ಅಟ್ಲಾಂಟಿಕ್ ಸಿಟಿ ಅಕ್ಕ ಕನ್ನಡ ಸಮ್ಮೇಳನದಲ್ಲಿ ಹಲವಾರು ವಿಶೇಷತೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 08 : ನ್ಯೂ ಜೆರ್ಸಿ ರಾಜ್ಯದ ಅಂಟ್ಲಾಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 2, 3 ಮತ್ತು 4ರಂದು ನಡೆಯಲಿರುವ 9ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ, ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ವಿಭಿನ್ನವಾಗಿರಲಿದ್ದು, ಅಂಬಿ ನೈಟ್ಸ್, ದಲಿತ ಕಲಾವಿದರ ಜಾನಪದ ಸೊಗಡು ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿರಲಿದೆ.

ಈ ಎಲ್ಲ ಸಂಗತಿಗಳನ್ನು ಬೆಂಗಳೂರಿನ ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳಲು ಅಕ್ಕ ಬೋರ್ಡ್ ಆಫ್ ಟ್ರಸ್ಟ್‌ನ ಅಧ್ಯಕ್ಷ ಅಮರನಾಥ ಗೌಡ, ಈ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷ ರಾಜ್ ಪಾಟೀಲ, ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿರುವ ನಾಗತಿಹಳ್ಳಿ ಚಂದ್ರಶೇಖರ್, ಜಾನಪದ ಕಲಾವಿದ ಜಿ ಕಪ್ಪಣ್ಣ ಮುಂತಾದವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ, ಆಗಸ್ಟ್ 7ರಂದು ಸೇರಿದ್ದರು.

AKKA World Kannada Conference at Atlanta City

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದು, ಆರ್ಟ್ ಆಫ್ ಲಿವಿಂಗ್‌ನ ಶ್ರೀಶ್ರೀ ರವಿಶಂಕರ ಗುರೂಜಿ, ಆರ್ ವಿ ದೇಶಪಾಂಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ

ವಿಶ್ವದ ಮೂಲೆಮೂಲೆಗಳಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕನ್ನಡಿಗರು ಈ ಸಮ್ಮಿಲನದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಈ ಕನ್ನಡ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದಂತೆ, ಇನ್ನೂ ಎರಡು ಸಾವಿರ ಕನ್ನಡಿಗರು ನೋಂದಾಯಿಸಿಕೊಳ್ಳುವ ವಿಶ್ವಾಸವಿದೆ ಎಂದು ಸಮ್ಮೇಳನದ ಅಧ್ಯಕ್ಷ ರಾಜ್ ಪಾಟೀಲ ಅವರು ತಿಳಿಸಿದರು.

ಈ ಬಾರಿಯ ಆಕರ್ಷಣೆಯ ಕೇಂದ್ರಬಿಂದುವೆಂದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಡೆಸಿಕೊಡಲಿರುವ 'ಅಂಬಿ ನೈಟ್'. ಇದರಲ್ಲಿ ಭಾಗವಹಿಸಲಿರುವ ಕಲಾವಿದರ ಪಟ್ಟಿ ಹೀಗಿದೆ ನೋಡಿ... ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುಮಲತಾ, ಜಗ್ಗೇಶ್, ಯಶ್, ಸಾಧು ಕೋಕಿಲಾ, ದರ್ಶನ್... ಈ ಕಲಾವಿದರೆಲ್ಲ ಮನರಂಜನೆಯ ಸುನಾಮಿ ಉಕ್ಕಿಸಲಿದ್ದಾರೆ.

ಅಕ್ಕ ಸಮ್ಮೇಳನದಲ್ಲಿ ನಡೆಯಲಿರುವ ಇತರ ವಿಶಿಷ್ಟ ಕಾರ್ಯಕ್ರಮಗಳು

* ಜೀ ಟಿವಿ ಕನ್ನಡ ವಾಹಿನಿಯಿಂದ ಅಮೆರಿಕನ್ನಡ ಮಕ್ಕಳಿಗಾಗಿ 'ಸರಿಗಮಪ' ವಿಶೇಷ ರಿಯಾಲಿಟಿ ಶೋ. ಇದು ಅಮೆರಿಕನ್ನಡಿಗ ಮಕ್ಕಳ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಲಿದೆ.

* ವೆಂಕಟೇಶಮೂರ್ತಿ ಶಿರೂರ್ ಅವರ ನೇತೃತ್ವದಲ್ಲಿ, ಮೈಸೂರು ಮಲ್ಲಿಗೆ ಕೆಎಸ್ ನರಸಿಂಹ ಸ್ವಾಮಿ ಜನ್ಮ ಶತಮಾನೋತ್ಸವದ ಅಂಗವಾಗಿ ವಿಶೇಷ ಸುಗಮ ಸಂಗೀತ ಕಾರ್ಯಕ್ರಮ.

* ರತ್ನಮಾಲಾ ಪ್ರಕಾಶ್, ಹೇಮಾ ಪ್ರಸಾದ್ ಮುಂತಾದ ಕಲಾವಿದರಿಂದ ಸುಗಮ ಸಂಗೀತ. ಜೊತೆಗೆ 'ಇಲ್ಲ ಅಂದ್ರೆ ಇದೆ' ಎಂಬ ಎರಡು ಪಾತ್ರಗಳಿರುವ ನಾಟಕ.

* ಎಂಬತ್ತು ದಲಿತ ಕಲಾವಿದರಿಂದ ದೇಸೀ ಸೊಗಡಿನ ಕಲೆಗಳಾದ ನೃತ್ಯ, ನೀಲಗಾರರ ಪದಗಳ ಪ್ರದರ್ಶನ. ಶ್ರೀನಿವಾಸ ಜಿ. ಕಪ್ಪಣ್ಣ, ಡಾ. ಸಿದ್ದಲಿಂಗಯ್ಯ, ನಾಗವಾರರಿಂದ ಈ ಕಲಾವಿದರು ಆಯ್ಕೆಯಾಗಿದ್ದಾರೆ.

* ನಾಗತಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ. ಡಾ. ಸಿದ್ದಲಿಂಗಯ್ಯ, ಷರೀಫಾ, ಓಎಲ್ ನಾಗಭೂಷಣ, ಡಾ. ಕೃಷ್ಣೇಗೌಡ ಮುಂತಾದವರು ಪಾಲ್ಗೊಳ್ಳುತ್ತಿದ್ದಾರೆ.

* ಪರ್ಯಾಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿರುವ ಐದು ಅತ್ಯುತ್ತಮ ಕನ್ನಡ ಚಿತ್ರಗಳು ಪ್ರದರ್ಶಿತಗೊಳ್ಳುತ್ತಿವೆ. ಜೊತೆಗೆ ಕನ್ನಡ ಕಿರುಚಿತ್ರ ಪ್ರದರ್ಶನವೂ ಇರಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಪುಷ್ಕಳ ಭೋಜನ ಅಟ್ಲಾಂಟಿಕ್ ಸಿಟಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ರುಚಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಕರ್ನಾಟಕದ ಬಗೆಬಗೆಯ ಊಟತಿಂಡಿಗಳ ಪರಿಮಳ ಹಬ್ಬಕ್ಕೆ ಕಳೆ ತರಲಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬಾಡೂಟ ಪ್ರಿಯರನ್ನು ತಣಿಸಲು ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಕಾಂಬಿನೇಶನ್ ಇದ್ದೇ ಇರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
9th AKKA World Kannada Conference to be held at Atlantic City in New Jersey from September 2 to 4 has many noticeable events. Ambi Night, Literary conference Nagatihalli Chandrashekar, Folk art exhibition by dalits etc are the hightlights of the sammelan.
Please Wait while comments are loading...