ಅಕ್ಕ ಸಮ್ಮೇಳನದ ಸೂತ್ರಧಾರಿ ಶರತ್ ಭಂಡಾರಿ ಸಂದರ್ಶನ

By: ಸಂದರ್ಶನ : ಸತ್ಯ, ನ್ಯೂ ಜೆರ್ಸಿ
Subscribe to Oneindia Kannada

ಅಮೆರಿಕದ ಇಂದ್ರನಗರಿ ಅಟ್ಲಾಂಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 2, 3 ಮತ್ತು 4ರಂದು ನಡೆಯಲಿರುವ ವೈಭವದ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಏನೇ ಆಗಲಿ ಈ ಸಮ್ಮೇಳನ ಸಂಪೂರ್ಣವಾಗಿ ಯಶಸ್ವಿಯಾಗಲೇಬೇಕು ಅಂತ ಸಂಘಟಕರು ಹಗಲಿರುಳೂ ದುಡಿಯುತ್ತಿದ್ದಾರೆ.

ಎಲ್ಲ ಕಾರ್ಯಕ್ರಮಗಳನ್ನು ಅಂದುಕೊಂಡಂತೆ ವ್ಯವಸ್ಥಿತವಾಗಿ ನಡೆಸಲು ಸಮರೋಪಾದಿಯಲ್ಲಿ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸಮ್ಮೇಳನದ ರೂವಾರಿ, ಸೂತ್ರಧಾರ, ಸಂಚಾಲಕ ಶರತ್ ಭಂಡಾರಿ ಅವರು ಇಡೀ ಸಮ್ಮೇಳನದ ಸಿದ್ಧತೆಗಳು ಬಗ್ಗೆ, ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

ಸತ್ಯ : ನಮಸ್ಕಾರ ಶರತ್, ಸಂಚಾಲಕರಾಗಿ ಈ ಬಾರಿಯ ಅಕ್ಕ ಸಮ್ಮೇಳನ ವನ್ನು ಅತ್ಯಂತ ಯೆಶಸ್ವಿಯಾಗಿ ನಡೆಸಲು ನೀವು ಹಾಕಿಕೊಂಡ ರೂಪುರೇಷೆಗಳೇನು ಮತ್ತು ಅದಕ್ಕೆ ನಿಮ್ಮ ಮಾನದಂಡಗಳೇನು?

ಶರತ್ : ನಮಸ್ಕಾರ ಸತ್ಯ, ಒಳ್ಳೆಯ ಪ್ರಶ್ನೆ. ನನ್ನಲ್ಲಿ ಒಂದು ಕಲ್ಪನೆಯಿತ್ತು, ಒಂದು ಸುಂದರ ಸಿನಿಮಾ ಹೇಗೆ 3 ಘಂಟೆಗಳ ಕಾಲ ಪ್ರೇಕ್ಷಕರನ್ನು ಮೈಮರೆಸಿ, ಮನಸ್ಸನ್ನು ಸೆರೆಹಿಡಿದು, ಒಂದು ಸುಂದರ ಲೋಕಕ್ಕೆ ಕರೆದುಕೊಂಡು ಹೋಗುತ್ತದೋ ಹಾಗೆ ನಮ್ಮ 3 ದಿನಗಳ ಅಕ್ಕ ಸಮ್ಮೇಳನ, ಬಾಗವಹಿಸುವವರಿಗೆ ತಮ್ಮ ದೈನಂದಿನ ಜೀವನದ ಜಂಜಡವನ್ನು ಕ್ಷಣಕಾಲ ಮರೆಸಿ, ಮನಸ್ಸಿಗೆ ಮುದ ನೀಡಿ ಒಂದು ಸಾರ್ಥಕ ಅನುಭವ ನೀಡಬೇಕು. ['ಅಕ್ಕ' ಕಾರ್ಯನಿರ್ವಾಹಕ ಸಮಿತಿ ಜೊತೆ ಸಂದರ್ಶನ]

AKKA conference at Altantic City : An interview with Convener Sharath

ಇದಕ್ಕೆ ಸಂಬಂಧಿಸಿದಂತೆ ನನ್ನ ಮನಸ್ಸಿನಲ್ಲಿ ಪ್ರಮುಖವಾಗಿ 4 ವಿಷಯಗಳಿದ್ದವು. ಸ್ಥಳ, ವಸತಿ, ಊಟಪಚಾರ ಮತ್ತು ಮನೋರಂಜನೆ. ನಾವು ಅಟ್ಲಾಂಟಿಕ್ ಸಿಟಿಯನ್ನು ಆಯ್ಕೆ ಮಾಡಿಕೊಂಡಾಗ ನನ್ನಲ್ಲೇ ನೂರಾರು ಪ್ರಶ್ನೆಗಳಿದ್ದವು. ಈ ನಗರವೇ ಏಕೆ? ಸಭಾಂಗಣ ಹೇಗಿದೆ? ನೂರಾರು ಸ್ವಯಂ ಸೇವಕರಿಗೆ ಮತ್ತು ಭಾಗವಹಿಸುವವರಿಗೆ ಅನುಕೂಲಗಳೇನು? ಇತ್ಯಾದಿ ಇತ್ಯಾದಿ.. ಕೂಲಂಕುಷವಾಗಿ ಪ್ರತಿ ವಿಷಯವನ್ನು ನೋಡುವುದಾದರೆ...

ಮೊದಲನೆಯದಾಗಿ ಸ್ಥಳ : ನಾವು ಅಕ್ಕದಂತಹ ಬೃಹತ್ ಸಮ್ಮೇಳನ ನಡೆಸುವಾಗ ನಮ್ಮ ಮೊದಲನೆಯ ಸವಾಲು ಅತಿ ಸುಸಜ್ಜಿತವಾದ ಸಭಾಂಗಣ (ಕನ್ವೆನ್ಷನ್ ಸೆಂಟರ್). ಆ ವಿಷಯದಲ್ಲಿ ನಾವು ಅದೃಷ್ಟವಂತರು. ಅಟ್ಲಾಂಟಿಕ್ ಕನ್ವೆನ್ಷನ್ ಸೆಂಟರ್ ಪೂರ್ವ ಕರಾವಳಿಯಲ್ಲೇ ಅತಿ ದೊಡ್ಡ 5 ಲಕ್ಷ ಚದರ ವಿಸ್ತೀರ್ಣದದಷ್ಟು (ಅಂದರೆ ಸುಮಾರು 13 ಎಕರೆಯಷ್ಟು) ದೊಡ್ಡ ಸಭಾಂಗಣ. ಇನ್ನೊಂದು ಪ್ರಮುಖ ಅಂಶವೆಂದರೆ ಸಾಕಷ್ಟು ಕನ್ನಡಿಗರಿಂದ ಮತ್ತು ಕನ್ನಡ ಸಂಘಗಳಿಂದ ಸುತ್ತುವರಿದಿರುವ ಪ್ರದೇಶ. ಭಾಗವಹಿಸುವವರಿಗೆ ಅತಿ ಅನುಕೂಲವಾದ ಜಾಗ.

ಎರಡನೆಯದಾಗಿ ವಸತಿ : ಅಟ್ಲಾಂಟಿಕ್ ಸಿಟಿ ಪೂರ್ವ ಕರಾವಳಿಯಲ್ಲೇ ಪ್ರಸಿದ್ಧ ಸ್ಥಳ, ಹತ್ತಾರು ಕಸಿನೋಗಳು, ನೂರಾರು ಸುಪ್ರಸಿದ್ದ ವಸತಿ ಗೃಹಗಳು, ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಕಿನ್ನರ ಲೋಕ. [ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!]

ಮೂರನೆಯದಾಗಿ ಊಟಪಚಾರ : ನಮ್ಮ ಸಂಸ್ಕೃತಿಯಷ್ಟೇ ವೈವಿಧ್ಯಮಯವಾದ ಆಹಾರ ವಿಧಾನ ನಮ್ಮದು. ನಿಮಗೆ ತಿಳಿದುರುವಂತೆ ಅಕ್ಕ ಸಮ್ಮೇಳನ ಭಕ್ಷಬೋಜ್ಯಕ್ಕೆ ಹೆಸರುವಾಸಿ. ಇದಕ್ಕೆ ಹೊಂದಿಕೆಯಾಗುವಂತಹ ಸುಸಜ್ಜಿತ ಪಾಕಶಾಲೆ ಮತ್ತು ಭೋಜನ ಶಾಲೆ ಈ ಸಭಾಂಗಣದಲ್ಲಿದೆ. ವಿಶ್ವವಿಖ್ಯಾತ ಪಾಕ ಪ್ರವೀಣ ಸತೀಶ್ ರಾವ್ ನಮ್ಮೆಲ್ಲರಿಗೂ ಹಬ್ಬದೂಟವನ್ನು ಉಣಬಡಿಸಲು ತಯಾರಾಗಿದ್ದಾರೆ.

ಕೊನೆಯದಾಗಿ ಮನೋರಂಜನೆ : ವೈವಿಧ್ಯಮಯ ಕಾರ್ಯಕ್ರಮಗಳನ್ನು ಅತಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಸೂಜಿ ಮೊನೆಯಷ್ಟು ರಾಜಿಯಾಗದೆ ಅತಿ ಉತ್ಕೃಷ್ಟವಾದ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ.

ಈ ಪ್ರಯತ್ನಗಳಿಂದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗದೆ ಅವರ ಈ ಪ್ರವಾಸ ಒಂದು ಸುಂದರ ಅನುಭೂತಿ ಯಾಗಲಿದೆಯೆಂದು ತಿಳಿಸಲು ಇಷ್ಟಪಡುತ್ತೇನೆ.

AKKA conference at Altantic City : An interview with Convener Sharath

ಸತ್ಯ : ಈ ಬಾರಿ ಕಲೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೀರಾ ಎಂದು ತಿಳಿದು ಬಂದಿತು, ಇದರ ಬಗ್ಗೆ ಎರಡು ಮಾತು...

ಶರತ್ : ನಿಮ್ಮಲ್ಲಿ ಒಂದು ವಿಷಯ ಹಂಚಿಕೊಳ್ಳಲು ಹರ್ಷವಾಗುತ್ತಿದೆ. ಈ ಬಾರಿ ಆಧ್ಯಾತ್ಮ, ಶಾಸ್ತ್ರೀಯ, ಜಾನಪದ, ಸಮಕಾಲೀನ ಮುಂತಾದ ಪ್ರತಿಯೊಂದು ಕ್ಷೇತ್ರಗಳಿಂದಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಕಲಾವಿದರು ಭಾಗವಹಿಸುತ್ತಿದ್ದಾರೆ. ಕೆಲವೊಂದು ಹೆಸರುಗಳನ್ನು ನೆನೆಸಿಕೊಳ್ಳುವುದಾದರೆ... ವಿದ್ಯಾಭೂಷಣರು, KV ಕೃಷ್ಣ ಪ್ರಸಾದ್, ಜಯತೀರ್ಥ ಮೇವುಂಡಿ, ಬಾಲಚಂದ್ರ ಪ್ರಭು, ಅತೀತ ಫ್ಯೂಶನ್ ಬ್ಯಾಂಡ್, ರತ್ನಮಾಲಾ ಪ್ರಕಾಶ್. ಪ್ರಸಿದ್ಧ ಕಲೆಗಳ ವಿವರ ತಿಳಿಸುವುದಾದರೆ... ಜಾನಪದ ಲೋಕದ ಫೋಕ್ ಬ್ಯಾಂಡ್, ಡೊಳ್ಳು ಕುಣಿತ, ತಮಟೆ, ವೀರಗಾಸೆ, ಪೂಜಾ ಕುಣಿತ, ಲಂಬಾಣಿ ಕುಣಿತ, ಕಥಕ್, ಭಾರತ ನಾಟ್ಯ, ಪ್ರಸಿದ್ಧ ನಾಟಕಗಳು ಇತ್ಯಾದಿ ಇತ್ಯಾದಿ.

ಸ್ಥಳೀಯ ಕಲಾವಿದರನ್ನು ಹುರುದುಂಬಿಸಲು ಅಕ್ಕ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜೀ ಟಿವಿಯವರ ಸಹಯೋಗದೊಂದಿಗೆ ZEE ಸರಿಗಮ ಫಿನಾಲೆ ಶನಿವಾರ ಸಂಜೆ ಅದ್ದೂರಿಯಾಗಿ ನಡೆಸಲಿದ್ದೇವೆ. ತೀರ್ಪುಗಾರರಾಗಿ ಪ್ರಸಿದ್ಧ ಗಾಯಕರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಮತ್ತು ನಿರೂಪಕಿಯಾಗಿ ಅನುಶ್ರೀ ಭಾಗವಹಿಲಿದ್ದಾರೆ.

ಪ್ರಥಮ ಬಾರಿಗೆ ಅಕ್ಕ Film Festival ನಡೆಸುತ್ತಿದ್ದೇವೆ 'ಕನ್ನಡ ಮಾತಾಡು' ಕಿರು ಚಿತ್ರಗಳ ಸ್ಪರ್ಧೆಯೊಂದಿಗೆ. ಇದರ ತೀರ್ಪುಗಾರರು ಗಿರೀಶ್ ಕಾಸರವಳ್ಳಿ ಮತ್ತು ನಾಗಾಭರಣ ಮತ್ತಿತರರು ಭಾಗವಹಿಸಲಿದ್ದಾರೆ.

ಇದೆಲ್ಲದರ ಜೊತೆ ಉದ್ಯಮ, Women's, Youth, CME, ಆದ್ಯಾತ್ಮ, ಸಾಹಿತ್ಯ, ಕ್ರೀಡೆ ಕ್ಷೇತ್ರಗಳಿಂದ ಅತಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಮತ್ತೊಂದು ಹೊಸ ಪ್ರಯೋಗ... ಕಾಫೀ ಬುಕ್... ತುಂಬಾ ಅದ್ಭುತವಾಗಿ ರೂಪಿಸಲ್ಪಟ್ಟಿದೆ. ಇದೆಲ್ಲದರ ಜೊತೆ ಸುಮಾರು 30ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಏರ್ಪಡಿಸಿದ್ದೇವೆ. [ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶಗಳು]

Ambareesh

ಸತ್ಯ : 'ಅಂಬಿ ನೈಟ್' ಕಾರ್ಯಕ್ರಮ ಎಲ್ಲ ಅಮೆರಿಕನ್ನಡಿಗರ ಕುತೂಹಲ ಇಮ್ಮಡಿಸಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಕೊಡುವಿರಾ?

ಶರತ್ : ನಮ್ಮ ಅಕ್ಕ ಸಮ್ಮೇಳನದ Grand Finale 'ಅಂಬಿ ನೈಟ್'. ಇಡೀ ಕನ್ನಡ ಚಿತ್ರರಂಗವೇ ಗೌರವಿಸುವ, ಮಂಡ್ಯದ ಗಂಡು, ಪಾಳೇಗಾರ ನಮ್ಮ ನೆಚ್ಚಿನ ಅಂಬರೀಷ್ ಅಣ್ಣ ಅವರಿಗೆ ಅಕ್ಕ ವತಿಯಿಂದ 'ಜೀವಮಾನ ಸಾಧನೆ' ಗೌರವ ನೀಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗದ ದಂಡೇ ಹರಿದುಬರಲಿದ್ದು, ಭಾನುವಾರ ಸಂಜೆ ಅವಿರತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಅಂಬರೀಷ್, ಸುಮಲತಾ, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಪುನೀತ್ ರಾಜಕುಮಾರ್, ದೊಡ್ಡಣ್ಣ, ಸಾಧು ಕೋಕಿಲ, ಯಶ್, ಪ್ರೇಮ್, ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ, ರಚಿತಾ ರಾಮ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಇದೊಂದು ತಾರಾ ಲೋಕ, ಅಕ್ಕ ಇತಿಹಾಸದಲ್ಲಿಯೇ ಪ್ರಥಮ ಇಷ್ಟೊಂದು ತಾರೆಗಳು ಅಕ್ಕ ವೇದಿಕೆಯಲ್ಲಿ ಸೇರುತ್ತಿರುವುದು. [ಪ್ರೇಮ ಪುರಾಣ ಬಾಯ್ಬಿಟ್ಟ ಯಶ್-ರಾಧಿಕಾ]

ಸತ್ಯ : ಮೂರು ದಿನದ ಸಮ್ಮೇಳನಕ್ಕೆ ವರ್ಷದ ತಯಾರಿ ಬೇಕು, ನಿಮ್ಮ ಸ್ವಂತ ಸಮಯವನ್ನು ಸಾಕಷ್ಟು ವ್ಯಯಿಸಬೇಕು. ಕೆಲಸ, ಮನೆ, ಸಂಸಾರ, ಮಕ್ಕಳೊಂದಿಗೆ ಸಮಯದಲ್ಲಿ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾಕೀ ಗೀಳು ಮತ್ತು ಇದರ ಹಿಂದಿನ ಪ್ರೇರಣೆ ಏನು?

ಶರತ್ : mmmmm (ಕ್ಷಣ ಕಾಲ ಮೌನ). ಇದು ತೀರಾ ವೈಯಕ್ತಿಕ, ಈ ವಿಷಯನ್ನು ನೀವಾಗಿ ಕೇಳಿದುದರಿಂದ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ತಂದೆ ಭಾಸ್ಕರ ಭಂಡಾರಿಯವರು ಕಾಸರಗೋಡಿನ ಸಮೀಪದ ಮಜಿಬೈಲಿನವರು. ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದವರು. 'ಭಾ.ಭ.ಮಜಿಬೈಲು' ಎನ್ನುವ ಕಾವ್ಯನಾಮದಿಂದ ಸುಮಾರು 15ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿದ್ದರು. ಕವನ, ಅಧ್ಯಾತ್ಮ, ಶಿಶುಗೀತೆ ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು. ಮಾಸ್ತಿ ಮತ್ತು ಕಯ್ಯಾರ ಕಿಣ್ಣಯ್ಯ ರೈ ಅವರ ಅಚ್ಚು ಮೆಚ್ಚು, ದೊಡ್ಡ ಕನ್ನಡಾಭಿಮಾನಿ.

ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಯಾವಾಗಲೂ ಕನ್ನಡ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು, ತಂದೆಯವರಿಗೆ ನಾನು ಈ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂಬ ಹಂಬಲ. ಕಾಲೇಜ್ ದಿನಗಳು ಹುಡುಗಾಟಿಕೆ ನಾನು ಹೆಚ್ಚು ಆಸಕ್ತಿ ವಹಿಸಲಿಲ್ಲ. ಒಂದು ದಿನ ಅಕಾಲಿಕ ಮರಣದಿಂದ ತಂದೆಯವರು ನಮ್ಮನ್ನೆಲ್ಲ ಅಗಲಿದರು. ನಂತರದ ದಿನಗಳಲ್ಲಿ ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನಂತರ ಅವರ ಆಶಯದಂತೆ ನನ್ನ ಕನ್ನಡ ಅಳಿಲು ಸೇವೆ ಪ್ರಾರಂಭಿಸಿದ. ಈ ದಿನ ಅವರಿದ್ದರೆ ತುಂಬ ಸಂತೋಷ ಪಡುತ್ತಿದ್ದರು. ಮೇಲಿನಿಂದಲೇ ನನ್ನನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ನನ್ನದು. ಇದೆ ನನ್ನ ಪ್ರೇರಣೆ.

AKKA conference at Altantic City : An interview with Convener Sharath

ಸತ್ಯ : ಪ್ರತಿಬಾರಿಗಿಂತ ಈ ಬಾರಿಯ ಅಕ್ಕ ಸಮ್ಮೇಳನದ ವೈಶಿಷ್ಟವೇನು?

ಶರತ್ : ಪ್ರತಿ ಬಾರಿ ಸ್ಥಳೀಯ ಕನ್ನಡ ಕೂಟದ ಸಹಯೋಗದಿಂದ ಅಕ್ಕ ಸಮ್ಮೇಳನವನ್ನು ಆಯೋಜಿಸುತ್ತಿದ್ದೆವು. ಈ ಬಾರಿ ಅಕ್ಕ ಸಮಿತಿಯಿಂದಲೇ ಸುಮಾರು ಕನ್ನಡ ಕೂಟಗಳ ಸಹಾಯದೊಂದಿಗೆ ಆಯೋಜಿಸಿದ್ದೇವೆ.

ಈ ಬಾರಿ 3 ದಿಟ್ಟ ಹೆಜ್ಜೆಗಳನ್ನು ಗುರುತಿಸಬಹುದು.
1. ಕನ್ನಡ ಉಳಿಸೋಣ ಮತ್ತು ಬೆಳೆಸೋಣ
- ನಾಡು ನುಡಿಗೆ ಹೆಚ್ಚು ಒತ್ತು, ನಮ್ಮ ಮುಂದಿನ ಪೀಳಿಗೆಗೆ ನಮ್ಮ ಕಲೆ ಮತ್ತು ಸಂಸ್ಕೃತಿಯ ಮಾದರಿ.
- ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ (ಉದಾಹರಣೆ ಜೀ ಸರಿಗಮ ಇತ್ಯಾದಿ)
- ಶಾಸ್ತ್ರೀಯ ಸಮ್ಮಿಳನಕ್ಕೆ ಪ್ರೋತ್ಸಾಹ

2. ಕನ್ನಡ ಕಲಿ
- ಅಮೇರಿಕ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹ (ಮೈಸೂರ್ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿದ್ದೇವೆ)

3. ಅಮೇರಿಕಾದಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ
- ಅಂಬಿ ನೈಟ್ ಮೂಲಕ, ಅಕ್ಕ ಸಿನಿಮಾ ಹಬ್ಬ ಮತ್ತು ಸಣ್ಣ ಸಿನಿಮಾ ಸ್ಪರ್ಧೆ ಮೂಲಕ.

ಅದೆಲ್ಲದರ ಜೊತೆ...
- ಈ ಬಾರಿ ಅಕ್ಕ ಸಮ್ಮೇಳನದಲ್ಲಿ ಬಾಗವಹಿಸುವವರೆಲ್ಲ ಉದ್ಯಮ ವೇದಿಕೆಯಲ್ಲಿ ಪಾಲ್ಗೊಳ್ಳಬಹುದು.
- ಯುವ ವೇದಿಕೆ ನಾನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ...
- STEM ಕ್ಯಾಂಪ್ ನಡೆಯಲಿದ್ದು ಸಣ್ಣ ಮಕ್ಕಳೆಲ್ಲ ಪಾಲ್ಗೊಳ್ಳಬಹುದು.
- ಈ ಬಾರಿ ಮೈಸೂರು ವಿಶ್ವವಿದ್ಯಾಲಯದ 100 ವರ್ಷದ ಶತಮಾನೋತ್ಸವದ ಆಚರಣೆಗಳು ಅಕ್ಕ ಸಮ್ಮೇಳನದಲ್ಲಿ Alumni ಸಮಿತಿಯಿಂದ ವಿಜೃಂಭಣೆಯಿಂದ ನಡೆಯಲಿದೆ.

ಒಟ್ಟಾರೆಯೆಯಾಗಿ ಇದೊಂದು ವಿಶಿಷ್ಟ ಅನುಭವ ತಪ್ಪದೆ ಬನ್ನಿ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ, ನಮಸ್ಕಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An interview with convener Sharath Bhandary, who has taken the responsibility to make 9th AKKA World Kannada Conference a grand success. Under his leadership entire AKKA organizers team is working day and night. The conference will be held at Atlantic City in New Jersey from September 2 to 4, 2016.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ