ವಿಶ್ವಕನ್ನಡ ಸಮ್ಮೇಳನಕ್ಕೆ ಗುರುಕಿರಣ್ ಬರ್ತಿದ್ದಾರೆ!
* ಸಮ್ಮೇಳನದ ವಿವಿಧ ಸಮಿತಿಗಳ ಕಾರ್ಯಾಚರಣೆ ಯೋಜನೆಗಳು, ಸಭೆಗಳು, ಟೆಲಿಕಾನ್ಫರೆನ್ಸ್‌ಗಳು - ಎಲ್ಲ ಚುರುಕಾಗತೊಡಗಿದ್ದು ಇನ್ನೇನು ತೀವ್ರಗತಿಯನ್ನು ಮುಟ್ಟಲಿವೆ. ಮೊನ್ನೆ ರವಿವಾರದ (ಡಿಸೆಂಬರ್ 18) ಟೌನ್‌ಹಾಲ್ ಮೀಟಿಂಗ್ (ಮೇರಿಲ್ಯಾಂಡ್‌ನ ರಾಕ್‌ವಿಲ್‌ನಲ್ಲಿ ಪ್ರತಿ ತಿಂಗಳ ಮೂರನೆ ಭಾನುವಾರ ಸಂಚಾಲಕರು, ಕಾರ್ಯಕರ್ತರು, ಸ್ವಯಂಸೇವಕರು ಎಲ್ಲ ಸೇರಿ ಪ್ರಗತಿ/ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಭೆ)ಗಂತೂ ಬಂದಿದ್ದ ಕಾರ್ಯಕರ್ತರ ಸಂಖ್ಯೆ, ಅವರೆಲ್ಲರಲ್ಲಿದ್ದ ಉತ್ಸಾಹ-ಹುರುಪುಗಳನ್ನು ನೋಡಿದರೆ ಈ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ, ವೈಭವಯುತವಾಗಿ ನಡೆಯುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ!
* ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮರಳಿರುವ ಸಮ್ಮೇಳನ ಸಂಚಾಲಕ ರವಿ ಡಂಕಣಿಕೋಟೆಯವರು ಕರ್ನಾಟಕ ಸರಕಾರ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಸಮ್ಮೇಳನ ಪ್ರಸ್ತಾಪಕ್ಕೆ ಸಿಕ್ಕಿರುವ ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡರು. ಇನ್ನೋರ್ವ ಸಂಚಾಲಕ ಸುರೇಶ ರಾಮಚಂದ್ರನ್ ಅವರು ಬೆಂಗಳೂರಲ್ಲಿ ಇನ್ನೂ ಕೆಲ ವ್ಯಕ್ತಿ-ಸಂಸ್ಥೆಗಳಿಗೆ ಭೇಟಿ ಕೊಟ್ಟು ಕಾರ್ಯಕ್ರಮದ ರೂಪುರೇಷೆ ಹರಳುಗಟ್ಟುವಂತೆ ಮಾಡುವುದರಲ್ಲಿ ನಿರತರಾಗಿದ್ದಾರೆ.
* ಸಮ್ಮೇಳನ ರಥಕ್ಕೆ 'ಇಂಧನ"ವೊದಗಿಸಲು ಧನಸಂಗ್ರಹ ಅತಿಬಿರುಸಿನಲ್ಲಿ ನಡೆಯುತ್ತಿರುವ/ನಡೆಯಬೇಕಾಗಿರುವ ಚಟುವಟಿಕೆಗಳಲ್ಲೊಂದು. ಕನ್ನಡರತ್ನ, ಕನ್ನಡಪ್ರೇಮಿ ಇತ್ಯಾದಿ ವಿಶೇಷ ಗೌರವಗಳಿಂದ ದಾನಿಗಳನ್ನು ಗುರುತಿಸುವ ಯೋಜನೆಯಿದೆ. ಪ್ರಾಯೋಜಕರನ್ನು, ಜಾಹೀರಾತುದಾರರನ್ನು, ವಾಣಿಜ್ಯೋದ್ಯಮಿಗಳನ್ನು ಮನವೊಲಿಸುವ ಯತ್ನ ಒಂದೆಡೆಯಾದರೆ ಇಷ್ಟೊಂದು ಬೃಹತ್ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಸಂಪನ್ಮೂಲಗಳ ಅವಶ್ಯಕತೆಯನ್ನು ಮನಗಂಡು ತಾವೇ ಮುಂದಾಗಿ ಸಹಾಯಹಸ್ತ ಚಾಚುತ್ತಿರುವ ಉದಾರಿಗಳೂ ಇಲ್ಲದಿಲ್ಲ. ಮೊನ್ನೆಯ ಮೀಟಿಂಗಲ್ಲಿ ಹಾಜರಿದ್ದ ಕಾರ್ಯಕರ್ತರಿಂದಲೇ ಸುಮಾರು 17000 ಡಾಲರ್‌ಗೂ ಮಿಕ್ಕಿ ದೇಣಿಗೆಪ್ರಮಾಣವಚನ (pledges) ಬಂದಿವೆ!
* ಫ್ಯಾಷನ್ ಶೋ/ ಫ್ಯಾಶನ್ ಪೆರೇಡ್ ಸಹ ಸಮ್ಮೇಳನದ ಒಂದು ಪ್ರಮುಖ ಆಕರ್ಷಣೆಯಾಗಲಿದೆ. ಬಾಲ್ಟಿಮೋರ್ ಬಂದರುಪ್ರದೇಶದಲ್ಲಿಯೇ ಕನ್ವೆನ್ಷನ್ ಸೆಂಟರ್ ಇರುವುದರಿಂದ ಮಕ್ಕಳಿಗೆ, ಯುವಕಯುವತಿಯರಿಗೆ 'ನೌಕಾವಿಹಾರ ಭೋಜನ" (cruise dinner) ಆಯೋಜಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ!
* ಸಮ್ಮೇಳನದ ಭೋಜನವ್ಯವಸ್ಥೆಗೆ ಅಂತಿಮಸ್ವರೂಪ ಸಿದ್ಧವಾಗುತ್ತಿದ್ದು ಮೂರುದಿನಗಳ ವಿವಿಧ ಮೆನುಲಿಸ್ಟ್ ನೋಡಿದರಂತೂ ಮಾಯಾಬಜಾರ್ ಚಿತ್ರದಹಾಡು ನೆನಪಾಗಬೇಕು.
* ಸಮ್ಮೇಳನದಲ್ಲಿ ಗುರುಕಿರಣ್ ನಿರ್ದೇಶನದಲ್ಲಿ ಒಂದು ಸಂಜೆಯ ಪ್ರಮುಖ ಕಾರ್ಯಕ್ರಮವಾಗಿ ಅತ್ಯಮೋಘ ರಸಮಂಜರಿಯಿರುವುದಂತೂ ಗ್ಯಾರಂಟಿ. ಹಾಗೆಯೇ ಕಾರ್ಯಕ್ರಮ ಸಮಿತಿಯವರ ರೂಪುರೇಷೆಯಾಂದರ ಪ್ರಕಾರ ಚಲನಚಿತ್ರಗೀತೆಗಳ ಗಾಯನದ ಸ್ಪರ್ಧೆ ನಡೆಸಿ ವಿಜೇತರಿಗೆ 'ಸ್ವರ್ಣ ಕಂಠ" ಪುರಸ್ಕಾರವೀಯುವ ಯೋಜನೆಯೂ ಇದೆ, ಸುವರ್ಣ ಕರ್ನಾಟಕದ ಸಂಭ್ರಮೋತ್ಸವಕ್ಕೆ ತಕ್ಕುದಾಗಿ. ನಾಟಕಗಳು ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಂತೂ ಇದ್ದೇ ಇರುತ್ತವೆ.
* ಸಮ್ಮೇಳನದ ಸಂದರ್ಭದಲ್ಲಿ ಸ್ಮರಣಸಂಚಿಕೆ ಮತ್ತು ಸಾಹಿತ್ಯಿಕ ಸಂಕಲನಗಳನ್ನು ಹೊರತರುವ ಯೋಜನೆ ಚುರುಕುಗೊಂಡಿದ್ದು ಕಥೆ/ಕವನ/ಲೇಖನ ಬರಹಗಳನ್ನು ಆಹ್ವಾನಿಸಿ ಈಗಾಗಲೆ ಪ್ರಕಟಣೆ ಹೊರಟಿದೆ. ಸಮ್ಮೇಳನದ ಸಿದ್ಧತೆಗಳ ಸಮಾಚಾರವನ್ನು ವಿಶ್ವಾದ್ಯಂತದ ಕನ್ನಡಿಗರಿಗೆ ನಿಯಮಿತವಾಗಿ ತಿಳಿಸುತ್ತಿರಲು 'ವಿಕಸನ" (ವಿಶ್ವ ಕನ್ನಡ ಸಮ್ಮೇಳನ ನಗಾರಿ) ಎಂಬ ಅನೌಪಚಾರಿಕ ವಾರ್ತಾಪತ್ರವನ್ನು ತಿಂಗಳಿಗೊಮ್ಮೆ ಅಥವಾ ಎರಡುಸಲ ಪ್ರಕಟಿಸುವ ಇರಾದೆಯಿದೆ ಸಮ್ಮೇಳನದ 'ಮಾಧ್ಯಮ ಸಂಪರ್ಕ" ಸಮಿತಿಯದು!
* ಸಮ್ಮೇಳನಕ್ಕೆ ಸಂಬಂಧಿಸಿದ ಅಪ್-ಟು-ಡೇಟ್ ಮಾಹಿತಿಯನ್ನು ನೀಡುವ ಅಂತರ್ಜಾಲಪುಟ ರಚಿತವಾಗಿದ್ದು ಅದರ ಕೊಂಡಿ ಇಲ್ಲಿದೆ: http://wkc2006.kaveri-usa.org ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಲು ಹೆಚ್ಚು ಹೆಚ್ಚು ಕಾರ್ಯಕರ್ತರ ಅವಶ್ಯಕತೆಯಿದ್ದು ಈ ವೆಬ್‌ಪುಟದಲ್ಲಿ ಸ್ವಯಂಸೇವಕ ನೋಂದಣಿಯೂ ಇದೆ; ಕನ್ನಡ ತೇರನೆಳೆವ ಕೆಲಸಕ್ಕೆ ಅಳಿಲಸೇವೆ ಸಲ್ಲಿಸುವ ಉಮೇದುಳ್ಳವರು - ವಿಶ್ವದ ಯಾವ ಮೂಲೆಯಲ್ಲಿದ್ದರೂ - ಇದರಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.
* ಅಮೆರಿಕದ ವಿವಿಧ ಕನ್ನಡಕೂಟಗಳಿಂದ ಮತ್ತು ದುಬೈ, ಸಿಂಗಾಪುರ ಮೊದಲಾದ ಇತರ ಹೊರನಾಡಕನ್ನಡಕೂಟಗಳಿಂದ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉತ್ತಮ ಪ್ರತಿಕ್ರಿಯೆಗಳು ಬರತೊಡಗಿವೆ. ಪಿಟ್ಸ್‌ಬರ್ಗ್, ನಾರ್ತ್‌ಕೆರೊಲಿನಾ ಮುಂತಾದ ಕಡೆಗಳಿಂದಂತೂ 'ನಾವು ಬಸ್ಸು ಮಾಡಿಕೊಂಡು ಬರುತ್ತೇವೆ..." ಎಂಬ ಉತ್ಸಾಹ ಕೇಳಿಬರುತ್ತಿದೆ. ನ್ಯೂಯಾರ್ಕ್, ನ್ಯೂಜೆರ್ಸಿ, ಡೆಲವೇರ್ ಇತ್ಯಾದಿ ಪ್ರದೇಶಗಳ ಕನ್ನಡಾಭಿಮಾನಿ ಸ್ನೇಹಿತರಲ್ಲೇನಕರು ಸಮ್ಮೇಳನ ಕೆಲಸಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಉಧ್ಯುಕ್ತರಾದವರಿದ್ದಾರೆ.
ಅಂತೂ ನಿರೀಕ್ಷೆ-ಪ್ರತೀಕ್ಷೆಗಳು ದಿನದಿನಕ್ಕೂ ಹೆಚ್ಚುತ್ತಿವೆ; ಅಂತೆಯೇ, ಈ ಸಮ್ಮೇಳನವನ್ನು ಭರ್ಜರಿಯಾಗಿ ಯಶಸ್ವಿಯಾಗಿಸುತ್ತೇವೆ ಎಂಬ ಕಾವೇರಿಗರ ದೀಕ್ಷೆಯೂ!












Click it and Unblock the Notifications