40,000 ಉದ್ಯೋಗ ನೇಮಕಾತಿ ನಿರೀಕ್ಷೆ: KEA ಹೆಚ್.ಪ್ರಸನ್ನರಿಗೆ ಮತ್ತೊಂದು ಜವಾಬ್ದಾರಿ ವಹಿಸಿದ ಸರ್ಕಾರ
ಬೆಂಗಳೂರು: ಕರ್ನಾಟಕದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ, ಸರ್ಕಾರಿ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದ ಮತ್ತು ಕಾಲ ಕಾಲಕ್ಕೆ ಎಲ್ಲ ಮಾಹಿತಿ ಒದಗಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಾರ್ವಜನಿಕರ ಮನ್ನಣೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಬರೋಬ್ಬರಿ 40,000 ಹುದ್ದೆಗಳ ನೇಮಕಾತಿ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ನಡುವೆ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ (IAS) ಅವರಿಗೆ ಮತ್ತೊಂದು ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶಿಸಿದೆ.
ರಾಜ್ಯದ ಸರ್ಕಾರಿ ಇಲಾಖೆಗಳ ನೇಮಕಾತಿ ಮತ್ತು ಪರೀಕ್ಷೆಗಳಲ್ಲಿ ಒಂದಷ್ಟು ಅಕ್ರಮಗಳು ನಡೆದಿದ್ದು ಗೊತ್ತೇ ಇದೆ. ಹೀಗಾಗಿ ಕೃಷಿ ಇಲಾಖೆ, ಪೊಲೀಸ್ ಇಲಾಖೆ ಸೇರಿ ಕೆಲವು ಸರ್ಕಾರಿ ಪ್ರಮುಖ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (ಕೆಇಎ) ನಡೆಸಲಿದೆ. ಪ್ರಾಧಿಕಾರವು ಉತ್ತಮ ಮತ್ತು ಪಾರದರ್ಶಕ ನೇಮಕಾತಿಯಿಂದ ಅಪಾರ ನಂಬಿಕೆ ಉಳಿಸಿಕೊಂಡಿದೆ. ಈ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರಿಗೆ ಸರ್ಕಾರ ಕೃಷಿ ಮಾರುಕಟ್ಟೆ ಬೆಂಗಳೂರು ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿವಹಿಸಿ ಆದೇಶಿಸಿದೆ.

ಕೆಇಎಯಿಂದ ಎಚ್.ಪ್ರಸನ್ನ ವರ್ಗಾವಣೆ ಆಗಿಲ್ಲ: AKSSA
ಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆದ ಬಳಿಕ ಒಂದಷ್ಟು ಐಎಎಸ್ ಅಧಿಕಾರಿಗಳ ಸ್ಥಾನ ಬದಲಾವಣೆ ಆಗಿತ್ತು. ಈ ವೇಳೆ ಹೆಚ್ಚುವರಿ ಜವಾಬ್ದಾರಿ ನೀಡಿದ ಐಎಎಸ್ ಅಧಿಕಾರಿ ಎಚ್.ಪ್ರಸನ್ನ ಅವರನ್ನು ವರ್ಗಾವಣೆ ಮಾಡಲಾಯಿತು ಎಂದು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (AKSSA) ಪ್ರತಿಕ್ರಿಯಿಸಿದೆ.
ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರ ಹುದ್ದೆ
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಎಚ್. (ಐಎಎಸ್) ಅವರನ್ನು KEA ಯಿಂದ ವರ್ಗಾವಣೆ ಮಾಡಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಅವರಿಗೆ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಹುದ್ದೆಯ ಹೆಚ್ಚುವರಿ ಪ್ರಭಾರ ಮಾತ್ರ ನೀಡಲಾಗಿದೆ. ಎರಡು ಹುದ್ದೆಗಳನ್ನು ಅವರು ನಿರ್ವಹಿಸಲಿದ್ದು,ಕೆಇಎ ನಲ್ಲಿಯೇ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ.
ಈ ಹಿಂದೆ ವರ್ಗಾವಣೆ ಪ್ರಯತ್ನ, ಸಾಕಷ್ಟು ವಿರೋಧ
ಈ ಹಿಂದೆ ಪ್ರಸನ್ನಕುಮಾರ್ ಸರ್ ಅವರನ್ನು ಕೆಇಎ ಹುದ್ದೆಯಿಂದ ವರ್ಗಾವಣೆ ಮಾಡುವ ಪ್ರಯತ್ನ ನಡೆದಿತ್ತು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಘಟನೆ, ಸ್ಪರ್ಧಾರ್ಥಿಗಳಿಂದ ವ್ಯಾಪಕ ವಿರೋಧ ಕೇಳಿ ಬಂದಿತ್ತು. ವಿದ್ಯಾರ್ಥಿಗಳ ಹಾಗೂ ಸ್ಪರ್ಧಾರ್ಥಿಗಳ ಹಿತದೃಷ್ಟಿಯಿಂದ ಅವರ ವರ್ಗಾವಣೆ ಸರಿಯಲ್ಲ, ಸರ್ಕಾರ ಈ ನಿರ್ಧಾರ ಕೈಗೊಳ್ಳದಂತೆ ಒತ್ತಡ ಹೇರಲಾಗಿತ್ತು. ಕೆಇಎ ಹಾಲಿ ಹುದ್ದೆಯಲ್ಲಿಯೇ ಅವರನ್ನು ಮುಂದುವರಿಸುವಂತೆ ಒತ್ತಾಯಿಸಲಾಗಿತ್ತು.
40,000 ಹುದ್ದೆಗಳ ನೇಮಕಾತಿ?
ಮುಂದಿನ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಸುಮಾರು 40,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿ ಸಂಘ ತಿಳಿಸಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿಗಾಗಿ ಪ್ರಸನ್ನಕುಮಾರ್ ಸರ್ ಅವರಂತಹ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಒಂದು ವೇಳೆ ಅವರನ್ನು ವರ್ಗಾವಣೆ ಮಾಡಿದರೆ ಸ್ಪರ್ಧಾರ್ಥಿಗಳ ಭವಿಷ್ಯ ಕಾಪಾಡಲು, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಲು ಹಾಗೂ ನೇಮಕಾತಿಗಳು ಪಾರದರ್ಶಕವಾಗಿ ನಡೆಸಲು ಸಂಘದಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸರ್ವರ್ ಸಮಸ್ಯೆ ಬಗೆಹರಿಸಿ
ಕೆಇಎ ಇತ್ತೀಚೆಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 3395( Non HK)+596(HK) ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಜುಲೈ 03ರವರೆಗೆ ಸಮಯ ನೀಡಿದೆ. ಆದರೆ ಕಳೆದ 4,5 ದಿನಗಳಿಂದ ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ. ನೇಮಕಾತಿ ಪ್ರಕ್ರಿಯೆಗೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ವರ್ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿ ಸಂಘ ಮನವಿ ಮಾಡಿದೆ.














Click it and Unblock the Notifications