• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಳಿಜಾರು : ಒಂದು ನೀಳ್ಗತೆ

By * ಭರತ್ ಎನ್ ಶಾಸ್ತ್ರಿ, ಮೆಸ್ಸಾಚುಸೆಟ್
|
ಕ್ಷಣ ಕ್ಷಣಕ್ಕೂ ವೇಗ ಹೆಚ್ಚಿಸಿಕೊಳ್ಳುತ್ತಿದ್ದ ಟ್ರೇನ್ ಈಗ ಪ್ಲಾಟ್ ಫಾರ್ಮನ್ನು ದಾಟುವುದರಲ್ಲಿತ್ತು. ಇನ್ನು ಕೆಲವೇ ಹೆಜ್ಜೆ.. ಉಹ್ಞೂ .. ಇನ್ನೂ ವೇಗವಾಗಿ ಓಡಲಾರೆ.. "ಬೂ.." ಎಂಬ ವಿಸಲ್ ನೊಂದಿಗೆ ಟ್ರೇನು ಪ್ಲಾಟ್ ಫಾರ್ಮನ್ನು ದಾಟುತ್ತಾ ಓಡಿತು, ಕಡೆಯ ಬೋಗಿ .. ಕೈಗೆ ಸಿಗಲಿಲ್ಲ. ಇಷ್ಟು ದೂರ ಓಡಿದ ಏದುಸಿರಿನ ಜತೆಗೆ ಟ್ರೇನು ಸಿಗದ ಹತಾಶೆ.. ಸುತ್ತ ಅಪರಿಚಿತ ಮುಖಗಳು,.. ಕಣ್ಣು ತುಂಬಿ ಬರುತ್ತಿದೆ.

ಧಡಕ್ಕನೆ ಎಚ್ಚರವಾಯಿತು. ಕಣ್ಣು ಬಿಟ್ಟರೆ ಸುತ್ತ ಮಸುಕು ಕತ್ತಲೆ, ಮುಂಬೈನಲ್ಲಿ ಈ ಜುಲೈ ತಿಂಗಳ ಬೆಳಗು ಎಂದೂ ಪ್ರಖರವಾಗಿರುವುದಿಲ್ಲ. ಸಾವಿನ ಮನೆಯ ಕಣ್ಣೀರಿನಂತೆ ಸುರಿಯುತ್ತಲೇ ಇರುವ ಮಳೆ. ಜತೆಗೆ ಬೇಸಿಗೆ ಧಗೆ ಕಡಿಮೆಯಾಗಿ ಮಳೆಯ ಬಗ್ಗೆ ಅಸಹನೆ ಮೂಡುವ ಕಾಲ. ಶಂಕರಪ್ಪ ಎದ್ದು ಕುಳಿತು ಗಡಿಯಾರ ನೋಡಿದ, ಬೆಳಗಿನ ಆರೂವರೆ, ಕೋಣೆಯಲ್ಲಿ ದೂಳು ತುಂಬಿದ ಪುಸ್ತಕಗಳ ಸಂತೆ, ಕೊಳೆಯಾದ ಬಟ್ಟೆ, ಜತೆಗೆ ಸರಿಯಾಗಿ ಒಣಗದ ಬಟ್ಟೆಗಳ ಮುಗ್ಗಲು ವಾಸನೆ. ಅವನೂರಾದ ಬೆಳಗಾವಿಯಲ್ಲಿ ಹೀಗೆ ಆದದ್ದು ಬಹಳ ಕಡಿಮೆ.

ಇನ್ನು ತಡಮಾಡದೆ ಎದ್ದ. ಇಂದು ಬೆಳಿಗ್ಗೆ 7 ಗಂಟೆಗೆ ಡ್ಯೂಟಿ, ಈ ವಾರವಿಡೀ ಲಿವರ್ ಓಪಿಡಿ. ಜತೆಗೆ ನೈಟ್ ಡ್ಯೂಟಿಯಲ್ಲಿರುವ ಡಾಕ್ಟರ್ ಯಾರಿದ್ದರೂ, ಬೇಗ ರಿಲೀವ್ ಮಾಡದಿದ್ದರೆ ಕಂಪ್ಲೇಂಟು ಕೊಡಲು ಹಿಂತೆಗೆಯುವವರಲ್ಲ. ಬ್ರಶ್ಶಿಗೆ ಪೇಸ್ಟು ಹಚ್ಚಿ ಬಾಯೊಳಗಿಟ್ಟು ಸಾಬೂನು ಹುಡುಕುವಾಗ ಹತ್ತಿರದ ಮಹಾಲಕ್ಷ್ಮಿಯ ಲೋಕಲ್ ನ ಸದ್ದು ಕೇಳಿಸಿತು. ಜೋರಾದ ಸಿಳ್ಳು, ಜತೆಗೆ ಗಡ್ ಗಡ್..ಗಡ್ ಗಡ್ ತಾಳ. ಮತ್ತೆ ಏಳುವ ಮೊದಲು ಬಿದ್ದ ಕನಸಿನ ನೆನಪಾಯಿತು. ಬಹುದಿನಗಳ ನಂತರ ಮತ್ತದೇ ಕನಸು ಏಕೆ ಬಿತ್ತು ಎನ್ನುವ ಯೋಚನೆಯ ಜತೆಗೆ ಈ ಕನಸು ಮೊಟ್ಟ ಮೊದಲನೆಯ ಬಾರಿ ಬಿದ್ದಿದ್ದು ಯಾವಾಗ ಎಂಬ ಗುಂಗಿಗೆ ಪಕ್ಕಾದ. ಹ್ಞಾ.. ಫೈನಲ್ ಎಮ್ ಬಿ ಬಿ ಎಸ್ ಪರೀಕ್ಷೆಯ ಮುಂಚೆ.. ಆ ಬಾರಿ ಯೂನಿವರ್ಸಿಟಿಗೆ ಕುಲಪತಿಯಾದ ಡಾಕ್ಟರ್ ಒಬ್ಬನ ಅರೆಬೆಂದ ಐಡಿಯಾದಿಂದ ಕಮ್ಯುನಿಟಿ ಮೆಡಿಸಿನ್ ಸಹ ಅಂಕ ನಿರ್ಣಾಯಕ ವಿಷಯವಾಗಿ, ಶಂಕರಪ್ಪನೂ ಸೇರಿದಂತೆ 24 ಮಂದಿ ಅನುತ್ತೀರ್ಣರಾದರು. ಆರು ತಿಂಗಳು ಹೆಂಡತಿ ಸತ್ತವರಂತೆ ಗಡ್ಡ ಬೆಳೆಸಿ, ಕಣ್ಣುಗುಡ್ಡೆ ಕಿತ್ತು ಬರುವಷ್ಟು, ಒಂದೇ ಬರಡು ಪುಸ್ತಕವನ್ನೂ, ಅಂಕಿ ಸಂಖ್ಯೆಗಳನ್ನೂ ಓದುವ ಪರಿಯಲ್ಲಿ ಕಡೆಗೂ ಪಾಸಾದಾಗ, ಇನ್ನು ಯಾವುದೇ ಪರೀಕ್ಷೆ ಎದುರಿಸಲು ಆಗದಂತಹ ಮಖೇಡಿತನ ಹುಟ್ಟಿತ್ತು. ಬಳಿಕ, ಯಾವುದೇ ಪರೀಕ್ಷೆಗೆ ಮೊದಲು ಈ ಕನಸು ಬೀಳಹತ್ತಿತ್ತು. ಆಲ್ ಇಂಡಿಯ ಎಂಟ್ರೆನ್ಸು, ಸ್ಟೇಟ್ ಎಂಟ್ರೆನ್ಸು.. ಎಲ್ಲ ಪರೀಕ್ಷೆಗಳ ಮೊದಲು ಈ ಕನಸು. ಓಡುತ್ತಿರುವ ರೈಲು, ಕ್ಷಣ ಕ್ಷಣಕ್ಕೂ ವೇಗ ಗಳಿಸಿ.. ಪ್ಲಾಟ್ ಫಾರ್ಮ್ ದಾಟಿ... ಕಡೆಗೆ ಕೈ ತಪ್ಪಿ.. ಹತಾಶೆ, ... ಕಣ್ಣೀರು.

ಕೋಣೆಯಿಂದ ಹೊರ ಬಂದಾಗ, ಎದಿರುಗಡೆಯ ರೂಮಿನ ಬಾಗಿಲು ಅರೆ ತೆರೆದಿತ್ತು. ಹೊಸದಾಗಿ ಹೌಸ್ ಆಫೀಸರ್ ಆಗಿ ಸೇರಿದ ಆ ಮೈಸೂರಿನ ಹುಡುಗ ಮಗುಟ ಉಟ್ಟು ಮೆಲುಧ್ವನಿಯಲ್ಲಿ ಮಂತ್ರ ಹೇಳುತ್ತಾ ಸಂಧ್ಯಾವಂದನೆಗೆ ಕುಳಿತಿದ್ದ. ಪಕ್ಕದ ರೂಮಿನಿಂದ ಯಾರೋ ಜೋರಾಗಿ ಫೋನ್ ನಲ್ಲಿ ಮರಾಠಿಯಲ್ಲಿ ಸಂಭಾಷಿಸುತ್ತಿದ್ದರು. ಸ್ನಾನ ಮುಗಿಸುವಾಗ ಇಂದು ತನ್ನ LFT ಮತ್ತು HBs Ag (ಲಿವರಿಗೆ ತಗಲುವ ಒಂದು ಬಗೆಯ ವೈರಸ್ ಸೋಂಕು ಪತ್ತೆ ಹಚ್ಚುವ ಟೆಸ್ಟ್) ಮಾಡಿಸಲು ನಾಯರ್ ಆಸ್ಪತ್ರೆಯಲ್ಲಿ ಹಿಂದಿನ ದಿನ ಡಾ ಸೂದ್ ಹೇಳಿದ್ದು ನೆನಪಾಯಿತು. ಜತೆಗೇ ಶಬನಮ್ ಹನ್ನೆರಡು ಗಂಟೆಗೆ ಬರುತ್ತೇನೆಂದು ಹೇಳಿದ್ದರ ನೆನಪು. ಅವಳಿಗಿಂದು ಆಫ್ ಡ್ಯೂಟಿ.. ಏಕೆ ತನ್ನನ್ನು ಲಗ್ನವಾಗಲು ಒತ್ತಾಯಿಸುತ್ತಿದ್ದಾಳೋ ತಿಳಿಯದು ಎಂದು ಯೋಚಿಸುವಾಗ ಮತ್ತೆ ಕನಸಿನ ನೆನಪಾಯಿತು. ಚಳಿಗೋ ಏನೋ, ಒಮ್ಮೆ ಮೈ ನಡುಗಿತು. ಒಮ್ಮೆ ಗುಡುಗಿ ಮಿಂಚು ಕೋರೈಸಿ ಮಳೆ ಜೋರಾಯ್ತು. ಅಭ್ಯಾಸಬಲದಿಂದ ವಿಭೂತಿಗಡ್ಡೆಯಿಂದ ಕೊಂಚ ತೆಗೆದು ಹಣೆಗೆ ಹಚ್ಚಿಕೊಂಡು ಅಳಿಸಿದ, ಬಿಳಿಯ ಟವೆಲಿನ ಮೇಲೊಂದು ಕಲೆಯಾಯಿತು. ಬಾಗಿಲಿಗೆ ಬೀಗ ಜಡಿದು ಛತ್ರಿ ಅರಳಿಸಿ ಓಪಿಡಿಯ ಕಡೆ ನಡೆದ.

ಆರೂ ಐವತ್ತೈದು, ಆಗಲೇ ಈ ಮಳೆಯಲ್ಲೂ ಇಷ್ಟು ಜನ! ಛೆ! ಈ ಮುಂಬೈಯಲ್ಲಿ ಸರ್ಕಾರ ಸಹ ಉಚಿತ ಆಸ್ಪತ್ರೆ ನಡೆಸಬಾರದು. ಇವರಿಗೆಲ್ಲ ನಮ್ಮ ಸೇವೆಯ ಬೆಲೆಯೇ ತಿಳಿದಿಲ್ಲ ಎಂದುಕೊಳ್ಳುವಾಗ, ಈ ಆಸ್ಪತ್ರೆಗೆ ಸೇರಿದ ಹೊಸದರಲ್ಲಿ ಮಾಡುತ್ತಿದ್ದ ವಾರ್ಡಿನ ಕೆಲಸ ನೆನಪಾಯಿತು. ಒಂದೊಂದು ವಾರ್ಡಿನಲ್ಲಿ ನಲವತ್ತು, ಐವತ್ತು ರೋಗಿಗಳು, ಒಬ್ಬೊಬ್ಬ ಜೂನಿಯರ್ ವೈದ್ಯನಿಗೂ ಅಂತಹ ನಾಲ್ಕು - ಐದು ವಾರ್ಡುಗಳು... ತಲೆ ಗಿಮ್ಮೆನ್ನುತ್ತಿತ್ತು. ಯಾರಿಗೆ ಯಾವ ಔಷಧಿಯಲ್ಲಿ ಎಂತಹ ಹೆಚ್ಚು-ಕಡಿಮೆಯಾಯಿತೋ ಎಂಬ ಆತಂಕ. ಈ ಆಸ್ಪತ್ರೆಯೂ ಅದೆಷ್ಟು ದೊಡ್ಡದು! ಆರ್ಥೊಪಿಡಿಕ್ಸ್ ನಲ್ಲಿ ಸೋಂಕು ತಗುಲಿದ ಓಪನ್ ಫ್ರಾಕ್ಚರ್ ಗಳು, ಸುಟ್ಟ ಗಾಯಗಳಿಂದ ಮೈಯ 70ರಿಂದ 80 ಪ್ರತಿಶತ ಚರ್ಮಕ್ಕೆ ಘಾಸಿಯಾದವರು, ಒಂದು ಭೂತ ಬಂಗಲೆಯಂತಿದ್ದ ಹೈಪರ್ ಬೇರಿಕ್ ಆಕ್ಸಿಜೆನ್ ಥೆರಪಿಯ ಮತ್ತು ಹತ್ತು ಹಾಸಿಗೆಗಳ ಇಂಟೆನ್ಸಿವ್ ಕೇರ್ ಸಹ. ಇನ್ನು ಚಿಕನ್ ಪಾಕ್ಸ್, ವಾಂತಿ ಭೇದಿಗಳ ವಾರ್ಡ್ ಬಗ್ಗೆ ಹೇಳುವುದೇ ಬೇಡ. ಮಹಾನಗರ ಪಾಲಿಕೆ ಶುದ್ಧ ನೀರು ಒದಗಿಸಿದರೂ ಮುಂಬೈಯ ಉದ್ದ ಅಗಲಕ್ಕೆ ಹಬ್ಬಿದ್ದ ಕೊಳೆಗೇರಿಗಳಿಂದ ವರ್ಷವಿಡೀ ಕಾಲರಾದ ಶಂಕೆ ಇದ್ದೇ ಇರುತ್ತಿತ್ತು. ವರ್ಷಕ್ಕೆ ನಾಲ್ಕು ಐದಾದರೂ ಜೀವ ಹೋಗುವ ಹಂತದಲ್ಲಿರುವ ರೇಬಿಸ್ ರೋಗಿಗಳೂ ಭರ್ತಿಯಾಗುತ್ತಿದ್ದರು. ಇಂಟೆನ್ಸಿವ್ ಕೇರ್ ನಲ್ಲಿ ರೊಟೇಶನ್ ಮಾಡುವಾಗ ಅಂತಹ ರೋಗಿಗಳನ್ನು ಮುಟ್ಟಿ ಉಪಚರಿಸಿದ ತಪ್ಪಿಗೆ, ಶಂಕರಪ್ಪನೂ ಕನಿಷ್ಠ ಮೂರು ಬಾರಿ ರೇಬಿಸ್ ನ ಲಸಿಕೆ ತೆಗೆದುಕೊಂಡಿದ್ದ. ಹೆಚ್ಚು ಮಂದಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಖರ್ಚು ಭರಿಸಲಾಗದ ಅಸಹಾಯಕ ಅಥವಾ ಕೊಳೆಗೇರಿಗಳ ಬಡ ಜನ.

ಶಂಕರಪ್ಪ ಸೇರಿದ ಹೊಸತರಲ್ಲೇ ಗುಲಬರ್ಗಾದ ಆ ಡಾಕ್ಟರ ಪ್ರಸಂಗ ನಡೆದಿತ್ತು. ಸದಾ ಪಾನ್ ಪರಾಗ್ ತಿನ್ನುವ ಹವ್ಯಾಸದ ಆ ಮನುಷ್ಯ, ವಾರ್ಡ್ ರೌಂಡ್ಸ್ ಮಾಡುವಾಗ ಬಾಯಿ ತುಂಬಾ ಉಗುಳು ತುಂಬಿಸಿಕೊಂಡು GC Fair, CT All ಎಂದು ನೋಟ್ಸ್ ಹಾಕುತ್ತಾ ನಡೆದಿದ್ದ. ಯಾವುದೋ ರೋಗಿ ಏನಾದರೂ ಪ್ರಶ್ನೆ ಕೇಳಿದರೆ "ಊಞ್?" ಎಂದು ಬಿಗಿದ ತುಟಿಯಲ್ಲೇ ಪ್ರಶ್ನೆ ಕೇಳಿ ಮುಂದೆ ಹೋಗುತ್ತಿದ್ದ. ಅವನ ಗ್ರಹಚಾರಕ್ಕೆ ಅಂದು ಗಾಯ್ ಛಾಪ್ ಸೇನೆಯ (ಅಂದಿನ ದಿನಗಳಲ್ಲೂ ಮುಂಬೈಯಲ್ಲಿ ಇದ್ದದ್ದು ಎರಡೇ ಸೇನೆಗಳು, ಒಂದು ಬಾಘ್ -ಹುಲಿ- ಛಾಪ್ ಶಿವಸೇನೆ, ಮತ್ತೊಂದು ಗಾಯ್ -ಹಸು- ಛಾಪ್ ಅಖಿಲ ಭಾರತೀಯ ಸೇನೆ - ಅರುಣ್ ಗಾವಳಿಯ ರಾಜಕೀಯ ಪಕ್ಷ) ಮರಿ ಪುಢಾರಿಯೊಬ್ಬ ಭರತಿಯಾಗಿದ್ದ. ಅವನು ಕೇಳಿದ ಪ್ರಶ್ನೆಗೆ ಉತ್ತರ ಸಿಗದಿದ್ದಕ್ಕೆ ಸೂಪರಿಂಟೆಂಡೆಂಟರ ಬಳಿ ದೂರು ಹೋಗಿ, ಅವರು ಸ್ವತಃ ಬಂದು ಕ್ಷಮಾಪಣೆ ಕೇಳಿ ಸನ್ನಿವೇಶ ತಿಳಿಗೊಳಿಸಿದ್ದರೂ, ಆರು ತಿಂಗಳ ನಂತರ ಅವನಿಗೆ ಕೆಲಸ ಸಿಗದೆ, ಮುಂಬೈ ನ ಮತ್ತೊಂದು ಮೂಲೆಯಲ್ಲಿದ್ದ ಬೋರಿವಲಿಯ ಭಗವತಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ.

ಶಂಕರಪ್ಪನ ಸೀನಿಯರ್ ಗಳು ದೈನಂದಿನ ನೋಟ್ಸ್ ಹಾಕುವ ತಂತ್ರಗಳನ್ನು ಅವನಿಗೂ ನಿರ್ವಂಚನೆಯಿಂದ ಕಲಿಸಿಕೊಟ್ಟಿದ್ದರು. "ಜಿ ಸಿ ಫೇಯರ್ (ಜನರಲ್ ಕಂಡಿಷನ್ ಎಂಬುದರ ಷಾರ್ಟ್ ಹ್ಯಾಂಡ್) "ಸಿ ಟಿ ಆಲ್" (ಕಂಟಿನ್ಯೂ ಟ್ರೀಟ್ ಮೆಂಟ್ ಎನ್ನುವದರ ಷಾರ್ಟ್ ಹ್ಯಾಂಡ್) ಬರೆಯುತ್ತಾ ಹೋದರೆ ಹೇಗೆ ಹತ್ತು ನಿಮಿಷಗಳಲ್ಲಿ ಒಂದು ವಾರ್ಡಿನ ರೌಂಡ್ಸ್ ಮುಗಿಯುವುದೆಂದೂ, ನಂತರ ಹೇಗೆ ಟಿ ಟಿ ರೂಮಿನಲ್ಲಿ ಚಾಯ್ ಕುಡಿಯುತ್ತ ಸಮಯ ಹಾಕಬಹುದೆಂದೂ ತೋರಿಸಿಕೊಟ್ಟರು. ಮುಂದಿನ ಹಂತಗಳಾದ ಓಪಿಡಿ ಡ್ಯೂಟಿ ರೂಮಿನಲ್ಲಿ ಕುಳಿತು ಇಸ್ಪೀಟು ಆಡುವುದೂ, ರಮ್ಮಿಯಲ್ಲಿ ಡ್ರಾಪ್ ಮಾಡಿದವನು ಹೋಗಿ ರೋಗಿಗಳನ್ನು ನೋಡುವುದೂ, ಸಂಜೆಯ ಬಿಯರ್ ಬಾರ್ ಗಳೂ, ಅಲ್ಲಿಯ ಮಾದಕ ಲೋಕವೂ ಇವೆಲ್ಲ ಕಲಿಯಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಅಧಿಕ ಪ್ರಸಂಗಿ ವಾರ್ಡ್ ಬಾಯ್ ಒಬ್ಬನ ದೂರಿನ ಫಲವಾಗಿ ಇಸ್ಪೀಟಾಟ ಹತ್ತಿರದ ಶಂಕರಪ್ಪನ ಕೋಣೆಗೆ ಬದಲಾಗಿದ್ದರೂ ಇಸ್ಪೀಟ್ ಆಟದ ಬಗ್ಗೆ ಅಷ್ಟೊಂದು ಪ್ರೀತಿಯಿರದ ಶಂಕರಪ್ಪನ ಅಸಹಕಾರದಿಂದ ಜೂಜುಗಾರರು ಶಂಕರಪ್ಪನಿಗೆ ಹಿಡಿಶಾಪ ಹಾಕಿ ಟಿಟಿ ರೂಮಿಗೆ ಸ್ಥಳ ಬದಲಾಯಿಸಿದ್ದರು. ಕೇರಮ್, ಟಿವಿ, ಇಲ್ಲದ ಸ್ಮೋಕರ್"ಸ್ ಕಾರ್ನರಿಗೆ ಇಸ್ಪೀಟ್ ಆಟ ನೆಲೆಗೊಂಡಿತ್ತು.

ಹನ್ನೆರಡೂವರೆಗೆ ರಕ್ತವನ್ನು ಪರೀಕ್ಷೆಗೆ ಕೊಟ್ಟು ಬಂದ. ಒಂದು ಗಂಟೆಗೆ ಫೋನ್ ಮಾಡಿದ ಶಬನಮ್ ಇಂದು ಬರಲು ಆಗುವುದಿಲ್ಲವೆಂದು ತಿಳಿಸಿದಳು. ಔರಂಗಾಬಾದ್ ನಿಂದ ಅವಳ ಅಕ್ಕ ಬಂದಿದ್ದಳಂತೆ. "ಕಲ್ ಉಸ್ ಕೊ see off ಕರ್ ಕೆ ಆವೂಂಗೀ" ಎಂದು ಹೇಳಿದಳು. ಎದುರಿಗೆ ಕುಳಿತಿದ್ದ ಸಿಸ್ಟರ್ ಗಾಂಗುರ್ಡೆ "ಶಬನಮ್ ಕಾ ಫೋನ್ ಥಾ ಕ್ಯಾ?" ಎಂದು ನಕ್ಕಳು. ನೆನಪು ತಾನು ಮತ್ತು ಶಬನಮ್ ಹೀಗೆ ಓಪಿಡಿಯಲ್ಲಿ ಎದುರು ಬದುರು ಕುಳಿತು ಶುರುವಾದ ಪ್ರೇಮಕ್ಕೆ ಹಾರಿತು.

ಶಂಕರಪ್ಪ ತನ್ನಂತೆ ಆರ್ಥೊಪೀಡಿಕ್ ಸರ್ಜನ್ ಆಗದೆ, ಅಥವಾ ಅಳಿಯನಂತೆ ಫಿಜಿಶಿಯನ್ ಆಗದೆ ಹೋದದ್ದು ಅವನ ತಂದೆಗೆ ಭಯಂಕರ ಅವಹೇಳನಕಾರಿ ವಿಷಯವಾಗಿತ್ತು. ಊರಿನಲ್ಲಿ ಭರ್ತ್ಸನೆಯನ್ನು ತಡೆಯಲಾರದೆ ಏನನ್ನಾದರೂ ಸಾಧಿಸುವ ಉದ್ದೇಶದಿಂದ ಮುಂಬೈ ಗೆ ಬಂದ ಶಂಕರಪ್ಪ ಸೇರಿದ್ದು ಮಹಾನಗರಪಾಲಿಕೆಯ ಸೋಂಕು ರೋಗಗಳ ಚಿಕಿತ್ಸೆಯ ಈ ಆಸ್ಪತ್ರೆಗೆ.

ಮೆಡಿಕಲ್ ಕಾಲೇಜ್ ಅಲ್ಲದ ಇಂತಹ ಹತ್ತು ಹಲವು ಆಸ್ಪತ್ರೆಗಳು ಮುಂಬೈ ತುಂಬ ಇವೆ. ಆರು ತಿಂಗಳಿಗೆ ಮುಗಿಯುವ ಕೆಲಸ, ಮೇಲ್ವಿಚಾರಕ ವೈದ್ಯರ ಅನುಗ್ರಹವಿದ್ದರೆ, ಇನ್ನೂ ಕೆಲಸ ಕಲಿಯುವ ಇಚ್ಛೆಯಿದ್ದರೆ ಮತ್ತಾರು ತಿಂಗಳ ಕೆಲಸ. ಮುಂದಿನ ಹಂತ, ವಶೀಲಿ ಅಥವಾ ಅದೃಷ್ಟವಿದ್ದರೆ ಇಂತಹುದೇ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಫೀಸರ್ ಆಗಿ ನೇಮಕಾತಿ. ಹಾಗೆಂದು ಈ ಟೆಂಪರರಿ ಕೆಲಸಗಳಲ್ಲಿ ಪ್ರಯೋಜನ ಪಡೆಯದವರೂ ಇಲ್ಲದೆ ಇಲ್ಲ. ಮಹಾನಗರಪಾಲಿಕೆ ಕೊಡುವ ಪುಡಿಕಾಸಿನ ಸಂಬಳ, ದಿನವಿಡೀ ಸೂರ್ಯನ ಬೆಳಕಿನ ನೆನಪೇ ಮರೆಸುವಂತಹ ಕೆಲಸಗಳ ನಡುವೆಯೂ ಓದಿ ಪ್ರವೇಶಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಎಮ್ ಡಿ, ಯಾ ಎಮ್ ಎಸ್ ಗಳಿಗೆ ಸೇರಿದವರಿದ್ದರು. ಕೆಲವರಂತೂ ಇಂಥ ಕೆಲಸಗಳನ್ನೇ ಮೂರುವರ್ಷ ಮಾಡಿ ರಾಷ್ಟ್ರೀಯ ಪರೀಕ್ಷಾ ಬೋರ್ಡ್ ನ ಸ್ನಾತಕೋತ್ತರ ಪದವಿ ಕೂಡಾ ಗಳಿಸಿದ್ದರು.

ಇಳಿಜಾರು : ಕಥೆಯ ಎರಡನೇ ಭಾಗ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more