ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಿ

By Staff
|
Google Oneindia Kannada News

ಚಿಕ್ಕಿ
K.Srinivas Bhat
  • ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌, ಮಿಶಿಗನ್‌
    [email protected]
(ನಮ್ಮ ತಾಯಿಯವರನ್ನು ನಾವೆಲ್ಲ ಚಿಕ್ಕಿ ಎಂದೇ ಕರೆಯುತ್ತಿದ್ದೇವೆ. ಅವರ 80ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ಈ ಕಿರು ಕಾಣಿಕೆ)

ಅಮ್ಮ, ಎರಡು ಅಕ್ಷರಕ್ಕೆ ಬೆಲೆಯನೆಷ್ಟು ಕಟ್ಟಲಿ?
ತಾಯಿ, ಎಂಬ ಶಬ್ದಕೆಷ್ಟು ಕಾಣಿಕೆಯನು ನೀಡಲಿ?
ಅಮ್ಮ, ತಾಯಿ ಎನದೆ ನಿನ್ನ ಚಿಕ್ಕಿ ಎಂದು ಕರೆದೆವು
ಅಮ್ಮ, ತಾಯಿಗಿಂತ ಹಿರಿದು ನಮಗೆ ನೀನೆ ಚಿಕ್ಕಿಯು

ಎಳೆಯ ವಯಸಿನಲ್ಲೆ ತವರ ಬಿಟ್ಟು ನೀನು ಬಂದೆ
ಕಷ್ಟ ಸುಖಗಳೆಲ್ಲ ಸಹಿಸಿ, ಸದಾ ನಗುತ ನಿಂದೆ
ಬೆಳಗಿನಿಂದ ಸಂಜೆ ತನಕ ಹಗಲು ಇರುಳು ಎನ್ನದೆ
ಮನೆಯ ಒಳಗೆ, ಹೊರಗೆ ಕೆಲಸ ಬಿಡುವಿಲ್ಲದೆ ಮಾಡಿದೆ

ಹೆತ್ತು, ಹೊತ್ತು, ಉಣಿಸಿ, ಉಡಿಸಿ ನಮ್ಮ ನೀನು ಬೆಳೆಸಿದೆ
ಬಡತನದಿ, ಕಷ್ಟದಲ್ಲಿ, ನಮ್ಮ ಸುಖಕೆ ಶ್ರಮಿಸಿದೆ
ಉಡಿಗೆ, ತೊಡಿಗೆ, ಆಟ, ಊಟ, ಎಲ್ಲ ನಗುತ ನಡೆಸಿದೆ
ಕಣ್ಣಲಿ ಕಣ್ಣಿಟ್ಟು ನೀನು ನಮ್ಮನೆಲ್ಲ ಬೆಳೆಸಿದೆ

ನಮ್ಮ ಕಷ್ಟ ನೋವುಗಳಲಿ ಕಣ್ಣೀರನೆ ಹರಿಸಿದೆ
ಎಡವಿದಾಗ, ತೊಡವಿದಾಗ, ನೀನು ಎತ್ತಿ ನಿಲಿಸಿದೆ
ಇದ್ದ ಅಲ್ಪ, ಸ್ವಲ್ಪ ಉಣಿಸ ಎಲ್ಲರಿಗೂ ಹಂಚಿದೆ
ಹಳೆಯ, ಸವೆದ ಬಟ್ಟೆಗಳನೆ ಒಗೆದು ನಮಗೆ ತೊಡಿಸಿದೆ

ಚಿಕ್ಕ ತಮ್ಮ ಅಂದು ತನ್ನ ಕೊನೆಯ ಉಸಿರು ಎಳೆಯುತಿರಲು
ನಿನ್ನ ಜತೆಗೆ ನಾನು ಅವನ ತೊಟ್ಟಿಲನ್ನು ತೂಗಿದೆ
ಅವನ ಅಂತ್ಯದಲ್ಲಿ ನಿನ್ನ ಜತೆಗೆ ನಾನೂ ಕೊರಗಿದೆ
ಹಿರಿಯ ಮಗನ ಕರ್ತವ್ಯವು ಇದಕಿಂತ ಏನಿದೆ?

ನೀನು ನನಗೆ ಒಮ್ಮೆ ಕೂಡ ಹೊಡೆದ ನೆನಪೆ ನನಗೆ ಇಲ್ಲ
ದುಡಿದು ಬಳಲಿದಾಗ ಕೂಡ ಕಡುನುಡಿಯ ಹೇಳಲಿಲ್ಲ
ಸಮಯಕೆ ಸರಿಯಾಗಿ ನೀನು ನಮಗೆ ಉಣಿಸಿ, ಉಡಿಸಿದೆ
ಶಾಲೆಯಿಂದ ಬಂದ ಒಡನೆ ತಿಂಡಿ, ತಿನಿಸ ನೀಡಿದೆ

ಹೇಗೆ ಬದುಕಬೇಕು ಎಂದು ನಮಗೆ ನೀನೆ ಕಲಿಸಿದೆ
ವಿನಯ, ಸತ್ಯ, ಸದಾಚಾರ, ಸದ್ಗುಣಗಳ ಬೆಳೆಸಿದೆ
ಬಡತನದಲು, ಕಷ್ಟದಲ್ಲು, ಸಹನೆಯ ಮಹಾ ಪಾಠವನ್ನು
ಮಾತು, ಆಚರಣೆಗಳಲಿ ಆದರ್ಶವನು ತೋರಿದೆ

ಎಂಭತ್ತು ವರುಷಗಳ ತುಂಬುಜೀವ ನಿನ್ನದು
ಇನ್ನು ನೂರು ವರುಷಗಳ ಬದುಕು ನಿನಗೆ ದೊರೆವುದು
ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಈ ಬೇಡಿಕೆ
ಆ ದೇವ ನಿನ್ನ ಸದಾ ಹರಸಲೆಂಬ ಕೋರಿಕೆ!


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X