ನನ್ನ ಪತ್ರಕ್ಕೆ ನಲ್ಲೆ ಬರೆದ ನಾಲ್ಕು ಸಾಲುಗಳ ಉತ್ತರ

ಪೋಸ್ಟ್ ಮಾಡಿಯಾದ ಮೇಲೆ ಏನು ಒಂತರ ಮನಸ್ಸಲ್ಲಿ ಭಯ, ಕಾತರ, ಚಡಪಡಿಕೆ... ಆ ದಿನವೆಲ್ಲ ಸರಿಯಾಗಿ ಊಟವೂ ಸೇರಲಿಲ್ಲ, ನಿದ್ದೆಯೂ ಸುಳಿದಿರಲಿಲ್ಲ. ಒಂದು ದಿನ ಆಯ್ತಾ, ಎರಡು, ಮೂರು... ಹತ್ತು ದಿನವಾಯ್ತು.. ಏನು ಸುದ್ದಿ ಇಲ್ಲ. ಏನರ ಕಾರ್ಡು ಅವಳ ಹಾಸ್ಟೆಲ್ ವಾರ್ಡನ್ ಕೈಗೆ ಸಿಕ್ಕು ಅವರೇನಾದರೂ ರಂಪ ಮಾಡಿರಬಹುದಾ? ಅಥ್ವಾ ನಿರುಪಮ ಸಿಟ್ಟಾಗಿ ಮಾಮನ ಹತ್ತಿರ ಏನರ ಹೇಳಿರಬಹುದಾ? ಮಾಮ ಏನರ ನಮ್ಮ ಅಮ್ಮ-ಅಪ್ಪನ ಬಳಿ ಹೇಳಿದರೆ ಏನು ಗತಿ? ಓಹ್ ಯಾಕಾದ್ರು ಬರೆದನಪ್ಪ ಈ ಪತ್ರ...? ಅಂತ ಎಲ್ಲ ವಿಚಾರ ಸುರುಳಿಗಳು ಮನದಲ್ಲೇ ಗುಂಯ್ಯ್ ಅಂತಾ ತಿರುಗುತ್ತಿದ್ದರೂ... ಎಲ್ಲೋ ಒಂದು ಮೂಲೆಯಲ್ಲಿ ಅವಳು ಸಹಾ ಒಪ್ಪಿ ಪತ್ರ ಬರೆದರೂ ಬರೆಯಬಹುದು ಎಂದು ದಿನಾ ಪೋಸ್ಟ್ ಮ್ಯಾನ್ ಬರೋದನ್ನೇ ಬಕಪಕ್ಷಿಯಂತೆ ಕಾದು ಕೂತಿದ್ದೆ. ಈಗಿನಂತೆ ಫೇಸ್ ಬುಕ್, ಟ್ವಿಟರ್, ಎಸ್ಎಮ್ಎಸ್, ಇಮೇಲ್ ಇದ್ದಿದ್ದರೆ ತಕ್ಷಣವೇ ಮೆಸೇಜ್ ಅವಳಿಗೆ ಹೋಯಿತೋ ಇಲ್ಲವೋ, ರೀಡ್ ಮಾಡಿದಳೋ ಇಲ್ವೋ? ಅಂತ ಗೊತ್ತಾಗುತ್ತಿತ್ತು.
ಹದಿನೈದು ದಿನಕೊಮ್ಮೆ ನೋಡಲು ಹೋಗುತ್ತಿದ್ದ ನನಗೆ ಇಪ್ಪತ್ತು ದಿನಗಳಾದರೂ ಹೋಗಲು ಏನೋ ಹಿಂಜರಿಕೆಯಾಗಿ ಹಾಗೇ ರೂಮಲ್ಲಿ ಮೈಕ್ರೋ ಪ್ರೋಸೆಸರ್ ಬುಕ್ ನಲ್ಲಿ ಕಣ್ಣಾಕಿದ್ದರೂ, ಮನದಲ್ಲಿ ಏನೋ ಬೇರೆ ಪ್ರೋಸೆಸ್ಸ್ ನಡಿತಾ ಇತ್ತು!
ಪೋಸ್ಟ್ ಅಂತಾ ಕೂಗು ಕೇಳಿ ಹೊರಗಡೆ ಬಂದಾಗ, ಪೋಸ್ಟ್ ಮ್ಯಾನ್ "ನಾಗೇಶ... ನೋಡಪಾ ದಿನ ಕೇಳ್ತಿದ್ದೆ ಅಲ್ವಾ.. ಬಂದಿದೆ ನೋಡು ಪತ್ರ ಈ ದಿನ ನಿನಗೆ" ಅಂತ ಹೇಳಿ ಕೊಟ್ಟು ಹೋದಾಗ, ಓಪನ್ ಮಾಡುವಾಗ ಆಗುತ್ತಿದ್ದ ಹೃದಯದ ಬಡಿತ ಪಕ್ಕದಲ್ಲಿ ನಿಂತಿದ್ದವರಿಗೂ ಕೇಳುವಂತಿತ್ತು.
ಬರೆದಿದ್ದಳು ಅವಳು ಅದರಲ್ಲಿ...
ಬಂದು ತಲುಪಿತು ನಿನ್ನ ಪತ್ರ ..
ಅದ ಓದಿ, ಸುಳಿಯುತ್ತಿಲ್ಲ ನಿದ್ದೆ ಹತ್ರ ..
ಗೊತ್ತಿಲ್ಲ..ಅದೇನು ಹಾಕಿರುವೆಯೋ ಮಾಟ ಮಂತ್ರ
ಬುಕ್ ಓಪನ್ ಮಾಡಿದರೆ ಕಾಣುವುದು ನಿನ್ನದೇ ಚಿತ್ರ..!
-ನಿನ್ನವಳು
ಹುರ್ರೇ ಅಂದು ಕುಣಿದಾಡಿದ್ದೆ ಅಲ್ಲೇ ಹೊರಗಡೆ ಹುಚ್ಚನಂತೆ. ಮಾರನೆ ದಿನ ಆ ಪೋಸ್ಟ್ ಮ್ಯಾನ್ಗೆ ಒಂದು ಸ್ವೀಟ್ ಬಾಕ್ಸ್ ಕೊಟ್ಟು ಥ್ಯಾಂಕ್ಸ್ ಅಂತಾ ಹೇಳಿದ್ದಾಗ ಅವ ಹಂಗೆ ಕಣ್ಣು ಮಿಟುಕಿಸಿ ನಕ್ಕಿದ್ದ!












Click it and Unblock the Notifications