ಕನ್ನಡಮ್ಮನ ಜಾತ್ರೆ - ನಾನು ಕಂಡಂತೆ
ಸಮ್ಮೇಳನಕ್ಕೆ ಹಲವು ದಿನಗಳ ಮೊದಲಿಂದಲೇ ಉತ್ಸಾಹ, ನಿರೀಕ್ಷೆ. ಜೊತೆಗೆ ದಟ್ಸ್‌ಕನ್ನಡದಲ್ಲಿ ದಿನವೂ ಬರುತ್ತಿದ್ದ ‘ಚಿತ್ರ - ಚಿತ್ತಾರ’ ಬೇರೆ ಇನ್ನಷ್ಟು ಕಾತರವನ್ನು ಹೆಚ್ಚಿಸುತ್ತಿತ್ತು. ನೋಟ, ಊಟ, ಕಾರ್ಯಕ್ರಮಗಳ ಬಗ್ಗೆ ಊಹಿಸಿ ಊಹಿಸಿ ಸುಸ್ತಾಯಿತು! ಅಂತೂ ಇಂತೂ ಶುಕ್ರವಾರ ಬಂದೇ ಬಿಡ್ತು! ಸಂಜೆ ಕಾರನಲ್ಲಿ ಹೊರಡುತ್ತಿದಂತೆ ಉದ್ವೇಗ, ಒಂಥರಾ ಥ್ರಿಲ್! ಸಾಲದ್ದಕ್ಕೆ ಮಳೆರಾಯ ‘ಎರ್ನೆಸ್ಟೊ’ ಬೇರೆ ಜೊತೆಯಲ್ಲೇ ಬರುತ್ತಿದ್ದ. ನಮಗಿಂತಾ ಅವನಿಗೇ ಉತ್ಸಾಹ ಹೆಚ್ಚಾಗಿತ್ತು ಬಾಲ್ಟಿಮೋರ್ ತಲುಪಲು. ಅವನೂ ಕನ್ನಡಾಭಿಮಾನಿ ಅನ್ನಿಸುತ್ತೆ!
ಮುಂದಿನ ಎರಡು ದಿನಗಳು ಮದುವೆ ಮನೆಯಂತೆ, ಜಾತ್ರೆಯಂತೆ, ದಸರಾ ಮೆರವಣಿಗೆಯಂತೆ, ಕ್ಷಣದಲ್ಲಿ ಸರಿದು ಹೋದಂತೆ ಕಳೆದು ಹೋದವು. ಆ ಮೇಳದಲ್ಲಿ ಏನುಂಟು ಏನಿಲ್ಲ? ಸಂಗೀತ ಸಾಹಿತ್ಯ ನಾಟಕ ನೃತ್ಯ ಆಧ್ಯಾತ್ಮ ಮಹಿಳಾಗೋಷ್ಠಿ ಎಲ್ಲವೂ ಲಭ್ಯ! ಓನ್ಲಿ ಸಮಯದ ಅಭಾವ ಅಷ್ಟೆ.
ಮದುವೆಮನೆಗೂ ಮೀರಿದ ಸಂಭ್ರಮ, ಯಾವ ಫ್ಯಾಶನ್ ಶೋ ಮಾಡೆಲ್‌ಗಳಿಗೂ ಕಮ್ಮಿಯಿಲ್ಲದ ಸುಂದರಿಯರ ಓಡಾಟ, ಸೀರೆ ಒಡವೆಗಳ ಝಗ್‌ಮಗ್! ಸ್ನೇಹಿತರ ಬಂಧು-ಮಿತ್ರರ ಸಮ್ಮಿಲನ. ಹೊಸ ಪರಿಚಯ... ‘ನೀವೆಲ್ಲಿಯವರು?...’, ‘ನಿಮಗೆ ಅವರೂ ಗೊತ್ತಾ?...’, ‘ಇಂಡಿಯಾಗೆ ಹೋಗಿದ್ರ?...’, ‘ನಮ್ಮ ಮಗಳಿಗೂ ವರ ಹುಡುಕುತ್ತಾ ಇದ್ದೀವಿರೀ’, ‘ನೋಡ್ರೀ ಇದನ್ನು 150 ಡಾಲರ್ ಕೊಟ್ಟು ತೊಗೊಂಡೆ ಜಾಸ್ತಿ ಆಯಿತಾ?...’, ಮಧ್ಯೆಮಧ್ಯೆ ಉಧ್ಘೋಷಕಿಯರಿಂದ ‘ಕಂಗ್ಲಿಷ್’ನಲ್ಲಿ ಅನೌನ್ಸ್‌ಮೆಂಟ್‌ಗಳು, ಇತ್ಯಾದಿ ಇತ್ಯಾದಿ. ಇದೆಲ್ಲರ ಮಧ್ಯೆ ನಾವು ನಮ್ಮ ‘ಕನ್ನಡತನ’ ಮೆರೆದ ಪ್ರಸಂಗಗಳು ಹಲವು.
ಉದಾಹರಣೆಗೆ : ಶುಕ್ರವಾರ ಸಂಜೆ ಊಟಮುಗಿಸಿ ಬರುವಾಗ ಮಳೆಯಿಂದ ತಡವಾಗುತ್ತಿದೆ ಎಂದು ಧಾವಂತದಿಂದ ಎಲ್ಲೆಂದರಲ್ಲಿ ಟ್ಯಾಕ್ಸಿ ನಿಲ್ಲಿಸಿ, ಒಂದೇ ಟ್ಯಾಕ್ಸಿಯನ್ನು ಇಬ್ಬರು ಹಿಡಿದು ಗಲಾಟೆ ಮಾಡಿ... ಬಾಲ್ಟಿಮೋರ್ ಬೀದಿಯನ್ನು ಸ್ವಲ್ಪ ಸಮಯದ ಮಟ್ಟಿಗೆ ‘ಮೆಜೆಸ್ಟಿಕ್’ ಆಗಿ ಪರಿವರ್ತಿಸಿಬಿಟ್ಟಿದ್ದೆವು! ಪಾಪ ಬಾಲ್ಟಿಮೋರ್ ಚಾಲಕರು ಹಾರ್ನ್ ಹೊಡೆದೂ ಹೊಡೆದೂ ಸಾಕಾದರು. ಅದೂ ಒಂತರಾ ಖುಷಿ ಕೊಡ್ತು ಅನ್ನಿ. ಬೆಂಗಳೂರಿನ ‘ಫೀಲ್’ ಕೊಡ್ತು.
ಮದುವೆಮನೆ ಅಂದ ಮೇಲೆ ‘ಬೀಗ’ರೂ ಇರಬೇಕಲ್ವ? ಹೌದು ಸ್ವಾಮಿ, ಸ್ಯಾಂಪಲ್‌ಗೆ ಅವರೂ ಇದ್ದರು. ಉಪಾಹಾರದ ವೇಳೆ ಮುಗಿದಮೇಲೆ ಬಂದು - where is breakfast? you are supposed to feed me..., I am hungry, dont talk to me ಎಂದೆಲ್ಲಾ ಕಾರ್ಯಕರ್ತರ ಮೇಲೆ ಹರಿಹಾಯುತ್ತಿದ್ದರು. ಇಡೀ ಪ್ರಪಂಚದಲ್ಲಿ ಕೋಪ ಬಂದರೆ ಮಾತೃಭಾಷೆ ಬಿಟ್ಟು ಇಂಗ್ಲಿಷಿನಲ್ಲಿ ಮಾತಾಡುವವರು ಕನ್ನಡಿಗರು ಮಾತ್ರ! ಊಟ-ತಿಂಡಿಯ ನಿರ್ವಹಣೆ ನೋಡಿಕೊಳ್ಳುತ್ತಿದ್ದ ವಿಜಯೇಂದ್ರ ಅವರ ಮುಖದಮೇಲಿನ ಆಯಾಸ, ಕಳಕಳಿ ಕಾಣಿಸಲೇ ಇಲ್ಲ ಇವರಿಗೆ. ಈಗಷ್ಟೆ 15 ದಿನಗಳ ಹಿಂದೆಯಷ್ಟೇ ‘ಅಪ್ಪ’ ಆಗಿದ್ರೂ ಪುಟ್ಟ ಮಗುವಿನೊಂದಿಗೆ ಇರುವುದನ್ನು ಬಿಟ್ಟು ಸಮಾರಂಭದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವಿಜಯೇಂದ್ರ ಅವರು ತಾಳ್ಮೆಯಿಂದ ಸನ್ನಿವೇಶ ನಿಭಾಯಿಸಿದರು ಎನ್ನಿ.
ಬಸ್ಸಿನಲ್ಲಂತೂ ಕನ್ನಡಪ್ರೇಮ ಉಕ್ಕಿ ಹರಿಯುತ್ತಿತ್ತು. where are you from? ok I am also from bangalore! ಅವ್ಯಾಹತವಾಗಿ ಇಂಗ್ಲಿಷಿನಲ್ಲೇ ಸಂಭಾಷಣೆ ಮುಂದುವರೆಯುತ್ತಿತ್ತು. ಆದರೆ ಒಂದು ಮಾತು, ನಮ್ಮ ನಾಲಿಗೆಯ ಮೇಲೆ ಇಂಗ್ಲೀಷಮ್ಮ ಹರಿದಾಡಿದರೂ ಹೃದಯದಲ್ಲಿ ಕನ್ನಡಮ್ಮನ ಸ್ಥಾನ ಭದ್ರ. ಇಲ್ಲದಿದ್ರೆ ಯಾರ್ರೀ ಸಾವಿರಾರು ಡಾಲರ್ ಖರ್ಚು ಮಾಡಿಕೊಂಡು ಬರ್ತಾರೆ ಸಮ್ಮೇಳನಕ್ಕೆ?
ಸಮ್ಮೇಳನದಲ್ಲಿ ಕಳೆದ ರಸ ನಿಮಿಷಗಳು ಹಲವಾರು. ಭಕ್ತಿಯ ಪ್ರತಿರೂಪದಂತಿದ್ದ ಶ್ರೀವಿದ್ಯಾಭೂಷಣರ ಗಾನಸುಧೆಯಲ್ಲಿ ತೇಲಿದಾಗ ಸಾಕ್ಷಾತ್ ಉಡುಪಿ ಕೃಷ್ಣನ ದರ್ಶನವೇ ಆಯಿತು ಹಲವರಿಗೆ. ಪಲ್ಲವಿಯ ಮಧುರ ಕಂಠ ಜಸ್ಟ್ ಮೋಡಿ ಮಾಡಿಬಿಟ್ಟಿತು. ಪ್ರವೀಣ್ ಗೋಡ್‌ಖಿಂಡಿ ಅವರ ದೈವಿಕ ಮುರಳೀಗಾನಕ್ಕೆ ಅಮೆರಿಕನ್ ವೀಡಿಯೋಗ್ರಾಫರ್ ಸಹಾ ಮರುಳಾಗಿಬಿಟ್ಟ! ಬೆಂಗಳೂರು ಮತ್ತು ಅಮೆರಿಕದ ಅನೇಕ ಕಡೆಯಿಂದ ಬಂದ ನೃತ್ಯ ಕಲಾವಿದರು ಮನ ಸೂರೆಗೊಂಡರು. ಆದರೆ...
ತರಹಾವರಿ ಸಿಹಿತಿಂಡಿಗಳನ್ನು ಮುಂದೆ ಇಟ್ಟು ಎಲ್ಲವನ್ನೂ ಒಂದು ಸಾರಿಗೇ ತಿನ್ನು ಎಂದ ಹಾಗಿತ್ತು ನಮ್ಮ ಸ್ಥಿತಿ. ಸಿನೆಮಾ ನೊಡುವುದಾ? ನಾಟಕಕ್ಕೆ ಹೋಗುವುದಾ? ‘ಜಮಖಂಡಿ ಮದುವೆ’ ಬೊಂಬಾಟ್ ಅಂತೆ!... ಅಯ್ಯೊ, ಜಯಶ್ರೀ ಅವರ ಪ್ರೋಗ್ರಾಮ್ ತಪ್ಪಿತಲ್ಲಾ..., ಎರಡು ಮೂರು ಸಭಾಂಗಣಗಳು, ಮಧ್ಯೆ ಊಟಕ್ಕೆ ಬೇರೆ ಟೈಮ್ ವೇಸ್ಟ್..., ಸಾಹಿತ್ಯದ ಪ್ರೊಗ್ರಾಮ್ ಅಂತೂ ಮಿಸ್ಸೋ ಮಿಸ್ಸು. ಸಾಯಂಕಾಲ ರಸಮಂಜರಿಗೆ ಮುಂದೆ ಜಾಗ ಹಿಡೀಬೇಕು. ಎಸ್ಪಿ ಕಾರ್ಯಕ್ರಮ ಬೇರೆ! ಅಂತೂ ಎಸ್ಪಿ ಮಾಯ ಲೋಕವನ್ನೇ ಸೃಷ್ಟಿಸಿ ಬಿಟ್ಟರು! (ತೆಲುಗಿನ ಹುಡುಗ ಆದ್ರೂ) ಮಲ್ಲಿಕಾರ್ಜುನ್ ‘ಹುಟ್ಟಿದರೇ ಕನ್ನಡನಾಡಲಿ...’ ಹಾಡಿದಾಗ ಸಾಕ್ಷಾತ್ ಅಣ್ಣಾವ್ರೇ ಹಾಡಿದಂತೆ ಅನ್ನಿಸಿ ಜನ ಕುಣಿದಿದ್ದೇ ಕುಣಿದಿದ್ದು! ಕನ್ನಡಿಗರಿಗೆ ಅಂಧ ವ್ಯಾಮೋಹ ಇಲ್ಲ ಬಿಡಿ. ಇಲ್ಲಿ ಪ್ರತಿಭೆಗೆ ಪುರಸ್ಕಾರ. ಆ ಯುವ ಗಾಯಕ ಕೂಡ ಅನುಭವಿಸಿಯೇ ಹಾಡಿದ ಅನ್ನಿಸಿತು.
ಇದಲ್ಲದೇ ನಮ್ಮವರೇ ಆದ ಮಧುಸೂದನ್, ಆರತಿ ನಡೆಸಿಕೊಟ್ಟ ಹಳೆಯ ಮಧುರ ಗೀತೆಗಳ ಕಾರ್ಯಕ್ರಮ ಅಪೂರ್ವ. ಆರತಿ ಅವರು ಎಲ್.ಆರ್ ಈಶ್ವರಿ ಅವ್ರ ಹಾಡುಗಳನ್ನು ಹೇಳಿ ಪ್ರೇಕ್ಷಕರಿಗೆ ಮತ್ತೇರಿಸಿದರು.
ಇನ್ನು ‘ಹಾಸ್ಯರಸ’ಕ್ಕಂತೂ ಸಮ್ಮೇಳನದಲ್ಲಿ ಕೊರತೆ ಇರಲೇ ಇಲ್ಲ. ಸಾಕಾಗುವಷ್ಟು ನಕ್ಕು ಇನ್ನೂ ಎರಡು ವರ್ಷಗಳಿಗಾಗುವಷ್ಟು ಸ್ಟಾಕ್ ಸಿಕ್ಕಿತು. ಕನ್ನಡಿಗರು ‘ಹಾಸ್ಯದ ಸರದಾರರು’ ಎಂದು ನಿರೂಪಿಸಿದರು.
ಇದಲ್ಲದೆ ‘ತುಂಬಿದ ಕೊಡ ತುಳುಕುವುದಿಲ್ಲ...’ ಎಂಬ ಮಾತಿನ ಸಂಪೂರ್ಣ ಅರಿವು ನನಗೆ ಈ ಸಮ್ಮೇಳನದಲ್ಲಾಯಿತು. ‘ನಾನು ನಿಮ್ಮ ಫ್ಯಾನ್’ ಎಂದು ಹೇಳಿಕೊಂಡಿದ್ದೇ ತಡ ಅಕ್ಕರೆಯಿಂದ ಬೆನ್ನು ತಟ್ಟಿ ಪ್ರೀತಿಯಿಂದ ಥೇಟ್ ನನ್ನ ತಂದೆಯಂತೆಯೇ ಮಾತನಾಡಿಸಿದ ಅ.ರಾ ಮಿತ್ರರು; ಮಹಾನ್ ಸಾಹಿತಿಯ ಪುತ್ರಿ, ಸ್ವತಹ ಅಪೂರ್ವ ಪ್ರತಿಭೆಯ ಆಗರ ಅಲಮೇಲು ಐಯ್ಯಂಗಾರ್ ಉಪಾಹಾರದ ಸಮಯದಲ್ಲಿ ಸಿಕ್ಕಾಗ ಒಳ್ಳೇ ಪಕ್ಕದ ಮನೆಯವರಂತೆ ನಗುನಗುತ್ತಾ ಮಾತಾಡಿಸಿದಾಗ... ಹೃದಯ ತುಂಬಿ ಬಂದು ಕನ್ನಡಿಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನ್ನಿಸಿತು!
ಭಾನುವಾರ ಸಂಜೆಯ ಕಾರ್ಯಕ್ರಮಗಳು ಸಮಾರಂಭಕ್ಕೆ ಕಲಶಪ್ರಾಯವಾಗಿದ್ದವು. ಅದರಲ್ಲೂ ‘ಕಾವೇರಿ’ ಕನ್ನಡಕೂಟದ ‘ಸುವರ್ಣ ಸಂಗಮ’ ಕಾವೇರಿಯ ಕೀರ್ತಿಗೆ ಕಿರೀಟವಿಟ್ಟಂತೆ ಇತ್ತು. ವೇದಿಕೆಯ ಮೇಲೆ ನಿಂತ ಸಮ್ಮೇಳನದ ರೂವಾರಿಗಳ ಮುಖಗಳ ಮೇಲೆ ಹೆಮ್ಮೆ, ಧನ್ಯತಾಭಾವ, ‘ಅಬ್ಬಾ ಮುಗಿಸಿದೆವು...’ ಎಂಬ ಸಮಾಧಾನ ಒಂದು ರೀತಿಯ ವಿಶೇಷ ಕಳೆ ಕೊಟ್ಟಿತ್ತು ಅವರುಗಳಿಗೆ!
AND THE PARTY ENDED WITH A BLAST! GURUKIRAN ROCKED! SHUBHA ROARED! NO SHE DIDNT SING SHE ROARED! ಆದ್ರೆ ಜನ ಯಾಕೆ ‘ಬಾಲ್ಟಿಮೋರ್ ಸಮ್ಮೇಳನ ಬರೀ ಓಳು’ ಅಂತಾ ಹಾಡ್ತಾ ಇದ್ರು ಅಂತ ಅರ್ಥ ಆಗ್ಲಿಲ್ಲ!
ಒಟ್ಟಿನಲ್ಲಿ ನನಗಂತೂ ಅಪೂರ್ವ ಅನುಭವ ಅನ್ನಿಸಿತು. ಹಗಲಿರುಳೆನ್ನದೇ ದುಡಿದ ಕಾರ್ಯಕರ್ತರಿಗೆಲ್ಲ Hats off! You did a wonderful job! ಒಂದು ದೊಡ್ಡಮಟ್ಟದ ಕಾರ್ಯಕ್ರಮ ನಡೆದಾಗ ಏರು-ಪೇರುಗಳಾಗುವುದು ಸಹಜ. ಅವು ಎಷ್ಟೋ ಬಾರಿ ಆಕ್ಷೇಪಣಾರ್ಹವೂ ಅಲ್ಲ. ಹಾಗಾಗಿ ಬರೀ ಸವಿನೆನಪುಗಳನ್ನಷ್ಟೇ ಬುತ್ತಿಯಲ್ಲಿ ಕಟ್ಟಿಕೊಂಡು ಮುಂದಿನ ಸಮ್ಮೇಳನದ ಕನಸು ಕಾಣುತ್ತಾ ಹಿಂತಿರುಗಿದೆ, ಮುಂದಿನ ಬಾರಿ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೊಗಲೇಬೇಕು ಎಂದು ನಿರ್ಧರಿಸುತ್ತಾ.
ಕೊನೆಯದಾಗಿ..., ಈ ಸಮ್ಮೇಳನದಲ್ಲಿ ನಡೆದ ಒಂದು ವಿಶೇಷ ಸಂಗತಿಯ ಬಗ್ಗೆ ಹಂಚಿಕೊಳ್ಳಲೇಬೇಕು. ಭಾನುವಾರದ ಲಂಚ್ ಮುಗಿಸಿ ಸಮ್ಮೇಳನ ನಡೆಯುವ ಜಾಗಕ್ಕೆ ಬಸ್ಸಿನಲ್ಲಿ ಬರುವಾಗ ‘ಬೊಗ ಬನ್ನಿ ಬೊಗ ಬನ್ನಿ...’ ಎಂಬ ಬೆಂಗಾಲಿ ಉಚ್ಚಾರಣೆಯ ಗಡಸುದನಿ ಕೇಳಿಸಿತು. ಇದು ಯಾರಪ್ಪ ಅಂತ ನೊಡಿದ್ರೆ ಚಾಲಕನ ಸೀಟ್‌ನಲ್ಲಿ ಕುಳಿತ ಪಕ್ಕಾ ಆಫ್ರಿಕನ್ ಅಮೆರಿಕನ್ ‘ನೇಟ್’ ಮಹಾಶಯ. ಒಳ್ಳೆ ಬಿಟಿಎಸ್ ಬಸ್ ಡ್ರೈವರ್‌ನಂತೆ ಕೂಗುತ್ತಿದ್ದಾನೆ! ಖುಶಿಯಿಂದ ಚಪ್ಪಾಳೆ ತಟ್ಟಿಬಿಟ್ಟೆ.
ರಾತ್ರಿ ಊಟ ಮುಗಿಸಿ ಬರುವ ವೇಳೆಗೆ ಅವನ ಶಬ್ದ ಭಂಡಾರ ತುಂಬಾ ಬೆಳೆದಿತ್ತು. ‘ಹಿಂದೆ ಹೋಗಿ, ಹಿಡಿದುಕೊಳ್ಳಿ, ನಮಸ್ಕಾರ, ಹತ್ತಿಕೊಳ್ಳಿ....’ ಇತ್ಯಾದಿ. ‘ನೇಟ್, ಯು ಆರ್ ಗ್ರೇಟ್!’. ನನ್ನ ಪ್ರಕಾರ ಸಮ್ಮೇಳನದ ಸಾರ್ಥಕತೆಗಳಲ್ಲಿ ಇದೂ ಒಂದು. ಬೆಂಗಳೂರಿನ ಕನ್ನಡಿಗರೆಲ್ಲಾ ಹೀಗೇ ಮನಸ್ಸು ಮಾಡಿ ಎಲ್ಲಾರಿಗೂ ಕನ್ನಡ ಕಲಿಸ್ತೀರಾ?
ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications