• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಸಮ್ಮೇಳನದಲ್ಲಿ ಮಿಂಚಿದ ಸಿಂಗನ್ನಡಿಗರು

By * ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News
ನವೆಂಬರ್ 6 ಮತ್ತು 7ರಂದು ಸಿಂಗಪುರದ "ಕರ್ನಾಟಕ ವೈಭವ" ಸಂಸ್ಥೆಯು ಎರಡು ದಿನಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ಸಿಂಗಪುರ ಪಾಲಿಟೆಕ್ನಿಕ್‌ನಲ್ಲಿ ಏರ್ಪಡಿಸಿತ್ತು. ಈ ಸಮ್ಮೇಳನದಲ್ಲಿ ನಮಗೆ ರಸದೂಟವನ್ನು ಬಡಿಸಲು ಬಂದವರು ಡಾ. ಸಂಜಯ್ ಶಾಂತಾರಾಮ್ ಮತ್ತು ತಂಡ, ಪ್ರಖ್ಯಾತ ಕವಿ ಕೆ.ಎಸ್. ನಿಸಾರ್ ಆಹ್ಮದ್, ಸುಪ್ರಸಿದ್ಧ ಲೇಖಕ ಜಯಂತ ಕಾಯ್ಕಿಣಿ, ದಟ್ಸ್ ಕನ್ನಡ ಡಾಟ್ ಕಾಮ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಸ್.ಕೆ. ಶ್ಯಾಮ ಸುಂದರ ಹಾಗೂ ಕನ್ನಡ ಚಿತ್ರ-ಸಂಗೀತದ ಪ್ರಖ್ಯಾತ ನಿರ್ದೇಶಕ ಗುರುಕಿರಣ್ ಮತ್ತು ತಂಡ. ಆದರೆ ಈ ಕಾರ್ಯಕ್ರಮ ಕೇವಲ ಕರ್ನಾಟಕದಿಂದ ಬಂದ ಕಲಾವಿದರಿಗೆ ಸೀಮಿತವಾಗಿರದೇ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯ ಕಲಾವಿದರನ್ನೂ ಒಳಗೊಂಡಿತ್ತು.

ನವೆಂಬರ್ 6ರ ಸಂಜೆ ಸಭಾಂಗಣದ ಹೊರಗೆ ಲಕ್ಷ್ಮೀ ಪೂಜೆಯೊಂದಿಗೆ ಕಾರ್ಯಕ್ರಮದ ಶುಭಾರಂಭವಾಯಿತು. ಮುಖ್ಯ ಅತಿಥಿಗಳಾದ ನಿಸಾರ್ ಆಹ್ಮದ್ ಅವರನ್ನು ಸಭಿಕರು ಎದ್ದು ನಿಂತು ಸ್ವಾಗತಿಸಿದರು. ಕರ್ನಾಟಕದ ಕಲೆ, ಸಂಸ್ಕೃತಿಯ ಹಿರಿತನವನ್ನು ಮೆರೆಯುವ ಧ್ವನಿ ಸುರುಳಿ ಹಾಗೂ ವಿಡಿಯೋ ತುಣುಕಿನ ಪ್ರದರ್ಶನವಾದ ಬಳಿಕೆ "ಕಡಲಾಚೆಯ ಕೋಗಿಲೆ" ಎಂದೇ ಪ್ರಖ್ಯಾತರಾದ ಭಾಗ್ಯ ಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಹಾಗೂ ಅವರ ಸುಪುತ್ರರಾದ ಕಿಶನ್ ಅವರ ಸಂಗೀತ ಸಂಯೋಜನೆಯಲ್ಲಿ ಸಿಂಗಪುರದ ಮಕ್ಕಳು, ಹಿರಿಯರು ನಾಲ್ಕು ಸುಶ್ರಾವ್ಯವಾದ ಸಮೂಹಗೀತೆಗಳನ್ನು ಹಾಡಿದರು. "ಮಕ್ಕಳ ಬಾಳನು ಸಕ್ಕರೆಗೊಳಿಸುವ ವಿನಾಯಕ"ನಿಗೆ ವಂದನೆ (ವಿಡಿಯೋ) ಸಲ್ಲಿಸಿದ ನಂತರ ಅವರು ಹಾಡಿನಲ್ಲೇ ಹಚ್ಚಿದರು "ಕನ್ನಡದ ದೀಪ"ವನ್ನು (ವಿಡಿಯೋ). "ಉದಯಗಗನದಲಿ ಅರುಣನ ಛಾಯೆ"ಯನ್ನು (ವಿಡಿಯೋ) ಕೊಂಡಾಡಿ ಜೊತೆ ಜೊತೆಗೇ "ಕನ್ನಡ ನಾಡಿನ ಮಂಗಳ ಚಂದಿರ"ನು (ವಿಡಿಯೋ) ತುಂಬಿ ಬೆಳಗಿ ಬರಲೆಂದು ಆಶಿಸಿದರು. ಮಧುರವಾದ ಸ್ವರ-ಸಂಗೀತಕ್ಕೆ ಮೈನವಿರೇಳಿಸುವ ತಾಳ, ಹಿನ್ನೆಲೆ ಸಂಗೀತ ಸಂಯೋಜನೆ ಮೈಮನಕ್ಕೆ ಮುದ ತಂದಿತ್ತು.

ಇದಾದ ನಂತರ ಸುಶ್ಮಿತಾ ಧೃವ ಅವರ ನಿರ್ದೇಶನದಲ್ಲಿ ಮಕ್ಕಳು "ಬೆಣ್ಣೆ ಕದ್ದ ನಮ್ಮ ಕೃಷ್ಣ" ಹಾಡಿಗೆ ಸುಂದರವಾದ ನೃತ್ಯ ಮಾಡಿದರು (ವಿಡಿಯೋ). ನಂತರ ಡಾ. ಸಂಜಯ್ ಶಾಂತಾರಾಮ್ ಅವರ ನಿರ್ದೇಶನದಲ್ಲಿ ಮೂರು ಅಮೋಘ ನೃತ್ಯಗಳ ಪ್ರಸ್ತುತಿಯ(ವಿಡಿಯೋ) ನಂತರ ಸಾಹಿತ್ಯ ಸಮ್ಮೇಳನದ ಸಾಂಕೇತಿಕ ಉದ್ಘಾಟನೆಯನ್ನು ವಿದ್ಯುದ್ದೀಪವನ್ನು ಬೆಳಗುವುದರೊಂದಿಗೆ ಆರಂಭ ಮಾಡಲಾಯಿತು. ಅಲ್ಲದೇ ಸಿಂಗಪುರದಲ್ಲಿ ಕಳೆದ 12 ವಾರಗಳಿಂದ "ಕನ್ನಡ ಅಧ್ಯಯನ ಕೇಂದ್ರ"ದ ಮೂಲಕ ಕನ್ನಡ ಕಲಿಸುತ್ತಿರುವ, ಕಲಿಯುತ್ತಿರುವ 12 ಕೇಂದ್ರದ 12 ಶಿಕ್ಷಕರಿಗೂ, 65ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಹಾಗೆಯೇ ವಿಜಯ ದಶಮಿಯ ಸಂದರ್ಭದಲ್ಲಿ ನಡೆಸಿದ ವಿವಿಧ ವೇಷ ಸ್ಪರ್ಧೆಯ (Fancy Dress Competition) ವಿಜೇತರಿಗೂ ಬಹುಮಾನ ನೀಡಲಾಯಿತು.

ಮನಸೂರೆಗೊಂಡ ನರ್ತನ : ತದನಂತರ ಈ ದಿನದ ಅತ್ಯಾಕರ್ಷಕ ಕಾರ್ಯಕ್ರಮ "Beauty and the Beast" ರೂಪಕದ ಭಾರತೀಯ ಆವೃತ್ತಿಯಾದ "ರೂಪ-ವಿರೂಪ"ವನ್ನು ಪ್ರಸ್ತುತ ಪಡಿಸಿದವರು ಶಿವಪ್ರಿಯ ತಂಡದ ಡಾ. ಸಂಜಯ್ ಶಾಂತಾರಾಮ್ ಹಾಗೂ ಅವರೊಂದಿಗೆ ಬಂದ ಆರು ಮಂದಿ ಸದಸ್ಯರ ತಂಡ. ಆದರೆ ಇಲ್ಲಿ ಒಂದು ವಿಶೇಷವೆಂದರೆ 15ಕ್ಕೂ ಹೆಚ್ಚು ಸ್ಥಳೀಯ ಕಲಾವಿದರನ್ನು ಕೇವಲ ಎರಡು ವಾರಗಳಲ್ಲಿ ಪಳಗಿಸಿ ಎರಡೂ ತಂಡಗಳು ಸೇರಿ ಕಾರ್ಯಕ್ರಮವನ್ನು ನೀಡಿದ್ದು. ಈ ಅಮೋಘ ನೃತ್ಯ-ರೂಪಕದಲ್ಲಿ ವೃತ್ತಿನಿರತ ಕರ್ನಾಟಕದ ಕಲಾವಿದ ನೃತ್ಯ ಕಲಾವಿದರೊಂದಿಗೆ ನಾಟ್ಯ ಕಲಿತು ನಟಿಸುವ ಆಹ್ವಾನವನ್ನು ಸ್ವೀಕರಿಸಿ ನೆರೆದಿದ್ದ ಎಲ್ಲ ಸಭಿಕರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಸಿಂಗನ್ನಡಿಗ ಕಲಾವಿದರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಮಾಲಿಕಾ ಗಿರೀಶ್ ಪಣಿಕ್ಕರ್ ಹಾಗೂ ಅವರ ಶಿಷ್ಯ ವೃಂದ ತಮ್ಮ ಅಮೋಘ ಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರ ಹಾಗೂ ಸ್ವತಃ ಸಂಜಯ್ ಶಾಂತಾರಾಮ್ ಅವರ ಮೆಚ್ಚುಗೆಗೆ ಪಾತ್ರರಾದರು.

ನವೆಂಬರ್ 7ರಂದು ಮುಂದುವರೆದ ಕಾರ್ಯಕ್ರಮವು ಭಾಗ್ಯ ಮೂರ್ತಿ ಅವರ ಸಂಗೀತ ನಿರ್ದೇಶನದ ಸಮೂಹಗೀತೆಗಳೊಂದಿಗೆ ಪ್ರಾರಂಭವಾಯಿತು. ಗಣಪತಿಯನ್ನು ಸ್ಮರಿಸಿದ ಮೇಲೆ, "ಏಳು ಚಿನ್ನದ ಗರಿ" ಎಂಬ ಜನಪದ ಹಾಡನ್ನು 20ಕ್ಕೂ ಹೆಚ್ಚು ಮಕ್ಕಳು ಹಾಡಿದರು. "ಕರೆದಿತು ಜಾಗ್ರಹ ವಿಹಗ ಕುಲ" ಎಂಬ ಅಪರೂಪದ ಹಾಡನ್ನು ಹಾಗೂ ಕೊನೆಯದಾಗಿ ನಿಸಾರ್ ಆಹ್ಮದ್ ಅವರ ಸಮ್ಮುಖದಲ್ಲಿ ಅವರದೇ ಆದ ರಚನೆ ನಿತ್ಯ ನೂತನ ನಿತ್ಯೋತ್ಸವದ "ಜೋಗದ ಸಿರಿ ಬೆಳಕಿನಲ್ಲಿ.." ಹಾಡನ್ನು 20ಕ್ಕೂ ಹೆಚ್ಚು ಸಿಂಗನ್ನಡಿಗರು ಹಾಡಿದರು.

ನಂತರದ ಸಂಗೀತ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಸಹನಾ ರಾಮಚಂದ್ರ, ಶ್ರುತಿ ಆನಂದ್ ಹಾಗೂ ಕುಮಾರಿ ಸೀಮಾ ರಾವ್ ಅವರು ದಾಸರ ಪದಗಳ ಸ್ವರೂಪವನ್ನು ಆಯೋಜಿಸಲಾಗಿತ್ತು. ಸಹನಾರವರು ಆರ್.ಕೆ. ಪದ್ಮನಾಭನ್ ಅವರ ಶಿಷ್ಯೆ; ಶ್ರುತಿ ಆನಂದ್ ಅವರು ಸಂಗೀತಕಲಾಶ್ರೀ ವೇದವಲ್ಲಿಯ ಶಿಷ್ಯೆ; ಸೀಮಾ ಅವರು "ಬಿದಿಗೆ ಚಂದ್ರಮ", "ಆಕಾಂಕ್ಷೆ" ಮುಂತಾದ ಕನ್ನಡದ ಹೆಸರಾಂತ ಧಾರಾವಾಹಿಗಳ ಶೀರ್ಷಿಕೆ ಹಾಡನ್ನು ಹಾಡಿ ಖ್ಯಾತಿಯಾಗಿದ್ದಾರೆ. ಈ ಮೂವರೂ "ಗಜಮುಖ"ನಿಗೆ ಶರಣು ಅರ್ಪಿಸಿದ ನಂತರ ಸೀಮಾ ಅವರು "ಇನ್ನೂ ದಯ ಬಾರದೇ ದಾಸನ ಮೇಲೆ" ಎಂದು ಕೇಳಿದರೆ ಸಹನಾ ಅವರು "ಮನೆಯೊಳಗಾಡೋ ಗೋವಿಂದ"ನನ್ನು ಕೊಂಡಾಡಿದರು. ಶ್ರುತಿ ಅವರು "ಸಾಮಾನ್ಯವಲ್ಲ ಶ್ರೀಹರಿಯ ಸೇವೆ" ಎಂದು ನೆನಪಿಸಿದರು. ಕೊನೆಯದಾಗಿ ಮೂವರೂ ಸೇರಿ "ಎಲ್ಲಾನೂ ಬಲ್ಲೇನೆಂಬುವಿರಲ್ಲ, ಅವಗುಣ ಬಿಡಲಿಲ್ಲ.." ಎಂಬ ಹಾಡನ್ನು ಹಾಡುವಾಗ ಸಿಂಗನ್ನಡಿಗರಿಗೆ ಇಲ್ಲಿರುವ ಸಂಗೀತಗಾರರ ಪ್ರತಿಭೆಯ ಸಂಪೂರ್ಣ ಪರಿಚಯವಾಗಿತ್ತು. ಈ ಗಾನಕೋಕಿಲಾತ್ರಯರಿಗೆ ಸಂಗಾತಿ ನೀಡಿದವರು ಆದಿತ್ಯ (ವಯೋಲಿನ್), ಸರ್ಫರಾಜ್ ಅಹ್ಮದ್ (ತಬಲ) ಹಾಗೂ ಗಣೇಶ್ (ಮೃದಂಗ).

ಸಂಗೀತದ ದೀಪಾವಳಿಯ ಉತ್ಸವದ ಸಂದರ್ಭದಲ್ಲಿ ನೀಡಿದ ಜಾನಪದ ನೃತ್ಯೋತ್ಸವವನ್ನು ಪುನಃ ಆಯೋಜಿಸಲಾಗಿತ್ತು. ಡಾ. ಸಂಜಯ್ ಶಾಂತಾರಾಮ್ ಅವರ ನೇತೃತ್ವ ಹಾಗೂ ನೃತ್ಯಸಂಯೋಜನೆಯಲ್ಲಿ 7 ಜನ ಕರ್ನಾಟಕದ ಕಲಾಕಾರರೊಂದಿಗೆ 18 ಮಂದಿ ಸ್ಥಳೀಯ ಕಲಾವಿದರು ಡೊಳ್ಳು, ಕಂಸಾಳೆ, ವೀರಗಾಸೆ, ಸುಗ್ಗಿ, ಯಕ್ಷಗಾನ ಹಾಗೂ ಕೋಲಾಟ ಹೀಗೆ ಹಲವಾರು ಪ್ರಾಕಾರದ ಜಾನಪದ ನೃತ್ಯವನ್ನು ಒಂದಾದ ಮೇಲೆ, ಆನಂತರ ಒಟ್ಟಿಗೇ ಪ್ರದರ್ಶಿಸಿ ನೆರೆದ ಸಭಿಕರಿಂದ "ಇನ್ನೊಮ್ಮೆ ಮಾಡಿ" ಅಂತ ಮೆಚ್ಚುಗೆಯಿಂದ ಹೇಳಿಸಿಕೊಂಡೇ ಬಿಟ್ಟರು! ಎರಡು ಬಾರಿಯೂ ಪ್ರೇಕ್ಷಕರು ಸುದೀರ್ಘ ಕರತಾಡನ ಮಾಡಿ ತಮ್ಮ ಸಂತೋಷವನ್ನು ಮನಃಪೂರ್ವಕವಾಗಿ ವ್ಯಕ್ತಪಡಿಸಿದರು.

ಆಹ್ವಾನಿತರ ಮಾತುಗಳು : ಸಂಗೀತ, ನೃತ್ಯದ ಬಳಿಕ ನಿಸಾರ್ ಅಹ್ಮದ್ ಅವರ ನೇತೃತ್ವದಲ್ಲಿ ನಡೆದ ನಡೆದ ಸಾಹಿತ್ಯ/ಕವಿ ಗೋಷ್ಠಿಯಲ್ಲಿ ಸರೋಜ ಶ್ರೀನಾಥ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸ್ಥಳೀಯ ಬರಹಗಾರರಾದ ವಸಂತ್ ಕುಲಕರ್ಣಿ, ಜಯಂತಿ ರಾವ್ ಹಾಗೂ ವಾಣಿ ರಾಮದಾಸ್ ಅವರಿಗೆ ಆಹ್ವಾನಿತರಾದ ಶ್ಯಾಮ ಸುಂದರ್, ಜಯಂತ್ ಕಾಯ್ಕಿಣಿ ಹಾಗೂ ನಾಡೋಜ ನಿಸ್ಸಾರ್ ಅಹ್ಮದ್ ಅವರ ಕಿರು-ಪರಿಚಯ ಮಾಡಿಕೊಡುವ ಸದವಕಾಶ ದೊರೆಯಿತು. ಇದಲ್ಲದೇ ಸುರೇಶ, ವಸಂತ್ ಕುಲಕರ್ಣಿ, ಕರ್ನಾಟಕ ವೈಭವದ ಅಧ್ಯಕ್ಷರಾದ ರಾಮಚಂದ್ರ ಹೆಗಡೆ ಹಾಗೂ ಶಶಿಮುಖಿ ಶಾನಭಾಗ್ ಅವರು ಸಭೆಯ ಮೇಲೆ ಆಸೀನರಾಗಿದ್ದ ಮಹಾನುಭಾವರ ಸಮ್ಮುಖದಲ್ಲಿ ಚುಟುಕ ಹಾಗೂ ಕವನ ವಾಚನ ಮಾಡಿ ಅತಿಥಿಗಳಿಂದ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ, ಚಪ್ಪಾಳೆ ಗಿಟ್ಟಿಸಿದರು. ಅಲ್ಲದೇ ರಾಮಚಂದ್ರ ಹೆಗಡೆಯವರು ತಮ್ಮ ಹೃದಯಕ್ಕೆ ಸಮೀಪವಾದ; ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳ ಸುಂದರ ಸಮ್ಮಿಳನದ ಕಲಾರೂಪವಾದ ಯಕ್ಷಗಾನದ ಬಗ್ಗೆ ನಾಲ್ಕು ಮಾತುಗಳನ್ನಾಡಿದರು. ನಿಸಾರ್, ಜಯಂತ್, ಶ್ಯಾಮ್ ಅವರ ಮಾತಿನ ಸರದಿಯ ನಡುವೆ ಸುಂದರವಾಗಿ ಹೆಣೆದು, ಅಳವಡಿಸಿದ ಸಹನಾ, ಶ್ರುತಿ, ಸೀಮಾರವ್ ಹಾಗೂ ಭಾಗ್ಯ ಮೂರ್ತಿ ಅವರ ಹಾಡು; ಸ್ಥಳೀಯ ಲೇಖಕರ ಕವನ ವಾಚನಗಳು ವಿಶೇಷ ಪ್ರಯೋಗವಾಗಿದ್ದು ಆಹ್ವಾನಿತ ಕಲಾವಿದರಿಗೇ ಅಚ್ಚರಿಯನ್ನು ಮೂಡಿಸಿತ್ತು.

ಈ ಕಾರ್ಯಕ್ರಮದ ಕೊನೆಯ ಅಂಗವಾಗಿ ಕನ್ನಡ ಚಲನಚಿತ್ರ ರಂಗದ ವಿಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಹಾಗೂ ಅವರ ತಂಡದವರಿಂದ "ಸಂಗೀತ ರಸ ಮಂಜರಿ" - ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು. ಗುರು ಕಿರಣ್, ಅರ್ಚನಾ ಉಡುಪ ಹಾಗೂ ಚೇತನ್ ಮತ್ತು ಅವರ ತಂಡದಿಂದ ಸಂಗೀತ - ಬಹುತೇಕ ಕನ್ನಡ ಹಾಡು ಕನ್ನಡದಲ್ಲಿ ಹಾಗೂ ಒಂದು ಹಾಡು ತುಳು ಭಾಷೆಯಲ್ಲಿ; ಜೊತೆಗೆ ಬಂದ "Excellency Group"ನ ನೃತ್ಯ ಹಾಗೂ 10,000ಕ್ಕೂ ಹೆಚ್ಚು ನಗೆ-ಕಾರ್ಯಕ್ರಮಗಳನ್ನು ನೀಡಿರುವ "ನಗೆ ಮಾಂತ್ರಿಕ" ಖ್ಯಾತಿಯ ಮಿಮಿಕ್ರಿ ದಯಾನಂದ್ ಅವರ ಆಣಕು ಹಾಸ್ಯ ಎಂದಿನಂತೆ ಎಲ್ಲರನ್ನೂ ರಂಜಿಸಿತು. ಜಯಂತ್ ಕಾಯ್ಕಿಣಿಯವರ ರಚನೆ "ಅನಿಸುತಿದೆ ಯಾಕೋ ಇಂದು" ಎಂಬ ಜನಪ್ರಿಯ ಹಾಡಿಗೆ ಅರ್ಚನಾ ಅವರು ಚಪ್ಪಾಳೆ ಗಿಟ್ಟಿಸಿದರೆ, "ಮಸ್ತ್ ಮಸ್ತ್ ಹೂಡುಗಿ ಬಂದ್ಲು" ಹಾಡಿಗೆ ಸಭಿಕರು ಕುಣಿದು ನಲಿದರು. ಇತ್ತೀಚಿನ ಚಲನಚಿತ್ರಗಳ ಹಾಡಿನ ಮೇಲೇ ಆಧಾರಿತವಾಗಿದ್ದ ಈ ಕಾರ್ಯಕ್ರಮ ಹಳೆಯ ಹಾಡನ್ನು ಕೇಳುವ ಆಸೆಯಿಟ್ಟುಕೊಂಡು ಬಂದವರಿಗೆ ಸ್ವಲ್ಪ ನಿರಾಸೆ ಮೂಡಿಸಿತು.

ತೆರೆಯ ಮುಂದೆ ಕಲಾಪ್ರದರ್ಶನ ಮಾಡಿದವರಲ್ಲದೇ ಈ ಕಾರ್ಯಕ್ರಮವನ್ನು ಸುಸಜ್ಜಿತವಾಗಿ ನಡೆಸಲು ನೇಪಥ್ಯದಲ್ಲಿ ಹಗಲಿರುಳೂ ಶ್ರಮಿಸಿದ ಸ್ವಯಂ-ಸೇವಕರು ಬಹಳ ಮಂದಿ. ಎರಡೂ ದಿನ ಕಾರ್ಯಕ್ರಮ ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಪ್ರಾರಂಭವಾದರೂ ಮಧ್ಯೆ ಯಾವುದೇ ಆಡೆ-ತಡೆಯಿಲ್ಲದೆ ಕೊನೆಯವರೆಗೂ ಕುತೂಹಲವನ್ನುಳಿಸಿಕೊಂಡಿತ್ತು. ಟಿಕೆಟ್ ವಿತರಣೆಯಿರಲಿ, ಬಂದ ಸಭಿಕರ ಸ್ವಾಗತವಿರಲಿ, ಊಟ ಬಡಿಸುವುದೇ ಇರಲಿ ಅಥವಾ ಅತಿಥಿ ಸತ್ಕಾರವೇ ಇರಲಿ - ಪ್ರತಿಯೊಂದು ಕಾರ್ಯದ ಹಿಂದೆಯೂ ಇರುವ ಮುಗುಳು ನಗೆ, ಸೇವಾ ಮನೋಭಾವ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತ್ತು. ಬೇಲೂರು ಹಳೇಬೀಡಿನ ಶಿಲ್ಪ ಕಲೆಗಳು, ಪ್ರಕೃತಿಯ ಸೊಬಗು ಇವುಗಳನ್ನು ಸೆರೆಹಿಡಿದು ಮೂಡಿಸಿದ ಹಿನ್ನೆಲೆಯ ಚಿತ್ರಗಳು ಕಾರ್ಯಕ್ರಮಕ್ಕೆ ಮೆರಗು ತಂದಿದ್ದವು. ಮೈಸೂರಿನ ಸ್ವಚ್ಛ ಕನ್ನಡದಲ್ಲಿ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಟ್ಟವರು ರೇವಣ್ಣ. ಅವರ ಜೊತೆಯಲ್ಲಿ ಅಷ್ಟೇ ಸುಮಧುರವಾದ ಕಂಠದಲ್ಲಿ ಆಂಗ್ಲಭಾಷೆಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಸ್ವಪ್ನ ಮೋಹನ್. ಎರಡು ದಿನ ಅಚ್ಛ ಕನ್ನಡದಲ್ಲಿ ಕರ್ನಾಟಕದ ಹಾಗೂ ಸಿಂಗಪುರದ ಕಲಾವಿದರೊಂದಿಗೆ ಕಳೆದ ಈ ಉಚ್ಚ ಮಟ್ಟದ ಕಾರ್ಯಕ್ರಮ ಬಹುಕಾಲ ನಮ್ಮೆಲ್ಲರ ಮನದಲ್ಲಿ ನಿಚ್ಚಳವಾಗಿ ಉಳಿಯುವುದು.

ಉಚಿತ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion