ನಿನ್ನ ಕಡುಕಪ್ಪು ಕಂಗಳ ಕೊಳದಲ್ಲಿ
ಈಸು ಬಿದ್ದು ಒದ್ದೆಯಾಗಿದ್ದು ಹೌದು ಹುಡುಗಿ
ಬೆಚ್ಚಗಿನ ಕಣ್ಣಪ್ಪುಗೆಯಲ್ಲಿ ಜ್ವರವೇರಿತ್ತು
ಬಿಡದೆ ಕಾಡಿತ್ತು ಸುತ್ತ ಕಗ್ಗಾಡಿತ್ತು
ಅದರ ಕಾಂತಿಗೆ ಅವೆರಡರ ಭ್ರಾಂತಿಗೆ
ಮೂರನೆಯದಕೆ ಅಂಜಿಕೆಯೇ ಪುಳಕವೊ
ಒಂದೂ ಗೊತ್ತಾಗದ ಹಾಗೆ
ಅವೆರಡೂ ಒಂದಾಗುವ ಸಂಧಿಯಲ್ಲಿ
ಜಾರಿತ್ತು ನೋಟ ಆಗ ನಿನಗೆ
ಹದಿ-ನಾರಾಗಿತ್ತು ಆಸೆ ಆರಾಗಿತ್ತು ನನಗಿಲ್ಲಿ
ಹಲವು ಪರಿಯಲಿ ಸಂತೈಸಿದರೂ ನಿನ್ನ
ತನುಕಾಂತಿಗೆ ಪದೇ ಪದೇ ಕರಗಿತ್ತು ಮನ
ನನ್ನೊಡಲ ರುದ್ರವೀಣೆ ಝೇಂಕರಿಸಿತ್ತು
ಅತ್ತ ಯಾವುದೋ ಮುರಳಿಯ ಕರೆ
ಇತ್ತ ನಿನ್ನ ಕಣ್ಣ ಸೆರೆ ಬಿಡಿಸಿಕೊಂಡಾಗ
ಆರಾಗಿದ್ದ ಆಸೆ ಜಾರು ಜಾರು
ಧಿಕ್ಕರಿಸಿ ಓಡಿದ್ದೆ, ಮುರಳಿಯ ಕರೆ
ಸರಿಯುವ ಮುನ್ನ, ಕಡೆಗುಳಿದಿದ್ದು ನಿನ್ನ
ಧಿಕ್ಕರಿಸಿದ ಧನ್ಯತೆ ಹಾಗೂ ನಿನ್ನವೆರಡರ ‘ಖಿನ್ನತೆ’!