ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕನ್ನಡಿಗರ ಇತಿಹಾಸ

By Prasad
|
Google Oneindia Kannada News

Suresh HC, Singapore
ನವೆಂಬರ್ 27, 28ರಂದು ಕನ್ನಡ ಸಂಘ (ಸಿಂಗಪುರ)ವು ಹಾಗೂ "ಹೃದಯವಾಹಿನಿ" ಮಾಸಪತ್ರಿಕೆಯ ಜಂಟಿ ಸಹಯೋಗದಲ್ಲಿ ಏಳನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಜ್ಜಾಗುತ್ತಿದೆ. ಬೆಂಗಳೂರಿಗಿಂತ ಚಿಕ್ಕದಾಗಿರುವ, ವಿಶ್ವದ ಭೂಪಟದಲ್ಲಿ ಒಂದು ಚಿಕ್ಕ ಚುಕ್ಕೆಯಂತೆ ಕಾಣುವ ಈ ಸಿಂಗಪುರ ದ್ವೀಪಕ್ಕೆ ಕನ್ನಡಿಗರು ಯಾವಾಗ ಬಂದರು? ಇಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಲು ಹೇಗೆ ಸಾಧ್ಯವಾಯಿತು? ನೋಡೋಣ ಬನ್ನಿ.

* ಸುರೇಶ ಎಚ್.ಸಿ., ಸಿಂಗಪುರ

1978ರಲ್ಲಿ ಬಿಡುಗಡೆಯಾದ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಅಭಿನಯದ "ಸಿಂಗಪುರದಲ್ಲಿ ರಾಜಾ ಕುಳ್ಳ" ಚಲನಚಿತ್ರದ ಮೂಲಕ ಕರ್ನಾಟಕದ ಬಹುತೇಕ ಕನ್ನಡಿಗರಿಗೆ ಸಿಂಗಪುರದ ಪರಿಚಯವಾಗಿಬಹುದು. ಆದರೆ 1948ರಿಂದ 1960ರ ಅವಧಿಯಲ್ಲಿ 3 ಮಂದಿ ಕನ್ನಡಿಗ ದಂಪತಿಗಳು ಸಿಂಗಪುರಕ್ಕೆ ಬಂದರು. ಮುಂದೆ 1966ರಲ್ಲಿ ಸಿಂಗಪುರ್‍ ಪಾಲಿಟೆಕ್ನಿಕ್ ಪ್ರಾರಂಭವಾದಾಗ ಇಲ್ಲಿಗೆ ಅಧ್ಯಾಪಕರಾಗಿ ನೇಮಕವಾಗಿ ಬಂದ ಭಾರತೀಯರಲ್ಲಿ ಬಹಳ ಮಂದಿ ಕನ್ನಡಿಗರಿದ್ದರು. 1982ರವರೆಗೂ ಇಲ್ಲಿದ್ದುದು ಕೇವಲ 10-12 ಕನ್ನಡಿಗರ ಕುಟುಂಬಗಳು ಮಾತ್ರ. ಆಗ ಇವರೆಲ್ಲರೂ ಹಬ್ಬ-ಹರಿದಿನಗಳ ನೆಪದಲ್ಲಿ -ಮನೆ, ವೆಸ್ಟ್ ಕೋಸ್ಟ್ ಪಾರ್ಕ್, ಸಿಂಗಪುರ ಪಾಲಿಟೆಕ್ನಿಕ್, ಕೋಮಲವಿಲಾಸ್ ರೆಸ್ಟೋರೆಂಟ್, ಶ್ರೀನಿವಾಸ ಪೆರುಮಾಳ್ ದೇವಸ್ಥಾನ ಮುಂತಾದ ಕಡೆ ಒಟ್ಟಿಗೆ ಸೇರುತ್ತಿದ್ದರು. ಹೀಗೆ ಸೇರುವಲ್ಲಿ ಹೆಂಗಳೆಯರ ಪಾತ್ರ ದೊಡ್ಡದಿದ್ದು, ನಂತರ ಅವರೊಂದಿಗೆ ಮಕ್ಕಳೂ, ಗಂಡಸರೂ ಸೇರಲಾರಂಭಿಸಿದರು.

ಮುಂದಿನ ವರ್ಷಗಳಲ್ಲಿ ವಿದ್ಯುನ್ಮಾನ ಹಾಗೂ ಗಣಕಯಂತ್ರದ ಕ್ಷೇತ್ರದಲ್ಲಾದ ಕ್ರಾಂತಿಯಿಂದಾಗಿ ಇಲ್ಲಿ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಅವರೆಲ್ಲರೂ ಆಗಾಗ ಒಟ್ಟಿಗೆ ಸೇರಿ ಚಿಕ್ಕ ರೀತಿಯಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. 1984ರಲ್ಲಿ ಭಾಸ್ಕರ ಅಕಾಡೆಮಿಯ ಆಯೋಜನೆದಲ್ಲಿ ನಡೆದ ಎಲ್ಲಾ ಭಾಷೆಗಳ ನಾಟಕೋತ್ಸವದಲ್ಲಿ ಕನ್ನಡಿಗರೂ ಒಂದು ನಾಟಕವನ್ನು ಪ್ರದರ್ಶಿಸಿದರು. ರಮಾಪ್ರಸಾದ್ ಅವರ ನಿರ್ದೇಶನದ "ಮರೆವಿನ ಮಹಾಪುರುಷರು" ಎಂಬ ಹಾಸ್ಯ ನಾಟಕವನ್ನು ನೋಡಲು 300ಕ್ಕೂ ಹೆಚ್ಚು ಮಂದಿ ಕನ್ನಡಿಗರು ಸೇರಿದ್ದರು. ಸಿಂಗಪುರದಲ್ಲಿ ಇಷ್ಟೊಂದು ಕನ್ನಡಿಗರು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದ್ದು ಇದೇ ಮೊದಲು. ಕೆಲ ವರ್ಷಗಳ ನಂತರ "ಕಸ್ತೂರಿ ಕಂಪು" ಎಂಬ ಸಾಂಸ್ಕೃತಿಕ ಕಾರ್ಯಕ್ರಮವೂ ಯಶಸ್ವಿಯಾಗಿ ನೆರವೇರಿತು.

ಕನ್ನಡ ಸಂಘದ ಉದಯ : ಹೀಗೆಯೇ ಮುಂದುವರೆದ ಈ ರೀತಿಯ ಕೂಟಗಳು, ಹಿರಿಯರ ಆಕಾಂಕ್ಷೆ-ಪರಿಶ್ರಮ, ಕಿರಿಯರ ಉತ್ಸಾಹ, ಸಹಕಾರದಿಂದಾಗಿ 30 ಸೆಪ್ಟೆಂಬರ್, 1996ರಂದು ಕನ್ನಡ ಸಂಘ (ಸಿಂಗಪುರ)ವು ಜನ್ಮ ತಾಳಿತು. ಹಿರಿಯರ ಉತ್ತೇಜನ, ಮಾರ್ಗದರ್ಶನದಲ್ಲಿ ಅಂಬೆಗಾಲಿಟ್ಟ ಈ ಶಿಶುವು ನೃತ್ಯ, ನಾಟಕ, ಸಂಗೀತ, ಯಕ್ಷಗಾನ, ಹಾಸ್ಯ, ಕ್ರೀಡೆ, ಪ್ರತಿಭಾ ಪ್ರದರ್ಶನ, ಸಾಹಿತ್ಯ ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹದಿಹರೆಯಕ್ಕೆ ಬಂದು ನಿಂತಿದೆ. ಇಲ್ಲೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಮಾತೃಭಾಷೆಯ ದೀಪವಾಗಿ, ಕರುನಾಡಿನ ಸಂಸ್ಕೃತಿಯ ಕೊಂಡಿಯಾಗಿ, ಸಿಂಗಪುರದ ಹಾಗೂ ಕರ್ನಾಟಕದ ಕನ್ನಡ ಪ್ರತಿಭೆಗಳಿಗೆ ವೇದಿಕೆಯಾಗಿ, ಮನರಂಜನೆಯ ಮಾಧ್ಯಮವಾಗಿ ಬೆಳೆದು ನಮ್ಮೆಲ್ಲರ ಹೆಮ್ಮೆಯ ಕುರುಹಾಗಿದೆ.

ಆ ದಿನಗಳಲ್ಲಿ ಬೆಂಗಾಳಿ, ಮರಾಠಿ ಮುಂತಾದ ಸಂಸ್ಥೆಗಳ ಕಾರ್ಯಸಂಹಿತೆಯನ್ನು ನೋಡಿ, ಕಲಿತು ನಮಗೆ ಸರಿಹೊಂದುವಂತಹ ತತ್ವಗಳನ್ನು ಅಳವಡಿಸಿಕೊಂಡು ಸ್ಥಾಪಿಸಲಾದ ಕನ್ನಡ ಸಂಘದ ಉದ್ಘಾಟನೆಗೆ ಸುಮಾರು 400ರಿಂದ 450 ಜನ ಬಂದಿದ್ದರು. ಎಣಿಸಿಕೊಂಡದ್ದಕ್ಕೂ ಹೆಚ್ಚು ಜನ ಬಂದಿದ್ದ ಈ ಕಾರ್ಯಕ್ರಮದಲ್ಲಿ ಒಂದೆಡೆ ಸಂಭ್ರಮವಾದರೆ ಇನ್ನೊಂದೆಡೆ ಊಟದ ಕೊರತೆಯಾಗಿ ಪ್ರಾಯೋಜಕರಿಗೆ ಸಂಕಟ. ಸಂತಸವೇ ಇರಲಿ, ಸಂಕಟವೇ ಇರಲಿ - ಎಲ್ಲದರಲ್ಲೂ ಎಲ್ಲ ಕನ್ನಡಿಗರೂ ಸಮಭಾಗೀದಾರರಾಗುತ್ತಿದ್ದರು. ಆಗ ಸಂಘದ ಕಾರ್ಯಕರ್ತರು ಅತ್ಯುತ್ಸಾಹದಿಂದ ಕನ್ನಡಿಗರನ್ನು ತಮಗೆ ಸಿಕ್ಕಿದ ಕಡೆಯೆಲ್ಲಾ ಮಾತನಾಡಿಸಿ ಅವರಿಗೆ ಸಂಘದ ಸದಸ್ಯತ್ವ ಪಡೆಯಲು ಆಗ್ರಹಿಸುತ್ತಿದ್ದರು.

ಮೊದಲ ಕೆಲವು ವರ್ಷಗಳಲ್ಲಿ ಸಂಘದ ಕಾರ್ಯಕಲಾಪಗಳಿಗೆ ರೂಪುರೇಷೆಯನ್ನು ಮೂಡಿಸಲು, ಆಧಾರ ಸ್ಥಂಭಗಳನ್ನು ರೂಪಿಸಲು ಹೆಚ್ಚು ಒತ್ತು ಕೊಡಲಾಗಿತ್ತು. ಕಾರ್ಯಕ್ರಮಗಳ ಗುಣಮಟ್ಟ, ವೈವಿಧ್ಯತೆ ಹಾಗೂ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸುವ ಯತ್ನ ನಿರಂತರವಾಗಿ ನಡೆದಿತ್ತು. ಆಗ ಕನ್ನಡಿಗರಿಗೆ, ಕನ್ನಡ ಸಂಘಕ್ಕೆ ಎಲ್ಲವೂ ಹೊಸತು. ಅತೀ ಕಡಿಮೆ ಬಂಡವಾಳ, ಸೌಕರ್ಯಗಳು, ನಿಗದಿತ ಕೌಶಲ್ಯ, ಬೆರಳೆಣಿಕೆಯ ಸ್ವಯಂಸೇವಕರು ಹಲವಾರು ಯೋಜನೆ, ಜವಾಬ್ದಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ, ಅಷ್ಟೇನೂ ತಾಂತ್ರಿಕತೆಯಲ್ಲಿ ಮುಂದುವರೆದಿರದ ಕಾರಣ ಪ್ರತಿಯೊಂದು ಕೆಲಸಕ್ಕೂ ಮುಖತಃ ಭೇಟಿ ಮಾಡುವ ಆಗತ್ಯ - ಇತ್ಯಾದಿ ಭೌತಿಕ ಸೀಮಾಬಂಧನಗಳು. ಆದರೆ ಆಗ ಕನ್ನಡ ಕಾರ್ಯಕರ್ತರಲ್ಲಿದ್ದ ಆಸ್ತಿ - ಅದಮ್ಯ ಅಪರಿಮಿತ ಉತ್ಸಾಹ, ಚೈತನ್ಯ, ನಿಸ್ವಾರ್ಥ ಸೇವೆ. ಪರಸ್ಪರ ಭೇಟಿಯಾಗಲು ಸಿಗುವ ಸಂದರ್ಭಗಳನ್ನು ಸೃಷ್ಟಿಸುತ್ತಿದ್ದ, ಬಳಸುತ್ತಿದ್ದ ಈ ರೀತಿಯ ಭೇಟಿಗಳೇ ಆಗ ವಿಚಾರ ವಿನಿಮಯಕ್ಕೆ, ಕನ್ನಡಿಗರ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಹಾಗೂ ಭದ್ರ ಬುನಾದಿ, ಬೆಳವಣಿಗೆಗಳಿಗೆ ಕಾರಣವಾದವು.

English summary
Suresh HC writes about history of Kannadigas in Singapore. Singapore Kannada Sangha is celebrating 7th World Kannada Cultural Convention on November 27, 28, 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X