ನಿಜವಾದ ಪ್ರಶಂಸೆ ಸಲ್ಲಬೇಕಾದದ್ದು ಸ್ವಯಂಸೇವಕರಿಗೆ

ಒಟ್ಟಾರೆಯಾಗಿ ಗಮನಕ್ಕೆ ಬಂದ ವಿಚಾರವೆಂದರೆ ಈ ಸಮ್ಮೇಳನದಲ್ಲಿ ಆತಿಥೇಯ ನೃಪತುಂಗ ಸಂಘದ ಸದಸ್ಯರ ಕಾರ್ಯಕ್ರಮಗಳು ತುಂಬಾ ದೊಡ್ಡದೊಡ್ಡವು ಎಲ್ಲವೂ ಮುಖ್ಯಸಭಾಂಗಣದಲ್ಲೇ ಇದ್ದವು, ಅಷ್ಟೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರೇ ನೂರಾರು ಜನವಾದ್ದರಿಂದ ಬಹುಶಃ ಸಮ್ಮೇಳನ ತಯಾರಿಗಳ ವೇಳೆ ಮತ್ತು ಸಮ್ಮೇಳನದ ಮೂರು ದಿನಗಳಲ್ಲೂ ಅವರಿಗೆಲ್ಲ ತಂತಮ್ಮ ಕಾರ್ಯಕ್ರಮಪ್ರದರ್ಶನವೇ ಪ್ರಾಮುಖ್ಯ ಪಡೆದು ಸಮ್ಮೇಳನವನ್ನು ಚಂದಗಾಣಿಸಲು ಮೈಮುರಿದು ದುಡಿದ ಸ್ವಯಂಸೇವಕರು ಕೇವಲ ಬೆರಳೆಣಿಕೆಯವರಷ್ಟೇ ಆದರು. ನಿಜವಾದ ಪ್ರಶಂಸೆ, ಕೃತಜ್ಞತೆ ಸಲ್ಲಬೇಕಾದ್ದು ಅಂಥವರಿಗೆ.
ಇದನ್ನು 'ಶಿವಪೂಜೆಯಲ್ಲಿ ಕರಡಿ' ಅಂತಾದ್ರೂ ಅನ್ನಿ, ಕಿಟಕಿಯಲ್ಲಿ ಹೋದದ್ದು ಗವಾಕ್ಷೀಲಿ ಬಂತು ಅಂತಾದ್ರೂ ಅನ್ನಿ, ರಾಜಕಾರಣಿಗಳ ರಗಳೆ ಇಲ್ಲದ ಸಮ್ಮೇಳನ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕೊನೆಗೂ ಒಬ್ಬ ರಾಜಕಾರಣಿ ಕಾಣಿಸಿಕೊಂಡರು ಮಂಡ್ಯದ ಸಂಸದ ಚೆಲುವರಾಯ ಸ್ವಾಮಿ. ಮತ್ತೆ ಯಥಾಪ್ರಕಾರ ಅವರನ್ನು ವೇದಿಕೆಗೆ ಕರೆದು ಹಾರತುರಾಯಿ, ಒಣಭಾಷಣ. ಸಮ್ಮೇಳನಕ್ಕೆ ಅವರ ಕೊಡುಗೆ ಏನಿದೆಯೋ ಗೊತ್ತಿಲ್ಲ ಆದರೂ ಇಂಥವರಿಗೆ ಡೊಗ್ಗುಸಮಾಮು ಹಾಕುತ್ತಾರೆ ಎಂದು ಪ್ರೇಕ್ಷಕರ ಗೊಣಗಾಟ.
'ಅಕ್ಕ'ದ 7ನೇ ಸಮ್ಮೇಳನ ಅಟ್ಲಾಂಟದಲ್ಲಿ ಎಂದು ಸುಮಾರು ಒಂದೂವರೆ ವರ್ಷದ ಹಿಂದೆ ನಿರ್ಧಾರವಾದಾಗಿಂದ ಭಾನುವಾರ ಸಂಜೆ ಈ ಸಮ್ಮೇಳನವು ಯಶಸ್ವಿಯಾಗಿ ಸಮಾಪನಗೊಳ್ಳುವ ಕ್ಷಣದವರೆಗೂ ಇದು ನಮ್ಮ ಮನೆಯ ಸಮಾರಂಭ ಎನ್ನುವಷ್ಟು 'ಹಚ್ಚಿಕೊಂಡು'ಸಮ್ಮೇಳನವನ್ನು ನಿರ್ವಹಿಸಿದ ಮುಖ್ಯ ಸಂಚಾಲಕ, ಅಟ್ಲಾಂಟದ ಹಿರೀಕ ಡಾ. ರಾಮಸ್ವಾಮಿ ದಂಪತಿಯ ಮುಖದಲ್ಲಿ ಧನ್ಯತೆ ತುಂಬಿತುಳುಕುತ್ತಿತ್ತು. ಸಮಾರೋಪ ಸಮಾರಂಭದಲ್ಲಿ ವೇದಿಕೆಯ ಮೇಲಿಂದಲೇ ಅಷ್ಟುದೊಡ್ಡ ಸಭೆಗೆ ಸಾಷ್ಟಾಂಗ ನಮಸ್ಕಾರ ಮಾಡಿದ ರಾಮಸ್ವಾಮಿಯವರ ಆ ಜೆಸ್ಚರ್‌ನಲ್ಲಿದ್ದದ್ದು ಆ ಸಾರ್ಥಕ ಭಾವವೇ ಹೊರತು ಸೋಗಿನ ವೇಷವಲ್ಲ. ಕನ್ನಡಮಾತೆ ಭುವನೇಶ್ವರಿ ಆ ಹಿರಿಜೀವಗಳನ್ನು ಚಿರಕಾಲ ಸುಖಶಾಂತಿಯಿಂದಿಟ್ಟಿರಲಿ ಎಂದು ಸಮ್ಮೇಳನಾರ್ಥಿಗಳೆಲ್ಲರ ಒಮ್ಮತದ ಹಾರೈಕೆ.
ಆಯ್ತು, 'ಅಕ್ಕ'ದ ಏಳನೇ ಸಮ್ಮೇಳನ ಅಟ್ಲಾಂಟದಲ್ಲಿ ಸುಫಲಸಂಪೂರ್ಣವಾಯ್ತು. ಸಮ್ಮೇಳನಕ್ಕೆಂದು ದೂರದ ಊರುಗಳಿಂದ ಬಂದಿದ್ದವರೆಲ್ಲ ಸೋಮವಾರ ಬೆಳಿಗ್ಗೆ ಹೊಟೆಲ್ ರೂಮ್ ಚೆಕ್‌ಔಟ್ ಮಾಡಿ ಏರ್‌ಪೋರ್ಟ್‌ನತ್ತ ಸಾಗಿದರು, ಸಮ್ಮೇಳನದ ಸಿಹಿಸಿಹಿ ನೆನಪುಗಳನ್ನು ಮನತುಂಬ ತುಂಬಿಸಿಕೊಂಡು. ಇನ್ನು ಎಂಟನೆಯ ಸಮ್ಮೇಳನ ಎಲ್ಲಿ? ಈ ಪ್ರಶ್ನೆಗೆ ಉತ್ತರ ತಿಳಿಯಲು ಕಾದುನೋಡೋಣ.












Click it and Unblock the Notifications