ಕನ್ನಡ ಕಾದಂಬರಿ ಸ್ಪರ್ಧೆ
ಅಮೆರಿಕ ಕನ್ನಡ ಕೂಟಗಳ ಆಗರ ‘ಅಕ್ಕ’ ಮತ್ತು ವಾಷಿಂಗ್ಟನ್ ಡಿಸಿ ಮೆಟ್ರೊ ಪ್ರದೇಶದ ‘ಕಾವೇರಿ’ ಕನ್ನಡ ಸಂಘದ ಸಹಯೋಗದಲ್ಲಿ ನಾಲ್ಕನೇ ‘ಅಕ್ಕ ವಿಶ್ವಕನ್ನಡ ಸಮ್ಮೇಳನ’ವು 2006ರ ಸೆಪ್ಟೆಂಬರ್ 1,2 ಮತ್ತು 3 ರಂದು ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯವು ಸುವರ್ಣ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರೆಲ್ಲ ಸೇರಿ ಕರ್ನಾಟಕ-ಕನ್ನಡ ವೈಭವವನ್ನು ಸಾರುವ ಈ ಬೃಹತ್ ಉತ್ಸವವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆ ಅಭಿಮಾನದ ಪ್ರತೀಕ.
ಸಮ್ಮೇಳನದ ಅಂಗವಾಗಿ ಸ್ಮರಣಸಂಚಿಕೆಯೊಂದನ್ನು ಹೊರತರಲು ಈಗಾಗಲೇ ಸಮಿತಿಯ ರಚನೆಯಾಗಿದೆ. ಸ್ಮರಣ ಸಂಚಿಕೆಯ ಜತೆಗೆ ಒಂದು ಕನ್ನಡ ಕಾದಂಬರಿಯನ್ನು ಪ್ರಕಟಿಸುವ ಉದ್ದೇಶ ಸಮ್ಮೇಳನ ಸಮಿತಿಗಿದೆ. ಈ ನಿಟ್ಟಿನಲ್ಲಿ, ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಕಾದಂಬರಿಯನ್ನು ಆಯ್ದು ಪ್ರಕಟಿಸಿ, ಕಾದಂಬರಿಕಾರರನ್ನು ವಿಶ್ವಕನ್ನಡ ಸಮ್ಮೇಳನಕ್ಕೆ ಆಹ್ವಾನಿಸಿ ಪುರಸ್ಕರಿಸುವ ಯೋಜನೆಯಿದೆ.
ಕಾದಂಬರಿ ಸ್ಪರ್ಧೆಯ ಬಗ್ಗೆ ವಿವರಗಳು :
* ಕಾದಂಬರಿ ಕನ್ನಡದಲ್ಲಿರಬೇಕು, ಇದುವರೆಗೆ ಎಲ್ಲೂ ಯಾವ ರೂಪದಲ್ಲೂ ಪ್ರಕಟವಾಗಿರಬಾರದು.
* ಕಾದಂಬರಿಯು ಲೇಖಕರ ಚೊಚ್ಚಲ ಕೃತಿಯಾಗಿರಬೇಕು.
* ಈಗ ಭಾರತದಲ್ಲಿ ನೆಲೆಸಿರುವ ಕನ್ನಡಿಗರಷ್ಟೇ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯುತ್ತಾರೆ. (ಕನ್ನಡನಾಡಿನಲ್ಲೇ ಕನ್ನಡ ಕಾದಂಬರಿಕಾರರ ಪೀಳಿಗೆ ಕ್ಷೀಣಿಸುತ್ತಿರುವ ಆತಂಕಕಾರಿ ಬೆಳವಣಿಗೆಯ ವೇಳೆ, ಕನ್ನಡ ಕಾದಂಬರಿಲೋಕಕ್ಕೆ ಒಂದು ಅರ್ಥಪೂರ್ಣ ಆಶಾಕಿರಣ ಕಲ್ಪಿಸುವ ಏಕೈಕ ದೃಷ್ಟಿಯಿಂದ ಕಾದಂಬರಿ ಸ್ಪರ್ಧೆಗೆ ಈ ನಿಬಂಧನೆಯನ್ನು ಅಳವಡಿಸಲಾಗಿದೆ)
* ಕಾದಂಬರಿ ಸ್ವಂತದ ರಚನೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿಲ್ಲ.
* ಕಾದಂಬರಿ ಸುಮಾರು 150ರಿಂದ 200 ಪುಟಗಳ (ಡೆಮ್ಮಿ 1/8 ಪ್ರಕಟಿತ ಪುಸ್ತಕವಾದಾಗ) ಮಿತಿಯೊಳಗೆ ಇರಬೇಕು.
* ಕಾದಂಬರಿಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಟೈಪ್ ಮಾಡಿ ಅಥವಾ ಬರಹ/ನುಡಿ ತಂತ್ರಾಂಶಗಳನ್ನುಪಯೋಗಿಸಿ ಟೈಪ್ ಮಾಡಿ ಕಳಿಸಬಹುದು.
* ಸ್ಪರ್ಧೆಯಲ್ಲಿ ವಿಜೇತವಾದ ಕಾದಂಬರಿಯ ಸಾಕಷ್ಟು ಪ್ರತಿಗಳನ್ನು ಅಕ್ಕ ವಿಶ್ವಕನ್ನಡ ಸಮ್ಮೇಳನ ಸಮಿತಿಯು ಪ್ರಕಾಶಿಸುತ್ತದೆ; ಲೇಖಕರಿಗೆ 50 ಪ್ರತಿಗಳನ್ನು ಗೌರವಪೂರ್ವಕ ಒದಗಿಸಲಾಗುತ್ತದೆ.
* ಬಹುಮಾನ ವಿಜೇತ ಕಾದಂಬರಿಕಾರರಿಗೆ(ಒಬ್ಬರಿಗೆ) ಸೆಪ್ಟೆಂಬರ್ 2006ರಲ್ಲಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ ಪ್ರಾಯೋಜಿತ ಆಹ್ವಾನಪತ್ರಿಕೆಯನ್ನು ಮತ್ತು ಬೆಂಗಳೂರಿನಿಂದ ವಾಷಿಂಗ್ಟನ್‌ಗೆ ಹೋಗಿ ಬರುವ ವಿಮಾನಯಾನದ ಟಿಕೆಟನ್ನು ಮತ್ತು ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳಲು ತಗಲುವ ಶುಲ್ಕವನ್ನೂ ಸಮ್ಮೇಳನ ಸಮಿತಿಯೇ ಒದಗಿಸುತ್ತದೆ. ಪಾಸ್‌ಪೋರ್ಟ್, ವೀಸಾ ಮತ್ತಿತರ ಶಿಷ್ಟಾಚಾರಗಳನ್ನು ವಿಜೇತರೇ ವೈಯಕ್ತಿಕವಾಗಿ ವಹಿಸಿಕೊಳ್ಳಬೇಕಾಗುವುದು.
* ಸ್ಪರ್ಧೆಗೆ ಕಾದಂಬರಿಯನ್ನು ಸಲ್ಲಿಸುವಾಗ ಸ್ವಂತ-ಪರಿಚಯ ಮತ್ತು ಇತ್ತೀಚಿನ ಭಾವಚಿತ್ರದ ಒಂದು ಪ್ರತಿಯನ್ನೂ ಕಳಿಸಬೇಕು.
* ಪ್ರವೇಶಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: 15 ಏಪ್ರಿಲ್ 2006.
* ಹಸ್ತಪ್ರತಿ ಅಥವಾ ಕಂಪ್ಯೂಟರ್ ಫೈಲ್‌ಅನ್ನು ಎಲ್ಲಿಗೆ ಕಳಿಸಬೇಕು ಮತ್ತು ಈ ಸ್ಪರ್ಧೆಯ ಬಗ್ಗೆ ಇತರ ಮಾಹಿತಿಗಳೇನಾದರೂ ತಿಳಿದುಕೊಳ್ಳುವುದಿದ್ದರೆ ಸಂಪರ್ಕ ವಿಳಾಸ : [email protected]
ಸ್ಪರ್ಧೆಯ ನಿಯಮ-ನಿಬಂಧನೆ ಮತ್ತು ನಿರ್ವಹಣೆಯಲ್ಲಿ ಅಕ್ಕ-ವಿಶ್ವಕನ್ನಡಸಮ್ಮೇಳನ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
ನಿಮ್ಮ ಗಮನಕ್ಕೆ :
ವಿಜ್ಞಾನ-ತಂತ್ರಜ್ಞಾನ ಸಂಬಂಧಿ ಲೇಖನಗಳಿಗೆ ಆಹ್ವಾನ











Click it and Unblock the Notifications