ಅಕ್ಕ ತಾರಾಮೇಳಕ್ಕೆ ಚಿತ್ರ ಕಲಾವಿದರ ಹಿಂಡು

ಗಾಂಧೀನಗರದಿಂದ ಅಮೆರಿಕಾ ಕನ್ನಡಿಗರ ಸಮ್ಮಿಲನಕ್ಕೆ ತೆರಳುತ್ತಿರುವ ಈ 27 ಕನ್ನಡ ಚಿತ್ರ ಕರ್ಮಿಗಳು ತಮ್ಮ ಸ್ವಂತ ಖರ್ಚುವೆಚ್ಚದಲ್ಲೇ ಭಾಗವಹಿಸಲು ಮುಂದಾಗಿರುವುದು ಗಮನಾರ್ಹ ಸಂಗತಿ ಎಂದು ಅಕ್ಕ ಟ್ರಸ್ಟಿ ಅಮರ್ ನಾಥ್ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ಹೊರಗೆಡವಿದ ಅವರು, ಭರ್ಜರಿ ತಾರಾ ಮೇಳದಲ್ಲಿ ನಟ ನಟಿಯರಿಂದ ನೃತ್ಯದ ಜತೆಗೆ ಹಾಡುಗಳು ಇರುತ್ತವೆ ಎಂದರು. ಅಕ್ಕ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಆಗಿರುವ ಪುನೀತ್ ರಾಜ್ ಕುಮಾರ್, ವಿಜಯ ರಾಘವೇಂದ್ರ, ರಮ್ಯಾ, ಐಂದ್ರಿತಾ ರೇ, ಅಂಬರೀಷ್, ಜಗ್ಗೇಶ್, ಕೋಮಲ್, ಬಿ ಸರೋಜಾದೇವಿ, ರಘು ದೀಕ್ಷಿತ್ ಸೇರಿದಂತೆ ಹಲವರು ಕಲಾವಿದರು ತಾರಾ ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಅಂದು ರಾತ್ರಿ 2 ಗಂಟೆ ತನಕ ಸಾಗುತ್ತದೆ ಎಂದು ಗೌಡರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಟ ವಿಜಯ ರಾಘವೇಂದ್ರ ಹಾಗೂ ಚಿತ್ರನಟಿ ಐಂದ್ರಿತಾ ರೇ ಉಪಸ್ಥಿತರಿದ್ದರು. ವಿಜಯ ರಾಘವೇಂದ್ರ ಮಾತನಾಡುತ್ತಾ, ಭರ್ಜರಿ ತಾರಾ ಮೇಳದ ಮನರಂಜನೆ ಕಾರ್ಯಕ್ರಮಕ್ಕೆ ತಾವು ಈಗಾಗಲೆ ರೂಪರೇಷೆಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದೇನೆ ಎಂದರು. ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಮಾತನಾಡುತ್ತಾ, "ಇದೇ ಪ್ರಥಮ ಬಾರಿಗೆ ಅಮೆರಿಕಾಗೆ ಹೋಗುತ್ತಿದ್ದೇನೆ. ನನ್ನ ಬಳಿ ಆರು ತಿಂಗಳ ಕಾಲವಧಿಯ ವೀಸಾ ಇದೆ. ಅಮೆರಿಕಾದಲ್ಲಿ ಡ್ಯಾನ್ಸ್ ಮಾಡುತ್ತೇನೆ" ಎಂದರು. ತಾರಾಮೇಳವಲ್ಲದೆ ಮೂರು ದಿನಗಳ ಕಾರ್ಯಕ್ರಮಗಳನ್ನು ಜೀ ಕನ್ನಡ ವಾಹಿನಿ ಇಡಿಯಾಗಿ ಸೆರೆಹಿಡಿಯಲಿದ್ದು ಅದನ್ನು ತನ್ನ ವಾಹಿನಿಯಲ್ಲಿ ಸಮ್ಮೇಳನದ ನಂತರ ಪ್ರಸಾರ ಮಾಡಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಕ್ಕ ನಿರ್ದೇಶಕ ಹಳೇಕೋಟೆ ವಿಶ್ವಾಮಿತ್ರ, ಅಕ್ಕ ಜಂಟಿ ಕಾರ್ಯದರ್ಶಿ ಯಮುನಾ, ಸಮ್ಮೇಳನದ ಅತಿಥಿ ಸತ್ಕಾರ ಸಮಿತಿಯ ಮುಂದಾಳು ಶರತ್ ಭಂಡಾರಿ, ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆ ವ್ಯವಸ್ಥಾಪಕ ಹರೀಶ್ ನಾಯ್ಡು ಹಾಗೂ ಅಕ್ಕ ಭಾರತೀಯ ಸಂಯೋಜನಾಧಿಕಾರಿ ಲಕ್ಷ್ಮೀನಾರಾಯಣ್ ,ಈ ಸಂಜೆ ನಾಗರಾಜ್, ರಾಘವೇಂದ್ರ ರಾಜು, ನಾಗರಾಜ ರೆಡ್ಡಿ, ವೈ.ಕೆ.ಮುದ್ದುಕೃಷ್ಣ, ಲಹರಿ ವೇಲು ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications