ವೀಕೆಂಡ್‌ನಲ್ಲಿ ಧರ್ಮಸ್ಥಳ-ಕುಕ್ಕೆಗೆ ಹೋಗುವವರಿಗೆ ಗುಡ್‌ನ್ಯೂಸ್: ವಿಶೇಷ ದರ್ಶನದೊಂದಿಗೆ KSTDC ಹೊಸ ಟೂರ್ ಪ್ಯಾಕೇಜ್
ಬೆಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಬೆಂಗಳೂರಿನ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಅನುಕೂಲವಾಗುವಂತೆ ಕೆಎಸ್‌ಟಿಡಿಸಿ ವೀಕೆಂಡ್ ಟೂರ್ ಪ್ಯಾಕೇಜ್ ಒಂದನ್ನು ಹೊಸದಾಗಿ ಪರಿಚಯಿಸಿದೆ. ದೇವಸ್ಥಾನಗಳಲ್ಲಿ ವಿಶೇಷ ದರ್ಶನದ ವ್ಯವಸ್ಥೆಯನ್ನೂ ಈ ಪ್ಯಾಕೇಜ್ ಒಳಗೊಂಡಿರುವುದು ವಿಶೇಷವಾಗಿದೆ.
ಇದೇ ಜೂನ್ 13ರಿಂದ (ಇಂದು) ಈ ನೂತನ ಬಸ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಡಿಲಕ್ಸ್ ಬಸ್‌ಗಳ ಮೂಲಕ ಈ ವಾರಾಂತ್ಯದ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಸ್ಪಂದನೆ ಹಾಗೂ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ, ಈ ಸೇವೆಯನ್ನು ಪ್ರತಿದಿನ ಒದಗಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಪ್ರವಾಸದ ವೇಳಾಪಟ್ಟಿ ಹೇಗಿರಲಿದೆ?
ಪ್ರವಾಸಿಗರಿಗೆ ಯಾವುದೇ ರೀತಿಯ ಸುಸ್ತು ಹಾಗೂ ಸಮಯ ವ್ಯರ್ಥವಾಗದಂತೆ ಈ ಪ್ಯಾಕೇಜ್ ಅನ್ನು ಅತ್ಯಂತ ಅಚ್ಚುಕಟ್ಟಾಗಿ ರೂಪಿಸಲಾಗಿದೆ.
ಮೊದಲನೇ ದಿನ: ಬೆಂಗಳೂರಿನಿಂದ ಹೊರಡುವ ಡಿಲಕ್ಸ್ ಬಸ್, ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳವನ್ನು ತಲುಪಲಿದೆ. ಅಂದು ರಾತ್ರಿ ಧರ್ಮಸ್ಥಳದಲ್ಲಿಯೇ ವಸತಿ ವ್ಯವಸ್ಥೆ ಇರಲಿದೆ.
ಎರಡನೇ ದಿನ: ಬೆಳಿಗ್ಗೆ 8 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ದರ್ಶನದ ನಂತರ ಅಲ್ಲಿಂದ ಹೊರಟು ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ತದನಂತರ ಅಲ್ಲಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆಯಬಹುದು. ಈ ಎಲ್ಲಾ ದರ್ಶನಗಳನ್ನು ಮುಗಿಸಿಕೊಂಡು ಮಧ್ಯಾಹ್ನ 3.30 ಗಂಟೆಗೆ ಮತ್ತೆ ಬೆಂಗಳೂರಿನತ್ತ ಹಿಂದಿರುಗುವ ಪ್ರಯಾಣ ಆರಂಭವಾಗಲಿದೆ.
ವಿಶೇಷ ಶೀಘ್ರ ದರ್ಶನದ ವ್ಯವಸ್ಥೆ
"ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಹೆಜ್ಜೆ ಇಡಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ- ಈ ಎರಡೂ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷವಾಗಿ ತ್ವರಿತ ದರ್ಶನ ಪಡೆಯಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ" ಎಂದು ಕೆಎಸ್‌ಟಿಡಿಸಿ ಅಧ್ಯಕ್ಷರಾದ ಎಂ. ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ, ಪ್ರಯಾಣಿಕರ ಸುರಕ್ಷತೆ ಮತ್ತು ಸ್ಥಳೀಯವಾಗಿ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ಪ್ರವಾಸ ಪೂರ್ಣಗೊಳ್ಳಲು, ಕೆಎಸ್‌ಟಿಡಿಸಿಯ ಮೀಸಲಾದ ಮಾರ್ಗದರ್ಶಕರು ಪ್ರವಾಸಿಗರ ಜೊತೆಯಲ್ಲೇ ಇರಲಿದ್ದಾರೆ. ಆಸಕ್ತ ಭಕ್ತರು ಹಾಗೂ ಪ್ರವಾಸಿಗರು ಕೆಎಸ್‌ಟಿಡಿಸಿಯ ಅಧಿಕೃತ ವೆಬ್‌ಸೈಟ್ ಪೋರ್ಟಲ್ (https://kstdc.co/) ಮೂಲಕ ಈಗಲೇ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ಎರಡು ಮಾದರಿಯ ಪ್ಯಾಕೇಜ್‌ಗಳು ಲಭ್ಯ
ಪ್ರಯಾಣಿಕರ ಆರ್ಥಿಕ ಅನುಕೂಲಕ್ಕೆ ತಕ್ಕಂತೆ, ಕೆಎಸ್‌ಟಿಡಿಸಿ ಎರಡು ವಿಭಿನ್ನ ದರದ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
1. ಪ್ರೀಮಿಯಂ ಪ್ಯಾಕೇಜ್: ಈ ಪ್ಯಾಕೇಜ್‌ನ ದರ ಪ್ರತಿ ವ್ಯಕ್ತಿಗೆ 4,450 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಎಕ್ಸಿಕ್ಯುಟಿವ್ ಹೋಟೆಲ್ ವಸತಿ ಹಾಗೂ ಬೆಳಗಿನ ಉಪಹಾರ ಸೇರಿರುತ್ತದೆ.
2. ಬಜೆಟ್ ಪ್ಯಾಕೇಜ್ : ಈ ಪ್ಯಾಕೇಜ್‌ನ ದರ ಪ್ರತಿ ವ್ಯಕ್ತಿಗೆ 3,450 ರೂ. ಆಗಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಎಕಾನಮಿ ಲಾಡ್ಜಿಂಗ್ (ಸಾಮಾನ್ಯ ವಸತಿ) ವ್ಯವಸ್ಥೆ ಇರಲಿದೆ.
ವಿಶೇಷವಾಗಿ ಬೆಂಗಳೂರಿನ ಐಟಿ-ಬಿಟಿ ಉದ್ಯೋಗಿಗಳು ಹಾಗೂ ವಾರಾಂತ್ಯದ ರಜೆಯಲ್ಲಿ ಕುಟುಂಬ ಸಮೇತರಾಗಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಇಚ್ಛಿಸುವವರಿಗೆ ಈ ಪ್ಯಾಕೇಜ್ ಹೇಳಿ ಮಾಡಿಸಿದಂತಿದೆ. ಸ್ವಂತ ವಾಹನಗಳಲ್ಲಿ ತೆರಳಿ ಶಿರಾಡಿ ಘಾಟ್ ರಸ್ತೆಯ ಟ್ರಾಫಿಕ್, ವಾಹನ ಪಾರ್ಕಿಂಗ್, ಹೋಟೆಲ್ ರೂಮ್ ಬುಕಿಂಗ್ ಹಾಗೂ ಗಂಟೆಗಟ್ಟಲೆ ದರ್ಶನದ ಕ್ಯೂನಲ್ಲಿ ನಿಂತು ಹೈರಾಣಾಗುವ ಬದಲು, ಭಕ್ತರು ಈ ಕೆಎಸ್‌ಟಿಡಿಸಿ ಪ್ಯಾಕೇಜ್ ಬಳಸಿಕೊಂಡು ಅತ್ಯಂತ ನೆಮ್ಮದಿಯಾಗಿ ಹಾಗೂ ಸುಸೂತ್ರವಾಗಿ ದೇವರ ದರ್ಶನ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಭೇಟಿ ನೀಡಲು ಇದು ಅತ್ಯಂತ ಸುರಕ್ಷಿತ ಮತ್ತು ಸುಲಭ ಮಾರ್ಗವಾಗಲಿದೆ.












Click it and Unblock the Notifications