ಸಮ್ಮೇಳನದ ಮೂರನೆ ಎರಡು ಭಾಗ ಮುಕ್ತಾಯ
ಎರಡನೆ ದಿನದ ಕೊನೆಯ ಕಾರ್ಯಕ್ರಮವಾಗಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕನ್ನಡ ಚಿತ್ರಮಂಜರಿ ಮುಗಿದಾಗ ರಾತ್ರಿ ಹನ್ನೆರಡುವರೆ ಗಂಟೆಯಾಗಿತ್ತು. ಪಲಾವು ಮತ್ತು ಪೇಡಾ ಊಟ ಮಾಡಿ ರಾಜ್‌ಕುಮಾರ್ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಕನ್ನಡಿಗರು ತಮಗೆ ಬಲುಪ್ರಿಯವಾದ ಹಾಡುಗಳನ್ನು ಗುನುಗುತ್ತ, ಹೊಟೆಲ್ ರೂಮಿನ ಕಡೆ ಹೆಜ್ಜೆ ಹಾಕಿ ಸ್ವಲ್ಪ ಹೊತ್ತಾಗಿದೆ.
ಕಳೆದ ಎರಡು ದಿನಗಳಲ್ಲಿ ಈ ಸಮ್ಮೇಳನ ಅನೇಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಶ್ರೀಸಾಮಾನ್ಯ ಕನ್ನಡಿಗನ ಮನೋಬಯಕೆಗಳನ್ನು ತಣಿಸಲೆತ್ನಿಸುವ ಬಗೆಬಗೆಯ ಮನರಂಜನೆ, ಮನೋವಿಕಾಸ ಮತ್ತು ಮನಃಶಾಂತಿಯನ್ನು ಉಣಬಡಿಸುವ ವೈವಿಧ್ಯಮಯ ಕಾರ್ಯಕ್ರಮಗಳು ತೇಲಿ ಹೋಗಿವೆ.
ಸಾಹಿತ್ಯಪ್ರಿಯರಿಗೆ ಕವಿ ಕಾದಂಬರಿಕಾರರ ದರ್ಶನಭಾಗ್ಯ. ಸಿನೆಮಾಪ್ರೇಮಿಗಳಿಗೆ ತಾರೆಯರನ್ನು ಸಮೀಪದಿಂದ ನೋಡಿದ ಪುಳಕ. ಮನಃಶಾಂತಿ ಅರಸುವವರಿಗೆ ಶ್ರೀ ರವಿಶಂಕರ್ ಅವರಿಂದ ಬದುಕುವ ಕಲೆಯ ಪಾಠ. ದೈವಭಕ್ತರಿಗೆ ವೀರೇಂದ್ರ ಹೆಗ್ಗಡೆಯವರೇ ಮಂಜುನಾಥ. ಶೋಡಷಿಯರಿಗೆ ವಯೋಮಾನ ಸಹಜ ಫ್ಯಾಶನ್ ಶೋ. ಮಕ್ಕಳ ತಾಯಂದಿರಿಗೆ ಮಹಿಳಾವೇದಿಕೆಯಲ್ಲಿ ಕಲೆತು ಚಿಂತಿಸುವ ಅವಕಾಶ. ಸಿನೆಮಾಪ್ರೇಮಿಗಳಿಗೆ ‘ಸೈನೈಡ್’. ಕುಜದೋಷ ಇಲ್ಲದವರಿಗೆ ಅಲಮೇಲು ವಿರಚಿತ ನಾಟಕ ನೋಡುವ ಶುಕ್ರದೆಸೆ...
ಈಮಧ್ಯೆ ಕಾಫಿ ಇಲ್ಲದೆ ಚಡಪಡಿಸುವವರ ಸಾತ್ವಿಕ ಸಿಡುಕುಗಳು. ಬದಲಾದ ಕಾರ್ಯಕ್ರಮಗಳ ಕುರಿತ ವಿವರಗಳು ಗೊತ್ತಾಗದೆ ಮತ್ತು ಏಕಕಾಲಕ್ಕೆ ನಾನಾ ಕಡೆ ನಾನಾ ಕಾರ್ಯಕ್ರಮಗಳನ್ನು ಸವಿಯಲಾಗದೆ ದಿಕ್ಕುತಪ್ಪಿದವರಂತೆ ಅತ್ತಿತ್ತ ಠಳಾಯಿಸುತ್ತಿದ್ದ ನೋಂದಾಯಿತ ಪ್ರತಿನಿಧಿಗಳು.
ರಾಜಕಾರಣಿಗಳ ಭಾಷಣದ ಕೊರೆತ ಅಷ್ಟಾಗಿರದ ಸಮ್ಮೇಳನದಲ್ಲಿ ಮೊರೆದ ಸಾಂಸ್ಕೃತಿಕ ಕಲರವಗಳನ್ನು ಕಣ್ಣುಕಿವಿಗೆ ತುಂಬಿಸಿಕೊಂಡ ಕಲಾಪ್ರೇಮಿಗಳಲ್ಲಿ ಧನ್ಯತಾಭಾವ. ಅಲ್ಲಲ್ಲಿ ಅರೆಬರೆಯಾದರೂ ಪುಷ್ಕಳ ಭೋಜನ ಸವಿದದ್ದೇ ಲಾಭ ಎಂದು ಬಾಲ್ಟಿಮೋರ್ ಬೀದಿಗಳಲ್ಲಿ ಕನ್ನಡ ತೇಗುಗಳು.
ಸಮ್ಮೇಳನ ಎಂದರೆ ಮನರಂಜನೆ, ಊಟ, ನೋಟ (ಅದರಲ್ಲೂ ವಿಶ್ವಕನ್ನಡ ಸಮ್ಮೇಳನವೆಂದರೆ ಪ್ರಕೃತಿವಿಕೋಪದ ಕಾಟ!), ಬಂಧುಸ್ನೇಹಿತರೊಂದಿಗೆ ಅಪರೂಪದ ಒಡನಾಟ ಎನ್ನುವವರಿಗೆ ತೃಪ್ತಭಾವ. ಗಂಭೀರಚರ್ಚೆ, ವಿಚಾರವಾದ, ಕರ್ನಾಟಕದ ಏಳಿಗೆ. ನಿರ್ಭಾಗ್ಯ ಸೋದರಸೋದರಿಯರಿಗೆ ನೆರವಾಗುವ ಹಂಬಲಕ್ಕೆ ಗೋಲಿಹೊಡಿ.
ನಾಳೆ ಸಮ್ಮೇಳನದ ಕೊನೆಯ ದಿನ. ಸಾಹಿತ್ಯದ ಚರ್ಚೆಯಿದೆ, ಬೈರಪ್ಪನವರೊಂದಿಗೆ ಮಾತುಕತೆಯಿದೆ. ‘ಹಸೀನಾ’ ಚಲನಚಿತ್ರ ಪ್ರದರ್ಶನವಿದೆ. ನೌಕಾವಿಹಾರವಿದೆ, ಬೀಗರ ಊಟವಂತೂ ಇದ್ದೇ ಇದೆ.
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications