ನೆಲೆ ಇರದ ಮೋಡಗಳು (ಭಾಗ 2)

ರ‍್ಯಾನ್ ಎಂಬ ಹೆಸರಿನ ಆ ಹುಡುಗನ ಸುಂದರ ಮತ್ತು ಅಚ್ಚುಕಟ್ಟು ಪತ್ರ ಓದಿ ಹೇಳಿದ ನಂತರ, ಆ ತಾಯಿಯ ಮುಖವನ್ನು ನೋಡಿದೆ. ಮಂದ ಬೆಳಕಿನಲ್ಲಿ ಅವಳ ಕಣ್ಣುಗಳಲ್ಲಿ ನೀರು ತುಂಬಿದ್ದು ಕಂಡು ಬಂದಿತು. ಪತ್ರವನ್ನು ನನ್ನ ಕೈಯಿಂದ ಇಸಿದುಕೊಂಡು ಅಲ್ಲಿಂದ ಹೊರಟಳು. ಹಾಗೆಯೇ ಒಮ್ಮೆ ಹಿಂದೆ ತಿರುಗಿ, "ತಿಂಗಳ ಮೇಲಾಯಿತು, ನನ್ನ ಮಗ ನ್ಯಾಷನಲ್ ಸರ್ವಿಸ್‌ಗೆ ಹೋಗಿ. ಇನ್ನೂ ಬಂದಿಲ್ಲ. ನಡು ನಡುವೆ ಬಂದು ಭೆಟ್ಟಿಯಾದರೆ ನನಗೂ ಸಂತೋಷ ಅಲ್ಲವೇ? ಇಲ್ಲದಿದ್ದರೆ ಚಿಂತೆಯಾಗುತ್ತೆ" ಎಂದು ನನ್ನ ಉತ್ತರಕ್ಕೂ ಕಾಯದೇ ಅಲ್ಲಿಂದ ಸರಸರ ಹೊರಟು ಹೋದಳು.
ಈಗ ತಾನೇ ಬಾಲ್ಯದಿಂದ ಹೊರಬಂದ ಟೀನೇಜ್ ಮಕ್ಕಳನ್ನು ನ್ಯಾಷನಲ್ ಸರ್ವೀಸ್‌ಗೆ ಕಳಿಸಿದ ಅನೇಕ ತಂದೆ ತಾಯಿಯರ ಮನಸ್ಸಿನ ತುಮುಲದ, ಚಿಂತೆಯ ಬಗ್ಗೆ ಅದುವರೆಗೆ ಕೇಳಿ ಮಾತ್ರ ಬಲ್ಲ ನನಗೆ, ಅದರ ಒಂದು ಮುಖವನ್ನು ಅಂದು ಕಣ್ಣಾರೆ ಕಂಡಂತಾಯಿತು. ಆ ತಾಯಿಯ ಕಣ್ಣೀರು ತುಂಬಿದ ಮುಖ ಮತ್ತು ಚಿಂತೆಯ ರೇಖೆಗಳನ್ನು ನೋಡಿದ ನನಗೆ, ನೌಕರಿ ಮಾಡಲೆಂದು ಮೊಟ್ಟ ಮೊದಲು ನನ್ನೂರು ಬಿಟ್ಟು ಹೊರಟಾಗ, ಮೈಯಲ್ಲಿ ಸುಡುವ ಜ್ವರವಿದ್ದರೂ, ನನ್ನನ್ನು ಕಳಿಸಲು ಬಸ್ ಸ್ಟ್ಯಾಂಡಿನವರೆಗೂ ಬಂದಿದ್ದ ತಂದೆಯ ಮುಖ ನನ್ನ ನೆನಪಿನಾಳದಿಂದ ಬಂದು ಪ್ರಜ್ಞೆಯ ಆಗಸದಲ್ಲಿ ತೇಲಿ ಮರೆಯಾಯಿತು.
ನಮ್ಮ ಮಾತನ್ನೆಲ್ಲ ಮುಗ್ಧ ಭಾವದಲ್ಲಿ ಕೇಳುತ್ತ ನಿಂತಿದ್ದ ಮಗಳ ಕೈಯನ್ನು ಒಂದು ಕ್ಷಣ ಭದ್ರವಾಗಿ ಹಿಡಿದು ಕೊಂಡೆ. ಪ್ರಾಣಿ ಸಂಕುಲವಾಗಲಿ, ಪಕ್ಷಿ ಸಂಕುಲವಾಗಲಿ ಅಥವಾ ಮನುಷ್ಯರೇ ಆಗಲಿ, ಎಲ್ಲ ತಂದೆ ತಾಯಿಗಳ ಹಣೆ ಬರಹವೇ ಇಷ್ಟು. ಕಷ್ಟ ಪಟ್ಟು ಬೆಳೆಸಿದ ಮೇಲೆ ಹೊರಗಿನ ಜಗವನ್ನು ಎದುರಿಸಲು ಮಕ್ಕಳನ್ನು ಕಳಿಸಲೇಬೇಕು. ಅದು ಈ ಜಗದ ರೀತಿ. ಇದನ್ನು ತಪ್ಪಿಸಲು ಸಾಧ್ಯವಿಲ್ಲ, ಆದರೆ ಹಾಗೆ ಕಳುಹಿಸಿ ಅವರ ಭದ್ರತೆಯ ಮತ್ತು ಸುರಕ್ಷಿತತೆಯ ಬಗ್ಗೆ ಚಿಂತಿಸಿ ಕೊರಗುವದು ಮಾತ್ರ ತಪ್ಪುವದಿಲ್ಲ. ಇನ್ನೂ ಸರಿಯಾಗಿ ಮಾತನಾಡಲು ಕೂಡ ಬರದ ಪುಟ್ಟ ಮಗಳನ್ನು ಮೊಟ್ಟ ಮೊದಲು ಕಿಂಡರ್ ಗಾರ್ಟನ್‌ನಲ್ಲಿ ಬಿಟ್ಟು ಬರುವಾಗ ಆದ ತಳಮಳವನ್ನು ನಾನೊಮ್ಮೆ ನೆನೆಸಿಕೊಂಡೆ.












Click it and Unblock the Notifications