ಕಲ್ಪನಾ ಸಾಹಿತ್ಯಕ್ಕೆ ಕಪಾಳಮೋಕ್ಷ

ನ್ಯೂ ಜೆರ್ಸಿ ಸಂಸ್ಥಾನದ ಎಡಿಸನ್ ನಗರದಲ್ಲಿ ನಡೆದ 6ನೇ ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಕನ್ನಡ ನಾಡಿಗರ ಬವಣೆಗಳಿಗೆ ಕಾರಣ ಹುಡುಕುತ್ತಿದ್ದರು. ಕತೆ-ಕಾವ್ಯಗಳು ಅರಿವಿನ ಹರವನ್ನು ವೃದ್ಧಿಸುತ್ತದೆ ಆದರೆ ಅಸ್ಮಿತೆಯನ್ನು ಕಂಡುಕೊಳ್ಳಲಾರದು ಎಂಬುದು ಅವರ ವ್ಯಾಖ್ಯಾನ. ನಮ್ಮ ಅನೇಕ ಕನ್ನಡ ಬರಹಗಾರರು ಪುರಾಣಗಳನ್ನು ಹೇಳುವ ಅವಸರದಲ್ಲಿ ಘಟನಾ ಸಾಹಿತ್ಯವನ್ನು ಮೂಲೆಗುಂಪಾಗಿಸಿದ್ದಾರೆಂದು ಡಾ.ಕಲಬುರ್ಗಿ ನುಡಿದರು.
ಉದಯೋನ್ಮುಖ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಅಕ್ಕ' ಈ ಬಾರಿ ಕಲ್ಪನಾಸಾಹಿತ್ಯದ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ನೂರೈವತ್ತು ಮಂದಿ ಯುವ ಬರಹಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆಯ್ದ ಇಪ್ಪತ್ತು ಕತೆಗಳನ್ನು ಪುಸ್ತಕರೂಪದಲ್ಲಿ ದೀಪ ತೋರಿದೆಡೆಗೆ' ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಕೃತಿಯ ಬಿಡುಗಡೆ ಇದೇ ವೇದಿಕೆಯಲ್ಲಿ ನಡೆಯಿತು. ಪುಸ್ತಕ ಬಿಡುಗಡೆ ಮಾಡಿದವರು ಮೂವತ್ತು ಮಳೆಗಾಲದ ಕವಿ ಡಾ.ಎಚ್ಚೆಸ್ವಿ.
ಕನ್ನಡ ನಾಡಿಗೆ ಇವತ್ತು ಬಂದೊದಗಿರುವ ಆಪತ್ತುಗಳನ್ನು ಡಾ.ಕಲಬುರ್ಗಿ ತಮ್ಮ ಸುದೀರ್ಘ ಭಾಷಣದಲ್ಲಿ ಪಟ್ಟಿ ಮಾಡುತ್ತ ಹೋದರು.ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡನಾಡು ಇವತ್ತು ಮೂವತ್ತು ಜಿಲ್ಲೆಗಳಿಗೆ ಸೀಮಿತವಾಗಿರುವ ದುರಂತವನ್ನು ನೆನೆದು ಕಲಬುರ್ಗಿ ವಿಷಣ್ಣರಾದರು. ಶಿವಾಜಿಯು ಕನ್ನಡ ನೆಲದ ಭೋಂಸ್ಲೆ ಮನೆತನದ ಒಬ್ಬ ಧೀರ ಎಂದು ಯಾರ ಬಳಿ ಹೇಳಲಿ? ಕಾಲಕಾಲಕ್ಕೆ ಕನ್ನಡ ನಾಡಿನ ಇತಿಹಾಸಗಳನ್ನು ದಾಖಲಿಸುವಲ್ಲಿ ಕನ್ನಡ ಬರಹಗಾರರು ಆಸ್ಥೆ ವಹಿಸಿದ್ದರೆ ಇಂಥ ಗೋಜಲುಗಳನ್ನು ನಾವು ನೋಡಬೇಕಾಗಿರಲಿಲ್ಲ. ಇತಿಹಾಸ ಬರೆಯುವ ಮಹತ್ವವನ್ನು ಕನ್ನಡಿಗರು ಮನಗಾಣದೆ ಇರುವುದು ವಿಷಾದಕರ ಎಂದು ಕಲಬುರ್ಗಿ ಹೇಳಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಚ್ಚೆಸ್ವಿ, ಕಿವಿ ಮತ್ತು ಕಣ್ಣುಗಳನ್ನು ತಲುಪುವ ಮನರಂಜನೆಯೇ ಇಂದು ಪ್ರಾಧಾನ್ಯ ಗಳಿಸಿಕೊಂಡಿದೆ, ಹಾಗಾಗಿ ಅಕ್ಷರ ಮಾಧ್ಯಮ ಕಡೆಗಣಿತವಾಗಿದೆ ಎಂದು ಹೇಳಿದರು. ಅಂತರಂಗವನ್ನು, ಅಂತಃಸತ್ವವನ್ನು ಮತ್ತು ಮಣ್ಣಿನ ವಾಸನೆಯನ್ನು ಹೀರಿಕೊಂಡು ಸೃಷ್ಟಿಯಾದ ಸಾಹಿತ್ಯ ಜಾಗತಿಕ ಸಾಹಿತ್ಯವಾಗುತ್ತದೆಯೇ ಹೊರತು ಜಾಗತಿಕ ಭಾಷೆಯಲ್ಲಿ ಬರೆದ ಮಾತ್ರಕ್ಕೆ ಕೃತಿಯೊಂದು ಉತ್ಕೃಷ್ಟವಾಗುವುದಿಲ್ಲ ಎನ್ನುವುದು ಅವರ ಅಭಿಪ್ರಾಯದ ಸಾರವಾಗಿತ್ತು.
ಗೋಷ್ಠಿಯಲ್ಲಿ ಬಂಡಾಯದ ಧ್ವನಿ ಮುಡ್ನಾಕೂಡು ಚಿನ್ನಸ್ವಾಮಿ, ಗೋಪಿ ಮತ್ತು ಗಾಂಡಲೀನ ಕವಿತೆಯ ಬಿ.ಆರ್.ಲಕ್ಷ್ಮಣ ರಾವ್, ಹೊಸಗಾಲದ ಮಾಂತ್ರಿಕ ಜೋಗಿ, ಜಿ.ವಿ.ಕುಲಕರ್ಣಿ ಮತ್ತು ಮೈ.ಶ್ರೀ.ನಟರಾಜ ಉಪಸ್ಥಿತರಿದ್ದರು. ಎಚ್.ವೈ.ರಾಜಗೋಪಾಲ್ ಅವರು ಗೋಷ್ಠಿಯನ್ನು ನಿರ್ವಹಿಸಿ ವಂದಿಸಿದರು.
ಅಕ್ಕ ವಿಶ್ವ ಕನ್ನಡ ಸಮ್ಮೇಳನ : 3ನೇ ದಿನದ ಚಿತ್ರಗಳು












Click it and Unblock the Notifications