ಮುಂದಿನ ಸಮ್ಮೇಳನ ಎಲ್ಲಂತೆ?
‘ಅಕ್ಕ’ ಸಮ್ಮೇಳನವನ್ನು ಯಾವ ಕನ್ನಡಕೂಟ ವ್ಯವಸ್ಥೆ ಮಾಡಬೇಕು ಎನ್ನುವುದನ್ನು ನಿರ್ಧರಿಸುವವರು ಅಕ್ಕ ಆಡಳಿತ ವರ್ಗ. ಅಕ್ಕ ಅಧಿಕಾರವರ್ಗಕ್ಕೆ ಸಾಂಸ್ಥಿಕವಾಗಿ ಮೂರು ಅಸ್ತಿತ್ವಗಳಿವೆ. ಅಕ್ಕ ಚಾರಿಟೆಬಲ್ ಟ್ರಸ್ಟ್, ಅಕ್ಕ ನಿರ್ದೇಶಕ ಮಂಡಳಿ ಮತ್ತು ಅಕ್ಕ ಮಹಾಸಭೆ. ಅಂದಹಾಗೆ ಬಾಲ್ಟಿಮೋರ್ ಸಮ್ಮೇಳನದ ಮೊದಲದಿನ ಅಕ್ಕ ಚಾರಿಟೆಬಲ್ ಸಂಸ್ಥೆಯ ಸಭೆಯೂ ನಡೆಯಿತು. ಈ ಸಭೆಯಲ್ಲಿ ಮುಂದಿನ ಸಮ್ಮೇಳನದ ತಾಣದ ಬಗ್ಗೆ ಪ್ರಸ್ತಾಪ ಬಂದಿತ್ತು. ಆದರೆ ಸಮ್ಮೇಳನದ ಜಾಗದ ಬಗ್ಗೆ ನಿರ್ಧಾರ ಹೊರಹೊಮ್ಮಲಿಲ್ಲ.
ಛಲಬಿಡದ ತ್ರಿವಿಕ್ರಮ? :
ಟೊರಾಂಟೊ ಕನ್ನಡಿಗರಂತೂ ಸಮ್ಮೇಳನ ವ್ಯವಸ್ಥೆಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಸಮ್ಮೇಳನಕ್ಕಾಗಿ ಒಂದು ಸಮಿತಿಯೂ ರಚಿತವಾಗಿದ್ದು ಅದರ ಮುಖ್ಯಸ್ಥರಾಗಿ ಮಂಜುನಾಥ ಕುಪ್ಪ ಆಯ್ಕೆಯಾಗಿದ್ದಾರೆ. ಕುಪ್ಪ ಅವರ ನೇತೃತ್ವದ 60 ಮಂದಿ ಟೊರೆಂಟೊ ಕನ್ನಡಿಗರ ತಂಡ ಬಾಲ್ಟಿಮೋರ್‌ಗೆ ಧಾವಿಸಿ ಟೆಂಟ್ ಹಾಕಿದ್ದರು. ‘‘ನಮಗೆ ಹಸಿರುನಿಶಾನೆ ಕೊಡಿ, ನಾವು ಮಾಡಿತೋರಿಸುತ್ತೇವೆ!’’ ಎಂದು ಅಕ್ಕ ಅಧಿಕಾರಿಗಳ ಮನವೊಲಿಸಲು ಮಂಜುನಾಥ ಕುಪ್ಪ ಅವರದು ಶತಪ್ರಯತ್ನ.
ಅಕ್ಕ ಏನೊ ಟೊರಾಂಟೊಗೆ ಹಸಿರುನಿಶಾನೆ ತೋರಿಸಬಹುದು; ಆದರೆ ಕೆಲವು ಹಿನ್ನೆಲೆಗಳ ಸಂದರ್ಭದಲ್ಲಿ ತೀರ್ಮಾನ ಅಷ್ಟು ಸಲೀಸಾಗಿ ಮೂಡಿಬರುವುದಿಲ್ಲ. ಯಾಕೆಂದರೆ ನಿಮಗೆ ನೆನಪಿರಬಹುದು 2003ರಲ್ಲಿ ಅಕ್ಕ ಹೋಳಾಗುವ ಹಂತಕ್ಕೆ ಬಂದಿತ್ತು. ಕೆಲವರು ಅಕ್ಕದಿಂದ ಪಕ್ಕಕ್ಕೆ ಸಿಡಿದು ನಮ್ಮದೇ ನಿಜವಾದ ಅಕ್ಕ ಎಂದು ಹಕ್ಕೊತ್ತಾಯ ಮಾಡಿದ್ದರು. ಅವರೆಲ್ಲ ಸೇರಿ ರಚಿಸಿದ್ದ ಬಂಡುಕೋರರ ಸಂಘಟನೆಗೆ ಇದೇ ಮಂಜುನಾಥ ಕುಪ್ಪ ಉಪಾಧ್ಯಕ್ಷರಾಗಿದ್ದರು! ಪಾಪ ಮಂಜುನಾಥ್‌ಗೆ ಈ ರಾಜಕೀಯವೆಲ್ಲ ಗೊತ್ತಿಲ್ಲ. ಈಗ ನಿರ್ಮಲ ಹೃದಯದಿಂದ, ‘ಸಮ್ಮೇಳನ ಮಾಡುತ್ತೇವೆ, ನಮಗೆ ಅವಕಾಶಕೊಡಿ’ ಎಂದು ಛಲಬಿಡದ ತ್ರಿವಿಕ್ರಮನಂತೆ ಪಟ್ಟುಹಿಡಿದಿದ್ದಾರೆ.
ಅಕ್ಕನ ಅಳತೆಗೋಲು :
ಸಮ್ಮೇಳನ ಏರ್ಪಡಿಸಲು ಒಪ್ಪಿಗೆ ಸೂಚಿಸುವುದಕ್ಕಿಂತ ಮುಂಚೆ ಅಕ್ಕ ಆಡಳಿತ ವರ್ಗ ಕೆಲವು ಮಾನದಂಡಗಳನ್ನು ಹಿಡಿದು ಅಳೆದು ತೂಗಿ ನೋಡುತ್ತದೆ.
ಸಮ್ಮೇಳನ ನಡೆಸುವ ಸಂಘಕ್ಕೆ ಇರುವ ಚೈತನ್ಯ, ಆ ರಾಜ್ಯದಲ್ಲಿ ಇರುವ ಕನ್ನಡಿಗರ ಜನಸಂಖ್ಯೆ, ಸಂಪನ್ಮೂಲ ಕ್ರೋಢೀಕರಿಸುವ ಶಕ್ತಿ ಕನ್ನಡ ಕೂಟಕ್ಕೆ ಇದೆಯೇ ಎನ್ನುವುದು ಮುಖ್ಯವಾಗುತ್ತದೆ. ಈ ಉದ್ದೇಶದಿಂದ ಅಕ್ಕ ಆರು ಸದಸ್ಯರ ಒಂದು ಸಮಿತಿ ರಚಿಸಿದೆ. ಹಿಂದಿನ ಸಮ್ಮೇಳನ ಸಂಚಾಲಕರೂ ಇರುವ ಈ ಸಮಿತಿ ನೀಡುವ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತದೆ.
ಮುಂದಿನ ಸಮ್ಮೇಳನದ ಸ್ಥಳ ಇದೇ ಡಿಸೆಂಬರ್ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ. ಅಲ್ಲಿಯವರಿಗೆ ನಿಮ್ಮ ಕುತೂಹಲವನ್ನು ಕಾಯ್ದುಕೊಳ್ಳಿರಿ. ಅಕ್ಕದ ಹಿರಿಯ ಟ್ರಸ್ಟಿಗಳು ಬಹಿರಂಗವಾಗಿ ಏನೂ ಹೇಳದಿದ್ದರೂ ಒಬ್ಬ ನಿರ್ದೇಶಕರು ಮಾತ್ರ ಟೊರಾಂಟೊ ಪರ ಒಲವನ್ನು ಧಾರೆಯೆರೆಯುತ್ತಿದ್ದಾರೆ.
‘ಅಕ್ಕ’ ಮುಂದಿನ ಅಧ್ಯಕ್ಷರು ಯಾರು? :
ಈಮಧ್ಯೆ ಅಕ್ಕ ಮಹಾಸಭೆ ಕರೆಯಬೇಕಾಗಿದೆ. ಸಿಯಾಟಲ್‌ನ ರಾಜಕುಮಾರ್ ಕನ್ನಡಕೂಟದ ಸದಸ್ಯತ್ವ, ಮುಂದಿನ ಸಮ್ಮೇಳನದ ತಾಣ ಮತ್ತು ಅಕ್ಕ ಪದಾಧಿಕಾರಿಗಳ ಚುನಾವಣೆ ವಿಷಯಗಳನ್ನು ಚರ್ಚಿಸುವುದು ಬಾಕಿಯಿದೆ. ಈನಡುವೆ ಚುನಾವಣಾ ಕಾವು ದಿನೇದಿನೇ ಏರತೊಡಗಿದೆ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ದಟ್ಸ್‌ಕನ್ನಡಕ್ಕೆ ಗೊತ್ತಾಗಿರುವ ನಂಬಲರ್ಹ ಮೂಲಗಳ ಪ್ರಕಾರ --ಶ್ರೀಗಂಧ ಕನ್ನಡಕೂಟದ ಡಾ।ರೇಣುಕಾ ರಾಮಪ್ಪ, ಪಂಪ ಕನ್ನಡ ಕೂಟದ ರಮೇಶ್ ಗೌಡ ಹುರಿಯಾಳುಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಸ್ಪರ್ಧೆ ಬಿದ್ದರೆ ಮತಗಳು ಒಡೆದು ತಮ್ಮತ್ತ ವಾಲುತ್ತವೆಯೆಂಬ ನಿರೀಕ್ಷೆಯಲ್ಲಿ ಕಾವೇರಿಯ ಸುರೇಶ್ ರಾಮಚಂದ್ರ ಸಹ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಬೆಳಗಾವಿಗೆ ಬನ್ನಿ.. ಕನ್ನಡಮ್ಮನ ತೇರು ಎಳೆಯೋಣ :
ಐದನೆಯ ಅಕ್ಕ ವಿಶ್ವಕನ್ನಡ ಸಮ್ಮೇಳನದ ಜಾಗ ಇನ್ನು ಕೆಲವು ದಿನಗಳಲ್ಲಿ ನಿರ್ಧಾರವಾಗಲಿದೆ. ಈ ಕುತೂಹಲವನ್ನು ಕಾಯ್ದಿರಿಸಿಕೊಳ್ಳುತ್ತಲೇ ಬನ್ನಿ, ಬೆಳಗಾವಿಗೆ ಹೋಗೋಣ. ಕರ್ನಾಟಕ ಏಕೀಕರಣದ ಸುವರ್ಣಮಹೋತ್ಸವ ನಿಮಿತ್ತ ಅಲ್ಲೂ ಅಣಿಯಾಗುತ್ತಿದೆ ಒಂದು ವಿಶ್ವ ಕನ್ನಡ ಸಮ್ಮೇಳನ!
ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications