ರಾಜಕಾರಣಿಗಳಿಗೆ ಪೇಚಾಟ, ಸರಸ್ವತಿ ಪುತ್ರರಿಗೆ ಹಬ್ಬದೂಟ!
ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾವೇಶಕ್ಕೆ ಆಗಮಿಸದಿದ್ದರೂ ಚಿತ್ರೀಕರಿಸಿ ಕಳುಹಿಸಿಕೊಟ್ಟಿದ್ದ ಅವರ ಸಂದೇಶವನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಕುಮಾರಸ್ವಾಮಿ ಸಂದೇಶ ವಾಚನ ಬದಲು ಭಾಷಣವನ್ನೇ ಆರಂಭಿಸಿದ್ದರಿಂದ ಮುಖ್ಯಮಂತ್ರಿಯವರ ಭಾಷಣವನ್ನು ಅರ್ಧಕ್ಕೆ ಹಠಾತ್ ನಿಲ್ಲಿಸಲಾಯಿತು.
***
ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚಿತ್ರೀಕೃತ ಭಾಷಣದಲ್ಲಿ ತಮ್ಮ ಸಂಪುಟ ಸಹೋದ್ಯೋಗಿ ಶಿವಾನಂದ ನಾಯ್ಕ ಅವರನ್ನು ಶಶಿಕಾಂತ ನಾಯಕ ಎಂದು ಸಂಬೋಧಿಸಿದಾಗ ವೇದಿಕೆಯಲ್ಲಿದ್ದ ಶಿವಾನಂದ ನಾಯ್ಕ ಪೆಚ್ಚಾಗಿ ಹೋದರು. ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಅನಿವಾಸಿ ಭಾರತೀಯರು’ ಎಂದು ಹೇಳುವ ಬದಲು ಎರಡೆರಡು ಸಲ ‘ಆದಿವಾಸಿ ಭಾರತೀಯರು’ ಎಂದು ಹೇಳಿ ಪ್ರೇಕ್ಷಕರನ್ನು ದಂಗು ಬಡಿಸಿದರು.
***
ವೇದಿಕೆಯ ಮೇಲಿದ್ದ ಕಾರ್ಯಕ್ರಮ ನಿರ್ವಾಹಕರಲ್ಲಿ ಅದೆಂಥ ಧಾವಂತವಿತ್ತೆಂದರೆ ದೀಪ ಬೆಳಗುವ ಮೊದಲೇ ಭಾಷಣಕ್ಕೆ ಯಡಿಯೂರಪ್ಪನವರನ್ನು ಕರೆದರು. ಎರಡನೆಯವರಾಗಿ ಮೇರಿಲ್ಯಾಂಡ್ ಗವರ್ನರ್ ಏರಿಸಾ ಮೆರಿಟೂರಿಸ್ ಭಾಷಣ ಮುಗಿಸುತ್ತಿದ್ದಂತೆ, ಸಂಘಟಕರು ವಂದನಾರ್ಪಣೆಗೆ ಅಪ್ಪಣೆ ಕೊಡಿಸಿಬಿಟ್ಟರು. ಶ್ರೀ ಶ್ರೀ ರವಿಶಂಕರ್, ವೀರೇಂದ್ರ ಹೆಗ್ಗಡೆ, ಎಂ.ಪಿ.ಪ್ರಕಾಶ್ ಅವರು ಮಾತನಾಡಬೇಕಿತ್ತು. ಕೊನೆಗೆ ಈ ಮೂವರಿಗೂ ಮಾತಿಗೆ ಅವಕಾಶ ಕೊಡಲಾಯಿತು. ಆದರೆ ಚಂಪಾ, ಕಣವಿ, ವಿವೇಕರೈ ಅವರಿಗೆ ಮಾತನಾಡಲಾಗಲಿಲ್ಲ. ದೀಪ ಬೆಳಗುವ ಮೊದಲೇ ಭಾಷಣ ಹಾಗೂ ಭಾಷಣ ಮಾಲಿಕೆ ಮುಗಿಯುವ ಮೊದಲೇ ವಂದನಾರ್ಪಣೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.
ಉದ್ಘಾಟನಾ ಸಮಾರಂಭ ನಡೆದ ಸಭಾಂಗಣಕ್ಕೆ ಡಾ.ರಾಜ್ ಕುಮಾರ್ ಹೆಸರನ್ನಿಡಲಾಗಿತ್ತು. ಕಾರ್ಯಕ್ರಮಕ್ಕೆ ಮೊದಲು ಡಾ.ರಾಜ್ ನಿಧನಕ್ಕೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸುವಾಗ, ಡಾ.ರಾಜ್ ಕುರಿತ ಕಿರುಚಿತ್ರ ಇದ್ದಕ್ಕಿದ್ದಂತೆ ಆರಂಭವಾಗಿ ಇರುಸುಮುರುಸಾಯಿತು.
***
‘ವಿಕಾಸ’ ವಾಣಿಜ್ಯ ವೇದಿಕೆ ಸಂಘಟಿಸಿದ ವಾಣಿಜ್ಯ, ವ್ಯವಹಾರ ಗೋಷ್ಠಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಯಮಶೀಲ ಸಾಹಸಿಗಳು ಉದ್ಯಮದ ಧೀಮಂತರೊಂದಿಗೆ ಗಂಭೀರ ಸಂವಾದದಲ್ಲಿ ತೊಡಗಿದ್ದು ಕಂಡುಬಂದಿತು.
***
ಮೇರಿಲ್ಯಾಂಡ್ ಗವರ್ನರ್ ತಮ್ಮ ಭಾಷಣವನ್ನು ‘ನಮಸ್ಕಾರ, ಸ್ವಾಗತ’ ಎಂದು ಆರಂಭಿಸಿದಾಗ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
***
ಗೃಹ ಸಚಿವ ಎಂ.ಪಿ.ಪ್ರಕಾಶ್ ತಮ್ಮ ಮಾತಿನಲ್ಲಿ ಬಸವಣ್ಣ, ಗಾಂಧೀಜಿ, ಷೆಲ್ಲಿ, ಮದರ್ ಥೆರೆಸಾ, ಕುವೆಂಪು, ಭಗವದ್ಗೀತೆ, ಲಿಂಕನ್ ಹೇಳಿದ ಅಣಿಮುತ್ತುಗಳನ್ನು ಹೇಳಿದರು. ಈ ಭರಾಟೆಯಲ್ಲಿ ಅವರ ಸ್ವಂತ ಅನಿಸಿಕೆಯೇನೆಂಬುದೇ ಗೊತ್ತಾಗಲಿಲ್ಲ.
***
ನಾಲ್ವರು ಸಚಿವರು ಹಾಗೂ ಬಹುತೇಕ ಶಾಸಕರೆಲ್ಲ ಟೈ ಹಾಗೂ ಸೂಟುಬೂಟು ಧರಿಸಿದ್ದರು. ಯಡಿಯೂರಪ್ಪ ಸೇರಿದಂತೆ ಕೆಲವರಿಗೆ ಅವರು ಧರಿಸಿದ ಟೈ ಅದೆಂಥ ಕಿರಿಕಿರಿಯನ್ನುಂಟು ಮಾಡುತ್ತಿತ್ತೆಂದರೆ ಅವರ ಗಮನ ಪದೇ ಪದೇ ಅದರ ಮೇಲೇ ಹೋಗಿ ನಿಲ್ಲುತ್ತಿತ್ತು. ಯಡಿಯೂರಪ್ಪನವರು ತೊಟ್ಟ ಟೈ ಬಣ್ಣವೇ ಅವರು ಆ ದಿರಿಸಿಗೆ ಎಷ್ಟು ಹೊಸಬರೆಂಬುದನ್ನು ಹೇಳುತ್ತಿತ್ತು.
ಇಡೀ ದಿನ ಮಳೆ ಸುರಿಯಿತಾದರೂ, ಸಮ್ಮೇಳನಕ್ಕೆ ಕಟ್ಟಿದ ಹಬ್ಬದ ವಾತಾವರಣವನ್ನು ತೋಯಿಸಲಿಲ್ಲ. ಆದರೆ ಹೋಟೆಲ್‌ನಿಂದ ಸಭಾಂಗಣಕ್ಕೆ ಅಡ್ಡಾಡುವ ಪ್ರತಿನಿಧಿಗಳ ಓಡಾಟಕ್ಕೆ ಇದು ಅಡ್ಡಿಪಡಿಸಿತು.
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications