• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಕ್ಕು -ಬಂಧ : ಸಣ್ಣ ಕತೆ

By Staff
|
ಅವಳ ಬದುಕಿನಲ್ಲಿ ಶಿರಾಡಿ ಘಾಟಿನಲ್ಲಿ ಕಾಣಸಿಗುವಂಥ ಅನೇಕ ತಿರುವುಗಳು ಬರುತ್ತಲೇ ಇದ್ದವು. ತಿರುವುಗಳನ್ನು ಹಾಗೂಹೀಗೂ ನೆಗೋಷಿಯೋಟ್ ಮಾಡಲು ಕಲಿಯುತ್ತಿರುವಾಗ ಒಂದು ದಿನ ಹೀಗಾಯಿತು..ಎಷ್ಟೆಂದರೂ ಗೌರಿ ಎಕ್ಸಿಟ್ ಗಳಲ್ಲಿ ಅಲೆಯುತ್ತಿರುವ ವಿದ್ಯಾರ್ಥಿ ತಾನೆ!

* ವೈಶಾಲಿ ಹೆಗಡೆ, ಬೋಸ್ಟನ್, ಅಮೆರಿಕ

ಗೌರೀ ಗೌರೀ ಏಳೇ ಶಾಲೆ ಗಂಟೆ ಹೊಡೀತು, ಎಷ್ಟ್ ಹೊತ್ತೆ ಅದು ಮಲಗೊದು', ಅಮ್ಮನ ಒದರಾಟಕ್ಕೆ ದಡಬಡಿಸಿ ಎದ್ದಳು ಗೌರಿ. ಹೈಸ್ಕೂಲು ಹುಡುಗಿಯಾದರೂ ಇನ್ನೂ ಹುಡುಗಾಟದ ಪೋರಿ. ಅಕ್ಕ ಶಾರದಾಳಿಗಿಂತಲೂ ಜೋರು. ಮಲೆನಾಡಿನ ಆ ಚಿಕ್ಕ ಊರಿನಲ್ಲಿ ಎಲ್ಲರಿಗೂ ಪರಿಚಿತ ಹುಡುಗಿ. ಓದಿನಲ್ಲೂ ಜಾಣೆ. ಅಕ್ಕ ಇವಳಿಗೆ ತದ್ವಿರುದ್ಧ. ತಾನಾಯಿತು, ತನ್ನ ಪಾಡಾಯಿತು ಎಂದು ತನ್ನದೇ ಕೋಟೆ ಕಟ್ಟಿಕೊಂಡು ಎಲ್ಲಾದಕೂ ಸುಮ್ಮನಿರುವವಳು.

ಇವರಿಬ್ಬರನ್ನು ಕಟ್ಟಿಕೊಂಡು ಸಾವಿತ್ರಿ ತಮ್ಮನ ಮನೆ ಸೇರಿದಾಗ ಊರೆಲ್ಲ ಗುಸುಗುಸು ಅಂದುಕೊಂಡು ಕಡೆಗೆ ಇವರೂ ಊರಿನವರೇ ಆದಾಗ ತಣ್ಣಗಾಗಿದ್ದರು. ಮಾವ, ಇವರನ್ನು ಸ್ವಂತ ಮಕ್ಕಳಂತೆ ಸಾಕಿ ಬೆಳೆಸಿದನು. ಚಿಕ್ಕ ಬ್ಯಾಂಕ್ ನೌಕರಿಯಾದರೂ ಯಾವ ಬಿಸಿ ತಟ್ಟದಂತೆ ಅಕ್ಕನ ಮಕ್ಕಳನ್ನು ನೋಡಿಕೊಳ್ಳುತ್ತಾ ಬಂದ ಮಾವ ಊರವರಿಗಂತೂ ಆದರ್ಶಪ್ರಾಯ ಮನುಷ್ಯ. ಇವರ ಸಲುವಾಗಿ ಮದುವೆಯನ್ನೂ ಮುಂದೂಡಿದ ಮಹಾನುಭಾವ ಅವನು. ತುಂಬಾ ತಡವಾಗಿ ಮದುವೆಯಾದರೂ, ಮನೆಗೆ ಬಂದ ಅತ್ತೆ ಈ ಹೆಣ್ಣುಮಕ್ಕಳಿಗೆ, ಅತ್ತಿಗೆಗೆ, ಹೊರತಾಗಿ ನಡೆದುಕೊಳ್ಳಲಿಲ್ಲ.

ಹೀಗಾಗಿ, ಗೌರಿಗೆ ಏನೊಂದೂ ಕಡಿಮೆ ಎನಿಸಲಿಲ್ಲ. ಎಲ್ಲದಕ್ಕೂ ಹೆದರುವ ಅಮ್ಮನನ್ನು ಗುಗ್ಗು ಎಂದು ಬೈದುಕೊಂಡು ಓಡಾಡುವಳು. ಅಕ್ಕನ ಸೌಮ್ಯ ಸ್ವಭಾವಕ್ಕೆ ಅಕ್ಕ ಪುಕ್ಕ ಎಂದು ಕೀಟಲೆ ಮಾಡುತ್ತಾ ತಿರುಗುವಳು. ಗೌಜಿನ ಗೌರಿಗೆ ರಾತ್ರಿ ಎಲ್ಲ ದೀಪ ಆರಿದ ಮೇಲೆ ಕತ್ತಲ ಮೂಲೆಯಿಂದ ಕೇಳಿಸುವ ಬಿಕ್ಕುಗಳು ಕಿವಿಗೆ ಬೀಳಲೇ ಇಲ್ಲ. ಇಷ್ಟು ವರ್ಷ ಕಳೆದರೂ ನಮ್ಮನ್ನೆಲ್ಲ ಬಿಟ್ಟು ಓಡಿಹೋದ ಆ ದರಿದ್ರ ಅಪ್ಪನನ್ನು ನೆನೆಸಿಕೊಂಡು ಬಿಕ್ಕುವ ಅಮ್ಮನ ಮೇಲೆ, ಆ ಅಪ್ಪನ ಮೇಲೆ, ಉಕ್ಕಿ ಬರುವ ರೋಷವನ್ನೆಲ್ಲ ದಿಂಬಿಗೆ ಗುದ್ದಿ ತೀರಿಸಿಕೊನ್ಡು ಮಲಗುವುದು ಶಾರದಾಳಿಗೆ ರೂಧಿಯಾಗಿಬಿಟ್ಟಿತ್ತು. ಬಿ. ಎಡ್. ಮುಗಿಸಿದ ಮೇಲೆ ಬಂದ ಒಂದು ತಕ್ಕಮಟ್ಟಿನ ಗಂಡನ್ನು ಒಪ್ಪಿಕೊಂಡು, ಶಾರದಾಳಿಗೆ ಮದುವೆಯಾಯಿತು. ಅಕ್ಕನ ಮದುವೆಯಲ್ಲಿ ಸಿನ್ಗರಿಕೊಂಡು ಅಲೆದಿದ್ದೆ ಅಲೆದಿದ್ದು ಗೌರಿ. ಅದಾದ ಕೆಲದಿನಗಳ ಬಳಿಕವೇ ಪಿಯುಸಿ ಫಾಲಿತಾಶ ಹೊರಬಿದ್ದು ಚೆನ್ನಾಗಿ ಅಂಕಗಳಿಸಿದ ಗೌರಿಗೆ ಜಗತ್ತೇ ಮುಗಿಲು. ಎಂಜಿನಿಯರಿಂಗ್ ಮಾಡುವ ಅವಳ ಆಸೆಯ ಅರಿವು ಮುಂಚೆಯೇ ಇದ್ದ ಮಾವ ಕೂಡ ಇಲ್ಲ ಎನ್ನಲಿಲ್ಲ.

ಹೇಗೂ ಎಲ್ಲ ಮೆರಿಟ್ನಲ್ಲಿ ದೊರಕಿದ್ದರಿಂದ, ಇನ್ಕಂ ಕೋಟಾದಲ್ಲಿ ಹಾಸ್ಟೆಲ್ ಕೂಡ ಕಡಿಮೆ ಖರ್ಚಿನಲ್ಲಿ ಆಗಿ ಹೋಯಿತು. ಚೆನ್ನಾಗಿಯೇ ಓದಿದ ಗೌರಿ ಇಂಜಿನಿಯರಿಂಗ್ ಮುಗಿಸಿ, ಕೆಲಕಾಲ ಕೆಲಸ ಮಾಡುತ್ತಿದ್ದಳಷ್ಟೇ. ಸಹೋದ್ಯೋಗಿಯೋಬ್ಬನೊಡನೆ ಪರಿಚಯವೂ, ಪ್ರೇಮವೂ ಬೆಳೆಯಿತು. ಅವನು ಸದ್ಯದಲ್ಲಿಯೇ ಅಮೇರಿಕೆಗೆ ಹೊರಡುವನಿದ್ದದ್ದರಿಂದ ಬೇಗನೆ ಅವರ ಮದುವೆಯೂ ಆಯ್ತು.

ಗೌರಿಗಂತೂ ಜೀವನ ಸುರಳೀತ. ಗಂಡನೊಡನೆ ಅಮೇರಿಕೆಗೆ ಹಾರಿದ ಗೌರಿಗೆ ಇಲ್ಲಿಯತನಕ ಎಲ್ಲವೂ ಅಂಗೈ ಬೆಣ್ಣೆ. ವೀಸ ರಗಳೆ, ಅದೂ ಇದೂ ಎಂದು ಕೆಲಸ ಹುಡುಕುವುದಕ್ಕಿಂತ ಹೆಚ್ಚಿನ ಅಭ್ಯಾಸದ ಬಗ್ಗೆ ಮೊದಲೇ ಒಲವಿದ್ದುದರಿಂದ ಹೆಚ್ಚಿನ ಅಭ್ಯಾಸ ಮಾಡುವ ಹುಮ್ಮಸ್ಸಿನಿಂದ ಸಕಲ ಪ್ರವೇಶ ಪರೀಕ್ಷೆ ಬರೆದು ಹತ್ತಿರದ ಯುನಿವರ್ಸಿತಿಯೊಂದರಲ್ಲಿ ಕಂಪ್ಯೂಟರ್ ಸೈನ್ಸ್ ಮಾಸ್ಟರ್ಸ್ ಪದವಿಗೆ ಅಡ್ಮಿಶನ್ ಕೂಡ ಆಯ್ತು.

ಫಾಲ್ ಸೇಮಿಸ್ಟರ್ಗೆ ಸೇರಿಕೊಂಡ ಗೌರಿಗೆ ಇಲ್ಲಿನ ವಾತಾವರಣವೆಲ್ಲ ಹೊಸತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಪರಿಚಯವಿದೆಯೇನೋ ಎಂಬಂತೆ ಎಲ್ಲರೂ ಬೀರುವ ಮುಗುಳ್ನಗೆ. ಮುಕ್ತ ವಿದ್ಯಾಭ್ಯಾಸದ ಪರಿ, ಹಗಲಿರುಳೂ ಲಭ್ಯವಿರುವ ಪ್ರಯೋಗಾಲಯ, ಕಂಪ್ಯೂಟರ್ಗಳು, ಎಲ್ಲಿ ಬೇಕಾದರೂ ಕುಳಿತು ಏನು ಬೇಕಾದರೂ ಓದುವ ವಿದ್ಯಾರ್ಥಿಗಳು, ಅವಳು ಓದಿದ ಭಾರತದ ಇಂಜಿನಿಯರಿಂಗ್ ಕಾಲೇಜಿಗೂ, ಅಮೆರಿಕಾದ ಯುನಿವೆರ್ಸಿಟಿಗೋ ಅಜಗಜಾಂತರ. ಮೊದಲೇ ಚುರುಕಿನ ಹುಡುಗಿಗೆ, ಎಲ್ಲ ಸೌಲಭ್ಯಗಳು! ಕೇಳಬೇಕೆ, ಗೌರಿಯ ಓದು ಭರದಿಂದ ಸುರು.

ಯಾವಾಗಲೂ ಓದು, ಮನೆ ಎಂದು ಸುತ್ತಿಕೊಂಡಿದ್ದ ಗೌರಿಗೆ ದಿಕ್ಕುತಪ್ಪಿದಂತೆ ಏನೋ ಬದಲಾಗಬಹುದು, ಏನೋ ಸಿಕ್ಕಿ ಮತ್ತೇನೋ ಕಳೆದುಹೋದೀತು ಎಂಬ ಕಲ್ಪನೆ ಕೂಡ ಇರಲಿಲ್ಲ. ಒಮ್ಮೆ ಪ್ರೊಫೆಸರ್ ಗ್ಯಾರಿಸನ ರ ಆಫೀಸಿಗೆ ಕೆಲವು ಪ್ರಶ್ನೆ/ಸಲಹೆಗಳಿಗಾಗಿ ಹೋಗಿದ್ದಾಗ ಅವರು ಇದ್ದಕ್ಕಿದ್ದಂತೆ ಕೇಳಿದ್ದರು, "ಆರ್ ಯು ರಿಲೇಟೆಡ್ ಟು ಪ್ರೊಫ್. ಸಿಡ್ ಬೈ ಎನಿ ಚಾನ್ಸ್?" ಎಂದು. ಇವಳು ಗಿಲಗಿಲನೆ ನಕ್ಕು "ನೋ ವೆ, ಐ ಡೋಂಟ್ ಇವನ್ ನೋ ಹು ಹಿ ಇಸ್" ಎಂದಿದ್ದಳು. ಹೊರಬರುತ್ತಾ ಮನದಲ್ಲೇ ಅಂದುಕೊಂಡಿದ್ದಳು. ಈ ಮುದುಕಪ್ಪಂಗೆ ಎಲ್ಲೋ ಭ್ರಾಂತು, ನನ್ನ ಮುಸುಡೆಲ್ಲಿ, ಅದ್ಯಾವನೂ ಬಿಳಿಯ ಸಿಡ್ ಎಲ್ಲಿ ಎಂದು. ಹಾಗೆಯೇ ಮತ್ತೆ ಕೆಲವೊನ್ದು ಬಾರಿ ಯಾರ್ಯಾರೋ ಕೇಳಿದ್ದರು, " are you related to Prof. Sid " ಎಂದು.

ಮೊನ್ನೆ ಕೂಡ ಹಾಗೆಯೇ ಆಯ್ತು. ಇಂಡಿಯನ್ ಸ್ಟೂಡೆನ್ಟ್ಸ್ ಅಸೋಸಿಯೇಶನ್ ದೀಪಾವಳಿ ಆಚರಣೆಗೆಂದು ಹೋಗಿದ್ದಾಗ, ಸಾಕಷ್ಟು ಜನ ಕೇಳಿದ್ದರು ಮತ್ತೆ ಅದೇ ಪ್ರಶ್ನೆ. ಈಗಾಗಲೇ ಈ ಪ್ರಶ್ನೆ ಅವಳ ತಲೆ ಕೆಡಿಸುತ್ತಾ ಇತ್ತು. ಈಗಂತೂ ರೇಗಿ ಹೋಯಿತು. ಪ್ರಶ್ನೆಕೆಳಿದ ಸೀನಿಯರ್ ಓಬ್ಬನಿಗೆ "ಹು ಇಸ್ ದಿಸ್ ಸಿಡ್'? ಸಿರ್ರೆಂದು ಕೇಳಿದ್ದಳು.

ಅವನು ವಿಚಿತ್ರವಾಗಿ ಇವಳನ್ನು ನೋಡಿ, "he is a senior prof. in Math department, a very smart guy, you look a lot like him" ಎಂದು ಭುಜಹಾರಿಸಿ ಹೊರಟವನು,

ಹಿಂತಿರುಗಿ ಕೂಗಿದ, "he will be here shortly, you will see" ಗೌರಿಗೆ ಈಗ ತಡೆಯದ ಕುತೂಹಲ. ಕೊನೆಗೂ ಬಂತು ಆ ಘಳಿಗೆ. ಇವರಿಗೆಲ್ಲ ಕೈ ಮುಗಿಯುತ್ತ ಆಡಿಟೋರಿಯಂ ಒಳಗೆ ಬಂದ ಮನುಷ್ಯ, " ಫಾರ್ ನ್ಯೂ ಸ್ತುದೆನ್ತ್ಸ್, ಹಾಯ್ ಐ ಅಂ ಪ್ರೊಫೆಸರ್ ಎಚ್., ಕೆ. ಶ್ರೀಧರ್ , ಯು ಕೆನ್ ಕಾಲ್ ಮಿ ಡಾಕ, ಪ್ರೊಫ್ ಒರ ಇವನ್ ಸಿಡ್" ಗೌರಿಗೆ ಮುಂದೇನೂ ಕೇಳಿಸಲಿಲ್ಲ. ತಲೆ ಗಿರಗಿರನೆ ತಿರುಗುತ್ತಿತ್ತು. ಅಮ್ಮನ ಕಪಾಟಿನಲ್ಲಿ ಎಲ್ಲೋ ನೋಡಿದ ಕಪ್ಪು ಬಿಳುಪು ಫೋಟೋದಲ್ಲಿ ಕಂಡಂಥ ಮುಖ, ತನ್ನದೇ ಕನ್ನಡಿಯೊಳಗಿನ, ಕನ್ನಡಕ ಹಾಕಿಕೊಂಡಂಥ ಮುಖ. ಏನೇನೋ ಘಟನೆ, ನೆನಪುಗಳು ತಾಳೆಯಾಗುತ್ತಿದ್ದವು ಕಣ್ಣೆದುರಿಗೆ, ಒಂದು ಬಗೆಯ ಚಿತ್ರಪಟದಂತೆ.

ಅಮ್ಮ ತನ್ನ ಮದುವೆಯ ಸಂದರ್ಭದಲ್ಲಿ ಮಾಡಿದ ರಂಪಾಟ, ಹುಡುಗ ಅಮೇರಿಕೆಗೆ ಹೊರಡುವನೆಂದು ತಿಳಿದಾಗ, ಅಂತ ಸಂಪ್ರದಾಯಸ್ಥ ಅಮ್ಮ ತಕ್ಷಣ ರೆಜಿಸ್ಟರ್ ಮಾಡಿಸಿಕೊಂಡು, ವೀಸಾ, ವಿಮಾನ ಟಿಕೆಟ್ ಆದ ಮೇಲೆ ಶಾಸ್ತ್ರೋಕ್ತ ಮದುವೆ ಎಂದು ಪಟ್ಟು ಹಿಡಿದು ಕೂತಿದ್ದು, ಕೊನೆಗೂ ಅವಳ ಹಠದಂತೆ ಎಲ್ಲ ನಡೆದಾಗ ನನ್ನ, ಅಕ್ಕನ್ನ ಅಪ್ಪಿಕೊಂಡು ಜೋರಾಗಿ ನಕ್ಕಿದ್ದ ಅಮ್ಮ, ಆಗ ತಾನು ಅಮ್ಮನಿಗೆ ಹುಚ್ಚೆ ಸೈ ಅಂದುಕೊಂಡಿದ್ದು, ಗಣಿತಕ್ಕೆ ಪ್ರತಿ ಬಾರಿಯೂ ನೂರಕ್ಕೆ ನೂರು ತಗೊಂಡ ತಾನು, ಮಾವ ಒಮ್ಮೆ ಮತ್ತೆ ಗಣಿತದಲ್ಲಿ ಹುಶಾರಿನೆ ನೀನು, ಎಷ್ಟಂದ್ರೂ ಎಂದು ಮುಂದೇನೋ ಹೇಳಲಿದ್ದವನು ಬಾಯಿಮುಚ್ಚಿಕೊಂಡಿದ್ದು, ಎಲ್ಲ ಈಗ ಅರ್ಥವಾಗುತ್ತಿದೆಯೇ? ಉಸಿರು ಕಟ್ಟಿದಂತಾಗಿ ಬಿರಬಿರನೆ ಹೊರನಡೆದು ಕಾರು ಹತ್ತಿದ್ದೊಂದೇ ನೆನಪು ಮನೆ ಹೇಗೆ ಮುಟ್ಟಿದ್ದಳೊ ಅವಳಿಗೂ ಗೊತ್ತಿಲ್ಲ.

ಎಚ್ಚರವಾದಾಗ ಮನೆ ತುಂಬಾ ಹಿಂದೆಂದೂ ಕೇಳಿಸದ ಅಮ್ಮನ ಬಿಕ್ಕುಗಳು ಮಾರ್ದನಿಸಿದಂತೆ. ಗಂಡನೊಡನೆ ಮಾತನಾಡಿದರೂ ತಲೆತುಂಬ ಬಿಕ್ಕುತ್ತಿರುವ ಅಮ್ಮ. ಮಾರನೆ ದಿನ ಕ್ಲಾಸಿನಲ್ಲಿ ಕುಳಿತರೂ ಅವಳಿಗೆ ಕೇಳುತ್ತಿದ್ದದ್ದು ಕತ್ತಲ ಮೂಲೆಯ ಅಮ್ಮನ ಬಿಕ್ಕುಗಳು. ಗೌರಿಗೀಗ ಜೀವನದ ಗುರಿಯೇ ಬದಲಾಗಿ ಹೋಗಿದೆ. ಹೋದಲ್ಲಿ ಬಂದಲ್ಲಿ ಕೇಳಿಸುವ ಅಮ್ಮನ ಬಿಕ್ಕುಗಳನ್ನು ಸುಮ್ಮನಾಗಿಸುವ ದಾರಿ ಹುಡುಕುವುದೊಂದೇ ಉದ್ದೇಶ. ತಾನಿಲ್ಲಿ ಹೀಗೆ ಬಂದು ಸೇರಿದ್ದು ವಿಧಿಯೇ? ಅದ್ಯಾವುದೋ ಪೂರ್ವಯೋಜಿತ ಹವಣಿಕೆಯೆ? ಉಳಿದು ಹೋದ ಎಷ್ಟೆಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬಹುದೇ? . ಸಿಟ್ಟೇ, ನೋವೆ, ಹೊಸ ವಾತ್ಸಲ್ಯವೇ, ತನ್ನಲ್ಲಿ ಹುಟ್ಟುತ್ತಿರುವುದು ಏನು? ಮಿದುಳೆಲ್ಲ ಮಣ್ಣು ಮೆತ್ತಿಕೊಂಡಂತೆ, ಎದೆಯಲ್ಲಿ ಏನೋ, ಕಳಚಿ ಬಿದ್ದಂತೆ. ಒಂದೂ ಬಗೆಹರಿಯುತ್ತಿಲ್ಲ ಅವಳಿಗೆ. ಗಂಡನ ವಿರೋಧದ ನಡುವೆಯೂ, ತನ್ನ ಅಧ್ಯಾಪಕರುಗಳ ಹಿತವಚನ ಮೀರಿಯೂ, ಕಂಪ್ಯೂಟರ್ ಇಂಜಿನಿಯರ್ ಗೌರಿ "ಮ್ಯಾಥ್" ಮೇಜರಿಗೆ ಬದಲಾಯಿಸಿಕೊಂಡು ಬಿಟ್ಟಿದ್ದಾಳೆ.

ನಿಮಗೇನಾದರೂ ಅವಳು ಸಿಕ್ಕರೆ ಕೇಳಿ ಅಮ್ಮ ಸುಮ್ಮನಾದಳೇ ಎಂದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more