• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಡುಗಡೆ

By Staff
|
Vaishali Hegade
ಜೇಡರ ಬಲೆಯಲ್ಲಿ ಸಿಕ್ಕ ತಾನು, ತನ್ನೊಳಗೇ ಹೆಣೆದುಕೊಂಡ ಜೇಡರ ಬಲೆ. ಮನಸು ಜೇಡರ ಬಲೆಯ ನೇಯ್ಗೆಗಳಂತೆ ಗೋಜಲು ಗೋಜಲಾಗಿತ್ತು, ಅದರಲ್ಲೇ ಸಿಕ್ಕಿಕೊಂಡ ಹೊಲಸು ಹುಪ್ಪಟೆಯಂತಾಗಿತ್ತು. ಯಾವೊಂದು ಹೊಸ ಭಾವನೆ ಕೂಡ ಒಳಹೋಗದಂತೆ, ಎಲ್ಲ ನೊಣಗಳಂತೆ ಸಿಕ್ಕು ಸತ್ತುಹೋಗುತ್ತವೆ, ತನ್ನೊಳಗಿನ ಬಲೆಗೆ.

* ವೈಶಾಲಿ ಹೆಗಡೆ, ಬೋಸ್ಟನ್

ಸುತ್ತಲೂ ನಿಶ್ಶಬ್ದ. ಕತ್ತಲೆಗೂ ಮಿಸುಕಾಡಲು ಭಯವೇನೋ ಎಂಬಂತಹ ಸ್ತಬ್ಧತೆ. ಇಳಿಜಾರಿನಲ್ಲಿ ಹಾದುಹೋಗುವ ಹೈವೆಯ ಮೇಲಿನ ಗಾಡಿಗಳ ಶಬ್ದವಾದರೂ ಕೇಳಿಸುವುದೋ ಎಂದು ಮನಸ್ಸೆಲ್ಲ ಕೇಂದ್ರೀಕರಿಸಿ ಆಲಿಸಿದರೂ ಏನೂ ಕೆಳುವುದಿಲ್ಲ. ಉದ್ದಕ್ಕೆ ಹೆಬ್ಬಾವಿನಂತೆ ಮಲಗಿರುವ ನೀರವತೆ. ಕಿವಿಗಡಚಿಕ್ಕುವಷ್ಟು ಮೌನ. ಉಸಿರುಗಟ್ಟಿದಂತಾಗಿ ಆ ಕತ್ತಲ ಮೌನವನ್ನು ಮುರಿಯಲೋ ಎಂಬಂತೆ ಬಾಯ್ತೆರೆದು ಜೋರಾಗಿ ಅರಚಿದಳು ಚಿತ್ರಾ.

ಹಾಸಿಗೆಯ ಮೇಲೆ ಸಣ್ಣಗೆ ಬೆವರೊಡೆದು ಕಂಪಿಸುತ್ತ ದಡಕ್ಕನೆ ಎದ್ದು ಕುಳಿತಿದ್ದಳು. "ಹಾಳಾದ್ದು ಮತ್ತೆ ಅದೇ ಕನಸು". ಎದ್ದು ಹೋಗಿ ಒಂದು ಲೋಟ ತಣ್ಣನೆ ನೀರು ಗಟಗಟನೆ ಕುಡಿದು, ಹಾಲ್ನಲ್ಲಿ ಟಿವಿ ಹಾಕಿಕೊಂಡು ಕೂತಳು. ಇತ್ತೀಚಿಗೆ ಇದೇ ಕನಸು ಪದೇ ಪದೇ ಬೀಳುತ್ತಿದೆ. ಪ್ರತಿ ಬಾರಿಯೂ ಕನಸು ಎಂದು ಗೊತ್ತಾಗುವುದೇ ಇಲ್ಲ. ಕನಸುಗಳೇ ಹಾಗೆನೋ, ನಾವು ನಿಜವಾಗಿಯೂ ಅಲ್ಲಿ ಇದ್ದಂತೆ, ಎಲ್ಲವೂ ನಡೆದಂತೆ. ಹೀಗೆ ಯೋಚಿಸುತ ಕುಳಿತವಳಿಗೆ ಸೋಫಾದಲ್ಲಿಯೇ ನಿದ್ದೆ ಹತ್ತಿ ಮಲಗಿದಳು. ಎಚ್ಚರವಾದಾಗ ಆಗಲೇ ಎಂಟೂವರೆ. ಅಯ್ಯೋ ರಾಮ, 9 ಗಂಟೆಗೆ ಮೀಟಿಂಗ್ ಇದೆ ಎಂದು ಜ್ಞಾನೋದಯವಾಗಿ ದಡಬಡಿಸಿ ತಯಾರಾಗಿ ಕಾರ್ ಕೀ ಎತ್ತಿ ಓಡಿದ್ದಳು. ಅರ್ಧ ದಾರಿ ಸಾಗಿದ ಮೇಲೆ ನೆನಪಾಯಿತು ಕೀ ಎತ್ತಿಕೊಳ್ಳುವಾಗ ಬೇಜ್ ಎತ್ತಿಕೊಳ್ಳುವುದನ್ನು ಮರೆತೆನಲ್ಲ.. ಇನ್ನು ಆ ಉರಿ ಮೂತಿ ಸೆಕ್ಯುರಿಟಿ ಗಾರ್ಡ್ ಬಿಳಿಡುಮ್ಮನ ಮುಖ ನೋಡಬೇಕು ಟೆಂಪರರಿ ಬೇಜ್ಗಾಗಿ. ಅವನು ತಾಸುಗಟ್ಟಲೆ ಹೆಸರು ಚೆಕ್ ಮಾಡಿ, ಡಿಪಾರ್ಟ್ಮೆಂಟ್ ಚೆಕ್ ಮಾಡಿ ಇಡೀ ಕಂಪನಿಯ ದೊಣ್ಣೆನಾಯಕನೊ ಎಂದು ಪೋಸು ಕೊಟ್ಟು ಡೇಲಿ ಬೇಜ್ ಕೊಡುವಷ್ಟೊತ್ತಿಗೆ ಮೀಟಿಂಗ್ ಗೋವಿಂದ.

ಇದೆಲ್ಲ ಆ ದರಿದ್ರ ಕನಸಿಂದ ಎಂದು ಮತ್ತೆ ಶಪಿಸಿದಳು. ಆಫೀಸು ತಲುಪಿ, ಟೆಂಪರರಿ ಬೇಜ್ ಇಸಿದುಕೊಂಡು ತನ್ನ ಕುರ್ಚಿಯಲ್ಲಿ ಕೂಡುವಷ್ಟೊತ್ತಿಗೆ ಮನಸ್ಸೆಲ್ಲ ಸಾಕಷ್ಟು ವ್ಯಗ್ರವಾಗಿ ಹೋಗಿತ್ತು. ಮೀಟಿಂಗ್ಗೆ ಹೋಗುವ ಮನಸ್ಸೇ ಆಗಲಿಲ್ಲ. ಹತ್ತೂವರೆಗೆ ತೊನೆಯುತ್ತಾ ಬಂದ ಸಹೋದ್ಯೋಗಿ, ಗೆಳತಿ ಲಿಜ್, "ಹೇಯ್ ಚೀಟ್ರಾ, ಡಿಡಂಟ್ ಸೀ ಯು ಇನ್ ದೇರ್, ವೇರ್ ವರ್ ಯು?" ಎಂದಾಗ ಇನ್ನೇನು ರೇಗಬೇಕು ಎಂದುಕೊಂಡವಳು, ಸುಮ್ಮನೆ ನಕ್ಕು, tell you later during lunch" ಎಂದು ಮಾತು ಮುಗಿಸಿದ್ದಳು. ಮತ್ತೆ ತನ್ನ ಕನಸಿನ ಪುನರಾವರ್ತನೆಯ ಪ್ರಸಂಗ ವಿವರಿಸಿದಾಗ ಲಿಜ್ಳಿಂದ ಅದೇ ಹಳೆಯ ಉತ್ತರ. ನೀನು ಯಾವುದಾದ್ರೂ ಮನೋರೋಗ ತಜ್ಞರನ್ನು ಕಂಡು ಮನಬಿಚ್ಚಿ ಮಾತಾಡು. ನೀನು ಎಷ್ಟು ಮರೆತಿದ್ದಿ ಎಂದರೂ, ನಿನ್ನ ಮನಸ್ಸಿನ ಭಯ, ಗಾಯ ಇನ್ನೂ ಹೋಗಿಲ್ಲ. ತನಗೂ ಈಗೀಗ ಹೌದೇನೋ ಎನ್ನಿಸಲು ಶುರುವಾಗಿದೆ.

ಭಾನುವಾರ ಎಂದರೆ, ಮೈಮೇಲೆ ಭೂತ ಬಂದವರಂತೆ ತಿಕ್ಕಿ ತಿಕ್ಕಿ ಮನೆಯೆಲ್ಲ ಸ್ವಚ್ಛಗೊಳಿಸುವುದು ಅವಳ ರೂಢಿ. ಹಾಗೆ ಉಜ್ಜುವ ಒಂದು ಭಾವಾವೇಶದಲ್ಲಿದ್ದಾಗ, ಅಪಾರ್ಟ್ಮೆಂಟಿನ ಬಾಲ್ಕನಿಯ ಕಿಟಕಿಯ ಮೂಲೆಯಲ್ಲಿ ಒಂದು ಪುಟ್ಟದಾದ ಹೊಸದಾಗಿ ಹೆಣೆಯಲ್ಪಡುತ್ತಿರುವ ಜೇಡರ ಬಲೆಯೊಂದು ಕಣ್ಣಿಗೆ ಬಿತ್ತು. ಯಾಕೋ, ಅದನ್ನು ನೋಡುತ್ತಿದ್ದಂತೆ, ಬಳಿದು ಎಸೆಯುವ ಕೈ ಮುಂದೆ ಬರಲೇ ಇಲ್ಲ. ತದೇಕವಾಗಿ ಅದನ್ನು ಗಮನಿಸತೊಡಗಿದವಳಿಗೆ, ತಾನೇ ಆ ಜೇಡವೆನೋ ಎಂಬಂತೆ ಭಾಸವಾಯಿತು. ನವಿರಾದ ಬಿಳಿ ಎಳೆಗಳನ್ನು ನೇಯ್ದು ನೇಯ್ದು ಕಟ್ಟುತ್ತಿರುವ ಎಂಟು ಕಾಲಿನ ಕಡ್ಡಿಕೀಟ ಆತ್ಮೀಯ ಎನಿಸತೊಡಗಿತು.

ಈಗ ಅವಳ ದಿನಚರಿಯಲ್ಲಿ ಒಂದು ಹೊಸ ತಿರುವು. ದಿನ ಬೆಳಿಗ್ಗೆ ಎದ್ದ ತಕ್ಷಣ ದೇವರ ದರ್ಶನ ಮಾಡುವಂತೆ ಹೋಗಿ ಆ ಜೇಡರ ಬಲೆಯ ಮುಂದೆ ನಿಲ್ಲುವುದು, ಎಷ್ಟು ದೊಡ್ಡದಾಗಿದೆ, ಏನೇನು ನೊಣ, ಹಾತೆ, ಕೀಟಗಳು ಸಿಕ್ಕಿಬಿದ್ದಿವೆ ಎಂದು ಗಮನಿಸುವುದು, ಮತ್ತೆ ರಾತ್ರಿ ಅವೆಲ್ಲ ಅಲ್ಲಿಯೇ ಇವೆಯೇ, ಜೇಡ ಬಂದು ತಿಂದು ಹೋಗಿದೆಯೇ ಎಂದು ಪರೀಕ್ಷಿಸುವುದು.. ಹೀಗೆ ನಿಧಾನವಾಗಿ ಆ ಜೇಡರ ಬಲೆಯೊಳಗೆ ಇವಳೂ ಹೆಣೆದುಕೊಳ್ಳತೊಡಗಿದಳು.

ಆ ಬಲೆಯೆಡೆಗೆ ತಾನೇಕೆ ಇಷ್ಟು ಆಕರ್ಷಿತವಾಗಿದ್ದೇನೆ, ಮುಂಚಿನಷ್ಟು ಆ ಕನಸು, ಹಗಲು ರಾತ್ರಿಗಳ ನೆಮ್ಮದಿ ಹಾಳು ಮಾಡುತ್ತಿಲ್ಲ ಏಕೆ ಎಂಬ ಉತ್ತರ ಮಾತ್ರ ಹೊಳೆಯುತ್ತಿಲ್ಲ. ಎಲ್ಲಿಂದಲೋ ಶುರುವಾದ, ಎಲ್ಲಿಯೋ ಸರಿದುಹೋದ ತನ್ನ ಬಾಳನ್ನು ಇಲ್ಲಿನ ತನಕ ಇದೇ ಜೇಡದಂತೆ ಹೆಣೆದುಕೊಂಡು ಬಂದಿದ್ದೇನೆ ಅಲ್ಲವೇ. ಅದು ಯಾವ ಮೋಡಿಯಾಗಿತ್ತೋ, ಏನೆಲ್ಲಾ ನಡೆದುಹೋಯ್ತು. ತನ್ನ ಕನಸಿನ ಮೂಟೆಗಳನ್ನು, ಜೊತೆಯಲ್ಲಿ ಹೆತ್ತವರ ಒಡೆದ ಕನಸಿನ ಚೂರುಗಳನ್ನೂ ಹೊತ್ತುಕೊಂಡು ಅವನ ಹಿಂದೆ ನಡೆದುಬಿಟ್ಟಿದ್ದೆನಲ್ಲ. ಆ ಮೂಟೆ ಮೊದಮೊದಲು ಹತ್ತಿಯಷ್ಟು ಹಗುರವಾಗಿದ್ದದ್ದು, ಒದ್ದೆ ಮರಳಿನಷ್ಟು ಭಾರವಾಗಿದ್ದು ಯಾವಾಗ? ತಿಳಿಯಲೇ ಇಲ್ಲ. ಮೈ ಮನಸ್ಸುಗಳನ್ನೆಲ್ಲ ಹರಿದು ಹುರಿದು ಮುಕ್ಕಿ ಹೋದನಲ್ಲ, ಅಷ್ಟು ದಡ್ಡಿಯಾಗಿದ್ದೆನೆ ತಾನು? ಕೈಯಲ್ಲಿನ ಕಾಫಿಲೋಟದ ತಳಕಂಡಾಗ, ಜೇಡರಬಲೆಯ ಜೊತೆಗಿನ ಇವಳ ಸಂವಾದಕ್ಕೂ ತೆರೆ ಬಿದ್ದಿತ್ತು.

ಅವತ್ತು ಎಂದಿನಂತೆ ಎದ್ದು ಜೇಡರಬಲೆಯ ಮುಂದೆ ನಿಂತಾಗ, ಹಮ್.. ರಾತ್ರಿ ಸಿಕ್ಕಿ ಬಿದ್ದ ಹುಳಗಳು ಇನ್ನೂ ಇಲ್ಲೇ ಇವೆಯಲ್ಲ ಎನಿಸಿತ್ತು. ಆದರೂ ಹೆಚ್ಚು ತಲೆಕೆಡಿಸಿಕೊಳ್ಳದೆ ಕೆಲಸಕ್ಕೆ ಹೋಗಿ ಬಂದಿದ್ದಳು. ರಾತ್ರಿ ಬಂದು ನೋಡಿದಾಗ ಹಾಗೆ ಇದೇ, ಸ್ವಲ್ಪವೂ ಬದಲಾಗಿಲ್ಲ. ಅಂದರೆ? ಆ ಜೇಡ ಬಂದು ಹೊಟ್ಟೆ ತುಂಬಿಸಿಕೊಂಡು ಹೋಗಿಲ್ಲವೆಂದಾಯ್ತು.

ಊಟ ಮುಗಿಸಿ ಬಂದು ಮತ್ತೆ ನೋಡಿದಳು. ಏನೂ ಬದಲಾವಣೆಯಿಲ್ಲ. ಇವಳ ಚಡಪಡಿಕೆ ಏರುತ್ತಲೇ ಹೋಯಿತು. ಮರೆಸಲು ಟಿವಿ ಹಾಕಿ ಕೂತಳು. ಆದರೆ ದೃಷ್ಟಿಯೆಲ್ಲ ಬಲೆಯೆಡೆಗೆ. "ದರಿದ್ರ ಜೇಡ ಎಲ್ಲಿ ಹೋಯಿತು?" ಇಷ್ಟೊಂದು ಹುಳಹುಪ್ಪಟೆಗಳನ್ನು ಹಿಡಿದು ಹಾಕಿದೆಯಲ್ಲ, ಹೊಟ್ಟೆಗೆ ಬೇಡವಾದರೆ ಬಲೆ ಹೆಣಿದದ್ದಾದರೂ ಏಕೆ?" ನಿದ್ದೆಯೇ ಬರುತ್ತಿಲ್ಲ. ಮನಸ್ಸೆಲ್ಲ ಕಲಸಿ ಹುಳಿ ಮೊಸರಿನಂತಾಗಿ ಜೇಡದ ಬರವನ್ನು ಕಾಯುತ್ತ ಕೂತುಬಿಟ್ಟಿದ್ದಾಳೆ. ಏನಾಗಿದೆಯೆಂದು ಈ ಜೇಡಕ್ಕೆ? ತಾನೇ ಮನೆಗೆ ಹಿಂತಿರುಗಿ ಹೋಗಿರಲಿಲ್ಲವೇ? ಅಮ್ಮ ಒಂದು ಮಾತು ಕೂಡ ಕೇಳಿರಲಿಲ್ಲ, ಏನಾಯಿತು, ಯಾಕಾಯಿತು? ಯಾಕೆ ಹೋದಿ, ಯಾಕೆ ಬಂದಿ ಏನಾದರೂ ಕೇಳಬಹುದಿತ್ತು. ಸುಮ್ಮನೆ ನಕ್ಕು, ತಾನು ರಜೆಯಲ್ಲಿ ಮನೆಗೆ ಬಂದಿದ್ದೇನೋ ಎಂಬಂತೆ ಇತ್ತು ಅವಳ ನಡವಳಿಕೆ. ಅವಳು ಕೇಳದೆ ಇದ್ದ ಪ್ರಶ್ನೆಗಳೇ ಒಂದು ಹಿಂಸೆಯಾಗಿ ಹೋಗಿರಲಿಲ್ಲವೇ. "ಥೂ ಈ ಜೇಡರ ಮನೆ ಹಾಳಾಗ! ಅತ್ಲಾಗಿ ಒಂದು ಸಾರಿ ಬಂದು ಸಾಯಬಾರದೆ?"

ಮನಸ್ಸು ಅವಳ ನಿಯಂತ್ರಣದಲ್ಲೇ ಇಲ್ಲ. "can not come in today, not feeling well" ಎಂದು ಒಂದು ಈಮೇಲ್ ಗೀಚಿ ಹಾಕಿದಳು. ಆಗ ಬೆಳಿಗ್ಗೆ 7 ಗಂಟೆ. ಒಂದು ಹನಿ ರೆಪ್ಪೆ ಮುಚ್ಚಿಲ್ಲ. ತಲೆ ಸಿಡಿಯುತ್ತಿತ್ತು, ನಿದ್ರೆ ಮಾತ್ರ ಬರುತ್ತಿಲ್ಲ. ಕಾಫಿಪೊಟಿಗೆ ಹೊಸ ಪುಡಿ, ನೀರು ಎಲ್ಲ ಸೇರಿಸಿ, ಸ್ವಿಚ್ ಒತ್ತಿ ಮುಖ ತೊಳೆದುಕೊಂಡು ಬಂದು ಮತ್ತೆ ಅದೇ ಧ್ಯಾನ. ಅಂಡಿಗೆ ಅಂಟು ಹಚ್ಚಿಕೊಂಡು ಕೂತಂತೆ ಸೋಫಾದ ಮೇಲೆ ಮತ್ತೆ ಹುದುಗಿ ಹೋದಳು. ಆ ಜೇಡ ಬರುವುದು ಎಷ್ಟೊತ್ತಿಗೋ, ಎಲ್ಲಿ ಬೇರೆ ಜಾಗ ಹುಡುಕಿಕೊಂಡು ಹೋಯಿತೋ? ಅಥವಾ ಈ ಜಾಗ ಮರೆತುಹೋಗಿ ಎಲ್ಲಾದರೂ ದಾರಿ ತಪ್ಪಿದೆಯೋ, ಹೀಗೆ ಚಿತ್ರವಿಚಿತ್ರ ವಿಚಾರಗಳು ತಲೆತುಂಬ.

ದಾರಿತಪ್ಪಿ ಹೋಗುವುದು ಎಂದರೇನು? ದಾರಿ ಇದ್ದಲ್ಲಿಯೇ ಇರುತ್ತದೆಯಲ್ಲವೇ? ತಪ್ಪಿ ಹೋಗುವವರು ನಾವಷ್ಟೇ. ನಮ್ಮದಲ್ಲದ ದಾರಿ ನಮ್ಮದಲ್ಲ ಎಂದು ಮೊದಲೇ ಗೊತ್ತಿದ್ದರೆ ಅಲ್ಲಿ ನಡೆದು ಹೋಗುವ ಶ್ರಮವಾದರೂ ತಪ್ಪುತ್ತಲ್ಲವೇ? ನಮ್ಮದಲ್ಲ ಎಂದು ಗೊತ್ತಾದ ಮೇಲೂ ಎಷ್ಟೋ ಬಾರಿ ಹಿಂತಿರುಗಿ ಹೋಗಲಾರದ ಭಯಕ್ಕೆ, ಹೊಸ ದಾರಿ ಹುಡುಕಿಕೊಳ್ಳಲಾರದ ಹಿಂಜರಿತಕ್ಕೆ ಸುಮ್ಮನೆ, ಇದ್ದ ದಾರಿಯಲ್ಲಿಯೇ ನಡೆದುಬಿಡುತ್ತೇವೆಯೇ? ಮಂಕು ಹಿಡಿದವರಂತೆ ಒಂದು ತಿಂಗಳು ಮನೆಯಲ್ಲಿ ಕೂತ ಮೇಲೆ ಇದ್ದಕ್ಕಿದ್ದಂತೆ ಎದ್ದು ಮತ್ತೆ ಕೆಲಸಕ್ಕೆ ಹೋಗಿದ್ದೆ. ಆಮೇಲೆ ಸಿಕ್ಕ ಯುಎಸ್ ಪ್ರಾಜೆಕ್ಟ್ ಒಂದರ ನೆಪ ಮಾಡಿಕೊಂಡು ಎಲ್ಲ ಬಿಟ್ಟು ದೂರ ಹೋಗಿಬಿಡಬೇಕು ಎಂದು ಇಲ್ಲಿ ಹಾರಿ ಬಂದಿದ್ದೆನಲ್ಲವೇ? ಅದೆಲ್ಲ ಯಾವ ಯುಗವೋ ಎಂದು ಒಮ್ಮೊಮ್ಮೆ ಎನಿಸಿದರೆ, ಎಲ್ಲ ನಿನ್ನೆ ಮೊನ್ನೆ ನಡೆದಿದ್ದು ಎಂಬಷ್ಟು ನಿಚ್ಚಳ.

ಮಧ್ಯಾಹ್ನವಾಯಿತು, ಇನ್ನೂ ಆ ಜೇಡದ ಪತ್ತೆಯಿಲ್ಲ. ಹಾಳಾದ್ದು, ಎಲ್ಲಾದರೂ ಬಿದ್ದು ಸಾಯಲಿ, ತನಗೇನು ಎಂದುಕೊಂಡು ಏನೋ ಒಂದಿಷ್ಟು ಬೇಯಿಸಿ ತಿಂದಳು. ಎಷ್ಟು ಕೊಡವಿಕೊಂಡು ಎದ್ದರೂ ತಲೆ ಮಾತ್ರ ಅಲ್ಲೇ ಇದೆ. ಆ ಜೇಡರಬಲೆಯ ಸೂಕ್ಷ್ಮ ನೇಯ್ಗೆಯ ನಡುವೆ ಸಿಕ್ಕುಸಿಕ್ಕಾಗಿ ಸಿಕ್ಕಿಹೋಗಿದ್ದಾಳೆ. ಹಸಿವು, ನಿದ್ದೆ, ಒಂದೂ ಪರಿವೆಯಿಲ್ಲದೆ ಆ ಜೇಡದ ಹಾದಿಯಲ್ಲಿ ಹಾಸಿಹೋಗಿದ್ದಾಳೆ. 2 ದಿನ, 2 ರಾತ್ರಿಯಾದರೂ ಬರದ ಜೇಡದ ಬರುವಿಕೆಯ ಮೇಲೆ ಇನ್ನು ನಂಬಿಕೆ ಉಳಿದಿಲ್ಲ. ಹಾಗೆಂದು ಒಪ್ಪಿಕೊಳ್ಳಲು ಅವಳ ಮನಸ್ಸು ಕೇಳುತ್ತಿಲ್ಲ. ಇದೆಂಥ ಹುಚ್ಚು ತನಗೆ? ತನ್ನ ಮನಸ್ಸೂ ಈ ಬಲೆಯಂತೆ ಆಗಿಹೋಗಿದೆ ತಾನೇ? ಹಳೆಯ ಕೊಳಕನ್ನೆಲ್ಲ ಹಾಗೆ ತುಂಬಿಕೊಂಡು, ಒಂದೊಂದೇ ನೆನಪು ನೇಯ್ದು ಮತ್ತೆ ಮತ್ತೆ ಸುತ್ತಿ ಹೆಣೆದು ಜಟಿಲ ಸರಪಳಿಯಂತೆ. ಯಾವೊಂದು ಹೊಸ ಭಾವನೆ ಕೂಡ ಒಳಹೋಗದಂತೆ. ಎಲ್ಲ ಈ ನೊಣಗಳಂತೆ ಸಿಕ್ಕು ಸತ್ತುಹೋಗುತ್ತವೆ, ತನ್ನೊಳಗಿನ ಬಲೆಗೆ.

ಏನನ್ನಿಸಿತೋ ಏನೋ, ಹೊಸ ನಿರ್ಧಾರ ಗಟ್ಟಿಗೊಂಡಂತೆ, ಎದ್ದು ಹೋಗಿ, ಚಿಕ್ಕ ಕಸಬರಿಗೆ, ಟ್ರೆ ತೆಗೆದುಕೊಂಡು ಬಂದು ಬರಬರನೆ ಮೂಲೆಯ ಜೇಡರ ಬಲೆಯನ್ನೆಲ್ಲ ಗುಡಿಸಿ ಕೆಡವಿದಳು. ಅದೊಂದು ಬೂದಿ ಬಣ್ಣದ ಚಿಕ್ಕ ಧೂಳಿನ ಮುದ್ದೆಯಾಗಿ ಬಿದ್ದಿತ್ತು. ಒಳಗೆ ಹೋಗಿ, ಒಂದು ಹಳೆಯ ಸೂಟ್ಕೇಸ್ ತೆರೆದು, ಏನೇನೋ, ಚಿಕ್ಕಪುಟ್ಟ ನೆನಪನ್ನೆಲ್ಲಾ ಕಟ್ಟಿಟ್ಟ ಮೂಟೆ ಹೊತ್ತು ತಂದಳು. ಎಲ್ಲವನ್ನೂ ಬಾಲ್ಕನಿಯಲ್ಲಿ ದೊಡ್ಡ ಸ್ಟೀಲ್ ತಟ್ಟೆಗೆ ಸುರಿದು ಮೇಲಿಂದ ಬಲೆಯ ಮುದ್ದೆಯನ್ನಿಟ್ಟು, ಬಾಲ್ಕನಿಯ ಬಾಗಿಲೆಳೆದು ಕಡ್ಡಿ ಗೀರಿದಳು. ಸುಳಿಯಾಗಿ ಬಣ್ಣಬಣ್ಣವಾಗಿ ಹೊರಟ ಆ ಜ್ವಾಲೆಯನ್ನು ನೋಡುತ್ತಾ ನೋಡುತ್ತಾ ಹಗುರಾಗತೊಡಗಿದಳು. ಉರಿದು ಎಲ್ಲ ಬೂದಿಯಾದ ಮೇಲೆ ತಟ್ಟೆಯಲ್ಲಿದ್ದ ಬೂದಿಯನ್ನೆಲ್ಲ ಬಳಿದು ಬಚ್ಚಲಿಗೆ ನಡೆದು, ಟಯ್ಲೆಟ್ಟಿನಲ್ಲೆಸೆದು ಫ್ಲಶ್ ಮಾಡಿ, ಅದು ಸುರುಳಿಯಾಗಿ ನೀರಿನೊಂದಿಗೆ ಕಲಸಿ ಕಳೆದು ಹೋಗುವುದನ್ನೇ ನೋಡುತ್ತಿದ್ದಂತೆ ಎಲ್ಲೋ ಕೊಳೆಯೆಲ್ಲ ಕಳೆದಂತೆನಿಸತೊಡಗಿತವಳಿಗೆ. ಮೈಮನವೆಲ್ಲ ಹಗುರಾಗಿ ಶವರಿನಡಿಗೆ ನಿಂತಳು. ತಲೆಯ ಮೇಲೆ ಹನಿಹನಿಯಾಗಿ ಬಿದ್ದ ಬೆಚ್ಚಗಿನ ನೀರು ಮೈಯ ಬೂದಿಯ ಜೊತೆಗೆ ಒಳಗಿನ ಬೂದಿಯನ್ನೂ ಬಳಿದುಕೊಂಡು ಧಾರೆಯಾಗಿ ಉಂಗುಷ್ಟದಿಂದ ಇಳಿದು ಹೋಗುತ್ತಿತ್ತು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more