ವಿಕ್ರಮ ಹತ್ವಾರ, ನ್ಯೂಜೆರ್ಸಿ
ನೀಳಾಭಿಸಾರ

- ವಿಕ್ರಮ ಹತ್ವಾರ, ನ್ಯೂಜೆರ್ಸಿ
[email protected]
ನಿನ್ನಾಗಮನಕೆ ಕಾದಿರಲು,
ಹಳದಿ ಪೀತಾಂಬರ-ಶಲ್ಯ;
ನವಿರಾದ ನವಿಲುಗರಿ
ಮೋಹನ ರಾಗವೇರಿ ಸಮೀಪಿಸಿದೆ
ವನಕುಸುಮಗಳ ಪುಳಕಿಸಿದೆ!
ಕೆಂಗುಲಾಬಿ ತುಟಿಗಳು
ಸುಧೆ ಹರಿಸುವ ಕಂಗಳು
ಚಂದನದ ಘಮ ಮಿಗುವ-
ಕೃಷ್ಣ ವರ್ಣದ ಒಡಲು
ಪೊದೆಮೀಸೆಯೊಳಗಿಂದ
ಕಿರುನಗೆಯ ಚೆಲ್ಲಿದಾಗ-
ಆನಂದ ಅನವರತ!
ಏನಿತ್ತರೂ ಮತ್ತಷ್ಟು ಬೇಡುವ ಮನಸು
ನಿನ್ನ ಕಂಡೊಡನೆ ಸಂತೃಪ್ತ!
***
ಉಡಿ ಮಂಚದ ಮೇಲೆ
ಸೆರಗಿನೊಳು ತುಂಬಿರಿಸಿ
ಕದಳಿ ಎಳೆ ನುಸುಳಿಸಿ
ಕೊರಳಿಗರ್ಪಿಸಿದ
ಅಡವಿ ಹೂಗಳ ಹಾರ-
ಬಳುಕಿ ಹಾರುತಿದೆ
ಸಂಪಿಗೆಯ ಟೊಂಗೆಯಡಿ
ಹೂಮಂಚ ತೂಗುತಿರೆ
ಎದೆಗೊರಗಿ ಮುಖವಿಟ್ಟು;
ತೋಳಪ್ಪಿ ಕಣ್ಮುಚ್ಚಿ
ಹಾರುತೇರುವಾಗ,
ಕ್ಷೀರಸುಮಗಳು ಸುರಿದು
ಮುಂಗುರುಳ ಸುಳಿಯೊಳು
ಸಿಕ್ಕು, ಮೂಗಿನಂಚನು ತಾಕಿ,
ಕೆನ್ನೆ ಸವರಿ, ಕೊರಳ ಮುದ್ದಿಸಿ,
ಎದೆ ಮೇಲೆ ಇಳಿಜಾರಿ,
ಸೊಂಟಕೆ ಕಚಗುಳಿಯಿತ್ತು-
ನಯಮಿಂಚು ಹರಿಸಿ; ಅಲುಗಿಸಿ
ನಿಕಟದೊಳು ನಿಕಟವಾಗಿಸಿದೆ!
ನಿನ್ನೊಳು ಬೆರೆಯುವಾಸೆ ಹೆಚ್ಚಿಸಿದೆ!
***
ಮುರಳಿಗದರವನೊತ್ತಿ
ನಿನ್ನುಸಿರ ತುಂಬಿಸಿ
ನಾದದಲೆಗಳನೆಬ್ಬಿಸಲು
ಸ್ತಬ್ಧವಾದವು ಸಮಸ್ತ!
ಮಡಿಲಲಿ ಮಲಗಿರುವೆ,
ರಾಗತರಂಗಗಳೊಡನೆ
ತೇಲಿ ಸಾಗುವ ಚಂದ್ರಶ್ವೇತಕೆ
ಪ್ರಸ್ತ ಪ್ರಶಸ್ತ ಮುಹೂರ್ತ!
ನನ್ನೆರಡು ಕೈಪಿಡಿದು
ಗಿರಗಿರನೆ ತಿರುಗಿಸಿ
ನಿನ್ನೆಡೆಗೆ ಬರಸೆಳೆದು
ಸಿಹಿಯಾಗಿ ಚುಂಬಿಸಿ
ಸ್ಪರ್ಶ ಸಮ್ಮೋಹಗೊಳಿಸಿ
ಜಗ ಮರೆಸಿ; ಅಂತರಿಕ್ಷದಿ ರಮಿಸಿ
ಎದೆಗೆ ಮುತ್ತಿಟ್ಟು
ಅಂತಃಚಕ್ಷುವ ತೆರೆಸಿ
ಈ ಪರಿ ಪ್ರೀತಿಸುವ ಕಲೆ
ನಿನಗಲ್ಲದಿನ್ಯಾವ ಮನ್ಮಥನಿಗಿದೆಯೋ?
***
ಶ್ಯಾಮ ನಿನ್ನ ಕಣ್ಣಿನಲ್ಲಿ
ಆಯಸ್ಕಾಂತ ಸೆಳವಿದೆ
ನಿನ್ನ ತುಟಿಯ ತೇವದಲ್ಲಿ
ಸಂಜೀವಿನಿ ಮಧುವಿದೆ
ಮರೆಯಲಾರೆ ತೊರೆಯಲಾರೆ
ಚಂದ್ರ-ವೇಣು-ಹೂವು-ಮಂಚ
ಯಾವುದಿಲ್ಲದಿದ್ದರೂನು
ನಿನ್ನ ಬಿಟ್ಟು ಹೋಗಲಾರೆ
ದೂರ ಮಾಡಿ ಹುಚ್ಚು ಹಿಡಿಸಿ
ಹೋಗಬೇಡ ಮಾಧವ!
ಬೇಡಲಾರೆ ಏನನೊಂದು
ಬಳಿಯಲಿರು ಪ್ರೇಮಸಿಂಧು
ನಿನ್ನ ನಗೆಯ ನಾಕದಲ್ಲಿ
ನಡೆಯುತಿರಲಿ ಉತ್ಸವ!
ಸೋತು ಸೊರಗದಂತೆ ಸತತ
ಸಲಹುತಿರು ಪ್ರೇಮವ!











Click it and Unblock the Notifications