ಶಿಕಾಗೊ ಸಮ್ಮೇಳನದ ಸಾಹಿತ್ಯ ಸಂಪದ
'ಆವರಣ' ಕಾದಂಬರಿ ಕುರಿತ ಕೆಲವು ಪ್ರಶ್ನೆಗಳು ತಮ್ಮನ್ನು ಕೆಣಕುವಂತೆ ಬಂದೆರಗಿದರೂ ವಿಚಲಿತರಾಗದ ಭೈರಪ್ಪನವರು, ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿ, ಆಧಾರ ಸಹಿತ ಉತ್ತರಿಸಿದರು. ಭೈರಪ್ಪನವರು ನಗುವುದೇ ಅಪರೂಪ ಎಂಬ ಆರೋಪಕ್ಕೆ ಉತ್ತರವೆನ್ನುವಂತೆ, ಕೆಲವು ಪ್ರಶ್ನೆಗಳಿಗೆ ಭೈರಪ್ಪನವರ ನಗುವೇ ಉತ್ತರವಾಯಿತು.
ಲೇಖನ : ತ್ರಿವೇಣಿ ಶ್ರೀನಿವಾಸರಾವ್, ಶಿಕಾಗೊ
ಶಿಕಾಗೊದಲ್ಲಿ ಅಕ್ಕ ಸಮ್ಮೇಳನದಲ್ಲಿ ಮೂರು ದಿನ ತುಂಬಿ ಹರಿದ ಮನರಂಜನಾ ಕಾರ್ಯಕ್ರಮಗಳ ಪ್ರವಾಹದ ನಡುವೆ, ಸಾಹಿತ್ಯವೂ ಕಿರುದೋಣಿಯ ಮೇಲೆ ಹಿತವಾಗಿ ತೇಲಿತು. ಆಗಸ್ಟ್ 31ರ ಭಾನುವಾರ ಮುಖ್ಯ ವೇದಿಕೆಯ ಮೇಲೆ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಎಸ್. ಎಲ್. ಭೈರಪ್ಪ, ಕುಂ. ವೀರಭದ್ರಪ್ಪ, ಜಯಂತ್ ಕಾಯ್ಕಿಣಿ, ಗುರುಲಿಂಗ ಕಾಪಸೆ, ಮಹೇಶಪ್ಪನವರಿಂದ ವಿವಿಧ ಪುಸ್ತಕ ಮತ್ತು ಧ್ವನಿಸಂಪುಟಗಳ ಬಿಡುಗಡೆ ಕಾರ್ಯಕ್ರಮವಿತ್ತು, "ಸಾಹಿತಿಗಳಿಂದ ಸಂದೇಶ" ಕಾರ್ಯಕ್ರಮದಲ್ಲಿ ಈ ಎಲ್ಲಾ ಸಾಹಿತಿಗಳು ಅನಿವಾಸಿ ಕನ್ನಡಿಗರನ್ನುದ್ದೇಶಿಸಿ ಮಾತನಾಡಿದರು.
ಸಮಾನಂತರ ವೇದಿಕೆಗಳಲ್ಲಿಯೂ ಹಲವಾರು ಸಾಹಿತ್ಯ ಕಾರ್ಯಕ್ರಮಗಳು ನಡೆದವು. ಮುಖ್ಯ ವೇದಿಕೆಯಲ್ಲಿದ್ದ ನೃತ್ಯ, ನಾಟಕ, ಆರ್ಕೆಸ್ಟ್ರಾ ಕಾರ್ಯಕ್ರಮಗಳಿಗಿದ್ದಂತೆ, ತುಂಬಿ, ಮೊರೆಯುವ ಜನಸಾಗರ ಇಲ್ಲಿರದಿದ್ದರೂ, ಕೋಣೆ ತುಂಬುವಷ್ಟು ಸಾಹಿತ್ಯಾಸಕ್ತರು ಭಾಷಣ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಆಗಸ್ಟ್ 30, ಸಮ್ಮೇಳನದ ಎರಡನೆಯ ದಿನ ಡಾ. ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕವಿ/ಕವಿಯಿತ್ರಿಯರು ತಮ್ಮ ಕವಿತೆಗಳನ್ನು ಓದಿದರು. ಕೊನೆಯಲ್ಲಿ ಕಂಬಾರರು ತಮ್ಮ ಕವಿತೆಗಳನ್ನು ವಾಚಿಸಿದರು. ಜೀವಿ ಕುಲಕರ್ಣಿ, ದೇಶಪಾಂಡೆ ಸುಬ್ಬರಾವ್, ಜಿ.ವಿ. ರೇಣುಕ, ಲೀಲಾ ಪ್ರಕಾಶ್, ಸರೋಜ ಕೃಷ್ಣಮೂರ್ತಿ, ರಾಮಚಂದ್ರ ಹೆಗ್ಡೆ, ಎಂ. ಎಸ್. ನಟರಾಜ್, ನಳಿನಿ ಮೈಯ, ತ್ರಿವೇಣಿ ಶ್ರೀನಿವಾಸರಾವ್, ಅಲಮೇಲು ಅಯ್ಯಂಗಾರ್, ಸಂಧ್ಯಾ ರವೀಂದ್ರನಾಥ್ ಮುಂತಾದ ನಿವಾಸಿ/ಅನಿವಾಸಿ ಕವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಕವಿತೆಗಳು ನಗೆ ಬುಗ್ಗೆ ಎಬ್ಬಿಸಿದರೆ, ಮತ್ತೆ ಕೆಲವು ಗಂಭೀರ ವಿಷಯಗಳ ಮೇಲೆ ಕ್ಷ-ಕಿರಣ ಹಾಯಿಸಿದವು.
ಅದೇ ದಿನ ಭೈರಪ್ಪನವರೊಡನೆ ಮುಕ್ತ ಸಂವಾದವಿತ್ತು. ಈ ಕಾರ್ಯಕ್ರಮದಲ್ಲಿ ಭೈರಪ್ಪನವರಿಗೆ ಪ್ರಶ್ನೆ ಕೇಳಲು ಸಭಿಕರ ನಡುವೆ ಪೈಪೋಟಿಯೇ ಏರ್ಪಟ್ಟಿತ್ತು. ಬಹುಪಾಲು ಪ್ರಶ್ನೆಗಳು ಭೈರಪ್ಪನವರ ಇತ್ತೀಚಿನ ಕಾದಂಬರಿ "ಆವರಣ" ಕುರಿತೇ ಇದ್ದುದೊಂದು ವಿಶೇಷ. ಕೆಲವು ಪ್ರಶ್ನೆಗಳು ತಮ್ಮನ್ನು ಕೆಣಕುವಂತೆ ಬಂದೆರಗಿದರೂ ವಿಚಲಿತರಾಗದ ಭೈರಪ್ಪನವರು, ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾಗಿ, ಆಧಾರ ಸಹಿತ ಉತ್ತರಿಸಿದರು. ಭೈರಪ್ಪನವರು ನಗುವುದೇ ಅಪರೂಪ ಎಂಬ ಆರೋಪಕ್ಕೆ ಉತ್ತರವೆನ್ನುವಂತೆ, ಕೆಲವು ಪ್ರಶ್ನೆಗಳಿಗೆ ಭೈರಪ್ಪನವರ ನಗುವೇ ಉತ್ತರವಾಯಿತು.
"ಪತ್ರಿಕೆಗಳಲ್ಲಿ "ಆವರಣ" ಕುರಿತ ವಿವಾದವೆದ್ದಾಗ ನೀವೇಕೋ ದಿವ್ಯ ಮೌನತಾಳಿಬಿಟ್ಟಿರಿ, ಆಗ ಕೆಲವರು ಬರೆದಂತೆ ನೀವು ಆ ವಿವಾದಗಳನ್ನು ನೋಡಿ ಮಜಾ ತೆಗೆದುಕೊಳ್ತಾ ಇದ್ರಾ? ಬೇಸರಗೊಂಡಿದ್ರಾ? ಕೋಪಿಸಿಕೊಂಡಿದ್ರಾ? ಪ್ರಾಮಾಣಿಕವಾಗಿ ಹೇಳಿ, ಸಾರ್" ಎಂಬ ಮಹಿಳಾ ಸಭಿಕರೊಬ್ಬರ ಪ್ರಶ್ನೆಗೆ ಭೈರಪ್ಪನವರು ನಗುತ್ತಾ- "ನನಗೆ ಬೇಸರವೂ ಆಗಿರಲಿಲ್ಲ, ಕೋಪವೂ ಇರಲಿಲ್ಲ, ಎಲ್ಲವನ್ನೂ ವಾಚ್ ಮಾಡುತ್ತಿದ್ದೆ ಅಷ್ಟೆ" - ಎಂದು ಕೂಲಾಗಿ ಉತ್ತರಿಸಿದರು. ಸಂವಾದ ಕಾರ್ಯಕ್ರಮ ಮುಗಿದ ನಂತರವೂ ಕೆಲವು ಓದುಗರು ಭೈರಪ್ಪನವರನ್ನು ಮುತ್ತಿಕೊಂಡು, ಅವರಿಗೆ ಪ್ರಶ್ನೆಗಳನ್ನು ಕೇಳಿ, ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದ ದೃಶ್ಯ ಭೈರಪ್ಪನವರ ಜನಪ್ರಿಯತೆಗೆ ಹಿಡಿದ ಕನ್ನಡಿಯಂತಿತ್ತು.
ಸಮ್ಮೇಳನದ ಕೊನೆಯ ದಿನವಾದ ಆಗಸ್ಟ್ 31ರಂದು "ಕನ್ನಡದ ಮೇಲೆ ಜಾಗತೀಕರಣದ ಪ್ರಭಾವ" ಎಂಬ ವಿಚಾರ ಸಂಕಿರಣವಿತ್ತು. ಗುರುಲಿಂಗ ಕಾಪಸೆ, ಕೆ. ಪಿ. ಪುತ್ತೂರಾಯರು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಡಾ. ಚಂದ್ರಶೇಖರ ಕಂಬಾರರು ಈ ಕಾರ್ಯಕ್ರಮದ ನಿರ್ವಾಹಕರಾಗಿದ್ದರು. ಕುಂ. ವೀರಭದ್ರಪ್ಪನವರು ಈ ಸಂಕಿರಣದಲ್ಲಿ ಪಾಲ್ಗೊಳ್ಳಬೇಕಿದ್ದು, ಬಹುಶಃ ಸಮಯ, ಸ್ಥಳವನ್ನು ತಿಳಿಯುವಲ್ಲಿ ಕುಂವೀ ಅವರಿಗೆ ಗೊಂದಲವಾಗಿ, ಅವರು ಈ ವಿಚಾರ ಸಂಕಿರಣದಲ್ಲಿ ಹಾಜರಿರಲಿಲ್ಲ.
"ಪುಸ್ತಕ ಪರಿಚಯ" ಕಾರ್ಯಕ್ರಮ ಜಯಂತ್ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. 2007-2008ರ ವರ್ಷದಲ್ಲಿ ನಡೆದ ಪುಸ್ತಕ, ಧ್ವನಿ ಸುರುಳಿ ಕುರುತ ಸಮಾಚಾರಗಳನ್ನು ಈ ಕಾರ್ಯಕ್ರಮದಲ್ಲಿ ವಿವರವಾಗಿ ಪರಿಚಯಿಸಲಾಯಿತು. "ಕರ್ನಾಟಕ ಭಾಗವತ" (ಹೊಳಲ್ಕೆರೆ ಚಂದ್ರಶೇಖರ್), "ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ಅನ್ ಟೋಲ್ಡ್ ಸ್ಟೋರಿ ಆಫ್ ಒಡೆಯರ್ಸ್" (ವಿಕ್ರಮ್ ಸಂಪತ್), "ಸಂಚಿ" (ಕೇಳು ಪುಸ್ತಕ ಜಿ.ವಿ. ರೇಣುಕ ), ಬಿಳಿಯ ಚಾದರ (ಗುರುಪ್ರಸಾದ್ ಕಾಗಿನೆಲೆ), ತುಳಸಿವನ (ತ್ರಿವೇಣಿ ಶ್ರೀನಿವಾಸರಾವ್), ವಿಚಿತ್ರಾನ್ನ ಅವಳಿ ಪುಸ್ತಕಗಳು (ಶ್ರೀವತ್ಸ ಜೋಶಿ), ಸುಶ್ರುತ ನಡೆದ ಹಾದಿಯಲ್ಲಿ (ಎಚ್. ಕೆ. ನಂಜುಂಡಸ್ವಾಮಿ) , ಮಾಯಾವಿ ಸರೋವರ (ಅನುವಾದ: ಎಂ. ಎಸ್. ನಟರಾಜ್, ನಗೆಗನ್ನಡಂ ಗೆಲ್ಗೆ, ಭಾವ ತರಂಗ (ನಾಗಭೂಷಣ್ ಮುಲ್ಕಿ), ಸುಂದರಕಾಂಡ ರಾಮಾಯಣ (ಧ್ವನಿ ಸಂಪುಟ - ಅನುವಾದ : ಎಂ. ಎಸ್. ನಟರಾಜ್) ಕೃತಿಗಳ ಕಿರು ಪರಿಚಯವಿತ್ತು.
ಕೊನೆಯಲ್ಲಿ ಮಾತನಾಡಿದ ಜಯಂತ್ ಕಾಯ್ಕಿಣಿಯವರು "ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪುಸ್ತಕಗಳ ಅಗತ್ಯ" ಎಂಬ ವಿಷಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪುಸ್ತಕಗಳ ಅಗತ್ಯ ಎಂದೆಂದಿಗೂ ಖಂಡಿತವಾಗಿ ಇದೆ ಎಂದು ಪ್ರತಿಪಾದಿಸಿದ ಜಯಂತ್ "ಪ್ರಯಾಣದ ನಡುವೆ ಪ್ರಯಾಣಿಕರು ಆಗಾಗ ಜೇಬು ತಡವಿ ಪರ್ಸ್ ಇರುವುದನ್ನು ಖಾತರಿ ಪಡಿಸಿಕೊಳ್ಳುವಂತೆ, ಲೇಖಕರೂ ಕೂಡ ಬರವಣಿಗೆಯ ನಡುನಡುವೆ ಆಗಾಗ "ನಾನೇಕೆ ಬರೆಯುತ್ತಿದ್ದೇನೆ? ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಿರಬೇಕು ಎಂದು ಮಾರ್ಮಿಕವಾಗಿ ನುಡಿದರು. ಸೂಕ್ಷ್ಮ ಸಂವೇದನೆಗಳನ್ನು ನವಿರು ಭಾಷೆಯಲ್ಲಿ ಹಿಡಿದಿಡಬಲ್ಲ ಜಯಂತ್ ಮಾತಿನ ಮೋಡಿಗೆ ಅಂದು ತಲೆದೂಗದವರಿಲ್ಲ.
ಪುಸ್ತಕ ಪರಿಚಯದ ನಂತರ, ಪ್ರೊಫೆಸರ್. ಪಿ. ಕೆ. ರಾಜಶೇಖರ್ ಅವರಿಂದ "ಜನಪದ ಸಾಹಿತ್ಯ" ಮತ್ತು ಕೆ. ಪಿ. ಪುತ್ತೂರಾಯರಿಂದ "ಕನ್ನಡ ನಾಡು ನುಡಿ ನಮನ" ಉಪನ್ಯಾಸಗಳೊಂದಿಗೆ ಅಕ್ಕ ಸಮ್ಮೇಳನದ ಸಾಹಿತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡವು.
ಸಮ್ಮೇಳನದ ಗ್ಯಾಲರಿ
ಮೊದಲ ದಿನಕ್ಕೇ ರಂಗೆದ್ದು ಹೋದ ಶಿಕಾಗೊ
ಎರಡನೇ ದಿನದಂದು ಸಂಭ್ರಮದ ರಥಯಾತ್ರೆ
ಎರಡನೇ ದಿನದ ಮತ್ತಷ್ಟು ಚಿತ್ರಗಳು
ಮೂರನೇ ದಿನ ಕನ್ನಡಿಗರ ಉತ್ಸಾಹ ನೂರ್ಮಡಿ












Click it and Unblock the Notifications