ನೆಲೆ ಇರದ ಮೋಡಗಳು (ಭಾಗ 4)

Vasant Kulkarni, Singapore
ಸುಮಾರು ಎರಡು ವಾರದ ನಂತರ ಸಂಜೆಯ ಸಮಯ ಆಫೀಸಿನಿಂದ ಮನೆಗೆ ಮರಳುತ್ತಿದ್ದೆ. ಆ ಬಸ್ ಸ್ಟಾಪಿನಿಂದ ಹತ್ತು ಹೆಜ್ಜೆ ಮುಂದೆ ರಸ್ತೆಯ ಮೇಲೆ ಕೆಲವು ಜನ ನಿಂತಿದ್ದರು. ಆಂಬ್ಯುಲನ್ಸ್ ಮತ್ತು ಪೋಲಿಸರು ಕೂಡ ಕಾಣಿಸಿದರು. ಇದೇನೋ ಆಕ್ಸಿಡೆಂಟ್ ಇರಬಹುದು ಎನಿಸಿ, ನೋಡುವ ಕೆಟ್ಟ ಕುತೂಹಲದಿಂದ ಅತ್ತ ನಡೆದೆ. ಆಂಬ್ಯುಲನ್ಸ್‌ನಲ್ಲಿ ಅದಾರನ್ನೋ ಎತ್ತಿ ಹಾಕುತ್ತಿದ್ದರು. ನೋಡಿದಾಗ ಅದೇ ವೃದ್ಧೆ! ಹೃದಯ ಹಿಂಡಿದಂತಾಗಿ, ಪಕ್ಕದವರೊಬ್ಬರನ್ನು ಏನಾಯಿತು ಎಂದು ಕೇಳಿದೆ. ಏನನ್ನೋ ಧೇನಿಸುತ್ತ ಬಸ್ ಸ್ಟಾಪಿನಲ್ಲಿ ಕುಳಿತ ಈ ವೃದ್ಧೆ, ಒಮ್ಮೇಲೇ ಅದೇನನ್ನೋ ಕಿರುಚಿ, ರಸ್ತೆಯ ಪಕ್ಕಕ್ಕೆ ಬಂದು ವೇಗವಾಗಿ ಸಾಗುತ್ತಿದ್ದ ಕಾರೊಂದನ್ನು ಹಿಂಬಾಲಿಸಲೆತ್ನಿಸಿದಳಂತೆ. ಹಾಗೆಯೇ ಎಡವಿ ಬಿದ್ದು ಮೂರ್ಛೆ ತಪ್ಪಿದಳಂತೆ. ಅದಾರೋ ಆಂಬ್ಯುಲೆನ್ಸ್ ಮತ್ತು ಪೋಲಿಸರನ್ನು ಕರೆದರಂತೆ. ಮತ್ತೊಮ್ಮೆ ಆಕೆಯತ್ತ ನೋಡಿದಾಗ ದೀರ್ಘ ನಿದ್ದೆಯಲ್ಲಿದ್ದಂತೆ ಕಂಡಿತು.

ಕೈಯಲ್ಲಿನ ಚೀನೀ ನ್ಯೂಸ್ ಪೇಪರನ್ನು ತೆಗೆದು ಪಕ್ಕದಲ್ಲಿರಿಸಿದ ಆಂಬ್ಯುಲೆನ್ಸ್‌ನವರು ಅವಳನ್ನು ಮಲಗಿಸಿ ಹೊರಟು ಹೋದರು. ನಾನು ಆ ನ್ಯೂಸ್ ಪೇಪರನ್ನು ಕೈಗೆತ್ತಿಕೊಂಡೆ. ಮುಖ ಪುಟದ ಮೇಲೆ ಟೀನೇಜ್ ಹುಡುಗನೊಬ್ಬನ ಭಾವ ಚಿತ್ರವಿತ್ತು ಮತ್ತು ಅದರೊಂದಿಗೆ ಚಿಕ್ಕ ಲೇಖನ ಕಂಡಿತು. ಚೀನೀ ಭಾಷೆ ಆದುದರಿಂದ ಏನೂ ತಿಳಿಯಲಿಲ್ಲ. ಈ ಹುಡುಗನೇ ಆ ತಾಯಿಯ ಮಗನಿರಬಹುದೇ ಎನಿಸಿತು. ಈ ಸುದ್ದಿ ಏನಿರಬಹುದು? ಅವನಿಗೆ ನ್ಯಾಶನಲ್ ಸರ್ವಿಸ್‌ನಲ್ಲೋ ಅಥವಾ ಸ್ಕೂಲಿನಲ್ಲೋ ಬಹುಮಾನವೇನಾದರೂ ಬಂದಿರಬಹುದೆ ಎಂಬ ವಿಚಾರ ಬಂದಿತು. ಅರೆಕ್ಷಣದಲ್ಲಿ ಆತನಿಗೇನಾದರೂ ಆಗಿದೆಯೇ ಎಂಬ ಕೆಟ್ಟ ವಿಚಾರ ಕೂಡ ಸುಳಿಯಿತು. ಛೆ, ಛೆ ಇರಲಿಕ್ಕಿಲ್ಲ ಎಂದು ಅದನ್ನು ಹತ್ತಿಕ್ಕಿ, ಸುತ್ತಲೂ ನೋಡಿದೆ. ಅಲ್ಲೆಲ್ಲೂ ಆ ಮಲಯ ಮುದುಕ ಕಾಣಿಸಲಿಲ್ಲ. ಮನಸ್ಸಿನಲ್ಲೇ ಮರುಕಪಟ್ಟುಕೊಳ್ಳುತ್ತ ಮನೆಯತ್ತ ನಡೆದೆ.

ಮರುದಿನವೇ ನನ್ನ ಸಂಜೆಯ ನಡಿಗೆಗೆ ಒಬ್ಬನೇ ಹೋಗಿದ್ದೆ. ಮೈ ಸರಿಯಿಲ್ಲವಾದ್ದರಿಂದ ಮಗಳು ಮತ್ತು ಅವಳನ್ನು ನೋಡಿಕೊಳ್ಳಲು ಪತ್ನಿ ಮನೆಯಲ್ಲೇ ಉಳಿದಿದ್ದರು. ಬಸ್ ಸ್ಟಾಪಿನಲ್ಲಿ ಮಲಯ ಮುದುಕ ಕಂಡ. ನನಗೆ ತಡೆಯಲಾಗದೇ ಅವನಿಗೆ ಆ ವೃದ್ಧೆಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದ ಬಗ್ಗೆ ಹೇಳಿದೆ. ಆತ ನಿರಾಸಕ್ತಿಯಿಂದ ನನ್ನತ್ತ ನೋಡಿ, "ಓ! ಅವಳಾ! ಅವಳಿಗೆ ಹುಚ್ಚು. ನ್ಯಾಶನಲ್ ಸರ್ವಿಸಿನಲ್ಲಿದ್ದ ಅವಳ ಮಗ ಆಕ್ಸಿಡೆಂಟ್‌ನಲ್ಲಿ ತೀರಿ ಹೋದ ನಂತರ, ಅವಳಿಗೆ ಮತಿ ಭ್ರಮಣೆ! ಎಂದಿನಂತೆ ತನ್ನ ಮಗ ಬರುತ್ತಾನೆ ಎಂದು ಈ ಬಸ್ ಸ್ಟಾಪಿನಲ್ಲಿ ಬಂದು ಕಾಯುವದು, ಅವಳ ಮಗ ಹಿಂದೆಂದೋ ಬರೆದ ಪತ್ರವನ್ನು ಓದಲು ಎಲ್ಲರಿಗೂ ಕೇಳುವದು ಅವಳ ರೂಢಿ" ಎಂದು ನಿರ್ವಿಕಾರವಾಗಿ ಹೇಳಿದ.

ನನಗೋ ಭಯಂಕರ ಶಾಕ್! ಅಯ್ಯೋ ದೇವರೇ! ಆ ಮಾತೃ ಹೃದಯದಲ್ಲಿ ಅದೆಂತಹ ನೋವಿನ ಬೆಂಕಿ ಹಾಕಿಟ್ಟಿದ್ದೀಯ ಎಂದುಕೊಂಡೆ. ದಿಗ್ಭ್ರಮೆಯಾಗಿ ಅವನತ್ತಲೇ ನೋಡುತ್ತ ನಿಂತ ನನ್ನನ್ನು ನೋಡಿದ ಆತ, ಮರುಕದಿಂದ ಹೇಳಿದ "ಅವಳೊಂದಿಗೆ ಕಾಲ ಬಹಳ ಕೆಟ್ಟದಾಗಿ ನಡೆದುಕೊಂಡಿದೆ. ಒಬ್ಬನೇ ಮಗ, ಹೀಗೆ ಹರೆಯದಲ್ಲಿ ಸಾಯಬಾರದಾಗಿತ್ತು. ಆದರೆ ಏನು ಮಾಡುವದು? ಇದೇ ವಿಧಿ ಲಿಖಿತ ಅಲ್ಲವೇ?"

ಭಾರವಾದ ಹೆಜ್ಜೆಯಿಂದ ಮನೆಗೆ ಮರಳಿದೆ. ಸ್ವಲ್ಪ ದಿನ ನನ್ನನ್ನು ವ್ಯಾಕುಲತೆ ಕಾಡಿತ್ತು. ಆದರೇನು? ಇಂದಿನ ವಿಶ್ವ ಸಮಾಜವೆಂಬ ಆಗಸದಲ್ಲಿ ನಮ್ಮಂತಹ ಜನರು ನೆಲೆ ಇರದ ಮೋಡಗಳಿದ್ದಂತೆ. ಎಲ್ಲಿ ಇರುತ್ತೇವೋ ಅಲ್ಲಿ ನಮ್ಮ ಕರ್ತವ್ಯ ಸಲ್ಲಿಸಿ ಮತ್ತೆಲ್ಲೋ ಹೋಗುವದು ನಮ್ಮ ಕಾಯಕ. ನಮ್ಮ ಮನೋಭಾವನೆಗಳೇನಿದ್ದರೂ ನಾವೇನೂ ಮಾಡಲಾಗದ ಅಸಹಾಯಕತೆ ನಮ್ಮದು. ಮನಸ್ಸು ಅಯ್ಯೋ ಎಂದು ಮರುಗುತ್ತದೆ, ಎಲ್ಲ ಒಳಿತಾಗಲಿ ಎಂದು ತುಡಿಯುತ್ತದೆ ಅಷ್ಟೆ! ಹಾಗಾಗದಿದ್ದರೆ ಮನಸ್ಸು ಕಲಕುತ್ತದೆ, ಕಳವಳಗೊಳ್ಳುತ್ತದೆ.

ಸಮಯದ ಓಟ ನನ್ನನ್ನು ಮತ್ತೆ ಸುಧಾರಿಸಿತಾದರೂ, ಆ ವೃದ್ಧೆ ಮತ್ತು ನಾನೆಂದೂ ನೋಡದ ಆಕೆಯ ಮಗ ನನ್ನ ಮನದ ಮೂಲೆಯಲ್ಲೆಲ್ಲೋ ಉಳಿದುಕೊಂಡರು. ಅಂದಿನಿಂದ ನಾನು ನನ್ನ ನಿತ್ಯದ ನಡಿಗೆಯ ಮಾರ್ಗವನ್ನು ಬದಲಾಯಿಸಿಕೊಂಡೆ. ಆದರೂ ಆಗಾಗ ನಾನು ಆ ಬಸ್‌ಸ್ಟಾಪಿನತ್ತ ಹೋಗಬೇಕಾಗಿ ಬರುತ್ತದೆ. ಅಲ್ಲಿ ಆ ವೃದ್ಧೆಯನ್ನು ಕಾಣಲು ಮನ ಆಶಿಸುತ್ತದೆ, ದೃಷ್ಟಿ ಅತ್ತ ಸರಿಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+