• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಕನ್ನಡ ಸಮ್ಮೇಳನ ಮತ್ತು ಸಾಹಿತ್ಯ

By Staff
|
  • ದಟ್ಸ್‌ಕನ್ನಡ ವರದಿಗಾರನಿಂದ

WKC-2004, Orlando and Kannada Literatureಇದೊಂದು ‘ಆಕ್ಸಿಮಾರಾನ್‌’ ಅಂದುಕೊಳ್ಳಬೇಡಿ. ಏಕೆಂದರೆ, ಎಲ್ಲರಿಗೂ ಒಂದು ಚಂದವಾದ ಮತ್ತು ಸಹ್ಯವಾದ ಸಾಹಿತ್ಯಿಕ ಕಾರ್ಯಕ್ರಮವನ್ನು ಕೊಟ್ಟಿದ್ದು ಒರ್ಲಾಂಡೋ ವಿಶ್ವ ಕನ್ನಡ ಸಮ್ಮೇಳನದ ಒಂದು ಹೆಗ್ಗಳಿಕೆ ಕೂಡ. ಅಮೆರಿಕನ್ನಡಿಗರ ಸಾಹಿತ್ಯದ ಕುರಿತಾದ ಮೆಚ್ಚುಗೆ, ಟೀಕೆಗಳೇನೇ ಇರಲಿ, ಸಾಹಿತ್ಯಾಸಕ್ತರು ಎರಡು ದಿನ ಕೂತು ತಮ್ಮ ಮೆಚ್ಚಿನ ಸಾಹಿತಿಗಳನ್ನು ಭೇಟಿಮಾಡಿ ಅವರ ಜತೆ ಚರ್ಚಿಸಿ ಕಾಲಕಳೆದದ್ದು ಒರ್ಲಾಂಡೋ ವಿಶ್ವ ಕನ್ನಡ ಸಮ್ಮೇಳನದ ವಿಶೇಷ.

ನಂಜುಂಡಸ್ವಾಮಿಯವರ ನೇತೃತ್ವದಲ್ಲಿದ್ದ ಸಾಹಿತ್ಯ ಸಮಿತಿಯ ವತಿಯಿಂದ ಆಯೋಜಿಸಲ್ಪಟ್ಟ ಸಾಹಿತ್ಯಿಕ ಕಾರ್ಯಕ್ರಮಗಳು ಆರಂಭವಾದದ್ದು ಶುಕ್ರವಾರ ಸೆಪ್ಟಂಬರ್‌ 3 ರಂದು ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯಾಂದಿಗೆ. ನಂತರ ನಮ್ಮ ಹಿಂದಿನ ಕವಿಗಳ ಕೆಲವು ಗೀತೆಗಳ ಪಲ್ಲವಿ, ಚರಣಗಳ ಸುಗಮಸಂಗೀತ.

ಸಮ್ಮೇಳನದ ಸಾರಸ್ವತ ಕ್ಷಣಗಳ ಕೆಲವು ತುಣುಕುಗಳು ಇಲ್ಲಿವೆ :

  • ಭಾರತದಿಂದ ಬಂದ ಸಾಹಿತಿಗಳಿಗೆ ಸ್ವಾಗತ ಮತ್ತು ಗೌರವ. ಕಳೆದ ಎರಡು ವರ್ಷಗಳಲ್ಲಿ ಅಮೆರಿಕನ್ನಡಿಗರು ಬರೆದ ಕೃತಿಗಳ ಪರಿಚಯ ಮತ್ತು ಚಂಡಮಾರುತವನ್ನೂ ಲೆಕ್ಕಿಸದೆ ಅಲ್ಲಿ ಬಂದ ‘ವೀರ ಕನ್ನಡಿಗ’ ಸಾಹಿತಿಗಳಿಗೆ ಮುಖ್ಯವೇದಿಕೆಯ ಮೇಲೊಂದು ಹಾರ ಮತ್ತು ಶಾಲು.
  • ಮಾರನೆಯ ದಿನ ಪಕ್ಕದಲ್ಲಿ ರೂಪಿತವಾಗಿದ್ದ ಸಾಹಿತ್ಯ ಮಂಟಪವೆಂಬ ‘ಓಸಿಯೋಲ ಕೋಣೆ’ಗಳಲ್ಲಿ ಕುವೆಂಪು ಮತ್ತು ಪುತಿನ ಸ್ಮಾರಕ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮತ್ತು ಕುವೆಂಪು ಮತ್ತು ಪುತಿನ ಭಾವಚಿತ್ರಗಳ ಅನಾವರಣ. ‘ಶರಣೆಂಬೆ ಗುರುವಿಗೆ’ ಎಂದು ರಾಗವಾಗಿ ಹಾಡುತ್ತ ತಮ್ಮೊಳಗಿನ ಕವಿಯ ಜತೆಗಿದ್ದ ಹಾಡುಗಾರನನ್ನೂ ತೋರಿಸಿ, ಕುವೆಂಪುವನ್ನು ಸ್ಮರಿಸುತ್ತಾ ಭಾಷಣವನ್ನು ಆರಂಭಿಸಿದ ದೊಡ್ಡರಂಗೇಗೌಡರು ರಸಋಷಿಯನ್ನು ನೆನೆಸಿದ್ದು ಔಚಿತ್ಯಪೂರ್ಣ. ಉದ್ಯಾವರ ಮಾಧವಾಚಾರ್ಯರು ಪುತಿನರನ್ನು ನೆನೆಸಿದ್ದು ಭಾವಪೂರ್ಣ.
  • ನಮ್ಮನ್ನಗಲಿದ ಕೆ. ಎಸ್‌. ನರಸಿಂಹಸ್ವಾಮಿ, ಕೀರ್ತಿನಾಥ ಕುರ್ತಕೋಟಿ, ಎ. ಎನ್‌. ಮೂರ್ತಿರಾಯರು ಮತ್ತು ಎಚ್‌. ಕೆ. ರಂಗನಾಥರನ್ನು ನೆನೆಸಿದ್ದು ಸಂದರ್ಭೋಚಿತ. ಫಿಲಡೆಲ್ಫಿಯಾದ ಸಾಹಿತ್ಯರಂಗದ ಸಮ್ಮೇಳನಕ್ಕೆ ಹೋದವರಿಗೆ ಇದು ರಿಪೀಟ್‌ ಅನ್ನಿಸಿದ್ದರೂ ಪರವಾಗಿರಲಿಲ್ಲ.
  • ಹೊರಗಡೆ ಕನ್ನಡದ ಮೇರುಕೃತಿಗಳ ಹಸ್ತಪ್ರತಿಗಳ ಪ್ರದರ್ಶನ, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಷಿಗಳವರಿಂದ. ಸಾಹಿತ್ಯಾಸಕ್ತರಿಗೆ ತಮ್ಮ ನೆಚ್ಚಿನ ಸಾಹಿತಿಗಳ ಕೈಬರಹವನ್ನು ನೋಡುವ ಸುಸಂದರ್ಭ. ಸುಮಾರು ಅರವತ್ತರಿಂದ ಎಂಭತ್ತು ವರ್ಷದವರೆಗಿನ ಹಿಂದಿನ ಹಸ್ತಪ್ರತಿಗಳನ್ನು ಕಾಪಾಡಿಕೊಂಡು ಬಂದಿರುವ ‘ಮನೋಹರ ಗ್ರಂಥಮಾಲೆ’ಯ ಜೋಷಿಗಳು ಇಂತದೊಂದು ಪ್ರದರ್ಶನವನ್ನು ಏರ್ಪಡಿಸಿದ್ದು ಅಮೆರಿಕನ್ನಡಿಗರ ಸೌಭಾಗ್ಯ.
  • ಅಮೆರಿಕನ್ನಡಿಗರಿಂದ ಬರೆದ ವಿವಿಧ ಪುಸ್ತಕಗಳ ಪುಸ್ತಕ ವಿಮರ್ಶೆ. ಇದರ ಬಗ್ಗೆ ಒಂದು ಮಾತು. ಭಾರತದಿಂದ ಬಂದ ಎಂತವರಿಗೂ ಈ ಕಾರ್ಯಕ್ರಮ, ಸಮ್ಮೇಳನ ‘ಓವರ್‌ವ್ಹೆಲ್ಮಿಂಗ್‌’ ಅನ್ನಿಸಿ ಇಂತ ಕಡೆ ಇರುವವರ ಪುಸ್ತಕ ವಿಮರ್ಶೆ ಮಾಡುತ್ತಿದ್ದೇನೆ ಅನ್ನುವ ಸಮಯೋಚಿತ ‘ಹೃದಯ ತುಂಬುವ’ ಅನ್ನಿಸಿಕೆ ಈ ವಿಮರ್ಶೆಗಳನ್ನು ಪೂರ್ವಗ್ರಹಗೊಳಿಸುತ್ತದೆಯೇನೋ. ಯಾರೂ ಯಾರ ಪುಸ್ತಕದ ಬಗ್ಗೆ ಚೆನ್ನಾಗಿಲ್ಲ ಎಂದು ಹೇಳಲೇ ಇಲ್ಲ. ಇಲ್ಲಿ ಕೂತು ಬರೆಯುತ್ತಿದ್ದಾರೆ ಅನ್ನುವ ‘ಗ್ರೇಸ್‌ ಮಾರ್ಕು’ಗಳೂ ಬಿದ್ದಿರಬಹುದೇನೊ. ಆದರೆ, ಈ ವಿಮರ್ಶೆಗಳನ್ನು ಅಮೆರಿಕದಲ್ಲಿ ಕೂತು ಬರೆಯುತ್ತಿದ್ದವರು, ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಾದ ವಿಮರ್ಶೆ ಎಂದು ತಿಳಕೊಂಡರೆ ಒಳ್ಳೆಯದೇನೋ. ಬರಗೂರರ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಕುರಿತ ವಿಮರ್ಶೆಯಾಂದು ಸಂದರ್ಭೋಚಿತ. ಬರಗೂರರು ಕನ್ನಡ ಸಾಹಿತ್ಯ ಪ್ರಾಧಿಕಾರ ಮತ್ತು ಇತರ ಕರ್ನಾಟಕದ ಸಂಸ್ಥೆಗಳು ಮಾಡುವ ಸಂಕಿರಣಗಳಲ್ಲಿ ಅಮೆರಿಕನ್ನಡಿಗರ ಕೃತಿಗಳನ್ನು ಕುರಿತಾಗಿ ಇನ್ನೂ ಹೆಚ್ಚಿನ ಚರ್ಚೆಗಳನ್ನು ಏರ್ಪಡಿಸುತ್ತೇವೆ ಎಂದಾಗ ಅಮೆರಿಕನ್ನಡಿಗರಿಗೆ ಒಂಚೂರು ನಿರಾಳ. ಶಾಂತಾರಾಮ ಸೋಮಯಾಜಿಯವರ ಎರಡು ಪುಸ್ತಕಗಳು ಈ ಪಟ್ಟಿಯಲ್ಲಿ ಬಿಟ್ಟುಹೋಗಿದ್ದೇಕೋ?. ಬಹುಶಃ ಸೋಮಯಾಜಿಯವರು ‘ಮುಖ್ಯವಾಹಿನಿ’ಯಲ್ಲಿ ಸೇರಿಹೋಗಿರಬಹುದೇನೋ.
  • ಇನ್ನೂ ಅನೇಕ ವಿಷಯಗಳ ಬಗ್ಗೆ ಸಂಕಿರಣಗಳು. ಕುವೆಂಪು, ಕಾರಂತರನ್ನು ನೆನೆಸಿದ್ದು, ಕನ್ನಡ ಸಾಹಿತ್ಯ ಪರಂಪರೆಗಳನ್ನು ‘ಮುಟ್ಟಿ’ ಬಂದದ್ದು, ಭಾಷಾಂತರ ಕುರಿತಾದ ಒಂದು ಕಮ್ಮಟ, ಮತ್ತು ಹಾಸ್ಯೋತ್ಸವ ಗಮನಾರ್ಹ.
  • ಸಾಹಿತ್ಯ ಸಮಿತಿಯ ಕಾರ್ಯಕ್ರಮಕ್ಕೆ ಕಳೆಕಟ್ಟಿದ್ದು ಹಾಸ್ಯೋತ್ಸವದಿಂದ. ಮೂರು ಭಾಗದಲ್ಲಿ ಏರ್ಪಡಿಸಲಾಗಿದ್ದ ಈ ಹಾಸ್ಯೋತ್ಸವದಲ್ಲಿ ಮೊದಲಿಗೆ ಅ.ರಾ. ಮಿತ್ರ, ಕೃಷ್ಣೇಗೌಡರು ಮತ್ತು ನಂಜುಂಡಸ್ವಾಮಿಗಳು ಕ್ರಮವಾಗಿ ನಾ ಕಸ್ತೂರಿ, ಬೀಚಿ ಮತ್ತು ಕೈಲಾಸಮ್‌ರನ್ನು ನೆನೆಸಿಕೊಂಡರು. ಬೀಚಿಯವರ ವಿಶಿಷ್ಟ ರೀತಿಯ ಹಾಸ್ಯವನ್ನು ಕೃಷ್ಣೇಗೌಡರು ಹೇಳಿ ಪ್ರೇಕ್ಷಕರಲ್ಲಿ ನಗುವಿನ ಹೊಳೆಯನ್ನೇ ಹೊಮ್ಮಿಸಿದರೆ, ಅ ರಾ ಮಿತ್ರರವರು ನಾ. ಕಸ್ತೂರಿಯವರ ‘ಜ್ವರ’’ದ ವಿಷಯ ಹೇಳಿ ಹೊಟ್ಟೆ ಹುಣ್ಣಾಗಿಸಿದ್ದರು. ಆದರೆ, ಬರೇ ಸಾಹಿತ್ಯಾಸಕ್ತರಿದ್ದ ಈ ಮೊದಲ ಘಟ್ಟದ ಹಾಸ್ಯೋತ್ಸವದಲ್ಲಿ ಬರೀ ನಕ್ಕಿದ್ದು ಒಂದೈವತ್ತು ಜನ ಮಾತ್ರ. ಆದರೆ, ಮಿತ್ರರಿಗೆ ಮತ್ತು ಕೃಷ್ಣೇಗೌಡರಿಗೆ ತಾರಾಪಟ್ಟ ಸಿಕ್ಕಿದ್ದು ಶನಿವಾರ ರಾತ್ರಿ ಮುಖ್ಯವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ. ಬುಡಬುಡಿಕೆಯವರನ್ನನುಕರಿಸುತ್ತಾ ಸತತವಾಗಿ ಬಿಡದೆ ಮಾತಾಡಿದ ಕೃಷ್ಣೇಗೌಡರನ್ನು ಕಾರ್ಯಕ್ರಮದ ನಂತರ ಜನ ಸುತ್ತುವರೆದಿದ್ದರು. ಜತೆ ನಿಂತು ಫೋಟೋ ತೆಗೆಸಿಕೊಂಡರು. ಮಿತ್ರರಿಗೆ ಮತ್ತು ಗೌಡರಿಗೆ ‘ಇಲ್ಲಿಗೆ ಬಂದಿದ್ದಕ್ಕೂ ಸಾರ್ಥಕವಾಯಿತು’ ಅನ್ನಿಸಿದ್ದರೆ. ಅದಕ್ಕಿಂತ ಹೆಚ್ಚಾಗಿ ಅವರನ್ನು ಇಲ್ಲಿಗೆ ಕರೆಸಿದ್ದಕ್ಕೂ ಸಾರ್ಥಕವಾಯಿತಪ್ಪ ಎಂದು ಕರೆಸಿದ ನಿರ್ವಾಹಕರಿಗೂ, ಕೇಳಿದ ಸಭಿಕರಿಗೂ ಅನ್ನಿಸಿತ್ತು. ಇವರಿಬ್ಬರೂ ಎಷ್ಟು ‘ವರ್ಲ್ಡ್‌ ಫೇಮಸ್‌’ ಆಗಿದ್ದರೆಂದರೆ, ಮಾರನೆಯ ದಿನ ‘ಹಾಸ್ಯೋತ್ಸವ’ದ ಕಾರ್ಯಕ್ರಮಕ್ಕೆಂದು ಬಂದ ಜನ ಅಲ್ಲಿ ‘ಅನುವಾದದ ಬಗೆಗಿನ ಕಮ್ಮಟ’ ವನ್ನು ನೋಡಿ ‘ಅಯ್ಯೋ, ಇದು ಹಾಸ್ಯೋತ್ಸವ ಅಲ್ವಾ...., ಮತ್ತೆ ಬರೋಣ ಬನ್ರೀ’ ಎಂದುಕೊಂಡು ಹೊರಗೆ ಹೋದರು. ಅನುವಾದದ ಬಗ್ಗೆ ಏನೋ ಪ್ರಶ್ನೆ ಕೇಳಿದ್ದ ಯಾರೋ ಪ್ರೇಕ್ಷಕರಿಗೆ ಎಲ್ಲರೂ ‘ಭೂ’ ಮಾಡಿದ್ದು ಬೇರೆ ಸಂದರ್ಭದಲ್ಲಿ ಅನಾಗರೀಕ ಅನ್ನಿಸಿದ್ದರೂ ಮುಂದೆ ಬರಲಿರುವ ಮಿತ್ರ, ಗೌಡರ ನಗೆಮಿಂಚಿನ ಅಪೇಕ್ಷೆಯಲ್ಲಿ ಒಂದು ರೀತಿ‘ಪೊಲಿಟಿಕಲಿ’ ಸರಿಯೆನ್ನಿಸಿಬಿಟ್ಟಿತ್ತು. ಗೌಡ ಮತ್ತು ಮಿತ್ರರ ನಂತರ ಜನಗಳನ್ನು ನಗಿಸುವುದು ಕಷ್ಟ ಎಂದು ಎರಡು ಬಾರಿಯೂ ಅವರ ನಂತರ ಬಂದ ನಂಜುಂಡಸ್ವಾಮಿಯವರಿಗೆ ಅನ್ನಿಸಿರಬಹುದು. ಒಟ್ಟು , ‘ಹಾಸ್ಯೋತ್ಸವ’ ಈ ಬಾರಿಯ ಸಮ್ಮೇಳನದ ಅತ್ಯಂತ ಯಶಸ್ವಿ ಕಾರ್ಯಕ್ರಮವೆನ್ನುವುದರಲ್ಲಿ ಅನುಮಾನವೇನಿಲ್ಲ.

ಚಂಡಮಾರುತದ ಕಾರಣ ಕೆಲವು ಕಾರ್ಯಕ್ರಮಗಳು ರದ್ದಾದರೂ, ಒಟ್ಟಾರೆ ಒಂದು ಅರ್ಥಪೂರ್ಣ ಸಮಾರಂಭವನ್ನು ಮಾಡಿದ ತೃಪ್ತಿ ನಂಜುಂಡಸ್ವಾಮಿಯವರ ಮುಖದಲ್ಲಿ, ಕೊನೆಗೆ. ಸಕಾರಣವಾಗಿಯೇ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more