್ನಡ ಸಮ್ಮೇಳನಕ್ಕೆ ಆಯ್ಕೆ ಮಾಡಲು ಮುಖ್ಯ ಕಾರಣಗಳೇನೆಂದು ಅವರು ವಿವರಿಸಿದರು. ಅಟ್ಲಾಂಟಿಕ್ ಸಿಟಿ ಸುತ್ತಮುತ್ತಲಿನ ಎಲ್ಲ ರಾಜ್ಯಗಳಲ್ಲಿ ಕನ್ನಡಿಗರು ನೆಲೆಸಿರುವ ನಗರಗಳಿಗೆ ಸಮೀಪವಿರುವುದು, ಬೇಸಿಗೆ ರಜೆಯಲ್ಲಿ ಪೂರ್ಣಪರಿವಾರದೊಂದಿಗೆ ಆನಂದಿಸಬಹುದಾದ ಮನೋರಂಜನೆಯ ಕೇಂದ್ರಗಳು ಮತ್ತು ಆಕರ್ಷಣೆಗಳು, ಸಂಚಾರಕ್ಕೆ ಸೂಕ್ತವಾದ ಹತ್ತಿರದ ವಿಮಾನ ನಿಲ್ದಾಣಗಳು, ಅತಿಥಿಗಳಿಗೆ ತಂಗಲು ಹತ್ತಿರವಿರುವ ಎಲ್ಲಾ ದರ್ಜೆಯ ಹೋಟೆಲುಗಳು ಇತ್ಯಾದಿ ಅಂಶಗಳನ್ನು ಪಟ್ಟಿಮಾಡಿದರು. [ಒಂಭತ್ತನೇ ಅಕ್ಕ ಕನ್ನಡ ಸಮ್ಮೇಳನಕ್ಕೆ ನೋಂದಣಿ ಆರಂಭ]

Atlantic City AKKA World Kannada Convention 2016 : Volunteers kick off meeting NJ

ಸಮಾರಂಭಕ್ಕೆ 5,000ಕ್ಕೂ ಹೆಚ್ಚು ಕನ್ನಡಪ್ರೇಮಿಗಳು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ಮಾಡಬೇಕಾದ ಸಕಲ ಸಿದ್ಧತೆಯ ಬಗ್ಗೆ ರಚನಾತ್ಮಕ ಚರ್ಚೆ ನಡೆಯಿತು. ಸುಮಾರು ಐವತ್ತಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಿದ್ದು, ಪ್ರತಿಯೊಂದು ಉಪಸಮಿತಿಗೂ ಒಬ್ಬ ಮುಖ್ಯಸ್ಥನನ್ನು ಗುರುತಿಸಲಾಗುವುದು. ಉಪಸಮಿತಿ ಉದಾಹರಣೆಗಳು: ಸಾಹಿತ್ಯ, ಊಟ, ನೃತ್ಯ ಮತ್ತು ನಾಟಕ (ಸ್ಥಳೀಯ ಮತ್ತು ವಿದೇಶೀಯ), ಸ್ಮರಣ ಸಂಚಿಕೆ ಮತ್ತು ಪ್ರಚಾರ ಸಾಮಗ್ರಿಗಳು, ನೋಂದಣಿ, ಸಾರ್ವಜನಿಕ ಸಂಪರ್ಕ, ಅಂತರ್ಜಾಲ, ಮಹಿಳೆಯರ ವೇದಿಕೆ, ಹಣಕಾಸು, ಇತ್ಯಾದಿ.

ಖಜಾಂಚಿಗಳಾದ ಚಂದ್ರು ಆರಾಧ್ಯ ಹಣಕಾಸು ಮತ್ತು ಖರ್ಚು-ವೆಚ್ಚಗಳ ಬಗ್ಗೆ ಮಾತನಾಡಿ, ಶೀಘ್ರ ನೋಂದಣಿಯಿಂದ ಸಂಘಟನೆಗೆ ಆಗುವ ಅನುಕೂಲದ ಬಗ್ಗೆ ವಿವರಿಸಿದರು. ಸಮಿತಿಗಳ ಚಟುವಟಿಕೆಗಳಲ್ಲಿ ಪಾರದರ್ಶಕತೆ ಮತ್ತು ಒಮ್ಮತವನ್ನು ಆದರಿಸುವುದಾಗಿ ಉಪಾಧ್ಯಕ್ಷ ಶರತ್ ಭಂಡಾರಿ ಕಾರ್ಯನಿರ್ವಾಹಕ ಸಮಿತಿಯ ಪರವಾಗಿ ವಚನವಿತ್ತರು. ಕೆಲವು ಉಪಸಮಿತಿಯ ಮುಖ್ಯಸ್ಥರು ಅವರ ಗುಂಪಿನ ಹೊಣೆ, ಗುರಿ ಹಾಗು ಮುಂದಿರುವ ಕೆಲಸಗಳ ಬಗ್ಗೆ ಮಾಹಿತಿ ಕೊಟ್ಟರು.

ಈ ಸಮ್ಮೇಳನದ ಕೆಲವು ವೈಶಿಷ್ಟ್ಯತೆಗಳು:

* ಕರ್ನಾಟಕದ ವೈಭವವನ್ನು ಪ್ರದರ್ಶಿಸುವುದಲ್ಲದೆ ಕನ್ನಡ ಭಾಷೆಯ ಸಿರಿತನ ಮತ್ತು ವಿದೇಶದಲ್ಲಿ ಅದನ್ನು ಬೆಳೆಸುವುದಕ್ಕೆ ಆದ್ಯತೆ.

* ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಪ್ರಚಾರವನ್ನು ಬೆಂಗಳೂರು ಮತ್ತು ಮೈಸೂರು ಅಲ್ಲದೆ ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಇನ್ನಿತರ ಪ್ರಮುಖ ನಗರಗಳಲ್ಲಿ ನಡೆಸುವ ಯೋಜನೆ.

* ಕರ್ನಾಟಕದಿಂದ ಸಮ್ಮೇಳನಕ್ಕೆ ಬರಲು ಇಚ್ಛೆ ಇರುವರಿಗೆ ಪ್ರವಾಸ ಸಂಸ್ಥೆಗಳೊಂದಿಗೆ ಪ್ಯಾಕೇಜ್ ಪ್ರವಾಸದ ಮಾತುಕತೆ.

ಕೊನೆಯಲ್ಲಿ ಸಭಿಕರೊಂದಿಗೆ ಮುಕ್ತ ಪ್ರಶ್ನೋತ್ತರಕ್ಕೆ ಅವಕಾಶವಿತ್ತು. ಎಲ್ಲರೂ ಸಮಾರಂಭವನ್ನು ಉತ್ಕೃಷ್ಟ ರೀತಿಯಲ್ಲಿ ನಡೆಸಿ, ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದರು. ಒಟ್ಟಿನಲ್ಲಿ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅರ್ಥಪೂರ್ಣವಾಗಿಸುವ, ಜಯಭೇರಿ ಮೊಳಗಿಸುವ, ಧೃಢಸಂಕಲ್ಪದ ಭಾವ ಸಭೆಯಲ್ಲಿ ಹೊರಹೊಮ್ಮಿತು. ಇನ್ನು ಹೆಚ್ಚುಹೆಚ್ಚಾಗಿ ಸ್ವಯಂಸೇವಕರನ್ನು ನೋಂದಣಿಗೊಳಿಸುವ ಒಕ್ಕೊರಲ ದನಿಯೊಂದಿಗೆ ಸಭೆ ಮುಕ್ತಾಯವಾಯಿತು. ಸಮ್ಮೇಳನಕ್ಕೆ ಆನ್ ಲೈನ್ ನೊಂದಣಿ ಆರಂಭವಾಗಿದೆ. ನೋಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Raj Patil, the President of AKKA address convention volunteers kick off meeting for 9th world kannada convention in Bordentown New Jersey. The convention will be held during labor day week end 2016 in Atlantic City, USA.
Please Wait while comments are loading...