ಸಂಭ್ರಮದ ರಥೋತ್ಸವ,ತವರುಮನೆ ಊಟ

ದಿನ 2 : ಶನಿವಾರ 30 ಆಗಸ್ಟ್ 2008. ಸಮ್ಮೇಳನ ಮಿಂಚು-ಮಿಣುಕು

ವರದಿ: ಶ್ರೀವತ್ಸ ಜೋಶಿ;ಕ್ಯಾಂಪ್ : ವಿಶ್ವಕನ್ನಡ ಸಮ್ಮೇಳನ ನಗರ ಶಿಕಾಗೊ

5th AKKA Convention : Day 2 highlights*"ಅಕ್ಕ" ಸಮ್ಮೇಳನದ ಎರಡನೆಯ ದಿನ, ಶನಿವಾರದಂದು ಬೆಳಗಿನ ಕಾರ್ಯಕ್ರಮಗಳು ಆರಂಭವಾದದ್ದೇ ಭವ್ಯವಾದ ಮೆರವಣಿಗೆಯಿಂದ. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿರುವ ವಿವಿಧ ಪ್ರದೇಶಗಳ ಕನ್ನಡ ಕೂಟಗಳು ತಂಡತಂಡಗಳಾಗಿ ಳವಾದ್ಯ, ವೇಷಭೂಷಣ, ನೃತ್ಯನಟನೆಗಳೊಂದಿಗೆ ಸಮ್ಮೇಳನಸೌಧದ ಹೊರಾಂಗಣದಿಂದ ಆರಂಭಿಸಿ ಮುಖ್ಯವೇದಿಕೆಯವರೆಗೂ ಸಾಗಿಬಂದ ಮೆರವಣಿಗೆ ಕಣ್ಮನ ತಣಿಸುವಂತಿತ್ತು. ಹೆಚ್ಚಿನ ಎಲ್ಲ ಕೂಟಗಳೂ ಅತ್ಯುತ್ಸಾಹದಿಂದ ಭಾಗವಹಿಸಿ ನಿಜಕ್ಕೂ ಸಮ್ಮೇಳನದ ಭಾವೈಕ್ಯವನ್ನು ಬಿಂಬಿಸಿದ ಕಾರ್ಯಕ್ರಮವಿದೆಂದರೆ ತಪ್ಪಾಗಲಾರದು. ಸ್ತಬ್ಧಚಿತ್ರಗಳ ಮೂಲಕ, ಉಡುಗೆತೊಡುಗೆಗಳ ಮೂಲಕ ಕರ್ನಾಟಕದ ಇತಿಹಾಸ, ಪರಂಪರೆ, ಆಚಾರವಿಚಾರಗಳನ್ನು ವೈವಿಧ್ಯಮಯವಾಗಿ ಪ್ರದರ್ಶಿಸಿದ ಎಲ್ಲ ತಂಡಗಳೂ ಏಕಪ್ರಕಾರವಾಗಿ ಮೆಚ್ಚುಗೆಗೆ ಪಾತ್ರವಾದುವು.

* ಮೆರವಣಿಗೆಯಲ್ಲಿ ತಂತಮ್ಮ ತಂಡದ ಥೀಮ್‌ಗೆ ತಕ್ಕಂತೆ ಧ್ವನಿಮುದ್ರಿತ ಹಾಡು/ಸಂಗೀತ ಬೇಕಲ್ಲ? ಅದಕ್ಕೆ ಯಾರಾದರೊಬ್ಬರು ಕ್ಯಾಸೆಟ್‌ಪ್ಲೇಯರ್ ಅಥವಾ ಸಿ.ಡಿ ಪ್ಲೇಯರ್‌ಅನ್ನು ಕೈಯಲ್ಲಿ ಹಿಡಕೊಂಡು ನಡೆಯಬೇಕು. ಒಂದು ತಂಡದವರು ಅದಕ್ಕೊಂದು ಸುಲಭವಾದ ಉಪಾಯ ಮಾಡಿದ್ದರು. ಮಗುವನ್ನಿಡುವ ಸ್ಟ್ರೋಲರ್‌ನಲ್ಲಿ ಸಿ.ಡಿ ಪ್ಲೇಯರನ್ನಿಟ್ಟು ದೂಡಿಕೊಂಡು ಹೋಗುತ್ತಿದ್ದರು!

* ಬೆಳಿಗ್ಗೆ ಹತ್ತೂವರೆಯಿಂದ ಹನ್ನೆರಡೂವರೆತನಕ ಒಂದು ಕವಿಗೋಷ್ಠಿ, ಸಮ್ಮೇಳನಸೌಧದಲ್ಲೇ ಪ್ರತ್ಯೇಕವಾದ ಒಂದು ಕೊಠಡಿಯಲ್ಲಿ. ಅಲ್ಲಿ ಕನಿಷ್ಠ ನೂರಾದರೂ ಕಿವಿಗಳು ಕವಿಗಳ(ಕೊರೆತವ)ನ್ನು ಕೇಳಲು ಹಾತೊರೆದಿದ್ದವು. ಕೆಲವು ಕವಿತೆಗಳು ಮೋಜಿನದಾಗಿದ್ದರೆ ಇನ್ನು ಕೆಲವು ಗಂಭೀರವಾದವೂ ಇದ್ದುವು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ|ಚಂದ್ರಶೇಖರ ಕಂಬಾರ ಅವರು ಕೊನೆಯಲ್ಲಿ ಮಾತಾಡಿದರು, ಒಂದು ಕವಿತೆಯನ್ನೂ ವಾಚಿಸಿದರು.

* ಅದೇ ಕೊಠಡಿಯಲ್ಲಿ ಅಪರಾಹ್ನ ಒಂದೂವರೆಯಿಂದ ಮೂರುವರೆತನಕ ಡಾ|ಎಸ್.ಎಲ್ ಭೈರಪ್ಪ ಅವರೊಂದಿಗೆ ಸಂವಾದ. ಆಗಂತೂ ಆ ಕೊಠಡಿ ಕಿಕ್ಕಿರಿದು ತುಂಬಿದ್ದು ಕೆಲವರು ನಿಂತುಕೊಂಡೇ ಭೈರಪ್ಪನವರ ಮಾತುಗಳನ್ನಾಲಿಸಿದರು. ಪ್ರಶ್ನೋತ್ತರ ರೂಪದ ಆ ಕಾರ್ಯಕ್ರಮದಲ್ಲಿ ಜಾಸ್ತಿ ಕೇಳಲ್ಪಟ್ಟ ಪ್ರಶ್ನೆಗಳೆಂದರೆ, ನಿರೀಕ್ಷೆಯಂತೆಯೇ, "ಆವರಣ" ಕಾದಂಬರಿ ಕುರಿತು. ಆ ಕಾದಂಬರಿ ಬರೆಯಲು ಏನು ಸ್ಫೂರ್ತಿ ಅಥವಾ ಕಾರಣ ಎಂಬ ಪ್ರಶ್ನೆಗೆ ಭೈರಪ್ಪನವರು ಪ್ರಶ್ನೆಯನ್ನೇ ತಿದ್ದಿ ಅದು ಸ್ಫೂರ್ತಿಯಲ್ಲ, ಪ್ರಚೋದನೆ ಎಂದುಹೇಳಿ ನಿಜಕ್ಕೂಏನು ಪ್ರಚೋದನೆ ಎಂಬುದನ್ನು ಮುಚ್ಚುಮರೆಯಿಲ್ಲದೆ ತಮ್ಮ ಎಂದಿನ ಸ್ಪಷ್ಟನುಡಿಗಳ ಶೈಲಿಯಲ್ಲಿ ಉತ್ತರಿಸಿದರು.

ಒಂದೆರಡು ಸ್ಯಾಂಪಲ್- “ ನಾನು activist ಅಲ್ಲ, ಆದರೆ activity ಅನ್ನೋದು ನನ್ನ ಮೆದುಳಿನಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ...", "ಚರಿತ್ರೆಯನ್ನಾಧರಿಸಿದ ಕಾದಂಬರಿ ಬರೆಯುವಾಗ ಹಿಸ್ಟರಿಯನ್ನೂ ತೋರಿಸಬೇಕು, ಹಿಸ್ತೋರಿಯನ್ಸ್ ಅದನ್ನು ಹೇಗೆ ಚಿತ್ತ್ರಿಸಿದ್ದಾರೆ ಎಂಬುದನ್ನೂ ತಿಳಿಸಬೇಕು. ಆವರಣ ಬರೆಯುವಾಗ ನನ್ನಲ್ಲಿದ ಉದ್ದೇಶಗಳು ಅವೆರಡು. ಸತತ ಅಧ್ಯಯನದ ನಂತರವೇ ಅದನ್ನು ಬರೆದದ್ದು. ಯಾರೂ ಇದರ ಬಗ್ಗೆ ಮಾತಾಡದಂತೆ ಬಾಯ್ಮುಚ್ಚಿಸುವಂತಿರಬೇಕು ಎಂದು ವಿಶೇಷವಾದ ಟೆಕ್ನಿಕ್‌ಅನ್ನು ಬಳಸಿದ್ದು...."

* ಸಾಹಿತ್ಯದ ಕಾರ್ಯಕ್ರಮಗಳಂತೆ ಇತರ ಕೆಲ ಸಮಾಂತರ ಗೋಷ್ಠಿಗಳಾದ ಮಹಿಳಾವೇದಿಕೆ, ಯುವವೇದಿಕೆ, ವೈವಾಹಿಕ ಸ್ನೇಹಮಿಲನ, ಆಧ್ಯಾತ್ಮಶಿಬಿರ ಮುಂತಾದುವೂ ತುಂಬಿದ ಸಭಾಗೃಹಗಳಲ್ಲಿ ನಡೆಯುತ್ತಿದ್ದ ದೃಶ್ಯ ಅಯೋಜಕರಿಗೂ, ಕಾರ್ಯಕ್ರಮ ಪ್ರಸ್ತುತಪಡಿಸುವವರಿಗೂ, ಸಭಿಕರಿಗೂ ಖುಶಿಕೊಡುವಂತಿತ್ತು.

* ಶನಿವಾರದ ದಿನ ಮುಖ್ಯವೇದಿಕೆಯಲ್ಲೂ ಕೆಲವು ಅದ್ಭುತವಾದ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ಬೆಂಗಳೂರಿನ ರಮಣಶ್ರೀ ಅಂಧ ವಿಧ್ಯಾರ್ಥಿಗಳ ಭರತನಾಟ್ಯ ಅದ್ಭುತವಷ್ಟೇ ಅಲ್ಲ, ಹೃದಯಸ್ಪರ್ಶಿಯೂ ಆಗಿತ್ತೆನ್ನುವುದು ತುಂಬಾ ಮಂದಿ ಸಭಿಕರು ವ್ಯಕ್ತಪಡಿಸಿದ ಅಭಿಪ್ರಾಯ.. ಬೆಂಗಳೂರಿನ ಬೆನಕ ತಂಡ (ಟಿ,ಎಸ್, ನಾಗಾಭರಣ ಮತ್ತು ಬಳಗ) ಮತ್ತು ಕ್ಯಾಲಿಫೋರ್ನಿಯಾದ ರಂಗಧ್ವನಿ ತಂಡ (ವಲ್ಲೀಶ ಶಾಸ್ತ್ರಿ ಮತ್ತು ಬಳಗ) ಸಂಯುಕ್ತವಾಗಿ ಪ್ರದರ್ಶಿಸಿದ ಜೋಕುಮಾರಸ್ವಾಮಿ ನಾಟಕ, ದಿನದ ಒಂದು ಹೈಲೈಟ್. ಅದಕ್ಕೆ ಸರಿಸಮವೆನಿಸುವಷ್ಟು ಚಂದವಾಗಿ ಮೂಡಿಬಂದ ಇನ್ನೊಂದು ನಾಟಕವೆಂದರೆ "ಮಾಯಾವಿ ಸರೋವರ" (ವಾಷಿಂಗ್ಟನ್ ಡಿಸಿಯ ಕಾವೇರಿ ಸಂಘದ ಪ್ರಸ್ತುತಿ).

* ತಂಡ ಇಳಿಯಿತು ಚಿಕಾಗೊದಲ್ಲಿ, ಚಂಡೆ ಉಳಿಯಿತು ಲಂಡನ್‌ನಲ್ಲಿ! ಇದು ಭಾರತದಿಂದ ಲಂಡನ್‌ಗಾಗಿ ಶಿಕಾಗೊಕ್ಕೆ ಬಂದಿರುವ ಯಕ್ಷಗಾನ ತಂಡದ (ಎಸ್.ಎನ್.ಪಂಜಾಜೆಯವರ ನೇತೃತ್ವ) ಸದ್ಯದ ಪರಿಸ್ಥಿತಿ. ಇದೇ ಮೊದಲಬಾರಿಗೆ ಅಮೆರಿಕದಲ್ಲಿ ಯಕ್ಷಗಾನವನ್ನು ನೈಜ ಹಿಮ್ಮೇಳದೊಂದಿಗೆ (ಅಂದರೆ ಧ್ವನಿಮುದ್ರಿತವಾಗಿರದೆ) ಪ್ರಸ್ತುತಪಡಿಸಬೇಕೆಂದಿರುವ ಅವರ ಉಮೇಧಿಗೆ ತೊಡಕಾಗಿರುವುದು, ಯಕ್ಷಗಾನಕ್ಕೆ ಅಬ್ಬರವನ್ನು ತರುವ "ಚಂಡೆ"ಯು ವಿಮಾನಯಾನದವರ ಪ್ರಮಾದದಿಂದಾಗಿ ಲಂಡನ್‌ನಲ್ಲೇ ಉಳಿದಿರುವುದರಿಂದ. ಅದನ್ನು ಶನಿವಾರ ಸಂಜೆಯೊಳಗೆ ಶಿಕಾಗೊ ತಲುಪಿಸುವ ಭರವಸೆಯನ್ನೇನೊ ಏರ್‌ಲೈನ್ಸ್ ಕೊಟ್ಟಿದೆ. ಆದರೆ ಶನಿವಾರ ಮಧ್ಯಾಹ್ನ ಪ್ರಸ್ತುತಗೊಳ್ಳಬೇಕಿದ್ದ "ನರಕಾಸುರ ವಧೆ" ರವಿವಾರಕ್ಕೆ ಮುಂದೂಡಲ್ಪಟ್ಟಿದೆ. ಅಂದರೆ ನರಕಾಸುರನಿಗೆ ಒಂದು ದಿನದ ಜೀವದಾನ!

* "ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕ ಶಾಸ್ತ್ರ್ತ್ರೀಯ ಸಂಗೀತ ಕಛೇರಿಗಳಿಗೆ ಮುಖ್ಯವೇದಿಕೆ ಸಿಗುವುದು ತುಂಬ ಕಷ್ಟ. ಆದರೆ ಈಸಲ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ವಯಲಿನ್ ಕಛೇರಿ ಶನಿವಾರ ಸಂಜೆ ಮುಖ್ಯ ವೇದಿಕೆಯ ಮೇಲೆ, ತುಂಬಿದ ಸಭಾಂಗಣದಲ್ಲಿ ಅಗ್ದೀ ಎಲೆಕ್ಟ್ರಿಫೈಯಿಂಗ್ ಆಗಿತ್ತು. “ಭುವನೇಶ್ವರಿಯಾ ನೆನೆ ಮಾನಸವೆ..." ಕೃತಿಯೊಂದಿಗೆ ಕಛೇರಿ ಆರಂಭವಾದಾಗಲೇ ರೋಮಾಂಚನಗೊಂಡ ಶ್ರೋತೃಗಳಿಗೆ ಆಮೇಲೆ ಮೈಸೂರ್ ಸೋದರರು ಕರ್ನಾಟಕ ಶೈಲಿಯಲ್ಲಿ ಕನ್ನಡ ಕೃತಿಗಳನ್ನೇ ಆಯ್ತು (ನಾರಾಯಣಾ ನಿನ್ನ, ಬಾರೋ ಕೃಷ್ನಯ್ಯ, ಜಗದೋದ್ಧಾರನ, ತಂಬೂರಿ ಮೀಟಿದವ) ನುಡಿಸಿದ್ದರಿಂದ ವಿಶೇಷ ರಸಾನುಭವ!

* ಪ್ರೊ|ಕೃಷ್ಣೇಗೌಡರ ಹಾಸ್ಯಲೋಕ ಕಾರ್ಯಕ್ರಮವಿರೋದು ಭಾನುವಾರ. ಆದರೆ ಪಬ್ಲಿಕ್‌ಡಿಮಾಂಡ್‌ನಿಂದಾಗಿ ಶನಿವಾರವೂ 20 ನಿಮಿಷಗಳ ಕಾಲ ಮುಖ್ಯವೇದಿಕೆಯಲ್ಲಿ ಕೃಷ್ಣೇಗೌಡರಿಂದ ಕಚಗುಳಿಯಿಡುವ ಕಾಲಕ್ಷೇಪ. ಐಶ್ವರ್ಯಾರೈ ಹೆಸರಿಗೆ ಅಳವಡಿಸಿದ ಮಹಿಷಾಸುರ ಮರ್ದಿನಿ ಸ್ತ್ರೋತ್ರರೂಪ, ಮತ್ತೆ ಅವರ ವೃತ್ತಿಸಂಬಂಧಿ ಜೋಕುಗಳನ್ನವರು ಕೊಚ್ಚಿದಾಗ ನಗೆಗಡಲ ಅಲೆಗಳಲ್ಲಿ ಕೊಚ್ಚಿಹೋದವರು ಸಭಾಂಗಣ ತುಂಬೆಲ್ಲ ಇದ್ದ ಸಭಿಕರು.

* ಕರ್ನಾಟಕದಿಂದ ಬಂದಿರುವ ಶಾಸಕರ ಪೈಕಿ ಕೆಲವರು ಸಮ್ಮೇಳನ ಕಾರ್ಯಕ್ರಮಗಳಲ್ಲಿ ಅಷ್ಟೇನೂ ತೊಡಗಿಸಿಕೊಳ್ಳದೆ ಅಲ್ಲಲ್ಲಿ ಅಡ್ಡಾಡುತ್ತಿರಬಹುದಾದರೂ ಎಲ್ಲರೂ ಹಾಗೆಯೇ ಎಂದು ಹೇಳಿದರೆ ತಪ್ಪಾಗುತ್ತದೆ. ಏಕೆಂದರೆ ಶನಿವಾರದ ಕಾರ್ಯಕ್ರಮಗಳಲ್ಲಿ ಭೈರಪ್ಪ ಸಂವಾದ ಕಾರ್ಯಕ್ರಮದಲ್ಲಿ ಒಂದಿಬ್ಬರು ಶಾಸಕರು ಆಸಕ್ತ ಸಭಿಕರಾಗಿ ಬಂದು ಕುಳಿತಿದ್ದರು. ಇನ್ನು ಒಬ್ಬಿಬ್ಬರು ಜೋಕುಮಾರಸ್ವಾಮಿ ನಾಟಕವನ್ನು ನೋಡಿ ಆನಂದಿಸಿ ಚಪ್ಪಾಳೆತಟ್ಟಿದ್ದರು. ಮತ್ತೆ ಒಬ್ಬಿಬ್ಬರು ವಯಲಿನ್ ಕ್ಲಾಸಿಕಲ್ ಮ್ಯುಸಿಕ್ ಕೇಳುತ್ತ ತಲೆದೂಗಿದ್ದರು! ಹಾಗಾಗಿ ಎಲ್ಲರೂ "ರಿಪೇರಿಯಾಗದಷ್ಟು ಕೆಟ್ಟಿದ್ದಾರೆ" ಎನ್ನುವ ಕುಹಕಬೇಡ. ಸಹೃದಯರಾದ, ಕಲಾಭಿಮಾನಿಗಳಾದ ಶಾಸಕರೂ ಇದ್ದಾರೆ. 20 ಜನ ಬಂದವರಲ್ಲಿ ಅಂಥವರ ಸಂಖ್ಯೆ ಬರೀ 3 ಅಥವಾ 4 ಇರಬಹುದು ಎಂಬ ಅಂಶವನ್ನು ಸದ್ಯಕ್ಕೆ ಆಚೆಗಿಡೋಣ. ಇವರೇ ಶಾಸಕರಿರಬೇಕು ಎಂದು ಅಷ್ಟುದೊಡ್ಡ ಕ್ರೌಡಿನಲ್ಲಿ ಗುರುತುಹಚ್ಚುವುದಕ್ಕೆ ಸಮಯ ಬೇಕು ಅಲ್ಲವೆ? ಒಂದು ಸಿದ್ಧಸೂತ್ರವೆಂದರೆ ಮೊನ್ನೆತಾನೆ ರಕ್ಷಾಬಂಧನ"ವಾಗಿರೋದ್ರಿಂದ ಈಗ(ಆಡಳಿತ ಪಕ್ಷದ) ಶಾಸಕರ ಕೈಗೆ ಕೇಸರಿಬಣ್ಣದ "ರಕ್ಷೆ" ಇರುತ್ತದೆ. ಹೆಚ್ಚಾಗಿ ಎಲ್ಲ ಶಾಸಕರೂ ರಾಜಕೀಯ ಯುನಿಫಾರ್ಮ್ ಆಗಿ ಖಾದಿ ಬಟ್ಟೆ ತೊಟ್ಟಿರುತ್ತಾರೆ.

* ಸಮ್ಮೇಳನದಲ್ಲಿ ಭೋಜನಶಾಲೆಯ ಡಿಪಾರ್ಟ್‌ಮೆಂಟ್ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಶನಿವಾರ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ಕೇಸರಿಭಾತುಗಳಿದ್ದರೆ ಮಧ್ಯಾಹ್ನದೂಟಕ್ಕೆ ಆಂಬೊಡೆ, ಪುಳಿಯೊಗರೆ, ಚಪಾತಿ, ಗೊಜ್ಜು, ಮೊಸರನ್ನ, ಉಪ್ಪಿನಕಾಯಿ, ಜಹಾಂಗೀರ್. ರಾತ್ರೆಯೂಟಕ್ಕೆ ಎರಡೆರಡು ಸಿಹಿ- ಒಬ್ಬಟ್ಟು ಮತ್ತು ಗಜ್ಜರಿ ಹಲ್ವಾ. ಹಬ್ಬದೂಟ ಸವಿಯುತ್ತ ಇಬ್ಬರು ಕನ್ನಡತಿಯರು ಆಡಿಕೊಂಡದ್ದೇನು ಗೊತ್ತಾ, "ಏನ್ ಚೆನ್ನಾಗಿದೆ, ತವರುಮನೆಗೆ ಹೋಗಿ ಊಟಮಾಡಿದಂತಿದೆ ಅಲ್ವಾ?"

* ಐದು ಸಾವಿರ ತಿರುಪತಿ ಲಡ್ಡು ಬಂದಿವೆ ಎಂದು ಇಷ್ಟೆಲ್ಲ ಪ್ರಚಾರವಾದ ಮೇಲೆ ನೈಜ ಸಂಗತಿಯೇನೆಂದರೆ ಸಮ್ಮೇಳನಾರ್ಥಿಗಳಿಗೆ ವಿತರಣೆಗೆ ಬಂದಿದ್ದು ತಿರುಪತಿ ಲಡ್ಡು ಅಲ್ಲ, ಬದಲಿಗೆ ಬೆಂಗಳೂರಿನಿಂದ ನಮ್ಮ "ಮಾವಳ್ಳಿ ಟಿಫಿನ್ ರೂಮ್"ನಿಂದ ಸ್ವೀಟ್ ಪ್ಯಾಕೆಟ್. ಶುಕ್ರವಾರದಂದು ವೇದಿಕೆಯ ಮೇಲೆ ಸಾಂಕೇತಿಕವಾಗಿ ರಾರಾಜಿಸಿದ್ದು ಮಾತ್ರ ಅಧಿಕೃತ ತಿರುಪತಿ ಲಡ್ಡು.

* ಶನಿವಾರ ಉಪ್ಪಿದಾದ ಸಹ ತನ್ನ ಸಂಗಾತಿ ಪ್ರಿಯಾಂಕಾಳೊಂದಿಗೆ ಸಮ್ಮೇಳನ ಸಭಾಂಗಣಕ್ಕೆ ಆಗಮಿಸಿದ್ದಾನೆ. ಗುರುಕಿರಣ್, ರಮೇಶ್ ಮೊದಲಾದ ತಾರೆಗಳು ಶುಕ್ರವಾರವೇ ಗೋಚರಿಸಿದ್ದವು. ಗುರುಕಿರಣ್ ನೈಟ್ ಕಾರ್ಯಕ್ರಮವಿರುವುದು ಶನಿವಾರ ರಾತ್ರಿ ಭೋಜನಾನಂತರದ ಮುಖ್ಯ್ರ ಕಾರ್ಯಕ್ರಮವಾಗಿ. ಉಪ್ಪಿಯೊಂದಿಗೆ ಫೊಟೊ ತೆಗೆಸಿಕೊಳ್ಳುವವರ, ಹಸ್ತಾಕ್ಷರ ಪಡೆದುಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿತ್ತು. ಅಮೆರಿಕೆಗೆ ಬಂದು ದಶಕಗಳೇ ಸಂದಿರುವ ಕನ್ನಡಿಗ ಹಿರಿತಲೆಗಳಿಗೆ ಮಾತ್ರ ಈ ಉಪ್ಪ್ಪಿ ವಿಚಿತ್ರಜೀವಿಯಂತೆ ಕಂಡುಬಂದಿರಬಹುದು. ಒಬ್ಬ ಅಮೆರಿಕನ್ನಡತಿ ಇನ್ನೊಬ್ಬರಿಗೆ "ಅವನು ಈಗಿನ ಹೊಸ ಫಿಲಂ ಸ್ಟಾರ್ ಆಂತೆ..." ಎಂದು ಉಪ್ಪಿ ಬಗ್ಗೆ ಹೇಳುತ್ತಿದ್ದರು.

* ಸಮ್ಮೇಳನ ಸೌಧದಲ್ಲೆ ಒಂದು ವಿಶಾಲವಾದ ಹಾಲ್‌ನಲ್ಲಿ ವಸ್ತುಪ್ರದರ್ಶನ/ಮಾರಾಟ ಮಳಿಗೆಗಳಿವೆ. ಅದಕ್ಕೆ ಕೆಂಪೇಗೌಡ ಮಾರುಕಟ್ಟೆ ಎಂದು ಹೆಸರು. ಎಂದಿನ ಸಂಪ್ರದಾಯದಂತೆಯೇ, ಮಾರುಕಟ್ಟೆಯಲ್ಲಿ ಹೆಚ್ಚು ಜನಜಂಗುಳಿ ಕಂಡುಬಂದಿರುವುದು ಒಡವೆಯಂಗಡಿಗಳ ಮುಂದೆ, ತಪ್ಪಿದರೆ ಸೀರೆಯಂಗಡಿಯ ಮುಂದೆ ಮಾತ್ರ. ಉಳಿದ ಬೂತ್‌ಗಳೆಲ್ಲ ಭಣಭಣ ಎನ್ನುತ್ತಿವೆ. ಪುಸ್ತಕದಂಗಡಿಯದಂತೂ ಸುದ್ದಿ ಕೇಳಬೇಡ್! ಟೊಟಲ್.ಕಾಂ ನ ಲಕ್ಷ್ಮೀಕಾಂತ್ ಅವರು ಸಮ್ಮೇಳನ ಸಂದರ್ಭಕ್ಕಾಗಿಯೇ ಭಾರತದಿಂದ ಶಿಕಾಗೊಕ್ಕೆ ಬಂದಿದ್ದಾರೆ, ಅವರ ಅಂಗಡೀಯ ನೂರಾರು ಕನ್ನಡ ಐಟಂ(ಕ್ಯಾಸೆಟ್, ಸಿಡಿ, ಪುಸ್ತಕ ಇತ್ಯಾದಿ)ಗಳನ್ನು ತಂದು ಇಲ್ಲಿ ಬೂತ್ ಸ್ಥಾಪಿಸಿದ್ದಾರೆ.

* ಮೈಸೂರುಪೇಟ, ಜುಬ್ಬಾ,-ಶೇರವಾನಿ ಧರಿಸಿದ ಪುರುಷರು, ವರ್ಣವೈವಿದ್ಧ್ಯದ ಸಕಲಸಾಧ್ಯತೆಗಳನ್ನೂ ದಾಟಿರುವ ವರ್ಣಮಯ ಉಡುಪುಗಳ ನಾರೀಮಣಿಯರು... ಸಮ್ಮೇಳನ ಕಕ್ಷೆ ಮಾತ್ರವಲ್ಲ, ವಸತಿವ್ಯವಸ್ಥಗಾಗಿ ಪಕ್ಕದಲ್ಲೇ ಇರುವ ಹೊಟೆಲ್‌ಗಳ ಕಾರಿಡಾರ್‌ಗಳಲ್ಲೆಲ್ಲ ನಾವಾಡುವ ನುಡಿಯೇ ಕನ್ನಡ ನುಡಿ..

* ಕಾರಿಡಾರ್ ಎಂದಾಗ ನೆನಪಾಯ್ತು, ಬೆಂಗಳೂರು-ಮೈಸೂರ್ ನೈಸ್ ಕಾರಿಡಾರ್‍ ಯೋಜನೆಯ ಅಶೋಕ್ ಖೇಣಿ ಸಹ ಸಮ್ಮೇಳನಕ್ಕೆ ಬಂದಿದ್ದಾರೆ. ಅವರ ಸುತ್ತಮುತ್ತ ಯಾವಾಗಲೂ ಯಾರಾದರೊಬ್ಬ ಶಾಸಕರೋ ಇತರ ವಿ.ಐ.ಪಿಯೋ ಇದ್ದೇಇರುತ್ತಾರೆ. ಖೇಣಿ ಮಹಾಶಯರು ಬಹುಶಃ "ಎ ನೈಸ್ ಜೆಂಟಲ್‍ಮ್ಯಾನ್ ಟು ಟಾಕ್ ಟು". ಅದಕ್ಕೇ ಅವರ ಸುತ್ತ ಜನ.

* ರವಿವಾರ ಸಮ್ಮೇಳನದ ಮೂರನೆಯ ಮತ್ತು ಕೊನೆಯ ದಿನ. ಕನ್ನಡ ನುಡಿಹಬ್ಬದಲ್ಲಿ ಕನ್ನಡದುಡುಗೆ ಉಟ್ಟ ಕನ್ನಡದೂಟ ಉಂಡ ಸಂತೃಪ್ತಿ ಮೂಡತೊಡಗಿ ಇನ್ನು ವಿದಾಯಸಲ್ಲಿಕೆಯ ಕ್ಷಣಗಣನೆ ಆರಂಭವಾಗುತ್ತದೆ. ಆದರೆ ಹಬ್ಬ ಮುಗಿದಾಗ ಕನ್ನಡವೂ ಮುಗೀತು ಎಂದರೆ ಸರಿಹೋಗದು. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹಾಡಿ, ಉಸಿರಿರುವತನಕವೂ ಕನ್ನಡ ಎಂದು ಹೇಳಿಕೊಡಲಿಕ್ಕಿದ್ದಾರೆ ಅಶ್ವಥ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+