• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಾರಿ 4 ದಿನಗಳ ಅಕ್ಕ ಸಮ್ಮೇಳನ?

By * ಶಾಮ್
|
ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮತ್ತು ನ್ಯೂ ಜೆರ್ಸಿಯಲ್ಲಿ 2010ರ ಸೆಪ್ಟೆಂಬರ್ ನಲ್ಲಿ ಜರಗುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸಲಹೆಗಾರ ಅಮರ್ ನಾಥ್ ಗೌಡ ಅವರೊಂದಿಗೆ ದಟ್ಸ್ ಕನ್ನಡ ಬೆಂಗಳೂರಿನಲ್ಲಿ ನಡೆಸಿದ ಸಂದರ್ಶನದ ಆಯ್ದ ಭಾಗ.

ದಟ್ಸ್ ಕನ್ನಡ : ಐದಾಯಿತು, ಆರನೆ ಸಮ್ಮೇಳನದ ವಿಶೇಷ ಎನು?

ಅಮರ್ ನಾಥ್ ಗೌಡ : ಕನ್ನಡ ಕುಟುಂಬಗಳು ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ನ್ಯೂ ಜೆರ್ಸಿ ಪ್ರಾಂತ್ಯದ ಆಯ್ಕೆಯೇ ವಿಶೇಷ. ನ್ಯೂ ಯಾರ್ಕ್, ವಾಷಿಂಗ್ ಟನ್, ಡೆಲವೇರ್, ಮೇರಿಲ್ಯಾಂಡ್ , ಕನೆಕ್ಟಿಕಟ್ , ಪೆನ್ಸಿಲ್ ವೇನಿಯಾ ಮುಂತಾದ ನೆರೆಹೊರೆಯ ರಾಜ್ಯಗಳಿಗೆಲ್ಲ ನ್ಯೂಜೆರ್ಸಿ ಕೇಂದ್ರಸ್ಥಾನ, ಅವರಿಗೆಲ್ಲ ತುಂಬಾ ಸಮೀಪ, ಅಬ್ಬಬ್ಬಾ ಎಂದರೆ ಕಾರಿನಲ್ಲಿ ಎರಡರಿಂದ ಮೂರು ಗಂಟೆ ಪ್ರಯಾಣ, ಅಷ್ಟೆ. ಈ ಭಾಗದ ಕನ್ನಡಿಗರಿಗೆ ಸಮ್ಮೇಳನಕ್ಕಾಗಿ ವಿಮಾನಯಾನದ ಅಗತ್ಯವಿಲ್ಲ.

ದಟ್ಸ್ ಕನ್ನಡ : ಎಷ್ಟು ಮಂದಿ ಪ್ರತಿನಿಧಿಗಳನ್ನು ನಿರೀಕ್ಷಿಸುತ್ತೀರಿ?

ಅಮರ್ ನಾಥ್ ಗೌಡ : ಎಂಟರಿಂದ ಹತ್ತು ಸಾವಿರ. ನಾವು ಆಯ್ದುಕೊಂಡಿರುವ ಹೊಟೇಲು ಅತ್ಯುತ್ತಮ. ಕಳೆದ ವರ್ಷ ಇದೇ ಹೊಟೇಲಿನಲ್ಲಿ ಗುಜರಾತಿ ಸಮ್ಮೇಳನ ನಡೆಯಿತು. 15,000 ಜನಕ್ಕೆ ವ್ಯವಸ್ಥೆ ಮಾಡಿದ್ದರು. ಬಾಲ್ಟಿಮೋರಿನಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಉಂಟಾದ ವೇದಿಕೆ ಒಂದು ಕಡೆ, ಊಟ ಒಂದು ಕಡೆ, ವಸತಿ ಒಂದು ಕಡೆ ಎನ್ನುವಂಥ ಸ್ಥಿತಿ ಇಲ್ಲಿ ನಿರ್ಮಾಣವಾಗುವುದಿಲ್ಲ.

ದಟ್ಸ್ ಕನ್ನಡ : ಪ್ರತಿನಿಧಿ ಶುಲ್ಕ ಎಷ್ಟು?

ಅಮರ್ ನಾಥ್ ಗೌಡ : ಮೊದಲು ಬಂದವರಿಗೆ 125 ಡಾಲರು. ಇದೇ ಜನವರಿ 1ನೇ ತಾರೀಖಿನಿಂದ ಆನ್ ಲೈನ್ ನೊಂದಾವಣೆ ಆರಂಭ. ಬೇಗಬೇಗನೆ ನೊಂದಾವಣೆ ಮಾಡಿಕೊಳ್ಳುವವರಿಗೆ ಈ ಬಾರಿ ಚಕಿತಗೊಳಿಸುವ ಆಕರ್ಷಕ ಬಳುವಳಿಗಳಿವೆ. ತ್ವರೆಮಾಡಿದವರಿಗೆ ಮಾತ್ರ! ಸುಸೂತ್ರ ಬುಕ್ಕಿಂಗುಗಳಿಗಾಗಿ ಒಂದನೇ ತಾರೀಕು ಅಕ್ಕ ವೆಬ್ ಸೈಟು ನೋಡಿ.

ದಟ್ಸ್ ಕನ್ನಡ : ಅಮೆರಿಕಾದ ಎಕಾನಮಿ ಹೇಗಿದೆ ಈಗ?

ಅಮರ್ ನಾಥ್ ಗೌಡ : ಹಾಗೇ ಇದೆ. ಚೇತರಿಕೆಗೆ ಇನ್ನೂ ಕಾಲ ಬೇಕು. ಕಾರ್ಮಿಕ ಇಲಾಖೆಯ ವರದಿ ಪ್ರಕಾರ ಈ ಸಾಲಿನ ಕೊನೆ ತ್ರೈಮಾಸಿಕ ವರದಿಯಲ್ಲಿ ನಿರುದ್ಯೋಗದ ಪ್ರಮಾಣ ಇನ್ನಷ್ಟು ಕುಸಿದಿಲ್ಲ ಎಂದು ಹೇಳಲಾಗಿದೆ. ಅದೇ ಸಮಾಧಾನದ ವಿಷಯ. ಇನ್ನು ಆರು ತಿಂಗಳು ಕಳೆಯಲಿ. ಉದ್ಯೋಗ, ಆರ್ಥಿಕ ಗತಿ ಏರುಮುಖವಾಗುವುದೆಂಬ ನಿರೀಕ್ಷೆ ಇದೆ. ಕಾಯಬೇಕು. No way.

ದಟ್ಸ್ ಕನ್ನಡ : ಕರ್ನಾಟಕದಿಂದ ಗಣ್ಯರನ್ನು ಆಹ್ವಾನಿಸುವ ಮಾನದಂಡ ಯಾವುದು ಅಮರ್ ನಾಥ್?

ಅಮರ್ ನಾಥ್ ಗೌಡ : ಇದಕ್ಕೆ ನಾಲಕ್ಕು ವಿಭಾಗಗಳಿವೆ. ಗಣ್ಯ ಅತಿಥಿಗಳಲ್ಲಿ ಒಬ್ಬರನ್ನಾಗಿ ಬೈ ಡಿಫಾಲ್ಟ್ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಿಸುವ 20 ಅಥವಾ 25 ಮಂದಿ ಕವಿ ಕಲಾವಿದರ ತಂಡ ಎಂದಿನಂತೆ ಇರುತ್ತದೆ. ಈ ತಂಡದ ಆಯ್ಕೆ ಮತ್ತು ಖರ್ಚು ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ. ಆಶಯ ಭಾಷಣ ಮಾಡುವುದಕ್ಕೆ ಮತ್ತು ಸಮ್ಮೇಳನದ ಮುಖ್ಯ ಆಕರ್ಷಣೆಯಾಗಿ ಒಬ್ಬಿಬ್ಬರು ಗಣ್ಯ ವ್ಯಕ್ತಿಗಳನ್ನು ಅಕ್ಕ ಖುದ್ದಾಗಿ ಆಹ್ವಾನಿಸುತ್ತದೆ. ಇತರ ಅನೇಕ ಗಣ್ಯರು, ಕವಿ, ಕಲಾವಿದರು, ಗಾಯಕ ಗಾಯಕಿಯರು ನಟರು ಆಗಮಿಸುತ್ತಾರೆ. ಈ ನಾಲಕ್ಕನೇ ಪಟ್ಟಿಯಲ್ಲಿರುವವರ ಪ್ರವಾಸ ಮತ್ತು ಪಾಲ್ಗೊಳ್ಳುವಿಕೆಯನ್ನು ಅವರವರ ಅಭಿಮಾನಿಗಳು ಅಥವಾ ಗುಂಪುಗಳು ವಹಿಸಿಕೊಳ್ಳುತ್ತವೆ. ಎಲ್ಲರೂ ಸಮ್ಮೇಳನದ ಅಕ್ಕರೆಯ ಅತಿಥಿಗಳಾದರೂ ವಿಭಾಗಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ, ಹೊಂದಿಕೊಳ್ಳಬೇಕಾಗುತ್ತದೆ.

ದಟ್ಸ್ ಕನ್ನಡ : ಕರ್ನಾಟಕದಲ್ಲಿ ಅಕ್ಕ ಕಚೇರಿ ಎಲ್ಲಿದೆ, ಈ ಬಾರಿ ಸಮ್ಮೇಳನದ ಭಾರತೀಯ ಸಂಯೋಜಕರಾರು?

ಅಮರ್ ನಾಥ್ ಗೌಡ : ಈ ಉದ್ದೇಶಕ್ಕಾಗಿಯೇ ಬೆಂಗಳೂರಿನಲ್ಲಿ 30 ಜನರ ಒಂದು ಪ್ರಮುಖ ಸಮಿತಿ ಮತ್ತು ಉಪ ಸಮಿತಿ ರಚನೆಯಾಗುತ್ತಿದೆ. ಕಚೇರಿ ವಿಳಾಸ ಕೆಲಕಾಲ ನಂತರ ಪ್ರಕಟಿಸಲಾಗುತ್ತದೆ. ಮುಖ್ಯ ಸಂಯೋಜಕರು ಉದ್ಯಮಿ ಲಕ್ಷ್ಮಿನಾರಾಯಣ. ಸ್ಮರಣ ಸಂಚಿಕೆ, ಕವಿ ಕಲಾವಿದರ ವಿಭಾಗ, ಸಚಿವ ರಾಜಕಾರಣಿ, ಉದ್ಯಮಿ ವಿಭಾಗ, ಪ್ರದರ್ಶನ ಮಳಿಗೆ ಮಾರಾಟ, ಮಠಾಧೀಶರು ಧಾರ್ಮಿಕ ಮುಖಂಡರ ವಿಭಾಗ, ಜಾಹೀರಾತು ಸಂಗ್ರಹಣೆ ವಿಭಾಗ ಹೀಗೆ ನಾನಾ ಸಮಿತಿಗಳಿರುತ್ತವೆ. ಭಾರತದಿಂದ ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರತಿನಿಧಿ, ಆಮಂತ್ರಿತರ ವೀಸಾ, ಪ್ರವಾಸ ಕಾರ್ಯಕ್ರಮದ ಸಂಯೋಜನೆ, ಅತಿಥಿ ಸತ್ಕಾರ ವಿಚಾರಗಳನ್ನು ಆಯಾ ಸಮಿತಿ ನೋಡಿಕೊಳ್ಳುತ್ತದೆ. ಗೊಂದಲಕ್ಕೆ ಅವಕಾಶ ಇರಬಾರದು ಎಂಬುದೇ ಉದ್ದಿಶ್ಯ.

ದಟ್ಸ್ ಕನ್ನಡ : ಮುಖ್ಯ ಅತಿಥಿಗಳು ಯಾರೆಂಬುದು ನಿಷ್ಕರ್ಷೆ ಆಯ್ತಾ?

ಅಮರ್ ನಾಥ್ ಗೌಡ : ಇನ್ನೂ ಪಕ್ಕಾ ಆಗಿಲ್ಲ. ಸುಧಾ ಮೂರ್ತಿ ಅವರನ್ನು ಆಹ್ವಾನಿಸುವ ಇಚ್ಛೆ ಇದೆ. ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಬರುತ್ತಾರೆ. ಹೆಸರುಗಳು ಕ್ರಮೇಣ ನಿರ್ಧಾರ ಆಗುತ್ತದೆ. ಸಂಬಂಧ ಪಟ್ಟ ಸಮಿತಿಗಳ ಜತೆಗೆ ಪರ್ಯಾಲೋಚನೆ ಆದನಂತರ ಹೆಸರುಗಳು ಹೊರಬೀಳುತ್ತವೆ.

ದಟ್ಸ್ ಕನ್ನಡ : ಕನ್ನಡ ಸಮ್ಮೇಳನ ಪ್ರತಿನಿಧಿಗಳಿಗೆ ನಿಮ್ಮ ಸಂದೇಶ ಏನು?

ಅಮರ್ ನಾಥ್ ಗೌಡ : ಕನ್ನಡವನ್ನು ಹೆಚ್ಚಾಗಿ ಬಳಸಿರಿ. ಕನ್ನಡದಲ್ಲಿ ಹೆಚ್ಚು ವ್ಯವಹರಿಸಿ. ಕನ್ನಡದಲ್ಲೆ ಶುಭಾಶಯ ವಿನಿಮಯ ಮಾಡಿಕೊಳ್ಳಿ. ಸಮ್ಮೇಳನದಲ್ಲಂತೂ ಸಮಸ್ತವೂ ಕನ್ನಡಲ್ಲೇ ಇದ್ದರೆ ಅದಕ್ಕಿಂತ ಹೆಚ್ಚಿಗೆ ಇನ್ನೇನನ್ನೂ ನಾನು ಅಪೇಕ್ಷಿಸುವುದಿಲ್ಲ. ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ನಿರೂಪಕರು, ಪ್ರಕಟಣೆ ಹೊರಡಿಸುವವರು, ಸ್ವಾಗತಿಸುವವರು ಪ್ರತಿಯೊಬ್ಬರಿಗೂ ಈ ಕರೆ ಅನ್ವಯಿಸುತ್ತದೆ. ಎಳೆಯ ಮಕ್ಕಳಿಗೆ ಇದು ಮಾದರಿಯಾಗುತ್ತದೆ, ನಿಸ್ಸಂಶಯ.

ದಟ್ಸ್ ಕನ್ನಡ : ಸಸ್ಯಾಹಾರ, ಮಾಂಸಾಹಾರ ಊಟದ ಬಗ್ಗೆ ಕೆಲವು ಜಿಜ್ಞಾಸೆಗಳಿವೆ ಎಂದು ಕೇಳಿಪಟ್ಟೆವು.

ಅಮರ್ ನಾಥ್ ಗೌಡ : ಎರಡೂ ಇರತ್ತೆ, ಈಗ ಬಹುತೇಕ ಕನ್ನಡಿಗರು ಫ್ಲೆಕ್ಸಿಬಲ್ ಆಗಿದ್ದಾರೆ. ಅಜ್ಜಿ ತಾತ ಸಸ್ಯಾಹಾರಿಗಳಾಗಿದ್ದ ಮಾತ್ರಕ್ಕೆ ಮಕ್ಕಳು ಮೊಮ್ಮಕ್ಕಳು ಸಸ್ಯಾಹಾರಿಗಳಾಗಿ ಇರಬೇಕೆಂಬ ನಿಯಮವಿಲ್ಲ. ಎರಡೂ ವಿಭಾಗದವರಿಗೆ ಒಪ್ಪುವ ಭಕ್ಷ್ಯ ಭೋಜ್ಯಗಳು ಎಂದಿನಂತೆ ತಯಾರಿಸಲಾಗುತ್ತದೆ, ಚಿಂತೆಬೇಡ.

ದಟ್ಸ್ ಕನ್ನಡ : ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ವೈವಿಧ್ಯ ಇರತ್ತೋ ಅಥವಾ ಎಂದಿನಂತೆ ಇರತ್ತೋ?

ಅಮರ್ ನಾಥ್ ಗೌಡ : ವೈವಿಧ್ಯಕ್ಕೆ ಕಾದು ನೋಡಿ. ಕಾರ್ಯಕ್ರಮಗಳ ಪಟ್ಟಿ ಪ್ರತಿಬಾರಿ ಉದ್ದವಾಗಿರುವುದರಿಂದ ಈ ಬಾರಿ ಸಮ್ಮೇಳನವನ್ನು ನಾಲಕ್ಕು ದಿವಸ ಇಟ್ಟುಕೊಳ್ಳುವ ಒಂದು ಆಲೋಚನೆಯೂ ಇದೆ. ಸಮ್ಮೇಳನವನ್ನು ಗುರುವಾರವೇ ಆರಂಭಿಸಬೇಕೆನ್ನುವುದು ಚಿಂತನೆ. ಆ ದಿವಸ ಪೂರ್ತಿ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮೀಸಲಿಡುವುದು. ಅವತ್ತೆಲ್ಲ ವೇದಾಂತಿ, ಮಠಾದೀಶ, ಗುರು, ಋಷಿಗಳಿಂದ ಪ್ರವಚನ, ಧ್ಯಾನ ಶಿಬಿರ ಮೊದಲಾದ ಕಾರ್ಯಕ್ರಮಗಳ ಸರಮಾಲೆ ಸೃಷ್ಟಿಸುವ ಇಚ್ಛೆ ಇದೆ. ಅಕ್ಕ ಸಮ್ಮೇಳನ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಿರ್ಧಾರವನ್ನು ನಿಮಗೆ ತಿಳಿಸಲಾಗುವುದು. ಧನ್ಯವಾದ.

ನ್ಯೂ ಜರ್ಸಿ ಅಕ್ಕ ಸಮ್ಮೇಳನದ ಮುನ್ನಾ ನೋಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more