ಬೆಂಗಳೂರಿನ ಬಿಸಿನೆಸ್ ಕಾರಿಡಾರ್ ಯೋಜನೆ PRR-1ಗೆ ಗ್ರೀನ್ ಸಿಗ್ನಲ್: 21ಕಿಮೀ ಎಕ್ಸ್‌ಪ್ರೆಸ್‌ವೇ ಡಿಟೇಲ್ಸ್ ಇಲ್ಲಿದೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಹುನಿರೀಕ್ಷೆಯ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ಅಥವಾ ಪೆರಿಫೆರಲ್ ರಿಂಗ್ ರೋಡ್ (PRR) ರಸ್ತೆ ಯೋಜನೆ ಮೂರು ಹಂತಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಮಾದಾವರ-ಬಳ್ಳಾರಿ ರಸ್ತೆವರೆಗಿನ ಮೊದಲ ಪ್ಯಾಕೇಜ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಈ ಕುರಿತು ಪತ್ರ ಸ್ವೀಕರಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಬಿಬಿಸಿ ಅಧ್ಯಕ್ಷ ಎಲ್.ಕೆ.ಅತಿಕ್ ಅವರು ತಿಳಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (BIEC) ಮಾದಾವರದಿಂದ ಬಳ್ಳಾರಿ ರಸ್ತೆಯನ್ನು ಸಂಪರ್ಕಿಸುವ 21 ಕಿಲೋ ಮೀಟರ್ ಉದ್ದದ ಪೆರಿಫೆರಲ್ ರಿಂಗ್ ರಸ್ತೆ (PRR-1) ಮೊದಲ ಪ್ಯಾಕೇಜ್‌ನಲ್ಲಿ ತಲೆ ಎತ್ತರಲಿದೆ. ಈ ಕಾಮಗಾರಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಮೊನ್ನೆ ಜೂನ್ 12 ರಂದು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಸಂಸ್ಥೆಗೆ (SNC) ಅಧಿಕೃತ ಒಪ್ಪಿಗೆ ಪತ್ರ ವಿತರಿಸಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಯಿಂದ ಆದಷ್ಟು ಶೀಘ್ರವೇ ಕೆಲಸಗಳು ಆರಂಭಗೊಳ್ಳಲಿವೆ ಎಂದು ಅತಿಕ್ ಅವರು ಮಾಹಿತಿ ನೀಡಿದ್ದಾರೆ.

ಮೊದಲು ಇದನ್ನು ಪೆರಿಫೆರಲ್ ರಿಂಗ್ ರಸ್ತೆ ಎನ್ನಲಾಗುತ್ತಿತ್ತು, ಅದನ್ನೀಗ ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಕರೆಯಲಾಗುತ್ತಿದೆ. ಭೂಸ್ವಾಧೀನ ಸೇರಿದಂತೆ ಹಲವು ವಿಳಂಬದ ನಡುವೆ ವರ್ಷಗಳ ಬಳಿಕ ಯೋಜನೆ ಅಂತಿಮಗೊಂಡು, ಕಾಮಗಾರಿ ಆರಂಭಗೊಳ್ಳುತ್ತಿದೆ. ಇದು ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ನಗರ ಪ್ರವೇಶಿಸದೇ ಹೊರಗಿನಿಂದ ವಾಹನಗಳ ಸಂಚಾರಕ್ಕೆ ಈ ಎಕ್ಸ್‌ಪ್ರೆಸ್ ವೇ ಅನುವು ಮಾಡಿಕೊಡುತ್ತದೆ.
8 ಪಥಗಳ ರಸ್ತೆ ನಿರ್ಮಾಣ
ತುಮಕೂರು ರಸ್ತೆಯಿಂದ ಏರ್‌ಪೋರ್ಟ್ ಸಮೀಪದ ಬಳ್ಳಾರಿ ರಸ್ತೆಯ ಈ ಎಕ್ಸ್‌ಪ್ರೆಸ್‌ನಲ್ಲಿ ಒಟ್ಟು 8 ಪಥಗಳ ರಸ್ತೆಗಳು ನಿರ್ಮಾಣಗೊಳ್ಳಲಿವೆ. ಬೆಂಗಳೂರಿನ ಮಟ್ಟಿಗೆ ದೊಡ್ಡ ರಸ್ತೆ ಮೂಲಸೌಕರ್ಯ ಯೋಜನೆಗಳಲ್ಲಿ ಇದು ಒಂದಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇತ್ತೀಚೆಗಷ್ಟೇ 3300 ಕೋಟಿ ರೂಪಾಯಿಯ ಟೆಂಟರ್ ಆಹ್ವಾನಿಸಿತ್ತು. ಏಪ್ರಿಲ್‌ನಲ್ಲಿ ಟೆಂಡರ್ ಕರೆದು, ಮೇ 4ರವರೆಗೆ ಸಲ್ಲಿಕೆಗೆ ಅವಕಾಶ ನೀಡಿತ್ತು. ಮೇ 6ರಂದು ತಾಂತ್ರಿಕ ಬಿಡ್ ನಡೆದು ಮೇ 11ರಂದು ಬಿಡ್ ತೆರೆಯಲಾಗಿತ್ತು.
ಕಾಮಗಾರಿಗೆ 36 ತಿಂಗಳ ಡೆಡ್‌ಲೈನ್
ಯೋಜನೆಯ ವಿಶೇಷತೆ ಎಂದರೆ ವಿನ್ಯಾಸ, ನಿರ್ಮಾಣ ಮತ್ತು ಹಸ್ತಾಂತರ ಮಾದರಿಯಲ್ಲಿ ನಡೆಯುತ್ತಿದೆ. ಒಟ್ಟು ಮುಂದಿನ ಮೂರು ವರ್ಷಗಳಲ್ಲಿ (36 ತಿಂಗಳ) ಮಾದಾವರ-ಬಳ್ಳಾರಿ ರಸ್ತೆ ಎಕ್ಸ್‌ಪ್ರೆಸ್ ನಿರ್ಮಿಸಲು ಗಡುವುನೀಡಲಾಗಿದೆ. ಕಾರಿಡಾರ್ ನಿರ್ಮಾಣಗೊಂಡ ಬಳಿಕ ಸುಮಾರು ಒಂದು ದಶಕಗಳ ಕಾಲ ಅದರ ನಿರ್ವಹಣೆಯನ್ನು ಗುತ್ತಿಗೆದಾರ ಸಂಸ್ಥೆ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
21ಕಿಲೋ ಮೀಟರ್‌ನ ಈ ಕಾರಿಡಾರ್ ತುಮಕೂರು ರಸ್ತೆಯಿಂದ ಹೆಸರಘಟ್ಟ ರಸ್ತೆ, ದೊಡ್ಡ ಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ ವರೆಗೆ ಸಂಪರ್ಕ ಕಲ್ಪಿಸುತ್ತದೆ. ಉಳಿದ ಎರಡು ಪ್ಯಾಕೇಜ್ ರಸ್ತೆ ಯೋಜನೆಗಳು ಬಳ್ಳಾರಿ ರಸ್ತೆಯಿಂದ ಮುಂದುವರಿದು ಹೆಣ್ಣೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ವೈಟ್‌ಫಿಲ್ಡ್, ಚನ್ನಸಂದ್ರ, ಸರ್ಜಾಪುರ ರಸ್ತೆ, ಹೊಸೂರು ರಸ್ತೆವರೆಗೆ ಸಂಪರ್ಕ ಕಲ್ಪಿಸುತ್ತವೆ. ಇದರಿಂದ ಅರ್ಧ ಚಂದ್ರಾಕೃತಿಯಲ್ಲಿ ಎಕ್ಸ್‌ಪ್ರೆಸ್‌ವೇ ರಸ್ತೆ ಸಂಪರ್ಕ ಸಾಧಿಸಿದಂತಾಗುತ್ತವೆ.
ಪ್ಯಾಕೇಜ್ ಒಂದರ ಪ್ರಮುಖ ಅಂಶಗಳು
* ಮಾದಾವರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಷ್ಟೇ ಮೊದಲು ಇಂಟರ್‌ಚೇಂಜ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಈಗ ಒಟ್ಟಾರೆ ಪರಿಷ್ಕೃತ ವಿನ್ಯಾಸದೊಂದಿಗೆ ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ವೈಟ್‌ಫೀಲ್ಡ್ ಮತ್ತು ಸರ್ಜಾಪುರ ರಸ್ತೆಗಳಲ್ಲೂ ಪ್ರಮುಖ ಇಂಟರ್‌ಚೇಂಜ್ ಕೊಡಲು ನಿರ್ಧರಿಸಲಾಗಿದೆ.
* ಹೆಸರಘಟ್ಟ ರಸ್ತೆ ಮತ್ತು ಚನ್ನಸಂದ್ರದಲ್ಲಿ ಹೊಸ ಗ್ರೇಡ್ ಸೆಪರೇಟರ್ ಸ್ಥಾಪನೆ ಆಗಲಿವೆ. ಅಗತ್ಯ ಇರುವ ಅವಲಹಳ್ಳಿ ಅರಣ್ಯ ಮತ್ತು ಐವಿಆರ್‌ಐ ಕ್ಯಾಂಪಸ್ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಾಣಗೊಳ್ಳಲಿವೆ.
* ಮಾದಾವರ ಇಂಟರ್‌ಚೇಂಜ್ ಅನ್ನು ನೈಸ್ (NICE) ರಸ್ತೆ ಜತೆ ಬೆಸೆಯಲು ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಹೆಚ್ಚುತ್ತಿರುವ ಬೆಂಗಳೂರು ದಟ್ಟಣೆಗೆ ಅನುಕೂಲವಾಗುವಂತೆ ರಿಂಗ್ ರಸ್ತೆ ನಿರ್ಮಿಸಲಾಗುತ್ತದೆ.













Click it and Unblock the Notifications