ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲ - ಸಮಯ - ವೇಳೆ

By Staff
|
Google Oneindia Kannada News

ಕಾಲ - ಸಮಯ - ವೇಳೆ
‘ಕಾಲ’, ‘ ಸಮಯ’, ‘ವೇಳೆ’ - ಈ ಪದಗಳನ್ನು ಭೂತ, ವರ್ತಮಾನ, ಭವಿಷ್ಯದ ಸೂಚಕ ಪದಗಳನ್ನಾಗಿ ಈ ಕವನದಲ್ಲಿ ಪ್ರಯೋಗಿಸಲಾಗಿದೆ. ಮಾನವ ಜೀವನದಲ್ಲಿ ಸಮಯದ ಪಾತ್ರ ಅತಿ ಮೂಲಭೂತವಾದದ್ದು. ಸಮಯ ಶಕ್ತಿಯ, ಎನರ್ಜಿಯ (ಯತ್ನ ತತ್ವದ) ಸ್ವರೂಪ. ಜೀವಕ್ಕೆ ಇರುವ ಸಮಯ (ಕಳೆದದ್ದೂ ಕೂಡ) ಪರಿಮಿತ. ಅದರ ಅಧೀನಕ್ಕೆ, ಸದಾ ಒಳ, ಹೊರ ಪೈಪೋಟಿ ನಡೆಯುತ್ತಿರುತ್ತದೆ. ಅದರ ಹತೋಟಿ ತಪ್ಪಲು ಕಾರಣ ಹೊರ ಶಕ್ತಿ, ನಮ್ಮ ಮೌಢ್ಯ, ದಾಕ್ಷಿಣ್ಯ, ಅನಾರೋಗ್ಯ, .... ತನ್ನತನ ಸ್ಥಾಪಿಸಲು, ಈ ದ್ವಂದ್ವದಲ್ಲಿ ಸಮತೋಲನದ ಗಳಿಕೆ ಮುಖ್ಯ. ಬೇರೆಯವರ ಸಮಯವನ್ನು ಹಾಳು ಮಾಡುವುದು, ಅಲಕ್ಷಿಸುವುದು ಕದಿಯುವಿಕೆಗೆ ಸಮಾನ. ನಮ್ಮ ಸಮಯ ಅಮಿತವಾದದ್ದಲ್ಲ ಎಂದಿರುವಾಗ, ಸಮಂಜಸವಾದ ರೀತಿಯಲ್ಲಿ ಕಾಲ ಕಳೆಯುವುದು ಏಳ್ಗೆಗೆ ಮುಖ್ಯ. ಹಾಗಾದರೆ ಬುದ್ಧಿಜೀವಿಗಳ ದೃಷ್ಟಿಯಲ್ಲಿ ಸಮಯ ವಿಕಾಸವಾದದ (ಎವಲೂಶನ್‌ನ) ಒಂದು ಮೂಲ ತತ್ವವೇ? ಉಳಿದ ಸಮಯ ಮಿತವಾದದ್ದಾದರೂ ಅದು ಅಮಿತವೆಂಬುದೇ ನಮ್ಮ ಭ್ರಮೆ. ಇದು ಸೃಷ್ಟಿ ನಿಯಮದ, ಚೈತನ್ಯದ ನಿರಂತರತೆಯನ್ನು ಕಾಪಾಡಿಕೊಳ್ಳುವ (ವಿಕಾಸವಾದದ) ಒಳ ತಂತ್ರವೇ?
Jayarama Udupa
  • ಜಯರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿಯಾ
    [email protected]
ಕಳೆವ ಸಮಯವೆ ‘ ಕಾಲ’, ಉಳಿವ ಸಮಯವೆ ‘ವೇಳೆ’,
ನಡೆವ ಸಮಯವೆ ‘ ಸಮಯ’- ಗಳಿತ ಗಳಿಗೆಯ ಈಳೆ.
ಕಾಲವರಿವುದು ಸಮಯ ಕಳೆದಾದ ಮೇಲೆ,
ಜಾಲವರಿಯದು ನಿಯಮ ವೇಳೆಯಾ ಲೀಲೆ.

ಸಮಯದಲಿ ಶಕ್ತಿ, ಸಿರಿ, ಬಲ, ಯತ್ನ ತತ್ತ್ವ,
ನಿಯಮದಲಿ ಶಿಸ್ತು, ನಿಗ್ರಹ, ತೋಲ ಸತ್ತ್ವ;
ಯಮ ನಿಯಮ ಸಮಯ ಸಂಬಂಧವು ಗುರುತ್ವ,
ಸಮಯ ಬದುಕಿಗೆ ನಿಜದಿ ಮೂಲ ಅಸ್ತಿತ್ವ.

ಊಳಿಗದ ನೊಗ ಕಟ್ಟಿ ಸಮಯ ಮನುಜನ ದುಡಿಸೆ,
ಬಾಳದರ ಬೆನ್‌ ಹತ್ತಿ ಗಳಿಕೆ-ಗರಿಮೆಯನರಸೆ,
ಗೀಳದರ ಮುತ್ತಿ ಮನ ಷಡ್‌ ವೈರಿಗಳ ಭರಿಸೆ,
ಕಾಳಗದಿ ಕುತ್ತಿ ಪರಿಮಿತ ಹೊತ್ತ ಹರಿಸೆ.

ಹಿಡಿತದಲಿ ಇರೆ ಹೊತ್ತು ಜೀವಾತ್ಮ ಕ್ಷೇಮ,
ಹಿಡಿತ ತಪ್ಪಿರೆ ಸೊತ್ತು, ಮನೋರುತಿ ಅಸಮ;
ಕಡೆವ ಹೊತ್ತಿಗೆ ರೋಗ, ಮೌಢ್ಯ ಉದ್ಗಮ,
ತಡೆವ ಹೊರ ಶಕ್ತಿ, ದಾಕ್ಷಿಣ್ಯ ನಿಜ ಉಗಮ.

ಇರೆ ಸ್ವಂತ ಸಮಯಕೆ ಧೃತ ಕಾಟ ಕೋಟಿ,
ಪರ ಸ್ವ ಅಧೀನಕೆ ಸತತ ಪೈಪೋಟಿ;
ಹೊರೆ ದ್ವಂದ್ವ ಬಲಗಳಲಿ ಸಮತೋಲ ದೃಷ್ಟಿ,
ಮೆರೆ ಸ್ವತ್ವ ಸಂತೃಪ್ತ ಸೋಬಾನ ವೃಷ್ಟಿ.

ಪರರ ತೆರಪಿನ ಪೋಲು, ನಿರ್ಲಕ್ಷ್ಯ ಕಳವು;
ಒರೆದ ಸಮಯವ ಮೀರೆ ಸ್ವಾರ್ಥ, ಹಮ್ಮಿನ ಸುಳಿವು;
ನೆರೆದ ಮೇಳದಿ ವೇಳೆ ಕಾಲವಾಗಲು ಹಳಿವು,
ಬರಿದೆ ವೇಳೆಯ ಅಳಿವು, ಕಲಕು ಕೋಲಾಹಲವು.

ಇರುವ ಮಿತ ಎಡೆಯ ಬೌದ್ಧಿಕ ಬಳಕೆ ಬಲು ಕಠಿಣ,
ಬರಿದೆ ಬಿಡುವುದು ಸುಲಭ - ಪ್ರಾಣಿ ಗುಣ-ಲಕ್ಷಣ;
ಸರಿಯ ಅರಿವಿನ ಬಳಕೆ ಮನುಜನೇಳ್ಗೆಗೆ ಕರಣ,
ನರನ ಜನುಮಕೆ ಸಮಯ ವಿಕಸವಾದದ ಭ್ರೂಣ.

ಕಾಲ ಕಳೆದುದು ಮಿತ, ವೇಳೆ ಉಳಿದುದೂ ಮಿತ,
ಧೂಳ ಸೇರಲು ಅಮಿತ ಸಮಯವಿಹುದೆಂದೆ ಮತ -
ಬಾಳಿನುದ್ದಕೂ ಅನೃತ ಆಭಾಸ ಮಂತ್ರ;
ಜಾಲ ಸೃಷ್ಟಿಯ ನಿಯುತ ಚೇತನದ ತಂತ್ರ?


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X