ಕಾಪಾಡು ತಾಯಿ
ಚಾಮುಂಡೇಶ್ವರಿ ಉಪಚುನಾವಣೆ... ಮತದಾರರು... ಅಭ್ಯರ್ಥಿಗಳು... ಜೊತೆಗೆ ತಾಯಿ ಚಾಮುಂಡಿ...
- ಪೂರ್ಣಿಮ ಸುಬ್ರಹ್ಮಣ್ಯ, ಡಾಲಸ್, ಟೆಕ್ಸಾಸ್-ಅಮೆರಿಕ
ಕರುಣಿಸೆಮಗೆ ಕೃಪಾಭಿಕ್ಷೆ.
ಬಿರುಗಾಳಿಯೂ ಬೇಡ,
ಭೂಕಂಪ ಬೇಡ,
ಚಂಡಮಾರುತ ಬೇಡ
ಸುನಾಮಿಯೂ ಬೇಡ.
ಪ್ರವಾಹವೂ ಬೇಡ,
ಬರವ ತರಬೇಡ.
ಬರಸಿಡಿಲ ಜೊತೆಯಲ್ಲಿ
ಬಿರುಮಳೆಯ ತರಬೇಡ.
ಇವೆಲ್ಲ ಬಂದರೂ ಸರಿಯೇ,
ಹೇಗೋ ಮತ್ತೆದ್ದು ನಿಲ್ಲುವೆವು.
ಮನುಜ ಮನುಜನ ಕೈಹಿಡಿದೆತ್ತಿ
ನಿಲ್ಲುವ ಸಮಯವದು.
ಬೇಡ ತಾಯೀ ಬೇಡ,
ಇದೊಂದು ಖಂಡಿತ ಬೇಡ;
ಮನುಜರ ಮಧ್ಯದ ಚಿತಾವಣೆ
ಗೋಮುಖ ವ್ಯಾಘ್ರ, ಚುನಾವಣೆ.
ಜನರ ಮತಗಳಿಗಾಗಿ,
ಮತಗಳನು ಬಲಿಕೊಟ್ಟವರ
ಅಧಿಕಾರದಾಸೆಯಲಿ
ಅಸುರರಾದಂಥವರ
ಆರಿಸುವುದಕ್ಕಾಗಿ,
ಗೊತ್ತಿದ್ದೂ ಗೊತ್ತಿದ್ದೂ
ಕಿವುಡರಾಗಿ, ಕುರುಡರಾಗಿ
ಕುರಿಗಳಾಗಿ,
ಯಾರದೋ ಹೆಸರಿಗೆ,
ಯಾವುದೋ ಗುರುತಿಗೆ
ನಮ್ಮ ಮುದ್ರೆ ಒತ್ತಿ
ನಮ್ಮ ಕತ್ತ ನಾವೇ
ಹಿಸುಕಿಕೊಳ್ಳುತ್ತಾ
ನಮ್ಮನ್ನು ನಾವೇ
ಹೊಸಕಿಸಿಕೊಳ್ಳುತ್ತೇವಲ್ಲಾ,
ಅದು...
ಆ ಗುರು ಸಿದ್ಧ ಶಿವರಿಂದ,
ದೇವಕುಮಾರರಿಂದ
ಪಾರು ಮಾಡು ತಾಯೀ !
ಪ್ರಕೃತಿಯ ವಿಕೋಪ
ಅರೆಕ್ಷಣದ ತಾಪ
ಮಂತ್ರಿಗಿರಿ ವಿಕೃತಿಯು
ಮನುಕುಲಕೆ ಶಾಪ.
ಕಾಪಾಡು ತಾಯೀ,
ಚಂಡಿ ಚಾಮುಂಡಿ !
ಅಂದು ಆ ಮಹಿಷನನು
ಕೊಂದವಳು ನೀನು.
ಇಂದು ಈ ಮನುಜ(?)ರನು
ಏನು ಮಾಡುವೆ ನೀನು ?!











Click it and Unblock the Notifications