ಕಸ ಟೆಂಡರ್ ಭ್ರಷ್ಟಾಚಾರ: ಇದು 30 ವರ್ಷಗಳ ಬೆಂಗಳೂರು ಜನರ ಭವಿಷ್ಯದ ಪ್ರಶ್ನೆ: ಸಮಿತಿಗೆ ಅಶೋಕ್ ಆಗ್ರಹವೇನು?
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ನೆಪದಲ್ಲಿ ರಾಜ್ಯ ಸರ್ಕಾರ ಮೂರು ದಶಕಗಳವರೆಗೆ ಒಂದೇ ಕಂಪನಿಗೆ ಒಟ್ಟು 39,000 ಕೋಟಿ ರೂಪಾಯಿಗೆ ಟೆಂಡರ್ ನೀಡಿದೆ. ಅದರಿಂದ 10,000 ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದೆ ಎಂದು ಆರೋಪಿಸಲಾಗಿತ್ತ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಟೆಂಡರ್ ಪರಿಶೀಲನೆಗೆ 'ಉನ್ನತ ಮಟ್ಟದ ಪರಿಶೀಲನಾ ಸಮಿತಿ' ರಚಿಸಿದೆ. ಈ ಸಮಿತಿಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪತ್ರ ಬರೆದು ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಈ ಸಮಿತಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಯ ಟೆಂಡರ್ ಪರಿಶೀಲನೆ ಮಾಡಿದೆ. ಸಮಿತಿಯ ಸದಸ್ಯರೆಲ್ಲರು ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯಬಾರದು. ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ಬೆಂಗಳೂರಿನ ಘನತ್ಯಾಜ್ಯ ನಿವರ್ಹಣೆಗೆ 39,437 ಕೋಟಿ ರೂ. ಮೊತ್ತದ ಟೆಂಡರ್ ರೂಪಿಸಿದೆ. ಇದರಲ್ಲಿ ಕಿಕ್‌ಬ್ಯಾಕ್ ಪಡೆದಿದ್ದು, ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ದೂರಿದ್ದರು. ಅದರ ಬೆನ್ನಲ್ಲೇ ರಚಿಸವಾದ ಈ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಉದ್ದೇಶಿಸಿ ಅವರು ಪತ್ರ ಕೆಲವು ಅಂಶಗಳನ್ನು ತಿಳಿಸಿದ್ದಾರೆ.
ಬೆಂಗಳೂರಿನ ನಾಗರಿಕರ 3 ದಶಕಗಳ ಪ್ರಶ್ನೆ
'ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ನೀವು ಈ ನಗರದ ನಾಗರಿಕರು. ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ನಿಮ್ಮ ಮುಂದೆ ಇರುವ ಪ್ರಶ್ನೆ ಕೇವಲ ಒಂದು ಟೆಂಡರ್ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ' ಎಂದಿದ್ದಾರೆ.
'ಕರ್ನಾಟಕ ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡರ್ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಯೋಜನೆಯ ವೆಚ್ಚ, ವಾರ್ಷಿಕ ದರ ಏರಿಕೆ, 30 ವರ್ಷಗಳ ಸುದೀರ್ಫ ಅವಧಿಯ ಒಪ್ಪಂದ ಹಾಗೂ ಏಕಸ್ವಾಮ್ಯಕ್ಕೆ ಅವಕಾಶ ಕಲ್ಪಿಸುವ "ವೆ೦ಡರ್ ಲಾಕ್-ಇನ್" ಅಪಾಯಗಳ ಬಗ್ಗೆ ಸರ್ಕಾರದ ಸ್ವಂತ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.
ಹಣಕಾಸು ಇಲಾಖೆಯ ಅಭಿಪ್ರಾಯದ ಪ್ರಕಾರ, ವರ್ಷಕ್ಕೆ ಶೇ.5 ದರ ಏರಿಕೆ ಮುಂದುವರಿದರೆ ಮುಂದಿನ 30 ವರ್ಷಗಳಲ್ಲಿ ಈ ಯೋಜನೆಯ ವೆಚ್ಚ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಅಂತಿಮ ಹೊರೆ ಬೀಳುವುದು ಸರ್ಕಾರದ ಮೇಲೆ ಅಲ್ಲ, ಬೆಂಗಳೂರಿನ ತೆರಿಗೆದಾರ ನಾಗರಿಕರ ಮೇಲೆ' ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿಗರ ಮೇಲೆ ತೆರಿಗೆ ಭಾರ
;ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರ ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ; ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ' ಎಂದು ವಿವರಿಸಿದ್ದಾರೆ.
'ವರದಿಯಲ್ಲಿ ನೀವು ಬರೆಯುವ ಪ್ರತಿಯೊಂದು ಪದವೂ ಸಾರ್ವಜನಿಕ ವಲಯದಲ್ಲಿ, ಮಾಧ್ಯಮಗಳಲ್ಲಿ ತೀವ್ರ ವಿಮರ್ಶೆಗೊಳಗಾಗಲಿದೆ. ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿಗೆ ಅನುಗುಣವಾಗಿ, ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ' ಎಂದು ಹೇಳಿದರು.
ಸರ್ಕಾರಕ್ಕೆ ವರದಿ ಸಲ್ಲಿಸುವುದು ತಮಗೆ ಒಂದು ಕರ್ತವ್ಯವಾಗಿರಬಹುದು. ಆದರೆ ಬೆಂಗಳೂರಿನ ಜನತೆಗೆ ಮತ್ತು ನಿಮ್ಮ ಆತ್ಮಸಾಕ್ಷಿಗೆ ಉತ್ತರ ನೀಡುವುದು ಅದಕ್ಕಿಂತ ದೊಡ್ಡ ಜವಾಬ್ದಾರಿಯಾಗಿದೆ. ನಾಳೆ ಈ ನಗರದ ನಾಗರಿಕರು, ತೆರಿಗೆದಾರರು ಮತ್ತು ಮುಂದಿನ ಪೀಳಿಗೆಗಳು ಹಿಂದಿರುಗಿ ನೋಡಿದಾಗ, ಈ ಸಮಿತಿಯ ಸದಸ್ಯರು ಕೇವಲ ಒಂದು ನಿರ್ಧಾರಕ್ಕೆ ಮುದ್ರೆ ಒತ್ತಲಿಲ್ಲ; ಬೆಂಗಳೂರಿನ ಹಿತಾಸಕ್ತಿಯನ್ನು ಕಾಪಾಡುವ ತಮ್ಮ ಗುರುತರ ಕರ್ತವ್ಯವನ್ನು ನಿಭಾಯಿಸಿದರು ಎಂಬ ಹೆಗ್ಗಳಿಕೆ ನಿಮಗೆ ಸಲ್ಲಬೇಕೆಂದು' ಅವರು ಆಶಯ ವ್ಯಕ್ತಪಡಿಸಿದರು.
'ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಇಂದು ನಿಮ್ಮ ಮುಂದಿದೆ. ನಿಮ್ಮ ವರದಿ ಸರ್ಕಾರದ ನಿರ್ಧಾರವನ್ನು ಮಾತ್ರವಲ್ಲ, ಬೆಂಗಳೂರಿನ ಭವಿಷ್ಯವನ್ನೂ ರೂಪಿಸಲಿದೆ. ಆ ಜವಾಬ್ದಾರಿಯನ್ನು ನ್ಯಾಯಯುತವಾಗಿ ನಿರ್ವಹಿಸಬೇಕೆಂದು' ಅವರು ವಿವರಿಸಿದ್ದಾರೆ.













Click it and Unblock the Notifications