ನಮ್ಮ ನಡುವಿನ ನಿತ್ಯ ಸುಮಂಗಲಿಯರು!
ಮಲ್ಲಿಗೆ, ಸಂಪಿಗೆ, ಗುಲಾಬಿಗಳ ಜೊತೆಗೆ ಗಲ್ಲಿ-ಗಲ್ಲಿಗಳ ‘ಸೇವಂತಿ’ಯರು.... ರಾಜಸ್ಥಾನದ ‘ರುಡಾಲಿ’ಯರು.... ‘ಮಂಗಳ’ ಕಾರ್ಯಕ್ಕೆ ಸಿಂಗರಿಸಲು ಬರುವ ದೇವಳಗಳ ‘ದೇವದಾಸಿ’ಯರು.... ಇಲ್ಲಿ ನಿಮಗೆ ಯಾರು ಗೋಚರಿಸುತ್ತಾರೆ?
ಪದ್ಯ 8 : ಮಾರಾಟಕ್ಕಿವೆ...
ಘಮಘಮಿಸಿ ನಳನಳಿಸಿ ಕಣ್ಸೆಳೆವ ಗಲ್ಲಿ;
ಹೂವಾಡಿಗರೆಲ್ಲ ಮಾರುವರು ಹೊರೆ ತಂದು -
ಚಂಪ, ಮಲ್ಲಿಗೆ, ಜಾಜಿ, ಗುಲಾಬಿಗಳನಿಲ್ಲಿ.
‘ಹೂವು ಬೇಕೇ, ಹೂವು....’ ಭಾವ-ಬಣ್ಣವು ನೂರು,
ಯಾವ ದೇವನ ಪಾದ, ಮತ್ತಾರ ಮುಡಿಗೆ!
ಕಣ್ಣು-ಮನಗಳ ತಣಿಸಿ, ನಲ್ಮೆ-ಪ್ರೀತಿಯ ಉಣಿಸಿ,
ಅಲ್ಪ ಬಾಳಿನ ಚಣವ ಸಾರ್ಥಗೊಳಿಸಿ.
ಹೊತ್ತ ಗಿಡಕೊಂದೊಂದೂ ಹೆಸರಾಗಿ ಅರಳಿದವು,
ಹೆತ್ತಬ್ಬೆಗೆಂದೆಂದು ತನ್ನ ಕುಡಿ ಭಾರವೆ?
ಚಿತ್ತ ಕಲಕಿದ ಕೈಗೆ ಸೇರಿದಾ ಕ್ಷಣದಲ್ಲಿ -
ಅತ್ತವೆ? ನಕ್ಕವೆ - ಸಾಫಲ್ಯವೆಂದು?
ಸೃಷ್ಟಿ ಲೀಲೆಯ ನೋಡ, ಫಲ ಹೊರುವ ಕ್ಷೇತ್ರವದು,
ಯಾರ್ಯಾರ ಕೈಸೇರಿ ನಲುಗಿ ಕರಗಿದವು;
ದೇವ ಪೂಜೆಯ ಪುಣ್ಯ ಯಾವ ಪಾಪದ ಲೆಕ್ಕ?
ಮಂಗಲೆಯ ಸಿಂಗರಕೆ ಮೀಸಲೇ ಬಾಳು?
ಅರೆಬಿರಿದ ನಸುನಗೆಯ ಕನಸಲ್ಲಿ ಹಿಡಿವರೆ,
ಕನಸುಗಳ ಶವಯಾತ್ರೆಗೂ ಬೇಕಾದವು.
ಚೈತ್ರ ಚೈತನ್ಯದೊಳು ಚಂದಗಾಣುವರೆಲ್ಲ,
ಮಾಘ ಮಘ ಮಘಿಸದೆಯೆ ಬಾಳು ಬೋಳು.











Click it and Unblock the Notifications