ಕವಿತೆ ಸಾಯುವುದಿಲ್ಲ !


ಕವಿತೆ ಸಾಯುವುದಿಲ್ಲ !
Triveni Srinivas Rao
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌,ಅಮೆರಿಕಾ
    ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆ

    [email protected]
ನನ್ನ ಮುದ್ದಿನ ಕವಿತೆ ಇಲ್ಲಿಯವರೆಗೂ
ಈ ನೆಲದ ಪರಿವೆಯೇ ಇಲ್ಲದಂತೆ
ಚಂದ್ರ,ತಾರೆಯರ ನಡುವೆ ಅಲೆಯುತ್ತಿತ್ತು !
ಬಣ್ಣಬಣ್ಣದ ಗೋಡೆಗಳ ಮೂಸುತ್ತಾ
ವಿಶಾಲ ವಿಶ್ವದ ಕಲ್ಪನೆಯನ್ನೂ ಮರೆತಿತ್ತು !

ಇಷ್ಟೇ ಅಲ್ಲ : ಕಳೆದುಕೊಂಡಿತ್ತು-
ಮೈಮರೆತು ನಗುವ ಜೀವಂತಿಕೆಯ,
ಬಿಕ್ಕಳಿಸಿ ಅಳುವ ಭಾವುಕತೆಯ,
ಕೊನೆಗೆ ಕನಿಕರಿಸುವ ಕೋಮಲತೆಯನ್ನೂ.

ತನಗೇ ಅರ್ಥವಾಗದ ಭ್ರಮೆಗಳ ಹಾಡಿ
ಪಾರ್ಶ್ವವಾಯು ಬಡಿಸಿಕೊಂಡಂತೆ
ಅಂತಃಪುರದ ಸುಪ್ಪತ್ತಿಗೆಗಳಲ್ಲಿ
ಕೊರಗಿ ನಿತ್ರಾಣವಾಗಿ ನರಳುತ್ತಿತ್ತು.

ಆದರೆ ಇತ್ತೀಚೆಗೆ ಈ ಕವಿತೆ
ಚಿತ್ತಾರದ ರೇಶಿಮೆ ಅವಕುಂಠನವ
ಹರಿದು ಹೊರಬಂದು-

ತಬ್ಬಲಿ ಮಕ್ಕಳ ಹಾದಿಯಲ್ಲಿ
ಕೊಳಚೆ ನೀರಿನ ಬೀದಿಯಲ್ಲಿ
ಕಟುವಾಸ್ತವತೆಯ ಎದುರಿನಲ್ಲಿ
ಮುಖಾಮುಖಿ ನಡೆಯತೊಡಗಿದಾಗಲೇ
ಅದಕ್ಕೆ ಜೀವತುಂಬತೊಡಗಿತು.
ಮೂಳೆಚಕ್ಕಳದಲ್ಲಿ ರಕ್ತಮಾಂಸವೂ ಸೇರಿ
ಜೋಲು ಮೈ ಗಟ್ಟಿಗಟ್ಟಿಯಾಯಿತು!

ಈಗ ನನ್ನ ಕವಿತೆ-
ನಗುತ್ತದೆ ; ಅಳುತ್ತದೆ
ಎದುರಾಳಿಗಳ ಎದುರುನಿಂತು
ಸಡ್ಡುಹೊಡೆದು ಸಿಡುಕುತ್ತದೆ,
ಒಮ್ಮೆ ಶಕ್ತಿಗುಂದಿ ಸೋತು ಮಲಗಿದರೂ
ನನ್ನ ಕವಿತೆ ಈಗ ಸಾಯುವುದಿಲ್ಲ !

(ಸುಮಾರು ವರ್ಷಗಳ ಹಿಂದೆ ‘ಲಂಕೇಶ್‌ ಪತ್ರಿಕೆ’ ಯಲ್ಲಿ ಪ್ರಕಟವಾಗಿದ್ದ ನನ್ನ ಈ ಕವನಕ್ಕೆ ದಿ.ಲಂಕೇಶರು ಕೊಟ್ಟಿದ್ದ ಶೀರ್ಷಿಕೆ - ‘ಪತ್ರಿಕೆ’ ನನಗೇನು ಮಾಡಿತು?’)


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+