Special Train: ಮೈಸೂರು-ಮದಾರ್ ಮಾರ್ಗದಲ್ಲಿ ವಿಶೇಷ ರೈಲು ಸೇವೆ, ರಾಜ್ಯದ ಪ್ರಯಾಣಿಕರಿಗೆ ಅನುಕೂಲ, ವೇಳಾಪಟ್ಟಿ
ಬೆಂಗಳೂರು: ಕರ್ನಾಟಕದ ಮೈಸೂರಿನಿಂದ ರಾಜಸ್ಥಾನ ರಾಜ್ಯದ ನಡುವೆ ಸಂಚರಿಸುತ್ತಿರುವ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮೈಸೂರು-ಮದಾರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಇದರಿಂದ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗದ ಅನೇಕ ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ಮೈಸೂರು ಹಾಗೂ ಮದಾರ್ ಜಂಕ್ಷನ್ ನಡುವಿನ ಮಾರ್ಗದಲ್ಲಿ ಜನಪ್ರಿಯ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ ಈಗಾಗಲೇ ಇತ್ತು. ಜನದಟ್ಟಣೆ ಹಿನ್ನೆಲೆ ಆ ಸೇವೆ ವಿಸ್ತರಣೆ ಮಾಡಿ ಕಾರ್ಯಾಚರಣೆಗೆ ಮಾಡಲಾಗುತ್ತದೆ. ಇದರಿಂದ ಸುದೀರ್ಘ ಅವಧಿಯ ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಅನುಕೂಲಕರ ಪ್ರಯಾಣ ಸೇವೆ ಒದಗಿಸಿದಂತಾಗುತ್ತದೆ. ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿ, ನಿಲುಗಡೆ ವಿವರ ಮುಂದಿದೆ.

ಮೈಸೂರು-ಮದಾರ್ ಜಂಕ್ಷನ್ ರೈಲು ವೇಳಾಪಟ್ಟಿ
ಅರಮನೆ ನಗರಿ ಮೈಸೂರಿನಿಂದ ಮದಾರ್ ಜಂಕ್ಷನ್ ಕಡೆಗೆ ಸಂಚರಿಸುವ ವಿಶೇಷ ರೈಲು (06281)ಜೂನ್ 20 ಮತ್ತು ಜೂನ್ 27ರ ಶನಿವಾರ ಸಂಚಾರ ನಡೆಸಲಿದೆ. ಮರಳಿ ಅದೇ ದಿಕ್ಕಿನಲ್ಲಿ ಮದಾರ್ ಜಂಕ್ಷನ್-ಮೈಸೂರಿಗೆ ಮರಳುವ ವಿಶೇಷ ರೈಲು (06282) ಜೂನ್ 22 ಮತ್ತು ಜೂನ್ 29ರ ಸೋಮವಾರಗಳಂದು ಸಂಚರಿಸಲಿದೆ. ಈ ರೈಲು ಬೆಂಗಳೂರು ಮಾರ್ಗದಲ್ಲಿ ಸಂಚಾರ ಮಾಡುವುದಿಲ್ಲ. ಸ್ಲೀಪರ್ ಮತ್ತು ವಿವಿಧ ದರ್ಜೆಯ ಹವಾನಿಯಂತ್ರಿತ (AC) ಬೋಗಿಗಳನ್ನು ಒಳಗೊಂಡಿದ್ದು, ಎಲ್ಲಾ ವರ್ಗದ ಪ್ರಯಾಣಿಕರಿಗೂ ಉತ್ತಮ ಸೇವೆ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ನಿಲುಗಡೆ ನೀಡುವ ಪ್ರಮುಖ ನಿಲ್ದಾಣ/ಮಾರ್ಗ
ಈ ಎಕ್ಸ್‌ಪ್ರೆಸ್ ವಿಶೇಷ ರೈಲು ರೈಲು ಕರ್ನಾಟಕದ ಮೈಸೂರಿನಿಂದ ಹೊರಟು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಮೂಲಕ ಸಾಗಲಿದೆ. ರಾಜ್ಯದ ಈ ಎಲ್ಲ ಭಾಗದ ಪ್ರಯಾಣಿಕರಿಗೂ ಹೆಚ್ಚುವರಿ ರೈಲಿನ ಸೇವೆ ಸಿಕ್ಕಂತಾಗುತ್ತದೆ.
ರಾಜ್ಯ ದಾಟುತ್ತಿದ್ದಂತೆ ಮುಂದೆ ಮಹಾರಾಷ್ಟ್ರದ ಮಿರಜ್, ಸಾಂಗ್ಲಿ, ಸತಾರಾ, ಪುಣೆ, ಲೋನಾವಾಲಾ ಮತ್ತು ಕಲ್ಯಾಣ್ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಗುಜರಾತ್‌ನ ಸೂರತ್, ವಡೋದರಾ ಹಾಗೂ ಮಧ್ಯಪ್ರದೇಶದ ರತ್ಲಾಮ್ ಮೂಲಕ ರಾಜಸ್ಥಾನದ ಚಿತ್ತೋರ್‌ಗಢ, ಭಿಲ್ವಾರಾ, ಅಜ್ಮೀರ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಅಂತಿಮವಾಗಿ ಮದಾರ್ ಜಂಕ್ಷನ್ ಅನ್ನು ನಿಗದಿತ ಸಮಯಕ್ಕೆ ತಲುಪುತ್ತದೆ.
ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರು ಗಮನಿಸಿ
ಬೇಸಿಗೆ ಕಳೆದರೂ ಈ ಮಾರ್ಗದಲ್ಲಿ ಜನ ಸಂಚಾರ ಹೆಚ್ಚಿದೆ. ಇನ್ನೂ ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆರಳುವ ಜನರಿಗೆ ಈ ರೈಲು ವರದಾನವಾಗಲಿದೆ. ಮುಂಗಡ ಸೀಟುಗಳು ಬುಕಿಂಗ್ ಆರಂಭವಾಗಿದ್ದು, ಬಹುಬೇಗನೇ ಭರ್ತಿ ಆಗಲಿವೆ. ಆದ್ದರಿಂದ ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಪ್ರಯಾಣಿಕರು ಐಆರ್‌ಸಿಟಿಸಿ (IRCTC) ಅಧಿಕೃತ ಜಾಲತಾಣ ಅಥವಾ ಪ್ರಾದೇಶಿಕ ರೈಲು ನಿಲ್ದಾಣಗಳ ಕೌಂಟರ್ ಮೂಲಕ ಟಿಕೆಟ್‌ಗಳನ್ನು ಕೂಡಲೇ ಕಾಯ್ದಿರಿಸಬಹುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications