ನೆಲೆ ಇರದ ಮೋಡಗಳು (ಭಾಗ 3)

Vasant Kulkarni, Singapore
ಒಂದೆರಡು ದಿನ ಈ ಘಟನೆ ಮನಸ್ಸಿನಿಂದ ಮರೆಯಾಗಲಿಲ್ಲ. ಕೊನೆಗೆ ಆ ಮಗ ಬಂದು ತನ್ನ ತಾಯಿಯನ್ನು ಭೇಟಿಯಾದನೇ ಎಂಬುದು ಪ್ರಶ್ನೆಯಾಗಿಯೇ ಉಳಿಯಿತಾದರೂ, ಕ್ರಮೇಣ ಕೆಲಸದ ಭರಾಟೆ ಮತ್ತು ಟಾರ್ಗೆಟ್‌ಗಳ ಒತ್ತಡದಲ್ಲಿ ಮನದ ಆಳದಲ್ಲೆಲ್ಲೋ ಹುದುಗಿ ಮರೆಯಾಯಿತು. ಕೆಲಸದಿಂದ ಬರುವದು ತಡವಾಗ ತೊಡಗಿ, ಒಂದು ವಾರ ನನ್ನ ರಾತ್ರಿಯ ಊಟದ ನಂತರದ ನಡಿಗೆಗೆ ಕೂಡ ಹೋಗಲಾಗಲಿಲ್ಲ. ವಾರದ ನಂತರ ಅದೊಮ್ಮೆ ಮತ್ತೆ ಎಲ್ಲರೂ ಕೂಡ ನಡಿಗೆಗೆ ಹೋದೆವು. ಅದೇ ಮಲಯ ಮುದುಕ ತನ್ನ ಸಿಗರೇಟು ಸೇವನೆಯಲ್ಲಿ ಮಗ್ನನಾಗಿದ್ದವ, ನಮ್ಮನ್ನೊಮ್ಮೆ ನೋಡಿ ಪರಿಚಯದ ನಗೆ ನಕ್ಕ. ತಕ್ಷಣ ನನಗೆ ಆ ತಾಯಿಯ ನೆನಪು ಬಂದಿತು.

ಏನಾಯಿತೋ ಎಂದು ಒಂದು ಕ್ಷಣ ಯೋಚಿಸಿದೆನಾದರೂ, ಅವಳ ಮಗ ತನ್ನ ನ್ಯಾಷನಲ್ ಸರ್ವೀಸ್‌ನಿಂದ ಬಂದು ಭೇಟಿಯಾಗಿರಬಹುದು ಎನಿಸಿತು. ಆ ಮಲಯ ಮುದುಕನನ್ನೊಮ್ಮೆ ಕೇಳಬೇಕೆನಿಸಿತು. ಆದರೆ ಇಲ್ಲಿಯ ಜನ ಹೀಗೆ ಮತ್ತೊಬ್ಬರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ, ಗೊತ್ತಿದ್ದರೂ ಇನ್ನೊಬ್ಬರಿಗೆ ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ ಎಂದು ಗೊತ್ತಿದ್ದುದರಿಂದ ಉಕ್ಕಿ ಬಂದ ಕುತೂಹಲವನ್ನು ತಡೆದುಕೊಂಡೆ. ಮನಸ್ಸಿನಲ್ಲೇ, ಆ ತಾಯಿ ಮಗ ಭೇಟಿಯಾಗಿರಲಿ ಎಂದು ಪ್ರಾರ್ಥಿಸಿದೆ.

ಇದಾಗಿ ಮೂರನೇಯ ದಿನವೇ ಭಾನುವಾರದ ರಜೆಯ ದಿನ. ಮುಂಜಾನೆ ಹತ್ತು ಗಂಟೆಯ ಸಮಯ. ಸಮೀಪದ ಸೂಪರ್ ಮಾರ್ಕೆಟ್ಟಿಗೆ ಹೋಗಿ ಬರತೊಡಗಿದ್ದೆ. ಆಗ ತಾನೆ ಮಳೆ ಬಂದು ನಿಂತಿತ್ತು. ಸೂರ್ಯ ಮೋಡಗಳ ಮರೆಯಿಂದ ಇಣುಕಿ ನೋಡತೊಡಗಿದ್ದ. ಸೂರ್ಯ ರಶ್ಮಿ ಒದ್ದೆಯಾದ ನೆಲದ ಮೇಲೆ ಬಿದ್ದು, ಪ್ರತಿಫಲಿಸುತ್ತಿತ್ತು. ಅದೇ ತಾನೆ ಸ್ನಾನ ಮಾಡಿದ ಗಿಡ ಮರಗಳು ನವ ಉಲ್ಲಾಸ ತುಂಬಿ ಓಲಾಡುತ್ತಿವೆ ಎಂಬ ಭಾಸವಾಗುತ್ತಿತ್ತು. ಒಂದು ಕ್ಷಣ ನಮ್ಮೂರಿನ ಶ್ರಾವಣದ ಮಳೆಯ ಮಧ್ಯದ ಹೂಬಿಸಿಲನ್ನು ನೆನಪಿಗೆ ತಂದು ವರ್ತಮಾನವನ್ನು ಆ ಕ್ಷಣದಲ್ಲಿ ಮರೆಯುವಂತೆ ಮಾಡಿತು.

ನನಗರಿವಿಲ್ಲದೇ ನಡೆಯುತ್ತಾ ಮತ್ತೆ ನಾನು ಅದೇ ಬಸ್ ಸ್ಟಾಪಿನವರೆಗೆ ಬಂದೆ. ನನ್ನನ್ನು ತಟ್ಟನೇ ಮತ್ತೆ ವರ್ತಮಾನಕ್ಕೆ ಕರೆ ತಂದದ್ದು, ಅದೇ ವೃದ್ಧೆ ಬಸ್ ಸ್ಟಾಪಿನಲ್ಲಿ ಕುಳಿತಿದ್ದಳು. ಅದೇಕೋ ಶೂನ್ಯದಲ್ಲಿ ದೃಷ್ಟಿ ನೆಟ್ಟಂತೆ ಕಾಣಿಸಿತು. ಕೈಯಲ್ಲಿ ಅದೇನೋ ಚೀನೀ ಭಾಷೆಯ ನ್ಯೂಸ್ ಪೇಪರ್ ಒಂದು ಇತ್ತು. ಮುಖ ಭಾವಹೀನವಾಗಿತ್ತೋ, ಒಡಲು ತುಂಬಿದ ದುಃಖ ಮುಖದ ಭಾವಗಳನ್ನು ಮರೆ ಮಾಚಿತ್ತೋ ತಿಳಿಯಲಿಲ್ಲ. ಅಯ್ಯೋ, ಇವಳ ಮಗ ಇನ್ನೂ ಬಂದು ಇವಳನ್ನು ಭೇಟಿಯಾಗಿಲ್ಲವೋ ಏನೋ ಎನಿಸಿತು. ಒಂದು ಕ್ಷಣ ಕೇಳಬೇಕು ಎನಿಸಿತು. ಪರಿಚಯವೇ ಇರದ ನಾನು ಹೇಗೆ ಕೇಳುವದು ಎನಿಸಿ ಸುಮ್ಮನಾದೆ. ಅಲ್ಲದೇ ಸುತ್ತಲಿನ ಪರಿವೇ ಇಲ್ಲದೇ ಮತಿ ಭ್ರಮಣೆಯಾದವರ ತರಹ ಕುಳಿತಿದ್ದ ಅವಳನ್ನು ಏನು ತಾನೆ ಕೇಳುವುದು? ಬೇಗ ಈಕೆಯ ಮಗ ವಾಪಸ್ ಬರಲಿ ಎಂದು ಪ್ರಾರ್ಥಿಸಬೇಕಷ್ಟೆ.

ಪಕ್ಕದ ಕಂಬದ ಆಚೆ, ಎಂದಿನಂತೆ ಮಲಯ ಮುದುಕ ಸಿಗರೇಟು ಸೇದುತ್ತಾ ಏನೋ ಯೋಚನೆಯಲ್ಲಿ ಮುಳುಗಿದ್ದ. ಎಲ್ಲಿಂದಲೋ ಬಂದು ಇಲ್ಲಿನ ಸಂಸ್ಕೃತಿ, ಸಭ್ಯತೆಯ ಜೊತೆ ಹೊಂದಿಕೊಳ್ಳಲು ಹೆಣಗುತ್ತಿದ್ದ ನಮ್ಮಂತಹ ಜನರ ಭಾವನೆಗಳ ತಾಕಲಾಟಕ್ಕೆ ಮೂಕ ಸಾಕ್ಷಿ ಆತ ಎಂಬ ಭಾಸವಾಯಿತು. ನಾವೆಲ್ಲೋ ಆತನೆಲ್ಲೋ, ನಮ್ಮ ಭಾವನೆಗಳನ್ನು ಆತ ಹೇಗೆ ಅರಿಯಬಲ್ಲ ಎಂದು ನನ್ನಲ್ಲಿ ಉದಿಸಿದ ವಿಚಾರಕ್ಕೆ ನಾನೇ ನಕ್ಕು ಮುಂದೆ ಹೆಜ್ಜೆ ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+